ಗಜಲ್ ಸಂಗಾತಿ
ವಾಣಿ ಯಡಹಳ್ಳಿಮಠ
ʼತರಹಿಗಜಲ್ʼ
(ಊಲಾ ಮಿಸ್ರ ವೈ .ಎಂ.ಯಾಕೊಳ್ಳಿ ಸರ್ ಅವರದ್ದು
ಎದೆಗೂ ದ್ವೇಷಿಸಲು ಕಲಿಸಬೇಕಿದೆ ತಿಳಿಸಲು
ಒಂದಿಷ್ಟು ಸಮಯ ಕೊಡು..)

ಎದೆಗೂ ದ್ವೇಷಿಸಲು ಕಲಿಸಬೇಕಿದೆ ತಿಳಿಸಲು
ಒಂದಿಷ್ಟು ಸಮಯ ಕೊಡು
ಮನದ ತುಂಬೆಲ್ಲಾ ನಿನ್ಹೆಸರು ಗೀಚಿರುವೆ
ಅಳಿಸಲು ಒಂದಿಷ್ಟು ಸಮಯ ಕೊಡು
ನೆತ್ತರಿಂದ ಬರೆದದ್ದದು ಶಾಯಿಯಿಂದಲ್ಲ
ಒರೆಸಿದರೇ ಹೋಗಲು
ಪ್ರೀತಿಯ ಕಿಡಿ ಹೊತ್ತಿಕೊಂಡಿದೆ ಆರಿಸಲು
ಒಂದಿಷ್ಟು ಸಮಯ ಕೊಡು
ಯಾರ ಮೇಲಿಲ್ಲದ ಭರವಸೆ ನಿನ್ನ ಮೇಲಿತ್ತು
ಈ ಜೀವಕೆ ಸಾಕಿನಂಬಿಕೆಯ
ಕನ್ನಡಿ ಒಡೆದು ಹೋಳಾಗಿದೆ ಜೋಡಿಸಲು
ಒಂದಿಷ್ಟು ಸಮಯ ಕೊಡು
ಮರೆಯಲು ಯತ್ನಿಸಿದಷ್ಟು ಮೊನಚಾಗಿ
ಚುಚ್ಚುತಿರುವೆ ಮುಳ್ಳಿನಂತೆ ನೀ
ಸೋಂಪಾದ ನವ ನೆನಪುಗಳ ಬಿತ್ತುತಿರುವೆ
ಬೆಳೆಸಲು ಒಂದಿಷ್ಟು ಸಮಯ ಕೊಡು
ಹರಿದ ಹೊದಿಕೆಗೆ ತೇಪೆ ಹಚ್ಚಿದಷ್ಟು
ಸುಲಭವಲ್ಲ ಬದುಕು ಹೊಲಿಯುವುದು
ನೇಯುತಿರುವಳು ಹೊಸ ಜೀವನ ವಾಣಿ
ನೇವರಿಸಲು ಒಂದಿಷ್ಟು ಸಮಯ ಕೊಡು
ವಾಣಿ ಯಡಹಳ್ಳಿಮಠ




