.ಕಠೋರ ಕಣ್ಣುಗಳು
ಮೂಲ:ವಿಲಿಯಂ ಬ್ಲೇಕ್
ವಿ.ಗಣೇಶ್
ಕರಾಳ ರಾತ್ರಿಯಲಂದು ಕಾನನದ ಗರ್ಭದಲಿ
ಉರಿಯುತಿಹ ನಿನ್ನ ಆ ಕಣ್ಣುಗಳ ಕಂಡು
ಗಡಗಡ ನಡುಗುತ್ತ ನಿನ್ನ ಎದುರಿಸಲಾಗದೆ
ಬೆದರುತ್ತ ನಾ ತೆವಳಿದೆ ಅಡಗು ತಾಣಕೆ
ಆ ಉರಿಗಣ್ಣುಗಳ ಕ್ರೌರ್ಯವನು ನೋಡುತ
ಕಾರ್ಗತ್ತಲಲಿ ನಾನಂದು ಕಳೆದು ಹೋಗಿದ್ದೆ.
ನಿನ್ನ ಆ ಕಠೋರ ಕಣ್ಣುಗಳ ಕೆತ್ತಿದವರಾರು?
ನಿನ್ನ ವಿವಿಧಾಂಗಗಳ ಸೃಷ್ಟಿಸಿದವರಾರು?
ತಾರೆಗಳ ನಾಚಿಸುವ ತಾರಾಮಂಡಳದ ಕಳೆಯ
ಕುಲುಮೆಯನೆ ತುಂಬಿಹನೆ ನಿನ್ನ ಕಣ್ಣುಗಳಲಿ?
ಈ ಪರಿಯ ಉರಿಯನ್ನು ಬಡಿಬಡಿದು ಕೆತ್ತಲು
ಆ ಧೈರ್ಯವೆಂತಹದು? ಅ ಶಕ್ತಿಯೆಂತಹದು?
ಎಂಥ ಸಲಿಕೆ ಅದು? ಎಂಥ ಸರಪಳಿ ಅದು?
ಆ ಮೆದುಳ ಕಡೆದ ಕುಲುಮೆ ಅದಾವುದು?
ಎಂಥ ಅಡಿಗಲ್ಲು? ಎಂಥ ಬಿಗಿ ಹಿಡಿತವದು?
ಎಂಥ ಎದೆಗಾರಿಕೆಯದು, ನಿನ್ನ ಸೃಷ್ಟಿಸಲು?
ತಾರೆಗಳೆಲ್ಲವೂ ತಮ್ಮ ಗುರಾಣಿಗಳನೆಸೆದು
ತಮಗಾಗುತಿರುವ ನೋವನು ಹತ್ತಿಕ್ಕಲಾರದೆ
ಸ್ವರ್ಗಕ್ಕೆ ಮುತ್ತಿಡಲು ಕಣ್ಣೀರ ಸುರಿಸುತಲಿ
ನಸುನಗುತ ನಿಂತಿಹನೆ ತನ್ನ ಸೃಷ್ಟಿಯ ನೋಡಿ?
ಕುರಿಮರಿಯ ಸೃಷ್ಟಿಸಿದ ಆ ಅವನ ಕೈಗಳು
ನಿನ್ನನೂ ಸೃಷ್ಟಿಸಿ ಮುದದಿ ಬೀಗುತಲಿಹವೆ?
Tiger Tiger Burning Bright By:William Blake