ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
“ಬತ್ತದ ಒರತೆ”


ಕಾತರಿಸಿ ಕಾದಳು ರಾಧೆ ಕೃಷ್ಣನಿಗಾಗಿ
ಯಾತನೆಯಲಿ ನೊಂದು
ಯಮುನೆ ತಟವೂ ಬಿಸಿಯೇರಿತು
ವಿರಹದುರಿಯಲಿ ಬೆಂದು
ಸಮಯ ಕಳೆದು ಹೋಯಿತು ವೇಗದಿ
ಪರಿವೆ ಇಲ್ಲದೇ ಹೋಯಿತೇ
ಅತ್ತಿತ್ತ ಗಮನ ಹರಿಸಿದರೂ ಕಾಯುವ
ಪ್ರಯತ್ನ ವ್ಯರ್ಥವಾಯಿತೇ
ನೀರ ಮೇಲಿನ ಗುಳ್ಳೆಯಂತೆ ಕಟ್ಟಿದ
ಕನಸೇಕೆ ಒಡೆದು ಹೋಯಿತು
ಭಾರವಾದ ಹೃದಯದಿ ನಿರಾಸೆ
ಕಟ್ಟಿಟ್ಟ ಬುತ್ತಿಯಾಯಿತು
ಎಲ್ಲಿ ಹೋಗಿರುವೆ ನೀನು ಹೃದಯದ
ಕರೆ ಕೇಳದ ಹಾಗೆ
ಕಲ್ಲಿನಂತೆ ನಿಶ್ಚಲನಾಗಿ ನಿಂತೆ ಅರಿಯದೆ
ಎನ್ನೊಡಲ ಬೇಗೆ

ನಿನ್ನೊನಲವು ಬದುಕಿನಲಿ ನನಗೆ
ಬತ್ತದ ಒರತೆ
ಭಾವನೆಗಳೇ ಸತ್ತು ಹೋದಂತಾದರೆ
ಅದೇ ಒಂದು ಕೊರತೆ
ಹರಿವ ನದಿಯಲಿ ಕಲ್ಪನೆ ಕರಗುತ
ಸಾರ್ಥಕತೆ ಪಡೆಯಬೇಕು
ಬೆರೆತ ಮನಗಳು ಮತ್ತೆ ಸೇರುವ
ಧಾವಂತದಿ ಐಕ್ಯವಾಗಬೇಕು
ಅನುರಾಧಾ ರಾಜೀವ್ ಸುರತ್ಕಲ್




ಪೊರ್ಲುದ ಬರವು