ಹೂಗನಸು
ಬಾಲಕೃಷ್ಣ ದೇವನಮನೆ
ಹಿತವಾದ ಹೂಗನಸಲಿ
ಸಂಚಾರಿ ಮಧುರ ಭಾವದುಂಬಿ
ತಿಳಿಯಾದ ಬಾನಲ್ಲಿ ರೆಕ್ಕೆ ಹರಡಿ
ಇಳೆಗೆ ಚಂದ್ರನನೇ ಹೊತ್ತುತಂದಿದೆ
ಕತ್ತಲೆ ಮೈಗೆ ಮುಸ್ಸಂಜೆ
ಬಳಿದ ರಂಗು ಹಾಗೇ ಉಳಿದಿದೆ
ತಬ್ಬಿಕೊಳುವ ತೆರೆಯ ಆಟ
ದಂಡೆಯಲಿ ಇನ್ನೂ ಮುಂದುವರಿದಿದೆ…
ಎಲೆಯುದುರಿದ ಶಿಶಿರಕೆ
ತಂಗಾಳಿ ಬೀಸಿ ಚೈತ್ರ ಬಂದಿದೆ
ಹೂ ದಳದ ಮೇಲೆ
ಇಬ್ಬನಿ ಸಾಲು ಸಂತೆ ತೆರೆದಿದೆ
ಚಿಗುರು ಮೊಗ್ಗಿನ ಮನಸು
ಪರಿಮಳದ ಪಯಣ ಹೊರಟಿದೆ
ತುಂತುರು ಹನಿಗಳ ಹಿಂಡು ರೆಪ್ಪೆ ತೆರೆದು
ಹೂಗನಸಿಗೆ ಬೆಳಕು ಹರಿದಿದೆ
**********
ಹೂದಳದ ಮೇಲೆ ಇಬ್ಬನಿ ಸಾಲು ಸಂತೆ ತೆರೆದಿದೆ. ಸುಂದರ ಸಾಲು ಸುಂದರ ಕವನ