ಪುಸ್ತಕ ಸಂಗಾತಿ

ಮಕ್ಕಳಿಗಾಗಿ ನೂರಾರು ಕವಿತೆಗಳು

ಕವಿ: ಸೋಮಲಿಂಗ ಬೇಡರ
ಪ್ರಕಾಶನ: ಪಲ್ಲವಿ ಪ್ರಕಾಶನ, ಬೀಳಗಿ
ಪುಟಗಳು: 220
ಬೆಲೆ: ರೂ. 175/-
ಪ್ರಕಟಿತ ವರ್ಷ: 2019
ಕವಿಯ ದೂರವಾಣಿ: 9741637606

ಕಥೆ-ಕಾದಂಬರಿಗಳ ವಿಷಯದ ಹರವು-ಹರಿವು ವ್ಯಾಪಕ ಹಾಗೂ ವಿಶಾಲ. ಆದರೆ ಕವಿತೆಗಳದು ಹಾಗಲ್ಲ. ಅದರ ಕ್ಯಾನ್ವಾಸ್ ಚಿಕ್ಕದು. ಕಡಿಮೆ ಶಬ್ಧಗಳಲ್ಲಿ ಸುಂದರ ಗೇಯತೆ, ಲಯ, ಮಾತ್ರೆಗಳಲ್ಲಿ, ಅಂದದ ಪದಪುಂಜಗಳಲ್ಲಿ ಕವಿತೆ ಕಟ್ಟುವುದು ನಿಜಕ್ಕೂ ಒಂದು ಅದ್ಬುತ ಕುಶಲಕಲೆ. ಅದರಲ್ಲಿಯೂ ಮಕ್ಕಳ ಕವಿತೆಗಳನ್ನು ಸರಳ-ಸುಂದರ ಪದಗಳಲ್ಲಿ ಎಳೆಯ ಮನಸ್ಸಿಗೆ ಸುಲಭವಾಗಿ ಮುಟ್ಟುವಂತೆ ಪದ್ಯ ಬರೆಯುವುದು ಸಹ ಒಂದು ಕಲೆ. ಪರಕಾಯ ಪ್ರವೇಶಿಸಿ ಮಕ್ಕಳೊಂದಿಗೆ ಮಕ್ಕಳಾಗಿ ಅವರ ಮುಖದಲ್ಲಿ ಹೊಮ್ಮುವ ಭಾವಗಳನ್ನು ಕವಿತೆಯಾಗಿಸುವಲ್ಲಿ ಬೀಳಗಿಯ ಶಿಕ್ಷಕ ಸಾಹಿತಿ ಶ್ರೀ. ಸೋಮಲಿಂಗ ಬೇಡರ್ ಅವರು ಸಿದ್ಧಹಸ್ತರು. 2019ರಲ್ಲಿ ಇವರು ಹೊರತಂದ “ಮಕ್ಕಳಿಗಾಗಿ ನೂರಾರು ಕವಿತೆಗಳು” ಎಂಬ ಚಿಣ್ಣರ ಕವನ ಸಂಗ್ರಹ ಬಾಲಸಾಹಿತ್ಯಕ್ಕೆ ಒಂದು ಉತ್ತಮ ಕೊಡುಗೆ. ನಿಸರ್ಗದ ರಮಣೀಯತೆ, ಬಿಸಿಲು-ಮಳೆ, ಆಪ್ಪ-ಅಮ್ಮ, ಹಬ್ಬ-ಹರಿದಿನಗಳು, ನಾಡು-ನುಡಿ, ಸಂಸ್ಕ್ರತಿ ಹೀಗೆ ಹತ್ತು-ಹಲವು ವಿಚಾರಗಳು ಅಂದದ ಪದಗಳಲ್ಲಿ ಚಂದದ ಕವಿತೆಗಳಾಗಿ ಇಲ್ಲಿ ಒಡಮೂಡಿವೆ. ಇಲ್ಲಿರುವ 106 ಕವಿತೆಗಳಿಗೆ ತಕ್ಕಂತೆ ಸುಂದರ ರೇಖಾಚಿತ್ರಗಳನ್ನು ಬಿಡಿಸಲಾಗಿದ್ದು ಅವು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಹಿರಿಯ ಮಕ್ಕಳ ಸಾಹಿತಿ ದಿ.ಚಂದ್ರಕಾಂತ ಕರದಳ್ಳಿ ಅವರ ಸಹೃದಯತೆಯ ಮುನ್ನುಡಿ ಹಾಗೂ ಕವಿ ವೈ.ಜಿ.ಭಗವತಿ ಅವರ ಆಪ್ತತೆಯ ಬೆನ್ನುಡಿ ಕೃತಿಗೆ ಶೋಭಾಯಮಾನವಾಗಿದೆ.

ನೀಲಾಗಸದಲ್ಲಿ ಸಾಗುವ ಹಕ್ಕಿಬಳಗ ಕಂಡು ಕವಿಹೃದಯವು

‘ಗಗನದ ಮಡಿಲಲಿ ತೇಲುತ ಹೊರಟಿವೆ

ಹಕ್ಕಿಗಳಾ ಹಿಂಡು

ಸೃಷ್ಠಿಗೆ ಚೆಲುವನು ಹೊಮ್ಮುತ ನಡೆದಿವೆ

ರೆಕ್ಕೆಗಳಾ ಬಡಿದು’

ಎನ್ನುತ್ತಾ ಖುಷಿಪಡುತ್ತಾರೆ.

ಕನ್ನಡ ನಾಡು-ನುಡಿಯ ಅಭಿಮಾನಿಯಾಗಿ ಕವಿಯು

‘ಕನ್ನಡ ನಾಡಿನ ಚಿಣ್ಣರು ನಾವು

ಕನ್ನಡ ಗುಡಿಯನು ಬೆಳಗುವೆವು

ಕನ್ನಡ ನುಡಿಯನು ಆಡುತ ನಾವು

ಕನ್ನಡ ಕೀರ್ತಿಯ ಮೆರೆಸುವೆವು’

ಎಂದು ಕನ್ನಡಾಂಬೆಯ ಬಗೆಗೆ ಸೊಗಸಾದ ಗೀತೆ ರಚಿಸಿದ್ದಾರೆ.

ಮಕ್ಕಳಿಗೆ ಹಬ್ಬಹರಿದಿನಗಳನ್ನು ಪರಿಚಯಿಸುವ ಕವಿಮನವು

‘ದೀಪ ದೀಪವ ಬೆಳಗಿವೆ

ಒಲುಮೆಯಾರತಿ ಹಿಡಿದಿವೆ

ಇಳೆಗೆ ಒಳಿತನು ಬಯಸಿವೆ

ಇಂದ್ರ ಲೋಕವ ಸೃಷ್ಠಿಸಿವೆ’

ಎನ್ನುತ್ತಾ ಬೆಳಕಿನ ಹಬ್ಬ “ದೀಪಾವಳಿ”ಯ ವೈಭವವನ್ನು ಕಟ್ಟಿಕೊಡುತ್ತಾರೆ.

‘ಮಮ್ಮಿ ಅಂದ್ರೆ ಖುಷಿ

ಅಮ್ಮ ಅಂದ್ರೆ ಕಸಿವಿಸಿ

ಅನ್ಬೇಕಂತೆ ಮಮ್ಮಿ

ಮಾಡೋದಿಲ್ಲ ಕಮ್ಮಿ

ಯಾಕಿಂಗಾತು ನಂಪಾಡು

ಬದಲಾಗಿದ್ದಾಳೆ ಅವ್ವ!!’

ಎನ್ನುವ ಕವಿತೆಯಲ್ಲಿ ಕವಿಯು ಹೊಸ ಜಗತ್ತಿನ ಬದಲಾವಣೆಗಳನ್ನು ಮಗುವಿನ ಮನದಲ್ಲಿ ಮೂಡುವ ಪ್ರಶ್ನೆಗಳನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾರೆ.

ಖಾಸಗಿ ಶಾಲೆಗಳ ವೈಭವಿಕರಣದ ಇಂದಿನ ದಿನಗಳಲ್ಲಿ ಸರಕಾರಿ ಶಾಲೆಗಳ ಮಹತ್ವವನ್ನು ಸಾರುವ ಈ ಸಾಲುಗಳು

‘ಚಿಣ್ಣರ ಕನಸಿಗೆ ಬಣ್ಣವ ತುಂಬುವ

ಚಿನ್ನದ ಕುಲುಮೆಗಳು

ಹಿಗ್ಗಿನ ಬುಗ್ಗೆಯ ಚಿಮ್ಮುತ ಕಲಿಸುವ

ಬತ್ತದ ಒರತೆಗಳು’

ಎನ್ನುವಾಗ ನಾವು ಕಲಿತ ಪ್ರಾಥಮಿಕ ಶಾಲೆಯ ನೆನಪುಗಳನ್ನು ಮರುಕಳಿಸುತ್ತವೆ.

ದೇವರಿಗಿಂತಲೂ ಮಿಗಿಲಾದ ‘ಅಪ್ಪ-ಅಮ್ಮ’ ಭೂಲೋಕದ ನಿಜದೈವಗಳು ಇಲ್ಲಿ ಕವಿಯು

‘ಅಮ್ಮನ ನುಡಿಯು

ಅಪ್ಪನ ನಡೆಯು

ಸತ್ಯಕ್ಕೂ ಮಿಗಿಲು

ಅಮ್ಮನ ಪೂಜೆ

ಅಪ್ಪನ ಸೇವೆ

ದೈವಕ್ಕೂ ಮಿಗಿಲು’

ಎಂಬ ಹಾಡು ಹೃದಯಂಗಮವಾಗಿದೆ.

ಋತುಮಾನಕ್ಕೆ ತಕ್ಕಂತೆ ಬದಲಾಗುವ ಕಾಲಮಾನದಲ್ಲಿ ಬೇಸಿಗೆಯ ‘ಬಿಸಿಲ ಧಗೆ’  ಕಂಡ ಮಗು

‘ನಡೆಯುತಿರಲಿ ಆಡುತಿರಲಿ

ಏನು ದಾಹವು

ಬಿಸಿಲ ಧಗೆಗೆ ಬೆವರುತಿಹುದು

ನನ್ನ ದೇಹವು’

ಎಂದು ಪರಿತಪಿಸುತ್ತದೆ.

ಹೀಗೆ ವಿಭಿನ್ನ ವಸ್ತು-ವೈವಿಧ್ಯದ ಮಕ್ಕಳಿಗಾಗಿ ಬರೆದ ನೂರಾರು ಕವಿತೆಗಳು ಚಿಣ್ಣರ ಮನಸೂರೆಗೊಳ್ಳುತ್ತವೆ. ಈಗಾಗಲೇ ಇಲ್ಲಿನ ಬಹುತೇಕ ಕವಿತೆಗಳು ನಾಡಿನ ಜನಪ್ರಿಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿತ್ತು ಇದೊಂದು ಸಂಗ್ರಹಯೋಗ್ಯ ಕೃತಿಯಾಗಿದೆ. ಈಗಾಗಲೇ ‘ಮುತ್ತಿನ ಮಳೆ’, ‘ಮುದ್ದಿನ ಹಕ್ಕಿ’, ‘ಹಕ್ಕಿ ಗೂಡು’, ‘ಸುಡುತ್ತಿದ್ದಾನೆ ಸೂರ್ಯ’ ಹಾಗೂ ‘ಬಂಗಾರ ಬಣ್ಣದ ಹಕ್ಕಿ’ ಎಂಬ ಐದು ಕೃತಿಗಳನ್ನು ಪ್ರಕಟಿಸಿ ಓದುಗರ ಮೆಚ್ಚುಗೆ ಗಳಿಸಿದ್ದಾರೆ. ಮಕ್ಕಳ ಸಾಹಿತ್ಯಕ್ಕೆ ಇವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂಬುದು ನಮ್ಮ ಸದಾಶಯ.

**********

ಬಾಪು ಖಾಡೆ

One thought on “ಪುಸ್ತಕ ಸಂಗಾತಿ

  1. ಶ್ರೀಯುತ ಬಾಪು ಖಾಡೆಯವರು ಸಹೃದಯ ಸಾಹಿತಿಗಳು ಅವರ ಬರಹಗಳು ಬಹಳ ಆಪ್ತವಾಗಿತ್ತವೆ. ನನ್ನ ‘ಮಕ್ಕಳ ನೂರಾರು ಕವಿತೆಗಳು’ ಕುರಿತು ಸೊಗಸಾಗಿ ಅವಲೋಕನ ಮಾಡಿದ್ದಾರೆ. ಅವರಿಗೆ ಅನಂತ ಧನ್ಯವಾದಗಳು. ಇದೇ ರೀತಿ ಹಲವಾರು ಲೇಖಕರ ಪುಸ್ತಕಗಳನ್ನು ಪರಿಚಯಿಸುತ್ತಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯ. ಅವರಿಗೆ ಅಭಿನಂದನೆಗಳು.

Leave a Reply

Back To Top