ಗಜಲ್ ಸಂಗಾತಿ
ಎಮ್ಮಾರ್ಕೆ ಅವರ ಗಜಲ್

ಮನುಷ್ಯತ್ವದ ಮರಗಳಿಲ್ಲಿ ಒಣಗಿ ಹಾಳಾಗಿವೆ
ಬೀಜಗಳು ಅಹಮಿನಲ್ಲಿ ಗೊಣಗಿ ಹಾಳಾಗಿವೆ
ಉತ್ತುವುದೆಲ್ಲಿ ಬಿತ್ತುವುದೆಲ್ಲಿ ಬಂಜರಾದೆದೆಗಳಲಿ
ಭಾವಸೆಲೆ ಬತ್ತಿ ಜೀವಗಳೆಲ್ಲ ಕೊರಗಿ ಹಾಳಾಗಿವೆ
ಅನ್ನದಾತನೇನೋ ಭೂಮಿ ನಂಬಿ ಬದುಕಿದ್ದಾನೆ
ಭಿನ್ನದಾತರ ಬದುಕೇ ಖಿನ್ನತೆಗೆ ಒರಗಿ ಹಾಳಾಗಿವೆ
ಎಲ್ಲವೂ ನೀಡಿ ನಿಸರ್ಗ ನಿಂತಿದೆ ನಿರುತ್ತರವಾಗಿ
ನರನ ನಡೆ-ನುಡಿ ಅಸುರತ್ವಕೆ ತಿರುಗಿ ಹಾಳಾಗಿವೆ
ಕುಂಬಾರನಿಗಿದು ಎಚ್ಚರದಲ್ಲಿ ಬಿದ್ದ ದುಃಸ್ವಪ್ನವೇ
ಮುಗಿದ ಕೈ ಕುಹಕದ ಕಾಲಿಗೆ ಎರಗಿ ಹಾಳಾಗಿವೆ
ಎಮ್ಮಾರ್ಕೆ




