ವ್ಯಕ್ತಿತ್ವ ಸಂಗಾತಿ
“ಗೆಳೆತನದ ಹಾದಿಯಲ್ಲಿ
ಹಣದ ಹೂ ಅರಳುವುದಿಲ್ಲ”
ನನ್ನ ತಮ್ಮನಂತ ಗೆಳೆಯ
ಸಂತೆಬೆನ್ನೂರು ಫೈಜ್ನಾಟ್ರಾಜ್

ಸೈಯದ್ ಫೈಜುಲ್ಲಾ ಮೂಲ ಹೆಸರಿನ ಫೈಜ್ನಟ್ರಾಜ್ ಅವರ ಸಾಹಿತ್ಯ ಬದುಕಿನ ರೀತಿಯೇ ಅಪೂರ್ವ ಹಾಗೂ ಅನುಸರಣೀಯವಾದದ್ದು.
ಸಂತೆಬೆನ್ನೂರು ಗ್ರಾಮದವರೇ ಆದ ಶಿವಪ್ಪ, ಗಿರಿಜಮ್ಮ ಅವರ ಮಗ ನಟರಾಜರೊಂದಿಗೆ ಬಾಲ್ಯದಿಂದ ಮೂಡಿ ಬಂದ ಅವಿನಾಭಾವ ಸ್ನೇಹವಿತ್ತು. ಎಲ್ಲದಕ್ಕೂ ಕೊರತೆಯಿದ್ದ ಆ ದಿನಗಳಲ್ಲಿ ಬಡತನವೇ ಇವರಿಬ್ಬರನ್ನು ಕೂಡಿಸಿತ್ತು. ಬಡತನವನ್ನೇ ಸವಾಲಾಗಿ ಸ್ವೀಕರಿಸಿ ಒಟ್ಟಿಗೆ ಓದಿ ಇಬ್ಬರೂ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದರು.
1997ರ ಒಂದು ಕರಾಳ ದಿನದಲ್ಲಿ ಚಳ್ಳಕೆರೆಯಲ್ಲಿ ನಡೆದ ಅಪಘಾತದಲ್ಲಿ ನಟರಾಜ್ ತೀರಿಕೊಂಡರು. ವಯಸ್ಸಾದ ತಂದೆ ತಾಯಿ ಅಕ್ಕ- ತಂಗಿ ತಮ್ಮನನ್ನು ಸೇರಿದ ತುಂಬು ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದ ನಟರಾಜ್ ಇದ್ದಕ್ಕಿದ್ದಂತೆ ತೀರಿಕೊಂಡದ್ದು ಇಡೀ ಕುಟುಂಬಕ್ಕೆ ಬದುಕು ಆತ್ಮವಿಶ್ವಾಸವನ್ನೇ ಅಲ್ಲಾಡಿಸಿತು.

ಅಂತಹ ಕಷ್ಟದ ಸಂದರ್ಭದಲ್ಲಿ ಮನುಷ್ಯ ಪ್ರೇಮವನ್ನು ನಂಬಿದ್ದ ಫೈಜುಲ್ಲಾ ಇಡೀ ಕುಟುಂಬಕ್ಕೆ ಮಗನ ಸ್ಥಾನ ಭಾವನಾತ್ಮಕವಾಗಿ ತುಂಬಿದರು. ಬರಿ ಅಷ್ಟೇ ಅಲ್ಲದೆ ಸ್ನೇಹಿತನ ಹೆಸರನ್ನೇ ತನ್ನ ಹೆಸರಿನೊಂದಿಗೆ ಕಾನೂನಾತ್ಮಕವಾಗಿ ಸೇರಿಸಿ ಅಂದಿನಿಂದ ಫೈಜ್ನಟ್ರಾಜ್ ಹೆಸರಿನಲ್ಲಿ ಬರೆಯಲಾರಂಭಿಸಿದರು.
ನಟರಾಜ್ ಸಾವಿನ ನಂತರ ಇಡೀ ಕುಟುಂಬ ನೋವಿನ ಮಡುವಿನಲ್ಲಿ ನಲುಗಿತು ಕ್ರಮೇಣ ಗೆಳೆಯ ನಟರಾಜನ ಸಾವಿನ ನಂತರ ಸೋದರ ಸೋದರಿಯರನ್ನು ತನ್ನವರೇ ಎಂದು ಫೈಜ್ ಭಾವಿಸಿ ನಡೆದರು. ಮನೆ ಮಗನಾಗಿ ಬಾಂಧವ್ಯದ ನೆರಳಿನಲ್ಲಿ ಸಾಗಿದರು.
ಎರಡೂ ಕುಟುಂಬದ ಕೊಂಡಿಯಾಗಿ ಫೈಜ್ ಉಳಿದಿದ್ದಾರೆ. ನಟರಾಜ್ ಅವರ ಬಂಧುಗಳ ಜೊತೆಗೆ ಸೇರಿ ಮಮತೆಯ ನಟರಾಜನ ಸ್ಥಾನದಲ್ಲಿ ನಿಂತರು. ಬಾಂಧವ್ಯ ಹಣಕಾಸಿನದಲ್ಲ ಎಂಬುದು ಗಮನಾರ್ಹ.
ನಟರಾಜ್ ಅವರ ಅಕ್ಕ, ತಂಗಿ, ತಮ್ಮ ಈಗಲೂ ಫೈಜ್ ಅವರನ್ನು ತಮ್ಮೊಳಗೊಬ್ಬ ಎಂದು ಭಾವಿಸಿದ್ದಾರೆ. ಬೇರೆ ಧರ್ಮದ ಛಾಯೆ ಇದ್ದರೂ ಮಾನವೀಯತೆ ಮುಂದೆ ನಿಂತಿದೆ
ಯಾವುದೇ ಹಬ್ಬ ಹರಿದಿನಗಳಲ್ಲಿ , ಮದುವೆ ಸಮಾರಂಭಗಳಲ್ಲಿ ನಟರಾಜ್ ಹಾಗೂ ಫೈಜ್ನಟ್ರಾಜ್ ರ ಕುಟುಂಬ ಸದಸ್ಯರು ಈಗಲೂ ಒಟ್ಟಿಗೆ ಸೇರುತ್ತಾರೆ. ಅವರ ನೆಂಟರು, ಬಂಧುಗಳು ಫೈಜ್ ಅವರನ್ನು ಆಪ್ತವಾಗಿ ಕಾಣುತ್ತಾರೆ.
ಹಣ, ಅಂತಸ್ತಿನ ಯಾವುದೇ ಪ್ರವೇಶ ಇಬ್ಬರಲ್ಲೂ ಎಂದಿಗೂ ಬರಲಿಲ್ಲ. ಆರ್ಥಿಕ ಸಹಾಯಕ್ಕೆ ಎಂದೂ ಫೈಜ್ ಮನ ಮಾಡಲಿಲ್ಲ. ಯಾವುದೇ ರೀತಿಯ ಸಹಾಯ ಮನೆಗಾಗಿ ಮಾಡಲಿಲ್ಲ. ಬಾಂಧವ್ಯಕ್ಕೆ ಒತ್ತು ಕೊಟ್ಟರು. ಯಾವುದೇ ರೀತಿಯ ಸಹಾಯ ಮಾಡದೇ ಇವರು ಕೇವಲ ಮಾನವೀಯ ಬಂಧದೊಂದಿಗೆ ಸಾಗಿದರು. ಹಿರಿಯ ಸೋದರಿಯ ಮಾರ್ಗದರ್ಶನ, ಸಲಹೆ ,ಸಹಕಾರದೊಂದಿಗೆ ಇಂದಿಗೂ ಆಪ್ತ ನಂಟು ಉಳಿಸಿಕೊಂಡು ಸಾಗುತ್ತಿದ್ದಾರೆ.
ನಟರಾಜ ಅವರ ಕುಟುಂಬದ ಆಪ್ತರು ಫೈಜ್ ಅವರನ್ನು ಒಪ್ಪಿಕೊಂಡಿರುವುದು ಅವರ ಸ್ನೇಹದ ಸಂಕೇತಕ್ಕಾಗಿ. ಬಡತನ, ಸಿರಿತನ, ಜಾತಿ ಧರ್ಮ ದಾಟಿದ ಸ್ನೇಹ ಚಿರಕಾಲ ಉಳಿಯುತ್ತದೆ ಎನ್ನುವುದಕ್ಕೆ ಫೈಜ್ ಮತ್ತು ನಟರಾಜರ ಸ್ನೇಹ ಉದಾಹರಣೆ ಆಗಿದೆ.
ಕುಟುಂಬಕ್ಕೆ ಅಥವಾ ಸೋದರ ಸೋದರಿಗೆ ಹಣಕಾಸಿನದಾಗಲಿ, ಗೃಹ ಕೃತ್ಯಕ್ಕಾಗಲಿ ಸಹಾಯ ಹಸ್ತ ಚಾಚಲಿಲ್ಲ. ಮಾನವೀಯ ಬಂಧ, ಕೌಟುಂಬಿಕ ಪ್ರೀತಿ ಮಾತ್ರ ಪಡೆದರು
ಮೊದಲು ಸೈಯದ್ ಫೈಜುಲ್ಲಾ ಹೆಸರಿನಿಂದ ಸಾಹಿತ್ಯ ಕೃಷಿ ಮಾಡುತ್ತಿದ್ದರೂ ನಟರಾಜನ ನಂತರ ಮತ್ತಷ್ಟು ಉತ್ಕೃಷ್ಟ ಮಟ್ಟಕ್ಕೆ ಹೋಗಿದ್ದು ನಟರಾಜ ಮತ್ತು ಅವರ ಕುಟುಂಬದ ಹಾರೈಕೆ ಎನ್ನುತ್ತಾರೆ ಫೈಜ್.

ಹಿಂದೂ ಮುಸ್ಲಿಂ ತಾಕಲಾಟಗಳು ಈಗೀಗ ಅತಿರೇಕೆದಲ್ಲಿರುವ ಈ ಪ್ರಸಕ್ತ ಸಂದರ್ಭದಲ್ಲಿ ನೀವು ಹೀಗೆ ಬದುಕಲು ಪ್ರೇರಣೆ ಏನು? ಎಂದು ಕೇಳಿದರೆ,
“ಹಿಂದೂ ಮುಸ್ಲಿಂಗಿಂತ ಸಧ್ಯಕ್ಕೆ ಮನುಷ್ಯನಾಗುವುದು ಮುಖ್ಯ ಅನ್ನುತ್ತಾರೆ ಫೈಜ್ನಟ್ರಾಜ್.
ಹೀಗೆ ಸೌಹಾರ್ದ ಬದುಕಿನ ಮಾದರಿಯಂತಿರುವ ಫೈಜ್ನಟ್ರಾಜ್ ತಮ್ಮ ಸಾಹಿತ್ಯ ಸೇವೆಯಿಂದಲೂ ಹೆಸರಾಗಿದ್ದಾರೆ. ಹಲವಾರು ಕೃತಿ ಬರೆದು ನಾಡು ಗುರ್ತಿಸುವ ಮಟ್ಟಕ್ಕೆ ಬೆಳೆಯಲು ಕಾರಣ ನಟರಾಜ ಅವರ ಹಿರಿಯ ಸೋದರಿ ಮತ್ತು ಸೋದರ ಹಾಗೂ ಕಿರಿಯ ಸೋದರಿ ಎನ್ನುತ್ತಾರೆ.
ಸೃಜನಶೀಲ ಬರವಣಿಗೆಯಲ್ಲಿ ತಮ್ಮನ್ನು ತಾವು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಫೈಜ್ನಟ್ರಾಜ್ ಸಂತೆಬೆನ್ನೂರು ಕಾವ್ಯನಾಮದೊಂದಿಗೆ ಬರೆಯುತ್ತಾರೆ. ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಇದುವರೆಗೂ ೧೪ ಕೃತಿಗಳ ಲೇಖಕರು. ಸದ್ದು ಮಾಡದೆ ಸುದ್ದಿಯಾಗದೇ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡವರು.
ಇವರು ಸದ್ದಿಲ್ಲದೇ ಕೃತಿರಚನೆಯಲ್ಲಿ ತೊಡಗಿದ್ದರೂ ಅವರ ಸಾಹಿತ್ಯ ಸೇವೆಗೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಸಂಚಯ ಕಾವ್ಯ ಪುರಸ್ಕಾರ, ಹಾಮಾನಾ ಕಥಾ ಪುರಸ್ಕಾರ, ಸ್ನೇಹಶ್ರೀ ಪ್ರಶಸ್ತಿ, ಅಬ್ಬಾಸ್ ಮೇಲಿನ ಮನೆ ಕಥಾ ಪ್ರಶಸ್ತಿ, ವಿಜಯ ಕರ್ನಾಟಕ ವಾರ್ಷಿಕ ಕಥಾ ಪ್ರಶಸ್ತಿ, ಅಡ್ವೈಸರ್ ಕಥಾ ಪ್ರಶಸ್ತಿ, ಮಂಗಳಾ ರಾಮಚಂದ್ರನ್ ಪ್ರಶಸ್ತಿ, ಜನಮಿತ್ರ ಕಾವ್ಯ ಪ್ರಶಸ್ತಿ, ಕಸಾಪ ದತ್ತಿ ಪ್ರಶಸ್ತಿ, ಬುಕ್ ಬ್ರಹ್ಮ ಕಥಾ ಪ್ರಶಸ್ತಿ… ಮುಂತಾದ ಹತ್ತು ಹಲು ರಾಜ್ಯ ಪ್ರಶಸ್ತಿ ಗಳು ಇವರ ಸಾಹಿತ್ಯ ಕೃಷಿಗೆ ಸಂದ ಗೌರವ. ಮಹಾರಾಷ್ಟ್ರದ ಶಿಕ್ಷಣ ಇಲಾಖೆಯಲ್ಲಿ ಕತೆಯೊಂದು ಪಠ್ಯವಾಗಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಷಯ. ದಾವಣಗೆರೆ ವಿ.ವಿ ಗೆ ಒಂದು ಪದ್ಯ, ಕುವೆಂಪು ವಿ.ವಿ ಗೆ ಒಂದು ಕತೆ ಪಠ್ಯವಾಗಿದೆ.ಇದೀಗ ದಾವಣಗೆರೆ ಡಯಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ
ಮನುಷ್ಯ ನಿಗೆ ಮಾನವೀಯ ಕಾಳಜಿ ಮುಖ್ಯ ಹೊರತು ಜಾತಿ ಅಥವಾ ಮತ್ಯಾವುದೂ ಅಲ್ಲ…ಅನ್ನುವ ಫೈಜ್ನಟ್ರಾಜ್ ಬದುಕು ಇತರರಿಗೆ ಮಾದರಿ ಎಂದ ಧಾರಾಳವಾಗಿ ಹೇಳಬಹುದು. ಹಣದ ಮೇಲೆ ಸಂಬಂಧಗಳು ಅಳೆಯುವ ಈ ಕಾಲದಲ್ಲಿ ಅದರ ಹೊರತಾಗಿ ಒಳ್ಳೆಯ ಸ್ನೇಹ ಉಳಿಸಿಕೊಂಡಿದ್ದು ನಟರಾಜನ ಪ್ರೀತಿ ಅಷ್ಟೇ.
ಕು.ಸ. ಮಧುಸೂಧನ ರಂಗೇನಹಳ್ಳಿ




ಇದೊಂದು ಸ್ನೇಹದ ಸಾಗರ
ಎಲ್ಲೆಯೇ ಇರದ ಆಗರ
ಮೃದು ಮಧುರ ಬಂಧುರ
ನಿಜ ಸ್ನೇಹವೇ ಸಾಕ್ಷಾತ್ಕಾರ
~~~~~~~
ಅನ್ನಪೂರ್ಣ ಪದ್ಮಸಾಲಿ ಕೊಪ್ಪಳ