ಗಜಲ್ ಸಂಗಾತಿ
ಎಮ್ಮಾರ್ಕೆ
ಗಜಲ್


ಬರಿದಾದ ಎದೆಗೆ ರಾಶಿ ಒಲವ ತಂದು ಸುರಿದವಳು ನೀನಲ್ಲವೇ ಕೆಂಪಿ
ಬಾಳಿನ ಬೋಳು ಮರದಲಿ ಹೂವಾಗಿ ಬಿರಿದವಳು ನೀನಲ್ಲವೇ ಕೆಂಪಿ
ಈ ಕೈಯ ಹಿಡಿಯಲು ಯಾವೊಂದು ಕೈ ಮುಂದೆ ಬಂದಿರಲಿಲ್ಲ ಬಿಡು
ನೋವು ಉಣ್ಣುವವನ ತಟ್ಟೆಗೆ ನಗು ಸುರಿದವಳು ನೀನಲ್ಲವೇ ಕೆಂಪಿ
ಸ್ಥಬ್ಧತೆಯೀಗ ಸ್ಥಿಮೀತವ ಕಳೆಯುವ ಕಾಯಿಲೆಯಂತೆ ಹರಡಿದೆ ಗೆಳತಿ
ಮೌನ ಕುಲುಮೆಯಲಿ ಮಾತಿನರಳು ಹುರಿದಾವಳು ನೀನಲ್ಲವೇ ಕೆಂಪಿ
ಇಂದಿಗೂ ಒರಟುತನದ ಕರಟವನೇ ಹೊದ್ದು ಪೆದ್ದನಾಗಿ ಅಲೆಯುತಿದ್ದೆ
ಅಲೆಮಾರಿಯ ಬಾಳಿಗೆ ಸೆ(ಅ)ಲೆಯಾಗಿ ಸೇರಿದವಳು ನೀನಲ್ಲವೇ ಕೆಂಪಿ
ಕುಂಬಾರ ಯಾರನ್ನು ಸುಲಭದಿ ನಂಬುವ ಗೋಜಿಗೆ ಹೋದವನೇ ಅಲ್ಲ
ನನ್ನ ಮೇಲೆ ನಂಬುಗೆಯಿಟ್ಟು ಜಗವನೇ ಜರಿದವಳು ನೀನಲ್ಲವೇ ಕೆಂಪಿ
ಎಮ್ಮಾರ್ಕೆ



