ವಿಶೇಷ ಸಂಗಾತಿ
ಶಾರದಾ ಜೈರಾಂ ಬಿ.
ʼಆಚರಣೆಗೂ ಮುನ್ನ
ಅವಲೋಕಿಸಿರಿʼ


ಇಂದು ಮತ್ತೆ ಮತ್ತೆ ನೆನಪಾಗುತ್ತಿದೆ ಈ ಹಬ್ಬಗಳು ಬರುವ ಮುನ್ನ ಅಪ್ಪನ ನೆನಪು ಹೊತ್ತೆ ಬರುವವು,ಹಬ್ಬಕ್ಕೂ ಮುನ್ನವೇ ಬಾ ಎಂದು ಕರೆಯುತ್ತಿದ್ದ ಅಪ್ಪನ ಒಲವ ಕರೆ ನೆನಪಾಗಿ ಕಂಗಳು ನೆನೆಯುವವು.ಅದರಲ್ಲೂ ಗೌರಿ ಗಣೇಶ ಹಬ್ಬ ಎಂದರೆ ಬಾಲ್ಯದ ದಿನಗಳೊಂದಿಗೆ ಬೆಸೆದ ಬಂಧ ಬಾಲ ಗಣಪನೊಂದಿಗಿನ ಅವಿನಾಭಾವ ಸಂಬಂಧವೆ.
ನನ್ನ ತಂದೆ ಪೊಲೀಸ್ ಇಲಾಖೆ ಕರ್ತವ್ಯದಲ್ಲಿದ್ದ ಕಾರಣ ಅವರಿಗೆಂದೇ ನೀಡಲಾದ ಪೊಲೀಸ್ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದೇವು.ಕ್ವಾರ್ಟರ್ಸ್ ನ ಮಕ್ಕಳೆಲ್ಲ ಒಂದೆಡೆ ಸೇರಿ ಕೆರೆಯಿಂದ ತಂದ ಜೇಡಿಮಣ್ಣಿನಿಂದ ನಾನೇ ಗಣಪನ ಮೂರುತಿಗೆ ಸುಂದರನೆಯ ರೂಪ ಕೊಡುತ್ತಿದ್ದೆ.ತಯಾರಾದ ಗಣಪನ ಪ್ರತಿಷ್ಠಾಪಿಸಿ ಎಲ್ಲರೂ ಮನೆಗಳಿಂದ ತಂದ ಹೂ,ಹಣ್ಣು ಇಟ್ಟು ಪೂಜೆ ಮಾಡಿ ಪ್ರಸಾದ ಸವಿದು ಗಣೇಶನ ರೂಪ ಕಂಗಳಲ್ಲಿ ತುಂಬಿಕೊಂಡು ನನಗೆ ಬರುತ್ತಿದ್ದ ಗಣೇಶನ ಹಾಡು ಹಾಡಿ ಕುಣಿಯುತ್ತಿದ್ದ, ಆ ಕ್ಷಣದ ಸಂಭ್ರಮ ಹೇಳತೀರದು.
ಇಂದು ದಾರಿಯಲ್ಲಿ ಸಾಗುತ್ತಿದ್ದೆ. ಇಬ್ಬರು ಮಕ್ಕಳು ಕರೆದರು ಬಳಿ ಹೋದೆ ಮಣ್ಣಿನಿಂದ ಗಣೇಶನ ಮೂರ್ತಿ ಮಾಡುತ್ತಿದ್ದರು ಅದಾ ಕಂಡು ಇದೆಲ್ಲ ನೆನಪಾಯಿತು ಹಾಗೇಯೇ ಆ ಮಕ್ಕಳ ಸಂಭ್ರಮ ಕಂಡು ಮೂಖ ವಿಸ್ಮಯಗೊಂಡೆ. ಕೆಲವೊಂದು ವಿಚಾರಗಳನ್ನು ಮಕ್ಕಳಿಂದ ಕಲಿಯಬೇಕು ನಾವು ಅನ್ನಿಸಿತು ಆ ಕ್ಷಣ.ಏಕೆಂದರೆ ಪರಿಚಯವೇ ಇರದ ನನ್ನ ಕರೆದರು ತಮ್ಮ ಸಂತಸ ಹಂಚಿಕೊಂಡರು ನಾವಾದರೇ ನಮ್ಮ ಅಹಂ ಬಿಡೆವು ಪರಿಚಿತರಲ್ಲದಿದ್ದರೂ ಒಂದು ನಗೆ ಬೀರಲು ಹಿಂದೆ ಮುಂದೆ ನೋಡುವೆವು.
ಆ ಮುಗ್ದ ಮಕ್ಕಳ ಸಡಗರ ಹೇಗಿತ್ತು ಎಂದರೆ ಮಣ್ಣಿನದ್ದೆ ಮಾಣಿಕ್ಯ ಸಿಕ್ಕರು ಆ ಸಂತಸ ನಮಗೆ ಸಿಗದು ಆ ಪರಿ ಆ ಕ್ಷಣ ಅವರೇ ಸುಖಿಗಳು ಎಂಬಂತೆ ನನಗೆ ಭಾಸವಾಯಿತು.ಕೂಡಿ ಆಡಿ ನಲಿವ ಬಾಲ್ಯ ಮತ್ತೆ ಬಾರದೇ ಅನ್ನಿಸಿತು ಬಾಲ್ಯದ ಮಧುರ ನೆನಪುಗಳ ಮೆಲುಕು ಹಾಕಿತು ಮನ.ಹಾಗೇಯೇ ಶಾಲೆಯಲ್ಲಿ ಗಣಪನ ಪ್ರತಿಷ್ಠಾಪಿಸಿ ಎಲ್ಲರೂ ಪೂಜಿಸಿ ಭಜಿಸುತ್ತಿದ್ದೇವು.
ಆ ಊರಿನ ಕೆಲವೊಂದು ಕಡೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿದ್ದರು ಅಲ್ಲಿಗೆ ನಾವುಗಳು ಹೋಗಿ ಭಾಗವಹಿಸಿ ಹಾಡು, ನೃತ್ಯ ಪ್ರದರ್ಶನ ನೀಡಿ , ಸಮಿತಿಯವರುನೀಡುತ್ತಿದ್ದ ಪೆನ್ಸಿಲ್, ಪೆನ್, ಪುಸ್ತಕ ನಮಗೆ ಅಮೂಲ್ಯ ಉಡುಗೊರೆಗಳು ಅವನ್ನು ನಾನು ಬಹುಮಾನವಾಗಿ ಪಡೆದದ್ದು ಎಂದು ಅಪ್ಪನ ಬಳಿ ಬೀಗಿ ಹೇಳುತ್ತಿದ್ದೆ.ಅಂದು ಎಲ್ಲರಲ್ಲೂ ಸಾಮರಸ್ಯ ಮೂಡಲಿ ಭೇದಭಾವ ತೊರೆದು ಒಂದಾಗಿ ಹಬ್ಬಗಳ ಆಚರಿಸಲಿ ಎಲ್ಲಾ ವರ್ಗದವರು ಒಂದಾಗಲಿ ಎಂದು ಆಚರಿಸಲಾದ ಈ ಹಬ್ಬದ ಆಶಯ ಮರೆಯಾಗಿ ಇಂದು ಈ ಗಣೇಶನ ಪ್ರತಿಷ್ಠಾಪನೆ ಎಂಬುದು ಬೇರೆ ರೂಪವೇ ಪಡೆದಿದೆ ಭಕ್ತಿಗಿಂತ ಹೆಚ್ಚಾಗಿ ಆಡಂಬರ, ವ್ಯಕ್ತಿಗಳ ಪ್ರತಿಷ್ಠೆ,ಯುವ ಜನ ಮೋಜಿನಿಂದ ಕುಣಿದು ಕುಪ್ಪಳಿಸುವುದನ್ನು ಕಾಣುತ್ತಿದ್ದೇವೆ.
ಹಾಗೇಯೇ ಒಂದಾಗಿ ಬಾಳುವುದನ್ನು ಮರೆತು ಅದೇ ಗಣೇಶ ಹಬ್ಬ ವರ್ಗಗಳ ನಡುವೆ ಗಲಾಟೆ,ಘಷ೯ಣೆ ಹುಟ್ಟುಹಾಕುತ್ತಿವೆ.
ಮಾನವ ಕೂಡಾ ಪ್ರಾಣಿಯೇ ಆದರೂ ಚಿಂತಿಸುವ ಬುದ್ದಿ ಇರುವುದರಿಂದ ಶ್ರೇಷ್ಠ ಎನ್ನಿಸಿಕೊಂಡಿರುವುದು ಆದರೆ ಇಂದು ಆ ಯೋಚಿಸುವ ಬುದ್ದಿಯು ಇಲ್ಲದೇ ಪ್ರಾಣಿಗಿಂತ ನಿಕೃಷ್ಟವಾಗಿ ಬದುಕುತ್ತಿದ್ದಾನೆ.
ಹೋದ ವರ್ಷ ನಮ್ಮ ಮನೆಯ ಬಳಿ ಗಣೇಶನ ವಿಸರ್ಜನೆ ಮಾಡಲು ಹೊರಟ ಮೆರವಣಿಗೆ ಹಾದು ಹೋಯಿತು ಅಲ್ಲಿದ್ದ ಜನರದು ನೃತ್ಯ ಎನ್ನುವುದಕ್ಕಿಂತ ಅದು ಮೋಜಿನ, ಅವಿವೇಕದ ಅತಿರೇಕದ ಹುಚ್ಚಾಟ ಎಂದೆನಿಸಿತು ಆ ಧ್ವನಿ ವರ್ಧಕಗಳ ಸೌಂಡ್ ಗೆ ನಮ್ಮ ಮನೆಯ ಕಿಟಕಿ ಬಾಗಿಲುಗಳು ಒಂದು ತೆರನಾದ ಕಕ೯ಶ ಶಬ್ದ ಹೊರಟು ಕಿವಿಗಳ ತಮಟೆ ಆ ಶಬ್ದಕ್ಕೆ ಹರಿದುಹೋದವೆನೋ ಎಂಬಂತೆ ಭಾಸವಾಯಿತು.ಓದುತ್ತಿದ್ದ ನನ್ನ ಮಗಳು ಜೀವಿಕಾ ಅಮ್ಮ ಪೊಲೀಸ್ ಠಾಣೆ ಗೆ ಕರೆ ಮಾಡಿ ದೂರು ಸಲ್ಲಿಸು ಎಂದಳು.ಅವಳ ಮಾತು ಕೇಳಿ ಒಂದು ಕ್ಷಣ ನಾನು ಬೆರಗಾದೆ ಆ ಮಗುವಿನ ಅರಿವು ನಮಗಿಲ್ಲವೇ ಮತ್ತೊಬ್ಬರಿಗೆ ತೊಂದರೆ ಉಂಟು ಮಾಡುವ,ಆ ಅತಿರೇಕದ ಹುಚ್ಚಾಟ ಬೇಕಾ ಅಲ್ಲಿ ಭಕ್ತಿ ಲವಶೇಷವೂ ಕಾಣದು ಹಾಗೇಯೇ ನನ್ನ ಮಗಳು ಹಾಗಂದ ತಕ್ಷಣ ಹಸುಗೂಸುಗಳಿದ್ದರೆ ಅವುಗಳ ಪಾಡೇನೂ ತಾಯಂದಿರು ತಮ್ಮ ಮಡಿಲಲ್ಲೇ ಬಚ್ಚಿಟ್ಟುಕೊಳ್ಳಬೇಕು,ತೀವ್ರ ತೆರನಾದ ಹೃದಯ ಸಂಬಂಧಿ ತೊಂದರೆ ಇರುವವರ ಪಾಡೇನೂ ಪರಿಸರ,ಶಬ್ದ ಮಾಲಿನ್ಯ ಉಂಟು ಮಾಡದಂತೆ ಆಚರಿಸಲು ಬಾರದೇ ಸಂಬಂಧಿಸಿದ ಇಲಾಖೆ ಷರತ್ತು ವಿಧಿಸಿ ಅನುಮತಿ ನೀಡಬೇಕು ಇಲ್ಲ ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಬೇಕು ಈ ಎಲ್ಲಾ ಅಂಶಗಳು ಅವರ ಗಮನಕ್ಕೆ ಬಾರದೇ ಈ ತೆರನಾದ ಯೋಚನೆಯಲ್ಲಿ ಮನ ಮುಳುಗಿತು.
ಇಂದು ಪತ್ರಿಕೆಗಳಲ್ಲಿ ಓದುತ್ತೇವೆ. ಜನಜಂಗುಳಿಯಿಂದ ಕಾಲ್ತುಳಿತ,ಕಳ್ಳರ ಹಾವಳಿ, ಅದಕ್ಕಾಗಿ ಪೊಲೀಸ್ ಕಾವಲು, ತುರ್ತು ಇರುವವರಿಗೆ ಸಂಚಾರಕ್ಕೂ ತೊಂದರೆ ಈ ತರದ ಸಮಸ್ಯೆಗಳು ಉದ್ಭವಿಸುತ್ತವೆ.
ನಮ್ಮ ನಾಡು ಹಲವು ಸಂಸ್ಕೃತಿಗಳ ಬೀಡು ವೈವಿಧ್ಯತೆಯಲ್ಲೂ ಏಕತೆ ಕಾಪಾಡಿಕೊಂಡಿದೆ ಸಹಿಷ್ಣುತೆ ಕೊಂಚ ಕೊಂಚ ಮರೆಯಾಗಿ ಮಾನವ ದಾನವನಾಗುತ್ತಿದ್ದಾನೆ ಮೂಲ ಆಶಯ,ಬದುಕಿನ ಬದ್ದತೆಗಳ ಮರೆಯುತ್ತಿದ್ದಾನೆ ಎಂದೆನಿಸುತ್ತದೆ.
ಅದೇ ಸಮಾಜಮುಖಿ ಅನ್ನವಿಲ್ಲದವರಿಗೆ ದುಡಿಮೆಗೆ ಮಾಗ೯ ತೋರಿಸಿ, ಪ್ರೀತಿ ವಂಚಿತ ಮಕ್ಕಳಿಗೆ ಪ್ರೀತಿ ಹಂಚೋಣ, ಶಿಕ್ಷಣ ವಂಚಿತರಿಗೆ ಎರಡಕ್ಷರದ ಹಾದಿ ತೋರಿಸೋಣ, ವೃದ್ಧರಿಗೆ ಉರುಗೋಲಾಗೋಣ, ಅಬಲೆಯರಿಗೆ ಸಬಲೆಯೆಂದು ಆತ್ಮವಿಶ್ವಾಸ ತುಂಬೋಣ ಅದು ಸೇವೇಯೇ ಜನಸೇವೆ ಈಶಸೇವೇ ಎಂಬ ಮಾತಿಲ್ಲವೇ ಏಕೋ ಇದೆಲ್ಲ ನೆನಪಾಯಿತು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸಿತು ಸಮಾಜಕ್ಕೆ ನಮ್ಮಿಂದ ಆದರೆ ಸಹಾಯ ಮಾಡೋಣ ಇಲ್ಲದಿರೆ ಅಪಾಯವಂತೂ ಮಾಡಬಾರದಲ್ಲವೇ ಒಳಿತು ಕೆಡುಕುಗಳ ನೀವೇ ನಿರ್ಧರಿಸಿ ಉತ್ತಮ ನಡೆ ಬದುಕ ಬಂಗಾರವಾಗಿಸಲಿ ಎಲ್ಲರಿಗೂ ಶುಭವ ತರಲಿ.
ಶಾರದ ಜೈರಾಂ.ಬಿ




ಮನಮುಟ್ಟುವ ಬರಹ
ಥ್ಯಾಂಕ್ಯೂ ಡಿಯರ್