ಧಾರಾವಾಹಿ ಸಂಗಾತಿ=99
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಕಾಡುತ್ತಿದ್ದ ಮಕ್ಕಳ ಭವಿಷ್ಯ

ಕೊನೆಯ ಮಗಳ ವಾರ್ಷಿಕ ಪರೀಕ್ಷೆ ಮುಗಿದಿದೆ. ನವೋದಯ ಶಾಲೆಗೆ ರಜೆ ಇರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಅವರವರ ಮನೆಗೆ ಕರೆದುಕೊಂಡು ಹೋಗಬೇಕಾಗಿ ವಿನಂತಿ ಎಂಬ ಮಾಹಿತಿ ಇರುವ ಪತ್ರವು ಸುಮತಿಯ ಕೈ ಸೇರಿತು. ಸುಮತಿ ಮತ್ತು ಎರಡನೇ ಮಗಳು ನವೋದಯ ಶಾಲೆಗೆ ಹೋಗಿ ಮಗಳನ್ನು ಮನೆಗೆ ಕರೆದುಕೊಂಡು ಬಂದರು. ಕಿರಿಯ ಮಗಳು ರಜೆಯಲ್ಲಿ ಮನೆಗೆ ಬಂದಿದ್ದರಿಂದ ಸುಮತಿಗೆ ಹಾಗೂ ಅವಳ ಅಕ್ಕಂದಿರಿಗೆ ಅತ್ಯಂತ ಸಂತೋಷವಾಯಿತು. ಅಕ್ಕ ತಂಗಿಯರ ಮೋಜು ಮಸ್ತಿ ಶುರುವಾಯಿತು. ಅಮ್ಮ ಶಾಲೆಗೆ ಹೋದ ಕೂಡಲೇ ತಮ್ಮ ಮನೆಯ ನಾಯಿಯನ್ನು ಜೊತೆಗೆ ಕರೆದುಕೊಂಡು ಮೂವರು ತೊರೆಯ ದಂಡೆಗೆ ಹೋದರು. ಅಲ್ಲೊಂದಿಷ್ಟು ಸಮಯ ನೀರಿನಲ್ಲಿ ಆಟವಾಡಿ ಪುಟ್ಟ ಮೀನುಗಳ ಜೊತೆಗೆ ಕಾಲ ಕಳೆದು ತೋಟದಲ್ಲಿ ಇದ್ದ ಹಲಸಿನ ಮರದಿಂದ ಹಲಸಿನಕಾಯಿಯನ್ನು ಕೊಯ್ದು ಕೆತ್ತಿ ದೊಡ್ಡ ಬಿಲ್ಲೆಯ ಆಕಾರದಂತೆ ಮಾಡಿಕೊಂಡು ಅದಕ್ಕೊಂದು ಕೋಲನ್ನು ಸಿಕ್ಕಿಸಿ ಕೈಯಲ್ಲಿ ಹಿಡಿದು ತೊಳೆಗಳನ್ನು ಬಿಡಿಸಿ ತಿನ್ನುತ್ತಾ ಕಾಫಿ ತೋಟದಲ್ಲೆಲ್ಲ ಸುತ್ತಾಡಿದರು. ಕಾಫಿ ಗಿಡಗಳ ನಡುವೆ ಅಲ್ಲಲ್ಲಿ ಕಿತ್ತಲೆ ಹಣ್ಣಿನ ಮರಗಳಿದ್ದವು. ಅವುಗಳನ್ನು ಗುತ್ತಿಗೆ ಕೊಡಲಾಗಿತ್ತು. ಕಿತ್ತಲೆ ಗಿಡಗಳಿಂದ ಹಣ್ಣುಗಳನ್ನು ಕೊಯ್ಯುವಂತೆ ಇರಲಿಲ್ಲ. ಕಾವಲುಗಾರರು ತೋಟದಲ್ಲಿ ತಿರುಗಾಡುತ್ತಿದ್ದ ಸಮಯ. ಆದರೂ ಈ ಅಕ್ಕ-ತಂಗಿಯರು ಬಹಳ ಚಾಣಾಕ್ಷರು. ಕಾವಲುಗಾರರು ಹೋದ ನಂತರ ಹಣ್ಣುಗಳಿಂದ ತುಂಬಿ ಬಾಗಿರುತ್ತಿದ್ದ ಗಿಡಗಳಿಂದ ಮೆಲ್ಲನೆ ಹಣ್ಣುಗಳನ್ನು ಕಿತ್ತು ತಾವು ಒಗೆಯಲು ತಂದಿದ್ದ ಬಟ್ಟೆಯ ಬಿದಿರಿನ ಮಂಕರಿಯಲ್ಲಿ ಬಟ್ಟೆಗಳ ನಡುವೆ ಬಚ್ಚಿಟ್ಟಕೊಳ್ಳುತ್ತಿದ್ದರು.
ತೋಟದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗದೆ ಗಿಡಗಳ ನಡುವೆ ಮೆಲ್ಲನೆ ಸಾಗುತ್ತಿದ್ದರು. ಎರಡನೇ ಮಗಳಿಗೆ ಮರ ಹತ್ತಲು ಬರುತ್ತಿರಲಿಲ್ಲ. ಮೂರನೇ ಮಗಳು ಬಹಳ ಚೂಟಿ ಅವಳು ಹಲಸಿನ ದೊಡ್ಡ ಮರಗಳನ್ನು ಅಕ್ಕನ ಮಾರ್ಗದರ್ಶನದಲ್ಲಿ ಹತ್ತುತ್ತಿದ್ದಳು. ಅವಳು ಹೀಗೆ ಮರ ಹತ್ತುವುದನ್ನು ಕಲಿಯಲು ಕಾರಣ ಒಮ್ಮೆ ಸುಮತಿ ಅಲ್ಲಿನ ತೋಟದ ಕೆಲಸಗಾರರು ತೋಟದಿಂದ ಹಲಸಿನ ಹಣ್ಣನ್ನು ಕೊಯ್ದುಕೊಂಡು ಹೋಗುತ್ತಿದ್ದಾಗ ದಯವಿಟ್ಟು ನಮಗೂ ಹಲಸಿನ ಹಣ್ಣನ್ನು ಕೊಯ್ದು ಕೊಡಿ ಎಂದು ಕೆಲಸಗಾರರನ್ನು ಹೇಳಿದಾಗ ಅವರುಗಳು ಗೇಲಿ ಮಾಡುತ್ತಾ….”ಟೀಚರೇ ಬೇಕಾದರೆ ನೀವೇ ಮರ ಹತ್ತಿ ಹಲಸಿನ ಹಣ್ಣನ್ನು ಕೊಯ್ಯಿರಿ…. ನಿಮ್ಮ ಮಕ್ಕಳಿದ್ದಾರಲ್ಲ ಅವರಿಗೆ ಹೇಳಿ ಮರ ಹತ್ತುವುದಕ್ಕೆ… ಹ್ಹಿ ಹ್ಹೀ”…. ಎಂದು ನಗುತ್ತಿದ್ದನ್ನು ಮೂರನೇ ಮಗಳು ಕೇಳಿಸಿಕೊಂಡು ಕೋಪಗೊಂಡು, “ನಮ್ಮ ಮನೆಯಲ್ಲಿ ಯಾರೂ ಗಂಡಸರು ಇಲ್ಲದಿರುವುದಕ್ಕೆ ನಮ್ಮನ್ನು ಹೀಗೆ ಎಲ್ಲರೂ ಕಡೆಗಣಿಸುತ್ತಿದ್ದಾರೆ… ಏಕೆ ಗಂಡು ಮಕ್ಕಳು ಮಾತ್ರ ಮರ ಹತ್ತ ಬೇಕೆ…. ನಾನೂ ಮರ ಹತ್ತುವುದನ್ನು ಕಲಿತು ಹಲಸಿನ ಹಣ್ಣನ್ನು ಕಿತ್ತು ತರುತ್ತೇನೆ ಅಮ್ಮ”…. ಎಂದು ಹೇಳಿದಳು. ಅಕ್ಕನ ಮಾರ್ಗದರ್ಶನದಲ್ಲಿ ಹಲಸಿನ ಮರ ಹತ್ತುವುದನ್ನು ಆ ಹುಡುಗಿಯು ಕಲಿತುಕೊಂಡಿದ್ದಳು. ತೋಟದಲ್ಲಿ ಅಲೆದಾಡಿ ಅಮ್ಮ ಬರುವುದರ ಒಳಗಾಗಿ ಮನೆ ಸೇರುವುದು ಅಕ್ಕ-ತಂಗಿಯರಿಗೆ ಅಭ್ಯಾಸ. ಇಲ್ಲದಿದ್ದರೆ ಅಲ್ಲಿ ಇಲ್ಲಿ ಹೋಗುತ್ತೀರಿ ಎಂದು ಅಮ್ಮನ ಕೈಲಿ ಬೈಸಿಕೊಳ್ಳಬೇಕಾಗಿ ಬರುತ್ತಿತ್ತು. ಹಾಗಾಗಿ ಬಟ್ಟೆ ಒಗೆಯುವ ನೆಪ ಮಾಡಿಕೊಂಡು ಸಾಹುಕಾರರ ಕಾಫಿ ತೋಟದಲ್ಲೆಲ್ಲಾ ಸುತ್ತಾಡಿ, ತೋಟದ ಬದಿಯ ಕಾಡುಗಳಿಗೇ ನುಗ್ಗಿ ಕಾಡಿನಲ್ಲಿನ ಮುಳ್ಳು ಗಿಡ ಗಂಟೆಗಳಲ್ಲಿ ನುಗ್ಗಿ ಕಾಡು ಹಣ್ಣುಗಳನ್ನು ಕೊಯ್ದು ತಿನ್ನುವುದು ಅವರಿಗೆ ಪರಮಾನಂದ. ರಜೆ ಎಂದರೆ ಯಾವಾಗಲೂ ಅವರಿಗೆ ಮಜಾ. ತೋಟದ ಮಾಲೀಕರು ತೋಟದಲ್ಲಿ ವಾಸವಿರುವ ಎಲ್ಲರಿಗೂ ತೋಟದಲ್ಲಿ ಮುಕ್ತವಾಗಿ ಓಡಾಡಲು ಅವಕಾಶ ಕೊಟ್ಟಿದ್ದರು
ಮನಸೋ ಇಚ್ಛೆ ನೀರಿನಲ್ಲಿ ಆಟವಾಡಿ ಅಮ್ಮ ಶಾಲೆಯಿಂದ ಬರುವುದರೊಳಗಾಗಿ ಮೂವರೂ ಮನೆ ಸೇರುತ್ತಿದ್ದರು. ಒಟ್ಟಾಗಿ ಹೀಗೆ ಮೋಜು ಮಸ್ತಿ ಮಾಡುವುದೆಂದರೆ ಅವರಿಗೆ ಎಲ್ಲಿಲ್ಲದ ಖುಷಿ. ಎರಡನೇ ಬಾರಿಗೆ ಗರ್ಭಿಣಿಯಾಗಿದ್ದ ಮೊದಲನೇ ಮಗಳಿಗೆ ಪ್ರಸವದ ದಿನ ಹತ್ತಿರವಾಯಿತು. ನೋವು ಕಾಣಿಸಿಕೊಂಡಾಗ ಅವಳ ಪತಿ ಅವಳನ್ನು ಸಕಲೇಶಪುರದ ಆಸ್ಪತ್ರೆಗೆ ದಾಖಲು ಮಾಡಿದನು. ನಂತರ ಅತ್ತೆ ಸುಮತಿಗೆ ತಿಳಿಸಿದನು. ಸುಮತಿ ಈ ಬಾರಿ ಸ್ವಲ್ಪ ದಿನ ರಜೆ ಪಡೆದು ಮಗಳ ಮನೆಯಲ್ಲಿಯೇ ಇದ್ದು ಸ್ವಲ್ಪ ದಿನ ಅವಳ ಬಾಣಂತನ ಮಾಡಿದಳು. ಅಮ್ಮನ ಜೊತೆಗೆ ಉಳಿದ ಮೂವರು ಹೆಣ್ಣು ಮಕ್ಕಳು ಬಂದರು. ಅಕ್ಕ ಹಾಗೂ ಅಮ್ಮನಿಗೆ ಬೇಕಾದ ಸಹಾಯಗಳನ್ನು ಮಾಡುತ್ತಿದ್ದರು. ಅಕ್ಕನ ಮಗನಿಗಂತೂ ಬಹಳ ಖುಷಿ. ಚಿಕ್ಕಮ್ಮಂದಿರ ಜೊತೆ ತನ್ನ ಬಾಲ ಭಾಷೆಯಲ್ಲಿ ಮಾತನಾಡುತ್ತಾ ಅವರೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದನು. ತಾನು ತೆಗೆದುಕೊಂಡ ರಜೆಯ ಅವಧಿ ಮುಗಿಯುತ್ತಿದ್ದಂತೆ ಸುಮತಿ ಮೊಮ್ಮಗನನ್ನು ಜೊತೆಗೆ ಕರೆದುಕೊಂಡು ಹೆಣ್ಣು ಮಕ್ಕಳೊಂದಿಗೆ ತನ್ನ ಮನೆಗೆ ಹಿಂದಿರುಗಿದಳು. ಕಿರಿಯ ಮಗಳ ರಜೆ ಅವಧಿ ಮುಗಿದುದ್ದರಿಂದ ಎರಡನೇ ಮಗಳು ಅವಳನ್ನು ನವೋದಯ ಬೋರ್ಡಿಂಗ್ ಸ್ಕೂಲಿಗೆ ಬಿಟ್ಟು ಬಂದಳು. ಉಳಿದ ಹೆಣ್ಣು ಮಕ್ಕಳಿಬ್ಬರು ಅಮ್ಮನ ಜೊತೆ ಇದ್ದುದರಿಂದ ಅಮ್ಮನಿಗೆ ಸಹಾಯ ಮಾಡುತ್ತಿದ್ದರು. ಅಮ್ಮ ಸರ್ಕಾರದಿಂದ ಸಿಗುವ ರೇಷನ್ ತರುವಾಗ ಅಮ್ಮನ ಜೊತೆಗೆ ಹೋಗುತ್ತಿದ್ದರು. ಅಮ್ಮ ಒಬ್ಬಳನ್ನೇ ಈ ಇಬ್ಬರು ಮಕ್ಕಳು ಒಂಟಿಯಾಗಿ ಹೊರಗೆ ಬಿಡುತ್ತಿರಲಿಲ್ಲ. ಕಾರಣ ಕೆಲವೊಮ್ಮೆ ಶುಗರ್ ಲೋ ಆಗಿ ಸುಮತಿಗೆ ಅತಿಯಾದ ಸುಸ್ತಾಗುವ ಸಂಭವವಿರುತ್ತಿತ್ತು.
ತೋಟದ ಕೂಲಿ ಕಾರ್ಮಿಕರಿಗೆಲ್ಲ ದೀಪಾವಳಿ ಹಬ್ಬದ ಬೋನಸ್ ಬರುತ್ತಿತ್ತು. ತನಗೆ ತೋಟದ ಲೆಕ್ಕದಲ್ಲಿ ಈ ಯಾವುದೇ ವ್ಯವಸ್ಥೆಯೂ ಇಲ್ಲ ಎನ್ನುವುದು ಸುಮತಿಗೆ ತಿಳಿದಿತ್ತು. ಆದರೆ ಈಗ ಮಕ್ಕಳಿಬ್ಬರೂ ತನ್ನ ಜೊತೆಗಿದ್ದಾರೆ. ಮೊದಲಿನಂತೆ ಅವರು ಈಗ ಅನಾಥಾಶ್ರಮದಲ್ಲಿ ಇಲ್ಲದೆ ತನ್ನೊಂದಿಗೆ ಇದ್ದಾರೆ. ಹಾಗಾಗಿ ದೀಪಾವಳಿ ಬಂದಾಗ ಮಕ್ಕಳಿಗೆ ಏನಾದರೂ ಸಿಹಿ ತಿಂಡಿ ಮಾಡಿಕೊಡಬೇಕು ಎಂಬ ಆಸೆಯೂ ಇತ್ತು. ಆದರೆ ತನಗೆ ಬರುವ ಕಡಿಮೆ ಸಂಬಳದಲ್ಲಿ ಮಕ್ಕಳಿಗೆ ಕಷ್ಟಪಟ್ಟು ಎರಡು ಹೊತ್ತಿನ ಊಟ ಕೊಡುವ ಶಕ್ತಿ ಮಾತ್ರ ಅವಳಿಗೆ ಇತ್ತು. ಏನೋ ಸರ್ಕಾರದ ರೇಷನ್ ಕಾರ್ಡನ್ನು ಅಲ್ಲಿ ಹತ್ತಿರದಲ್ಲಿದ್ದ ಪೋಸ್ಟ್ ಪಾಸ್ಟರ್ ಹಳ್ಳಿಯ ಪಂಚಾಯಿತಿಯಲ್ಲಿ ಹೇಳಿ ಮಾಡಿಸಿಕೊಟ್ಟಿದ್ದರಿಂದ ಅಕ್ಕಿಗೆ ತೊಂದರೆ ಇರುತ್ತಿರಲಿಲ್ಲ.
ಆದರೂ ಉಳಿದ ಖರ್ಚುಗಳನ್ನು ನಿಭಾಯಿಸಬೇಕಿತ್ತು. ದೊಡ್ಡ ಸಾಹುಕಾರರು ಬದುಕಿದ್ದ ಸಮಯದಲ್ಲಿ ಸುಮತಿಗಾಗಿ ಮಾಡಿಕೊಟ್ಟ ಟೀಚರ್ ಉದ್ಯೋಗವಿದು. ಹಾಗಾಗಿ ಅವಳಿಗೆ ತಿಂಗಳಿಗೆ ಕೊಡುವ ಸಂಬಳದ ಹೊರತು ಬೋನಸ್ ಫಂಡ್ ಮುಂತಾದ ಯಾವುದೇ ಹೆಚ್ಚುವರಿ ಸೌಲಭ್ಯಗಳು ಅವಳಿಗೆ ಸಿಗುತ್ತಿರಲಿಲ್ಲ. ಹಾಗೂ ಸಂಬಳವನ್ನು ಹೆಚ್ಚಿಸಿರಲಿಲ್ಲ. ಮಕ್ಕಳು ಈಗ ಬೆಳೆದು ದೊಡ್ಡವರಾಗಿದ್ದಾರೆ. ಹಿರಿಯ ಮಗಳಿಗೆ ಮದುವೆಯಾಗಿದೆ. ಕಿರಿಯ ಮಗಳು ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ. ಉಳಿದ ಇಬ್ಬರು ಮಕ್ಕಳು ತನ್ನ ಜೊತೆಯಲ್ಲಿಯೇ ಇದ್ದು ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ಮಕ್ಕಳು ಬೆಳೆಯುತ್ತಿದ್ದಂತೆ ಸುಮತಿಗೆ ಅವರ ಮುಂದಿನ ಭವಿಷ್ಯದ ಚಿಂತೆಯು ಹೆಚ್ಚಾಗಿತ್ತು. ಅವರ ವಿದ್ಯಾಭ್ಯಾಸವು ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ನಡೆಯುತ್ತಿದೆ. ಎರಡನೇ ಮಗಳು ಕಾಲೇಜು ಕಲಿಕೆಯ ಜೊತೆಗೆ ಟೈಪಿಂಗ್ ಕೂಡ ಕಲಿಯುತ್ತಿದ್ದಾಳೆ. ಆದರೆ ಮಕ್ಕಳ ಭವಿಷ್ಯಕ್ಕಾಗಿ ನಾನು ಏನನ್ನೂ ಕೂಡಿಟ್ಟಿಲ್ಲ ಎನ್ನುವುದು ಅವಳನ್ನು ಸದಾ ಕಾಡುತ್ತಿದ್ದ ವಿಷಯವಾಗಿತ್ತು.




