ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ–14

ನಾನು ಚಿಕ್ಕಬಳ್ಳಾಪುರದಲ್ಲಿ ಇದ್ದಾಗ ನಡೆದ ಒಂದು ಪ್ರತಿನಿಧಿಗಳ ಸಮಾವೇಶದ ಬಗ್ಗೆ ಹೇಳಬೇಕೆನಿಸುತ್ತಿದೆ ಜೀವವಿಮಾನ ನಿಗಮದಲ್ಲಿ ಪ್ರತಿನಿಧಿಗಳ ಸಾಧನೆ ಅಂದರೆ ಅವರು ಮಾಡಿಸಿದ ಪಾಲಿಸಿಗಳ ಸಂಖ್ಯೆ ಹಾಗೂ ಗಳಿಸಿದ ಕಮಿಷನ್ ಇವುಗಳ ಆಧಾರದ ಮೇಲೆ ಅವರುಗಳಿಗೆ ಕ್ಲಬ್ ಸದಸ್ಯರಾಗುವ ಅವಕಾಶ ದೊರೆಯುತ್ತದೆ ಈ ರೀತಿಯ ಕ್ಲಬ್ ಗಳು ಹೀಗಿವೆ. ಉನ್ನತ ಮಟ್ಟದಿಂದ ಆರಂಭವಾಗಿ
ಕಾರ್ಪೊರೇಟ್ ಕ್ಲಬ್
ಅಧ್ಯಕ್ಷರ ಕ್ಲಬ್
ವಲಯ ವ್ಯವಸ್ಥಾಪಕರ ಕ್ಲಬ್
ವಿಭಾಗಿಯ ವ್ಯವಸ್ಥಾಪಕರ ಕ್ಲಬ್
ಶಾಖಾ ವ್ಯವಸ್ಥಾಪಕರ ಕ್ಲಬ್
ಡಿಸ್ಟಿಂಗ್ವಿಶ್ಡ್ ಕ್ಲಬ್
ಹೀಗೆ ವಿವಿಧ ಕ್ಲಬ್ಗಳ ಸದಸ್ಯರಾದ ಪ್ರತಿನಿಧಿಗಳಿಗೆ ಕೆಲವೊಂದು ವಿಶೇಷ ಸವಲತ್ತುಗಳು ಸಿಗುತ್ತದೆ. ಇದರಲ್ಲಿ ಶಾಖಾ ವ್ಯವಸ್ಥಾಪಕರ ಕ್ಲಬ್ ಸದಸ್ಯರಿಗೆ ಶಾಖೆಯ ಮಟ್ಟದಲ್ಲಿ ಒಂದು ಸಮಾವೇಶ ನಡೆಸಿ ಅವರಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಅದನ್ನು ಆಯೋಜಿಸುವ ಜವಾಬ್ದಾರಿ ಶಾಖೆಯದ್ದು, ಅದರಲ್ಲೂ ವಿಕ್ರಯ ವಿಭಾಗದ್ದು. ಹಾಗಾಗಿ ನಾನು ಜಯಶ್ರೀ ನಾಗರಾಜ್ ವೆಂಕಟರಾಯಪ್ಪ ಮತ್ತಿತರು ಸೇರಿ ವ್ಯವಸ್ಥೆಗಳನ್ನು ಮಾಡಿದ್ದೆವು . ಒಂದು ಶನಿವಾರ ಬೆಳಿಗ್ಗೆ ಈ ಕಾರ್ಯಕ್ರಮ ನಡೆದು ಒಂದು ಛತ್ರದಲ್ಲಿ ಇದನ್ನು ಆಯೋಜಿಸಲಾಗಿತ್ತು .ಮಧ್ಯಾಹ್ನ ಊಟದ ಜೊತೆಗೆ ಕಾರ್ಯಕ್ರಮ ಮುಗಿದಿತ್ತು. ಆ ಕಾರ್ಯಕ್ರಮದಲ್ಲಿ ನಿರೂಪಣೆಯ ಕೆಲಸವನ್ನು ಮೊಟ್ಟಮೊದಲ ಬಾರಿಗೆ ನಾನು ಮಾಡಿದ್ದೆ. ಅದು ಎಲ್ಲರಿಗೂ ಮೆಚ್ಚುಗೆಯಾಗಿತ್ತು.
ಮತ್ತೊಂದು ವಿಶೇಷ ವ್ಯವಸ್ಥೆಯ ಬಗ್ಗೆ ಇಲ್ಲಿ ನೆನಪಿಸಿಕೊಳ್ಳಲೇಬೇಕು . ಅದೆಂದರೆ ಮಿನಿ ಬ್ಯಾಂಕ್ ಪದ್ಧತಿ. ಒಂದಷ್ಟು ಸದಸ್ಯರು ಸೇರಿ ಪ್ರತಿ ತಿಂಗಳು ಒಂದು ಮೊತ್ತವನ್ನು ಕ್ರೋಢೀಕರಿಸಿ ಅದನ್ನು ಸದಸ್ಯರಲ್ಲೇ ಅಗತ್ಯ ಇದ್ದವರಿಗೆ ಸಾಲವಾಗಿ ಕೊಡುವುದು. ಒಂದು ಕನಿಷ್ಠ ದರದ ಬಡ್ಡಿ ವಿಧಿಸಲಾಗುತ್ತದೆ. 10 ತಿಂಗಳಲ್ಲಿ ಸಾಲದ ಮೊತ್ತವನ್ನು ವಾಪಸ್ಸು ಮಾಡಬೇಕು. ಒಂದು ವರ್ಷವಿಡೀ ಸಂಗ್ರಹವಾದ ಬಡ್ಡಿಯ ಮೊತ್ತವನ್ನು ಎಲ್ಲ ಸದಸ್ಯರಿಗೂ ಸಮನಾಗಿ ಹಂಚಲಾಗುತ್ತದೆ.ಅಲ್ಲಿ ಈ ರೀತಿಯ ಮಿನಿ ಬ್ಯಾಂಕ್ ಅನ್ನು ವೆಂಕಟರಾಯಪ್ಪ ಅವರು ನಡೆಸುತ್ತಿದ್ದರು. ಮೊದಲ ತಿಂಗಳಿನಿಂದಲೇ ನನ್ನನ್ನು ಸಹ ಸೇರಿಸಿಕೊಂಡರು.

ಆ ಶಾಖೆಯಲ್ಲಿ ಖಚಾಂಚಿ ಆಗಿದ್ದ ಮತ್ತೊಬ್ಬರು ನಾಗರಾಜ್ ಸಹ ತುಂಬಾ ನೆನಪಿನಲ್ಲಿ ಉಳಿದಿದ್ದಾರೆ. ನಮಗೆ ಮೊದಲ ತಿಂಗಳ ವೇತನ ಬರುವ ಮೊದಲೇ ನಮಗೆ ಉಳಿತಾಯದ ಸಲಹೆಗಳನ್ನು ನೀಡಿದ್ದರು. ಆಗ ನಮಗೆ ಪಿಂಚಣಿ ಯೋಜನೆ ಅನ್ವಯವಾಗುತ್ತಿರಲಿಲ್ಲ. ಹಾಗಾಗಿ ಅವರು ಪ್ರತಿ ತಿಂಗಳು ನಮ್ಮ ಪ್ರಾವಿಡೆಂಟ್ ಫಂಡ್ ಮೊತ್ತ ಎಷ್ಟು ಇರುತ್ತದೆ ಅಷ್ಟೇ ಮೊತ್ತವನ್ನು ಅಡಿಷನಲ್ ಪ್ರಾವಿಡೆಂಟ್ ಫಂಡ್ ಗೆ ಹಾಕಿ. ನಿವೃತ್ತಿ ಆಗುವಾಗ ಒಂದು ದೊಡ್ಡ ಮೊತ್ತ ಬರುತ್ತದೆ. ಅದರ ಬಡ್ಡಿ, ಪಿಂಚಣಿಯಷ್ಟೇ ಅಥವಾ ಅದಕ್ಕಿಂತ ಹೆಚ್ಚು ಬರುತ್ತದೆ. ಈಗ ಕೆಲಸಕ್ಕೆ ಸೇರಿದವರು ಇದನ್ನು ಪಾಲಿಸಿದರೆ ತುಂಬಾ ಉಪಯೋಗ ಎಂದು. ಆದರೆ ಆಗ ಹಣಕ್ಕೆ ಸ್ವಲ್ಪ ತೊಂದರೆ ಇದ್ದಿದ್ದರಿಂದ ನಾನು ಆ ಯೋಜನೆ ಮಾಡಲಿಲ್ಲ. ಕೆಲವರು ಹಾಗೆ ಮಾಡಿ ಬಹಳಷ್ಟು ಉಳಿತಾಯ ಮಾಡಿದರು ಸಹ.
ಅವರು ಕೊಟ್ಟ ಮತ್ತೊಂದು ಸಲಹೆ ಎಂದರೆ ಪ್ರತಿ ತಿಂಗಳು ನೂರು ರೂಪಾಯಿನ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ತೆಗೆದುಕೊಳ್ಳುವುದು. ಐದು ವರ್ಷಕ್ಕೆ ಅದು ಆಗ ದುಪ್ಪಟ್ಟಾಗಿ ಬರುತ್ತಿತ್ತು .ಸಾಧ್ಯವಾದಲ್ಲಿ ಮತ್ತೆ ಸೇರಿಸಿ ಇಲ್ಲದಿದ್ದರೆ ಬಂದ ಹಣವನ್ನೇ ಮತ್ತಷ್ಟು ಸರ್ಟಿಫಿಕೇಟ್ ತೆಗೆದುಕೊಳ್ಳುತ್ತಾ ಬಂದರೆ ಒಳ್ಳೆಯ ಉಳಿತಾಯ ಎಂಬುದು. ತಮಾಷೆಯೋ ಅಥವಾ ನಿಜವಾದ ಸಂಗತಿಯೋ ಗೊತ್ತಿಲ್ಲ .ಬೇರೆಯವರೆಲ್ಲ ಹೇಳುತ್ತಿದ್ದುದು ನಾಗರಾಜ್ ಅವರ ಮನೆಯಲ್ಲಿ ಒಂದು ಕಬ್ಬಿಣದ ಅಲಮಾರಿಯಲ್ಲಿ ಬಟ್ಟೆಯ ಬದಲು ಈ ರೀತಿ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ಗಳನ್ನು ಜೋಡಿಸಿಟ್ಟಿದ್ದಾರೆ ಎಂದು .ಆದರೆ ನಿಜಕ್ಕೂ ಅದು ಒಳ್ಳೆಯ ಸಲಹೆಯಾಗಿತ್ತು ಆದರೆ ನನಗೆ ಪಾಲಿಸಲು ಆಗಲಿಲ್ಲ ಅಷ್ಟೇ.
ಹೀಗೆ ಆಡಾಡುತ್ತಾ ದಸರೆಯ ರಜವು ಬಂತು ಆ ಸಮಯದಲ್ಲಿ ನಮ್ಮ ತಂದೆಗೆ ಒಂದು ವಾರ ಆಫೀಸಿಗೆ ರಜೆ ಇದ್ದುದರಿಂದ ಅಮ್ಮ ಅಣ್ಣ ಹಾಗೂ ನನ್ನ ಇಬ್ಬರು ತಂಗಿಯರು ಜೊತೆಗೆ ನಮ್ಮ ಫ್ಯಾಮಿಲಿ ಫ್ರೆಂಡ್ ಶಾಂತ ಇಷ್ಟು ಜನರು ಚಿಕ್ಕಬಳ್ಳಾಪುರಕ್ಕೆ ನಮ್ಮ ಮನೆಗೆ ಬಂದರು. ನಂದಿ ಬೆಟ್ಟಕ್ಕೆ ಹೋಗುವ ಯೋಜನೆ ಹಾಕಿಕೊಂಡೆವು. ಅಂದು ವಿಜಯದಶಮಿ. ಅಲ್ಲಿಗೆ ತೆಗೆದುಕೊಂಡು ಹೋಗಲು ಬಿಸಿಬೇಳೆ ಬಾತ್ ಹಾಗು ಮೊಸರನ್ನ ಮಾಡಿಕೊಂಡು ಬೆಳಗಿನ ತಿಂಡಿಗೆ ಮನೆಯ ಬಳಿಗೆ ಒಬ್ಬರು ಮಾಡುತ್ತಿದ್ದ ಇಡ್ಲಿಯನ್ನು ತರಿಸಿದೆವು. 25 ಪೈಸೆಗೆ ಒಂದು ಇಡ್ಲಿ. ಆಗ ತುಂಬಾ ಚೆನ್ನಾಗಿ ಸಹ ಇರುತ್ತಿತ್ತು. ಅವರ ಮನೆಯಲ್ಲಿ ಸಂಜೆಯ ಹೊತ್ತಿನಲ್ಲಿ ವಡೆ ಬಜ್ಜಿ ಬೋಂಡಾ ಸಹ ಮಾಡಿ ಮಾರುತಿದ್ದರು. ಬೇಕಾದಾಗ ಅದನ್ನು ತರಿಸಿಕೊಳ್ಳುತ್ತಿದ್ದೆವು. ಚಿಕ್ಕಮ್ಮನ ಮಕ್ಕಳಾದ ಪ್ರಕಾಶ ನಾಗೇಶ ಹಾಗೂ ರೂಪ ಸಹ ನಮ್ಮೊಂದಿಗೆ ನಂದಿ ಬೆಟ್ಟಕ್ಕೆ ಹೊರಟರು. ಸುಮಾರು 11 ಗಂಟೆ ವೇಳೆಗೆ ಬಸ್ ಸಿಕ್ಕಿ ನಂದಿ ಬೆಟ್ಟ ತಲುಪಿದೆವು. ಅಲ್ಲಿ ಸುಮಾರು ಸುತ್ತಾಡಿ ತೆಗೆದುಕೊಂಡು ಹೋಗಿದ್ದ ತಿಂಡಿ ಎಲ್ಲಾ ಮುಗಿಸಿ 4 ಗಂಟೆಗೆ ವಾಪಸ್ ಆಗಲು ಬಸ್ ನಿಲ್ದಾಣ ತಲುಪಿದರೆ ಆ ಜನಜಂಗುಳಿ ನೋಡಿ ಎದೆ ಒಡೆಯುವುದೊಂದೇ ಬಾಕಿ. 20 ಬಸ್ ಹಿಡಿಸುವಷ್ಟು ಜನ ಆದರೆ ಒಂದೂ ಬಸ್ ಇರಲಿಲ್ಲ. ಆಮೇಲೆ ಬಂದ ಬಸ್ ಗಳು ಅಷ್ಟೇ ಸಿಕ್ಕಾಪಟ್ಟೆ ರಶ್ ಆಗುತ್ತಿದ್ದವು. ಕಡೆಗೆ ಚಿಕ್ಕಬಳ್ಳಾಪುರಕ್ಕಾದರೂ ಸರಿ ಬೆಂಗಳೂರಿಗೆ ಆದರೂ ಸರಿ ಸಿಕ್ಕ ಬಸ್ ಹತ್ತಿ ಬೆಟ್ಟದಿಂದ ಇಳಿದರೆ ಸಾಕಪ್ಪ ಎಂದು ಎನಿಸಿತ್ತು. ಈ ಮಧ್ಯೆ ನಮ್ಮ ಗುಂಪು ಬೇರಾಗಿ ಒಬ್ಬೊಬ್ಬರು ಒಂದೊಂದು ಬಸ್ ಬೇರೆ ಹತ್ತಿದೆವು .ನಾವು ಹತ್ತಿದ ಬಸ್ ಚಿಕ್ಕಬಳ್ಳಾಪುರಕ್ಕೆ ಹೋಗುವುದು ಎಂದು ಖಾತ್ರಿ ಆದಾಗ ಸ್ವಲ್ಪ ಸಮಾಧಾನ ಆದರೂ ನನ್ನ ತಂಗಿಯರು ಹಾಗೂ ಚಿಕ್ಕಮ್ಮನ ಮಕ್ಕಳು ಹತ್ತಿದ ಬೇರೊಂದು ಬಸ್ ಬೆಂಗಳೂರಿಗೆ ಹೋದರೆ ಏನು ಗತಿ ಎಂಬ ಆತಂಕ ಬೇರೆ. ಈಗಿನಂತೆ ಮೊಬೈಲ್ ಏನುಇ ಇಲ್ಲದೆ ಇದ್ದ ಆ ಸಮಯದಲ್ಲಿ ಬೇರೆ ಬೇರೆ ಬಸ್ ಹತ್ತಿ ಎಷ್ಟು ಪಾಡುಪಟ್ಟಿದ್ದೆವು ಅದನ್ನು ಇಂದೂ ಸಹ ಮರೆಯಲು ಸಾಧ್ಯವಿಲ್ಲ. ಅಂತೂ ಇಂತೂ ಪರಿಪಾಟಲು ಪಟ್ಟು ಚಿಕ್ಕಬಳ್ಳಾಪುರಕ್ಕೆ ಬಂದು ಇಳಿದೆವು .ನಮ್ಮ ಪುಣ್ಯಕ್ಕೆ ಹಿಂದೆಯೇ ಮತ್ತೊಂದು ಬಸ್ ಬಂದು ಅದರಲ್ಲಿ ನನ್ನ ತಂಗಿ ಕಸಿನ್ಸ್ ಎಲ್ಲಾ ಇದ್ದಿದ್ದು ಉಸ್ ಎಂದು ನಿಟ್ಟುಸಿರು ಬಿಡುವಂತೆ ಆಯಿತು. ನಂದಿ ಪ್ರವಾಸದ ಈ ಪ್ರಯಾಸ ಎಂದೆಂದಿಗೂ ನೆನಪಿನ ಭಿತ್ತಿಯಲ್ಲಿ ಉಳಿದುಹೋಗಿದೆ. ಆದರೂ ಬಸ್ ನಲ್ಲಿ ನೂಕು ನುಗ್ಗಲಿನಲ್ಲಿ ಹೋಗಿ ಎಷ್ಟು ಎಂಜಾಯ್ ಮಾಡುತಿದ್ದೆವು ಆಗ, ಈಗ ಹಾಯಾಗಿ ಎಸಿ ಕಾರಿನಲ್ಲಿ ಹೋಗಬಹುದು ಆದರೂ ಅಂದಿನ ದಿನಗಳ ಸಂತಸ ಖಂಡಿತ ಇಲ್ಲ .ಹೋಗಲು ಮೂಡ್ ಸಹ ಬರುವುದಿಲ್ಲ ಇದು ವಯಸ್ಸಿನ ಪ್ರಭಾವವೋ ಅಥವಾ ಮನಸ್ಸು ಒಗ್ಗಿ ಹೋದ ಸುಖದ ಪ್ರಭಾವವೋ ಗೊತ್ತಿಲ್ಲ

ಹಾಗೆಯೇ ಅದೇ ದಸರೆಯ ರಜೆಯಲ್ಲಿ ನನ್ನ ನಾದಿನಿಯರಾದ ಶೋಭಾ ಮತ್ತು ಉಷಾ ಹಾಗೂ ಅವರ ಕುಟುಂಬಗಳು ನಮ್ಮ ಮನೆಗೆ ಬಂದವು ಈ ಬಾರಿ ನಂದಿ ಪ್ರವಾಸ ಹಾಕಿಕೊಳ್ಳಲಿಲ್ಲ. ಅವರು ಸಾಕಷ್ಟು ಬಾರಿ ನಂದಿ ನೋಡಿದ್ದರು. ಹಾಗಾಗಿ ಹತ್ತಿರದಲ್ಲಿಯೇ ಇದ್ದ ರಂಗಸ್ಥಳ ಚಿತ್ರಾವತಿ ಇವುಗಳಿಗೆ ಹೋಗಿ ಬಂದೆವು. ಒಂದು ಸಿನಿಮಾ ಹೃದಯಗೀತೆ ಎನಿಸುತ್ತದೆ ಸಹ ನೋಡಿ ಬಂದೆವು. ರಂಗಸ್ಥಳಕ್ಕೆ ಹತ್ತಿರದಲ್ಲೇ ಒಂದು ಒಳ ಹಾದಿ ಇದೆ ನಡೆದೇ ಹೋಗಬಹುದು ಎಂದಾಗ ಆ ಹೊಲಗಳ ಮಧ್ಯದ ಹಾದಿಯಲ್ಲಿ ಅಲ್ಲಿ ಹೋಗಿದ್ದು ನಿಜಕ್ಕೂ ಒಂದು ಸುಂದರ ನೆನಪು. ಅಲ್ಲಿಗೆ ನಿಂಬೆಹಣ್ಣಿನ ಚಿತ್ರಾನ್ನ ಮೊಸರನ್ನ ತೆಗೆದುಕೊಂಡು ಹೋಗಿ ದೇವಸ್ಥಾನದ ಪ್ರಾಂಗಣದಲ್ಲಿ ಕುಳಿತು ತಿಂದು ಬಂದೆವು. ಇತ್ತೀಚೆಗೆ ಅದೇ ರಂಗಸ್ಥಳಕ್ಕೆ ಹೋದಾಗ ಬಹಳವೇ ಬದಲಾವಣೆಗಳಾಗಿದ್ದವು .ನಮ್ಮ ನೆನಪಿನಲ್ಲಿ ಇದ್ದ ರಂಗಸ್ಥಳ ಇದೇನಾ ಎಂದು ಆಶ್ಚರ್ಯವಾಗುವಷ್ಟು.
ಇನ್ನು ಎಷ್ಟೋ ಸಹೋದ್ಯೋಗಿಗಳು ನೆನಪಿನ ಅಂಗಳದಲ್ಲಿ ಹಸಿರಾಗಿ ಉಳಿದಿದ್ದಾರೆ .ಆಗ ನಾಸಿಕ್ ನಿಂದ ವರ್ಗವಾಗಿ ಜಯ ಎಂಬ ಸಹೋದ್ಯೋಗಿ ಬಂದಿದ್ದರು ಕನ್ನಡ ಮಾತನಾಡುತ್ತಿದ್ದರು ಆದರೆ ಓದಲು ಬರೆಯಲು ಬರುತ್ತಿರಲಿಲ್ಲ. ತುಂಬಾ ಆತ್ಮೀಯವಾಗಿ ಇದ್ದರು. ಇಬ್ಬರಿಗೂ ಇನ್ನೂ ಆಗ ಮಕ್ಕಳಾಗಿರಲಿಲ್ಲ . ಚಿಕಿತ್ಸೆಯ ಹಾದಿಯಲ್ಲಿ ಇದ್ದೆವು ಹಾಗಾಗಿ ಒಂದು ರೀತಿಯ ಸಮಾನಮನಸ್ಕರು ಅನ್ನಬಹುದು. ಕಳೆದ ಸೆಪ್ಟೆಂಬರ್ ನಲ್ಲಿ ಅವರಿಗೆ ನಿವೃತ್ತಿಯಾಯಿತು. ನನ್ನ ತಂಗಿ ಛಾಯಾಳಿಗೆ ಸಹೋದ್ಯೋಗಿಯಾಗಿದ್ದರಿಂದ ಅವರ ಫೋನ್ ನಂಬರ್ ಸಿಕ್ಕಿ ಮಾತನಾಡಿದೆ ತುಂಬಾ ಖುಷಿಯಾಯಿತು.
ಹಾಗೆಯೇ ಬೆಂಗಳೂರಿನಿಂದ ಆಡಳಿತಾಧಿಕಾರಿಯಾಗಿ ಪದೋನ್ನತಿ ಹೊಂದಿ ಚಿಕ್ಕಬಳ್ಳಾಪುರಕ್ಕೆ ದಿನಾಲು ಓಡಾಡುತ್ತಿದ್ದ ಶಮಂತ ಶೆಟ್ಟಿ ಎಂಬ ಸಹೋದ್ಯೋಗಿ ಇನ್ನೇನು ಒಂದೆರಡು ವರ್ಷ ಮಾತ್ರ ಬಾಕಿ ಇತ್ತು ಅವರು ನಿವೃತ್ತಿಯಾಗಲಿಕ್ಕೆ. ಅವರ ಬಳಿ ಇದ್ದ ರೇಷ್ಮೆ ಸೀರೆ ಹಾಗೂ ಒಡೆವೆಗಳ ಸಂಗ್ರಹ ನನ್ನ ಗಮನ ಬಹಳ ಸೆಳೆದಿತ್ತು ನನ್ನ ಮೆಚ್ಚುಗೆಯನ್ನು ಅವರ ಬಳಿ ತಿಳಿಸಿದಾಗ ನನ್ನಷ್ಟು ಸರ್ವಿಸ್ ಆದಾಗ ನಿಮ್ಮ ಬಳಿಯೂ ಹಾಗೆ ಸಂಗ್ರಹ ಇರುತ್ತದೆ ಎಂದು ಹೇಳಿದ್ದರು. ಈಗ ಅದನ್ನು ನೆನೆಸಿಕೊಂಡರೆ ಹೌದಲ್ವಾ ಅವರು ಹೇಳಿದ್ದು ಎಷ್ಟು ನಿಜ ಎಂದೆನಿಸುತ್ತದೆ. ತುಂಬಾ ಸ್ನೇಹ ಪೂರ್ಣ ವ್ಯಕ್ತಿ. ಅವರು ಹಾಗೆ ವಯಸ್ಸಿನಲ್ಲಿ ಹಿರಿಯರಾದ್ದರಿಂದ ಎಷ್ಟು ಒಳ್ಳೆಯ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಅವರ ಸಲಹೆಯ ಮೇರೆಗೆ ನಾನು ಡಾಕ್ಟರ್ ಅನ್ನು ಕಾಣಲು ಚಿಕಿತ್ಸೆ ಪಡೆಯಲು ಶುರು ಮಾಡಿದ್ದು.

ನಮ್ಮ ಲಿಸ್ಟ್ ನಲ್ಲಿ ಉಳಿದ ಮತ್ತೆ ಕೆಲವರಿಗೆ ಕೆಲಸಕ್ಕೆ ಕರೆ ಬಂದಿತ್ತು. ಕೊಳ್ಳೇಗಾಲದಿಂದ ಒಬ್ಬರು ಸುಬ್ಬಲಕ್ಷ್ಮಿ ಎನ್ನುವವರು ಇಲ್ಲಿಗೆ ನಿವೃತ್ತಿಯಾಗಿ ಬಂದಿದ್ದರು ನಾನು ಒಬ್ಬಳೇ ಇದ್ದೇನೆ ಎಂದು ಇಬ್ಬರೂ ಸೇರಿ ಇರಬಹುದಲ್ಲವೇ ಎಂದು ಕೇಳಿದರು ಆದರೆ ರವೀಶ್ ಆಗಾಗ ಬರುತ್ತಿದ್ದರಿಂದ ಆ ವ್ಯವಸ್ಥೆ ಸರಿಯಾಗುವುದಿಲ್ಲ ಎಂದು ಹೇಳಿ ನಾನು ಒಪ್ಪಲಿಲ್ಲ .ಆದರೆ ಅಲ್ಲಿಂದ ಮುಂದೆ ಮೈಸೂರಿಗೆ ಬರುವಾಗಲೆಲ್ಲ ಜೊತೆಯಾಗಿ ನಾವು ಬರುತ್ತಿದ್ದೆವು. ತದನಂತರ ಕೊಳ್ಳೇಗಾಲಕ್ಕೆ ಅವರಿಗೂ ಸಹ ವರ್ಗ ಆಯಿತು. ಮೈಸೂರು ವಿಭಾಗೀಯ ಕಚೇರಿಯಲ್ಲಿ ಕೆಲವು ಬಾರಿ ಭೇಟಿಯಾಗಿದ್ದೆವು. ಆಕೆ ಮದುವೆಯಾಗಿರಲಿಲ್ಲ. ಆದರೆ ಪಾಪ ಚಿಕ್ಕ ವಯಸ್ಸಿನಲ್ಲೇ ಅವರ ದೇಹಾಂತವಾಯಿತು
( ಮುಂದಿನವಾರಕ್ಕೆ, ಮುಂದುವರೆಯುವುದು)
ಸುಜಾತಾ ರವೀಶ್






ತುಂಬಾ ಚೆನ್ನಾಗಿ ಇದೆ
ಇಂದಿನ ಸಂಚಿಕೆ ಮನ ಮಿಡಿಯುವಂತಿದೆ
ಧನ್ಯವಾದಗಳು.
ಸುಜಾತಾ ರವೀಶ್
‘ ನೆನಪುಗಳ ಮಾತು ಮಧುರ ‘….. ನಿಮ್ಮ ಲೇಖನದಿಂದ ಈ ಮಾತು ನಿಜವೆಂದೆನಿಸಿತು ಸುಜಾತಾ…..ಎ. ಹೇಮಗಂಗಾ
ಧನ್ಯವಾದಗಳು ಹೇಮಾ
ಕಳೆದು ಹೋದ ಹಾದಿಯ ಪುನರವಲೋಕನ. ಪುನರನುಭವದ ಮೆಲುಕು ಜೀವಂತವಾಗಿರಬೇಕು.
ನಿನ್ನೆಯ ಘಟ್ಟಗಳೇ ಇಂದಿನ ನೆನಪುಗಳು. ಅದೇ ನಾಳೆ ಎಂಬ ವೇಳೆಗೆ ಹೃದಯಾಪ್ತ ಸಂಜೀವಿನಿ.
ಸ್ಮರಣೆಗಳ ಸರಿತೆಯನ್ನು ಹೀಗೆ ಧೇನಿಸುವ ಹರಿಯಬಿಡುವ ದಾರಿ ಬಹಳ ಚೇತೋಹಾರಿ.ಸಂದು ಹೋದ ಬಂದು ಹೋದ ನೆನಕೆಗಳೇ ಮನಸ್ಸಿನ ಬಂಧುಗಳು ಅವುಗಳ ಅನುಭವವೇ ಬಿಡಿಸದ ಬಂಧಗಳು ಅಲ್ವೇ. ಈ ಯಾದಿ, ಈ ಹಾದಿ ಮೇಲ್ನೋಟಕ್ಕೆ ಸುಂದರ ಸರಳೀಕೃತ ಎನ್ನಿಸಿದರೂ ಅದು ಹೀಗಿಲ್ಲ.ಪಟ್ಟ ಪಾಡುಗಳ ಚಹರೆ ಇವತ್ತಿಗೆ ಭೂತಕಾಲದ್ದು.ಆದರೆ ಅದರ ಸುತ್ತ ಹೆಣೆದುಕೊಂಡ
ಸಂಗತಿಗಳೇ ಇವತ್ತಿನ ಕಣ್ಣಿನಲ್ಲಿಟ್ಟು ಕಾಣುವ ಎದೆಯಾಳದ ಸಂಗಾತಿಗಳು.
” Heard melodies are sweet
Those unheard are more sweeter
– ಜಾನ್ ಕೀಟ್ಸ್.
ವಾವ್ ಎಂತಹ ಸುಂದರ ಮಾತುಗಳು. ನಿಜ ಇಂದು ನೆನೆಸಿಕೊಂಡಾಗ ಅವೆಲ್ಲಾ ಸವಿ ಸಿಹಿ ನೆನಪುಗಳು.ಆದರೆ ಆ ಕ್ಷಣದ ತಲ್ಲಣಗಳು ಬದುಕಿನಲ್ಲಿ ನಮ್ಮ ಇತಿಮಿತಿಗಳ ಮಾಪಕಗಳು. ಹಳೆಯ ಸಂಗತಿಗಳ ಈ ಕನವರಿಕೆ ಒಂದು ರೀತಿಯ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಡುತ್ತಿರುವುದೂ ಹೌದು. ಅಂದಿನ ಕಷ್ಟಗಳ ಮುಂದೆ ಈಗಿನದು ಸಣ್ಣದು ಎನ್ನಿಸಿ ಎದುರಿಸುವ ಧೀಃಶಕ್ತಿ ನೀಡುತ್ತಿರುವುದೂ ಸತ್ಯ.
ನಿಮ್ಮ ನುಡಿಗಳ ನಿತ್ಯ ನಿರಂತರ ಪ್ರೋತ್ಸಾಹ ಬರೆಯುವ ಲೇಖನಿಗೆ ಹೊಸ ಸತ್ವ ಕೊಟ್ಟು ಇಂಧನವಾಗುತ್ತಿರುವುದು ನಿಜಕ್ಕೂ ನನ್ನ ಸೌಭಾಗ್ಯ. ಬರವಣಿಗೆಗೆ ಸಲ್ಲುತ್ತಿರುವ ಅತಿ ದೊಡ್ಡ ಮನ್ನಣೆ. ಅದಕ್ಕಾಗಿ ಸದಾ ಸರ್ವದಾ ನಾನು ಆಭಾರಿ ಶ್ರೀನಿವಾಸ್.
ಸುಜಾತಾ ರವೀಶ್