ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅದು ದೇಶದಲ್ಲಿಯೇ ಪ್ರಖ್ಯಾತವಾದ ವಿಶ್ವವಿದ್ಯಾಲಯ. ಆ ವಿಶ್ವವಿದ್ಯಾಲಯದ ತರಗತಿಯ ಕೋಣೆಯೊಂದರಲ್ಲಿ ಅತ್ಯಂತ ತಲ್ಲಿನತೆಯಿಂದ ಬೋರ್ಡಿನ ಮೇಲೆ ಚಿತ್ರ ಒಂದನ್ನು ಅಲ್ಲಿಯ ಪ್ರೊಫೆಸರ್ ಬಿಡಿಸಿದರು. ಪ್ರೊಫೆಸರ್ ಏನು ಹೇಳಬಹುದು ಎಂಬ ಕುತೂಹಲ ಮಕ್ಕಳಿಗೆ ಕಾಡತೊಡಗಿತು. ಅಂತಿಮವಾಗಿ ತಮ್ಮ ಕಾರ್ಯವನ್ನು ಸಂಪೂರ್ಣಗೊಳಿಸಿದ ಪ್ರೊಫೆಸರ್ ಮಕ್ಕಳತ್ರ ತಿರುಗಿ ಈ ಚಿತ್ರವನ್ನು ಗಮನವಿಟ್ಟು ನೋಡಿ ಎಂದು ಹೇಳಿದರು.

 ಪ್ರೊಫೆಸರ್ ಅವರ ಮಾತನ್ನು ಕೇಳಿದ ವಿದ್ಯಾರ್ಥಿಗಳುಚಿತ್ರದ ಕಡೆ ಗಮನಹರಿಸಿದರು ದೊಡ್ಡದಾದ ಮರವೊಂದರ ಟೊಂಗೆಯ ಮೇಲೆ ನಾಲ್ಕು ಹಕ್ಕಿಗಳು ಕುಳಿತಿದ್ದವು. ಇದನ್ನೇ ಮಕ್ಕಳು ಪ್ರೊಫೆಸರರಿಗೆ ಹೇಳಿದರು .ವಿದ್ಯಾರ್ಥಿಗಳ ಮಾತನ್ನು ಕೇಳಿದ ಪ್ರೊಫೆಸರ್ ನಗುತ್ತಾ… ಈ ದೊಡ್ಡ ಮರದ ಟೊಂಗೆಯ ಮೇಲೆ ಇರುವ ನಾಲ್ಕು ಹಕ್ಕಿಗಳಲ್ಲಿ ಮೂರು ಹಕ್ಕಿಗಳು ಮೇಲಕ್ಕೆ ಹಾರಿಹೋಗಲು ನಿರ್ಧರಿಸಿದವು. ಹಾಗಾದರೆ ಮರದ ಮೇಲೆ ಎಷ್ಟು ಹಕ್ಕಿಗಳು ಉಳಿದುಕೊಂಡವು? ಎಂದು ಪ್ರೊಫೆಸರ್ ಪ್ರಶ್ನಿಸಿದರು.
 ಇದೇನು ಮಹಾ ಪ್ರಶ್ನೆ! ಎಂಬಂತೆ ಕೇಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ನಗಾಡುತ್ತಾ ಒಂದು ಹಕ್ಕಿ ಎಂದು ಒಕ್ಕೊರಳಿನಿಂದ ಉತ್ತರಿಸಿದರು.  
 ಪ್ರೊಫೆಸರರ ಹಣೆಯಲ್ಲಿ ನೆರಿಗೆಗಳು ಮೂಡಿ ಹುಬ್ಬು ಗಂಟಿಕ್ಕಿತು. ಆಗ ಓರ್ವ ವಿದ್ಯಾರ್ಥಿ ಎದ್ದುನಿಂತು ಸರ್, ನಾಲ್ಕು ಹಕ್ಕಿಗಳೂ ಮರದ ಕೊಂಬೆಯ ಮೇಲೆಯೇ ಉಳಿದುಕೊಂಡವು ಎಂದು ಹೇಳಿದ. ಇದೀಗ ಮೇಲೇರಿಸಿದ ತಮ್ಮ ಎರಡು ಹುಬ್ಬುಗಳನ್ನು ಸಡಿಲಗೊಳಿಸಿದ ಪ್ರೊಫೆಸರ್ ಅದು ಹೇಗೆ? ಎಂದು ಕೇಳಿದರೆ ಉಳಿದೆಲ್ಲ ವಿದ್ಯಾರ್ಥಿಗಳು ಕುತೂಹಲದಿಂದ ಆತನ ಕಡೆ ತಿರುಗಿ ನೋಡಿದರು.

ಯುವಕ ನಸುನಗುತ್ತಾ ಅವು ಕೇವಲ ನಿರ್ಧರಿಸಿದವು ಎಂದು ನೀವು ಹೇಳಿದಿರೇ ಹೊರತು ಅವು ಹಾರಿ ಹೋದವು ಎಂದು ನೀವು ಹೇಳಲಿಲ್ಲ. ಅದರ ಪ್ರಕಾರ ನಿರ್ಧರಿಸಿದ ಮಾತ್ರಕ್ಕೆ ಅದನ್ನು ಕಾರ್ಯರೂಪಕ್ಕೆ ತರಬೇಕೆಂದಿಲ್ಲ ಅಲ್ಲವೇ? ಎಂದು ಉತ್ತರಿಸಿದನು.ಪ್ರೊಫೆಸರ್ ಮುಂದೆ ಸಾಗಿ ಆತನ ಬೆನ್ನು ತಟ್ಟಿ ಎಸ್ ಯು ಆರ್ ರೈಟ್ ಎಂದು ಹೇಳಿದರು.ಸ್ನೇಹಿತರೆ…. ಮೇಲಿನ ಕಥೆ ನಮ್ಮ ಬದುಕಿನಲ್ಲಿ ನಾವು ಕೈಗೊಳ್ಳುವ ಅನೇಕ ನಿರ್ಧಾರಗಳ ಪ್ರತಿಬಿಂಬವೇ ಆಗಿದೆ.

ಎಷ್ಟೋ ಬಾರಿ ಸಭೆ ಸಮಾರಂಭಗಳಲ್ಲಿ ಹರತಾಳಗಳಲ್ಲಿ ಜಾತಾಗಳಲ್ಲಿ ಅತ್ಯಂತ ವೀರಾವೇಷದಿಂದ ಸ್ಲೋಗನ್ಗಳನ್ನು ಕೈಯಲ್ಲಿ ಹಿಡಿದು ಓಡಾಡುವ, ಮೈಕಿನ ಮುಂದೆ ಪಂಚಿಂಗ್ ಡೈಲಾಗ್ ಗಳನ್ನು ಒಂದರ ಹಿಂದೆ ಒಂದರಂತೆ ಹೇಳುವ, ಸ್ನೇಹಿತರ ಮಧ್ಯದಲ್ಲಿ ದೊಡ್ಡ ದೊಡ್ಡ ಮಾತುಗಳನ್ನು ಆಡುವ ಜನರನ್ನು ನಾವು ಗಮನಿಸಿಯೇ ಇರುತ್ತೇವೆ…. ಆದರೆ ನಿಜದ ಬದುಕಿನಲ್ಲಿ ಇದೆಲ್ಲದಕ್ಕೂ ವ್ಯತಿರಿಕ್ತವಾಗಿ ವರ್ತಿಸುವ ಅವರ ಮತ್ತೊಂದು ಮುಖ ನಮಗೆ ಖಂಡಿತವಾಗಿಯೂ ಗೊತ್ತಿರುತ್ತದೆ. ಇದನ್ನೇ ವಿಪರ್ಯಾಸ ಎಂದು ಕರೆಯುವುದು.

 ಸಭೆ ಸಮಾರಂಭಗಳಲ್ಲಿ ವರದಕ್ಷಿಣೆಯನ್ನು ವಿರೋಧಿಸುವ ವ್ಯಕ್ತಿ ಮನೆಯಲ್ಲಿ ತನ್ನ ಪತ್ನಿಗೆ ತವರು ಮನೆಯಿಂದ ಹಣ, ಒಡವೆ, ಆಸ್ತಿ ತರಲು ಪೀಡಿಸುತ್ತಾನೆ.ಸ್ತ್ರೀ ಸಮಾನತೆಯ ಕುರಿತು ಮಾತನಾಡುವ ವ್ಯಕ್ತಿ ತನ್ನ ಪತ್ನಿಯನ್ನು ಮನೆಯಲ್ಲಿ ಕೂಡಿ ಹಾಕಿರುತ್ತಾನೆ. ಕೌಟುಂಬಿಕ ವಾತ್ಸಲ್ಯದ ಕುರಿತು ಮಾತನಾಡುವ ಹೆಣ್ಣು ಮಗಳು ಖುದ್ದು ತಾನೇ ತನ್ನ ಸೊಸೆಗೆ ಕಿರಿಕಿರಿ ಮಾಡುತ್ತಾಳೆ…. ಇವೆಲ್ಲವೂ ಪರಿಸ್ಥಿತಿಯ ವಿಡಂಬನೆಗಳು ಎಂದರೆ ತಪ್ಪಿಲ್ಲ.

ಹೇಳುವುದು ಒಂದು… ಮಾಡುವುದು ಇನ್ನೊಂದು ನಂಬುವುದು ಹೇಗೋ ಕಾಣೆ  ತಿರುಪತಿ ಶ್ರೀ ವೆಂಕಟಚಲಪತಿ ಎಂದು ನಮ್ಮ ಚಲನಚಿತ್ರದ ಹಾಡೊಂದು ಇದೆ…. ಹೇಳಿದ ಶೇಕಡ ನೂರನ್ನು ಎಲ್ಲರೂ ಮಾಡುವುದಿಲ್ಲ ಅದು ಸಹಜವೂ ಹೌದು ಹೇಳಿದ ಶೇಕಡ 50ರಷ್ಟು ಮಾಡಿದರೆ ಅವರು ಹೇಳಿದ್ದಕ್ಕೂ ಕೊಂಚಮಟ್ಟಿನ ಸಾರ್ಥಕತೆ ಇರುತ್ತದೆ. ಆದರೆ ಬರಿ ಬಾಯಿ ಮಾತಿನಲ್ಲಿ ಹೇಳುವ ಆದರೆ ಕಾರ್ಯ ರೂಪದಲ್ಲಿ ತರದೆ ಇರುವ ಜನರೇ ನಮ್ಮಲ್ಲಿ ಬಹಳಷ್ಟು ಇದ್ದಾರೆ. ನಿರ್ಧಾರ ತೆಗೆದುಕೊಳ್ಳುವುದು ಒಂದು ಹಂತವಾದರೆ ಅದನ್ನು ಕಾರ್ಯಗತಗೊಳಿಸುವುದು ಮತ್ತೊಂದು ಹಂತ. ಕೇವಲ ಮಾತಿನಲ್ಲಿಯೇ ಮಂಟಪ ಕಟ್ಟುವ ಸಾಕಷ್ಟು ಜನರನ್ನು ನೋಡಿ ಬಂಡಲ್ ಬಡಾಯಿ ಮಾದೇವ ಎಂದು ಕೂಡ ತಮಾಷೆ ಮಾಡುವುದು ಉಂಟು.

ಇದರ ನಂತರ ಬರುವ ಮತ್ತೊಂದು ಹಂತ ಹೀಗಿದ…   ಆಳು ಮಾಡಿದ್ದು ಹಾಳು,ಮಗ ಮಾಡಿದ್ದು ಮಧ್ಯಮ,ತಾನು ಮಾಡಿದ್ದು ಉತ್ತಮ ಎಂದು. ಇದಕ್ಕೆ ಪೂರಕವಾಗಿ ಒಂದು ಕಥೆ ಹೀಗಿದೆ. ಹೊಲವೊಂದರಲ್ಲಿ ಬೆಳೆಯ ನಡುವೆ ಗೂಡು ಕಟ್ಟಿಕೊಂಡಿದ್ದ ಗುಬ್ಬಿ ತನ್ನ ಮರಿಗಳೊಂದಿಗೆ ಅಲ್ಲಿಯೇ ವಾಸವಾಗಿತ್ತು. ಆ ದಿನ ಹೊಲಕ್ಕೆ ಬಂದ ರೈತ ಇನ್ನೇನು ಕೊಯ್ಲಿಗೆ ಬಂದಿರುವ ಬೆಳೆಯನ್ನು ನಾಳೆಯೇ ಬಂದು ಕತ್ತರಿಸಲು ಆಳಿಗೆ ಹೇಳುವೆ ಎಂದು ಜೋರಾಗಿ ತನಗೆ ತಾನೇ ಹೇಳಿಕೊಂಡು ಹೋಗುತ್ತಾನೆ. ಗೂಡಿನಲ್ಲಿದ್ದ ಮರಿಗಳು ತಮ್ಮ ತಾಯಿಗೆ ಈ ವಿಷಯ ಹೇಳಿದಾಗ ತಾಯಿ ಚಿಂತಿಸಬೇಡಿ, ನಮಗೇನೂ ತೊಂದರೆಯಾಗುವುದಿಲ್ಲ  ಎಂದು ತನ್ನ ಮರಿಗಳಿಗೆ ಧೈರ್ಯ ಹೇಳುತ್ತದೆ.

ಮತ್ತೆ ಒಂದೆರಡು ದಿನ ಕಳೆದ ಮೇಲೆ ಹೊಲಕ್ಕೆ ಬಂದರೆ ರೈತ ಬೆಳೆಯನ್ನು ಕಟಾವು ಮಾಡದೇ ಇರುವುದನ್ನು ನೋಡಿ ಅಯ್ಯೋ! ಆಳು ಮಾಡೋದು ಹೀಗೆಯೇ ನನ್ನ ಮಗನಿಗೆ ನಾಳೆಯೇ ಇದನ್ನು ಕತ್ತರಿಸಲು ಹೇಳುತ್ತೇನೆ ಎಂದು ಗೊಣಗುತ್ತ ಮನೆಗೆ ಮರಳುತ್ತಾನೆ. ಮತ್ತೆ ಮರಿಗಳು ತಾಯಿಯ ಮುಂದೆ ಈ ವಿಷಯವನ್ನು ಹೇಳಲು ತಾಯಿ ನಕ್ಕು ಇರಲಿ ಬಿಡಿ ಚಿಂತಿಸಬೇಡಿ, ಏನು ತೊಂದರೆ ಇಲ್ಲ ಎಂದು ಹೇಳುತ್ತಾಳೆ. ಇದೀಗ ಮಕ್ಕಳಿಗೂ ತುಸು ಧೈರ್ಯ.

ಒಂದು ವಾರ ಕಳೆದ ಮೇಲೆ ಬರುವ ರೈತ ಅಯ್ಯೋ!  ಈ ಮಕ್ಕಳೇ ಇಷ್ಟು, ಎಷ್ಟು ಹೇಳಿದರೂ ನಮ್ಮ ಮಾತನ್ನು ಪರಿಗಣಿಸುವುದೇ ಇಲ್ಲ. ನಾಳೆ ನಾನೇ ಬಂದು ಎಲ್ಲವನ್ನು ಕೊಯ್ಲು ಮಾಡುತ್ತೇನೆ ಎಂದು ತನಗೆ ತಾನೇ ಹೇಳಿಕೊಳ್ಳುತ್ತಾ ಮನೆಗೆ ಹೋಗುತ್ತಾನೆ.

ಈಗಾಗಲೇ ಎರಡು ಬಾರಿಯ ಅನುಭವದಿಂದ ರೈತನ ಪರಿಸ್ಥಿತಿಯನ್ನು ಅರಿತ ಮಕ್ಕಳು ಈ ಬಾರಿ ತಾಯಿ ಹಕ್ಕಿಯ ಮುಂದೆ ಅಮ್ಮ ರೈತ ನಾಳೆ ತಾನೇ ಬಂದು ಬೆಳೆಯನ್ನು ಕತ್ತರಿಸಿ ಕುಯ್ಲು ಮಾಡುತ್ತೇನೆ ಎಂದು ಹೇಳಿದ ಎಂದು ನಗಾಡುತ್ತವೆ.
ಆದರೆ ಈ ಬಾರಿ ಎಂದಿನಂತೆ ತಾಯಿ ಹಕ್ಕಿಯು ನಗದೆ , ನಾಳೆ ಮುಂಜಾನೆ ಎಲ್ಲರೂ ಸಜ್ಜಾಗಿ ನಾವು ನಾಳೆಯೇ ಇಲ್ಲಿಂದ ಬೇರೆ ಸ್ಥಳಕ್ಕೆ ವಲಸೆ ಹೋಗೋಣ ಎಂದು ಗಂಭೀರವಾಗಿ ಹೇಳುತ್ತದೆ.
 ಮರಿ ಹಕ್ಕಿಗಳು ಅದಕ್ಕೆ ಅಷ್ಟು ಗಾಬರಿ ಏಕೆ ಅಮ್ಮ ಈ ಹಿಂದಿನಂತೆಯೇ ಆಗುತ್ತದೆ, ಚಿಂತೆ ಬಿಡು ಎಂದು ಹೇಳುತ್ತಾರೆ. ಅದಕ್ಕೆ ತಾಯಿ ಹಕ್ಕಿ aಖಂಡಿತವಾಗಿಯೂ ಈ ಹಿಂದಿನಂತೆ ಆಗುವುದಿಲ್ಲ. ರೈತ ನಾಳೆ ಬಂದು ತನ್ನ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತಾನೆ ಎಂದು ಉತ್ತರಿಸಿ ಮರುದಿನವೇ ಅಲ್ಲಿಂದ ಜಾಗ ಖಾಲಿ ಮಾಡಿತು.

ಸ್ನೇಹಿತರೆ! ಇದರಿಂದ ನಮಗೆ ಅರ್ಥವಾಗುವ ವಿಷಯ ಏನೆಂದರೆ ನಿರ್ಧಾರ ಮಾಡುವುದು ಸುಲಭ ಆದರೆ ಆ ನಿರ್ಧಾರಕ್ಕೆ ಕಟಿ ಬದ್ಧರಾಗಿ ಕಾರ್ಯನಿರ್ವಹಿಸುವುದು ಬಹಳ ಮುಖ್ಯ

ಎಷ್ಟೋ ಬಾರಿ ಮನೆಯ ಹಲವಾರು ಕೆಲಸಗಳು
ನಾಳೆ ಮಾಡಿದರಾಯ್ತು ಎಂಬ ಕಾರಣಕ್ಕಾಗಿ ಮುಂದೆ ಹೋಗುತ್ತವೆ…. ಬಹಳಷ್ಟು ಬಾರಿ ಆ ನಾಳೆಗಳು ಬರುವುದೇ ಇಲ್ಲ ಮತ್ತು ಆ ಕೆಲಸ ಆಗುವುದೂ ಇಲ್ಲ. ಇಲ್ಲವೇ ಆ ಕೆಲಸವನ್ನು ಅಂತಿಮವಾಗಿ ನಾವು ಮಾಡಿದಾಗ ಸಮಯಕ್ಕೆ ಸರಿಯಾಗಿ ಮಾಡದೆ ಹೋದುದರ ಪರಿಣಾಮವಾಗಿ ಯಾವುದೇ ರೀತಿಯ ಪ್ರಯೋಜನವಿಲ್ಲದಂತಾಗುತ್ತದೆ. ಇದನ್ನೇ ನಮ್ಮ ಹಿರಿಯರು ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡಂತೆ ಎಂದು ಹೇಳುವುದು. ಆದರೇನು ಮಿಂಚಿಹೋದ ಕೆಲಸಕ್ಕೆ ಚಿಂತಿಸಿ ಫಲವಿಲ್ಲ ಅಲ್ಲವೇ.

ನಾಳೆ ಮಾಡುವುದನ್ನು ಇಂದೇ ಮಾಡು,ಇಂದು ಮಾಡುವುದನ್ನು ಈಗಲೇ ಮಾಡು ಎಂದು ಹೇಳಲು ಕಾರಣ ನಾಳೆ ಮಾಡಿದ ಕೆಲಸ ಹಾಳು ಅಥವಾ ಉಪಯೋಗವಿಲ್ಲ ಎಂಬ ಕಾರಣಕ್ಕಾಗಿ.

 ಈ ಎಲ್ಲ ಮಾತುಗಳ ಹಿಂದಿನ ಸತ್ಯವನ್ನು ಅರಿತು
 ನಾವು ಬದುಕಿನಲ್ಲಿ ಕಾರ್ಯತತ್ಪರರಾಗೋಣ ಎಂಬ ಆಶಯದೊಂದಿಗೆ


About The Author

Leave a Reply

You cannot copy content of this page

Scroll to Top