ಕಾವ್ಯ ಸಂಗಾತಿ
ಭುವನೇಶ್ವರಿ ರು. ಅಂಗಡಿ
“ನಿತ್ಯ ದಸರಾ”

ಕಣ್ಣು ಸಾಗಿದಷ್ಟು ದೂರ ದೂರ ಸಾಗುವ
ಹಾದಿ ಬೀದಿಯಲ್ಲಿನ ಬಣ್ಣದ ದೀಪಗಳ
ಮೋಡಿಗೆ ನನ್ನೆದೆಯೊಳಗಿನ ಕಿಚ್ಚು
ತುಸು ಹೆಚ್ಚೇ ಬೀಗಿತು…
ರಾತ್ರಿಯ ಕತ್ತಲಲ್ಲಿ ವಿಜೃಂಭಿಸುವ
ಬೆಳಗಿ ಬೆಳಗಿ ತನ್ನ ಒಡಲ ಶಕ್ತಿಯ ಕಳೆದುಕೊಳ್ಳುವ
ದೀಪಗಳೇ ಇಲ್ಲಿ ಕೇಳಿ….
ನೀವಿದ್ದರಷ್ಟೇ ಜಗಕೆ ಬೆಳಕಲ್ಲ
ನಿಮ್ಮದು ಆಡಂಬರ
ತಾಳಕ್ಕೆ ತಕ್ಕಂತೆ ಕುಣಿಯುವ ದರ್ದು ನಿಮ್ಮದು….
ಮನದ ಮೂಲೆಯಲ್ಲಿನ ಕಿಚ್ಚು ನಾನು
ಬೂದಿ ಮುಚ್ಚಿದ ಕೆಂಡ ನಾನಲ್ಲ
ಯಾರ ಹಂಗೂ ನನಗಿಲ್ಲ
ನಿತ್ಯ ಬೆಳಗುವೆ…. ಬೆಳಗಿದಷ್ಟು ಬೆಳೆಸುವೆ
ಆತ್ಮವಿಶ್ವಾಸ ಎಂಬ ಹೆಸರಲಿ
ಆತ್ಮಾಭಿಮಾನಕೆ ಉಸಿರ ಕೊಡುವ
ಅಂತರಂಗದ ಬೆಳಕು….
ನನ್ನಿಂದಲೇ ನಿತ್ಯ ದಸರಾ
ಬೀದಿ ದೀಪಗಳಿಂದಲ್ಲ….
ಮಂಕೆ ಬೀದಿ ದೀಪಗಳಿಂದಲ್ಲ….
ಲಾಂಗು, ಮಚ್ಚು, ಚೂರಿ, ಕೊಡಲಿ,
ಕತ್ತಿಯಂತ ಆಯುಧಗಳೇ
ನೀವಾದರೂ ಏನು ಮಾಡಬಲ್ಲಿರಿ?
ಅದೇ ತಾನೇ!!!
ಕಣ್ಣು ಕೋರೈಸುವಷ್ಟು ಝಳಪಿಸಬಲ್ಲಿರಿ
ಇರಿದು ಕೊಚ್ಚಿ ಹಾಕಬಲ್ಲಿರಿ
ಹಿಂಸೆ ಮಾತ್ರ ನಿಮ್ಮಿಂದ ಸಾಧ್ಯ
ಕ್ರೂರಿಯನ್ನು ಕೊಲ್ಲಬಲ್ಲಿರಿ ವಿನಃ ಕ್ರೂರತ್ವವನ್ನಲ್ಲ
ನಿಮ್ಮಂತ ಆಯುಧಗಳಿಗಿಂತಲೂ
ಹೆಚ್ಚು ಚೂಪು ನಾನು…
ನಾನು ರಕ್ತ ಹರಿಸಲ್ಲ
ಎಲ್ಲರಿಗೂ ಹಂಚುವೆ… ಹಂಚಿದಷ್ಟು ಹೆಚ್ಚಾಗುವೆ
ಪ್ರೀತಿ ಎಂಬ ಹೆಸರಲಿ
ಜೀವಗಳಿಗೂ ಜೀವನಗಳಿಗೂ ಕೊಂಡಿ ಬೆಸೆಯುವೆ
ನನ್ನಿಂದಲೇ ನಿತ್ಯ ದಸರಾ
ನನ್ನಿಂದಲೇ ನಿತ್ಯ ಆಯುಧಪೂಜೆ
ಆಯುಧಗಳಿಂದಲ್ಲ….
ಮಂಕೆ ಆಯುಧಗಳಿಂದಲ್ಲ….

ಭುವನೇಶ್ವರಿ ರು. ಅಂಗಡಿ



