ಹಮೀದಾಬೇಗಂ ದೇಸಾಯಿ ಅವರ ಗಜಲ್

ಎದೆಯೊಳವಿತ ಬಯಕೆ  ಬೀಜವು  ಮೊಳೆಯುತಿದೆ ನಿನ್ನೊಲವಿಗೆ
ಒಣಗಿದ ಭಾವ ಬಳ್ಳಿಯು ಮತ್ತೆ  ಚಿಗುರುತಿದೆ  ನಿನ್ನೊಲವಿಗೆ

ಅದೇನೋ ಕನಸು ಕಾಣುತಿದೆಯಲ್ಲವೇ  ಮುದುರಿದ  ಮನಸು
ಮಂಕಾದ ಕಂಗಳಲಿ ಹೊಸ  ಕಾಂತಿ  ಹೊಳೆಯುತಿದೆ  ನಿನ್ನೊಲವಿಗೆ

ಏಳುತಿದೆ ಮೆಲ್ಲನೆ ಹರುಷದಲೆಯೊಂದು ಹೃದಯದಲಿ ಉಕ್ಕುತ
ಇರುಳಾದ  ಹಗಲು ಮರಳಿ  ಬೆಳಕು ಸೂಸುತಿದೆ ನಿನ್ನೊಲವಿಗೆ

ಅಂಗಳದಿ  ಅರಳಿದ ಗುಲಾಬಿ  ನಸುನಾಚಿದಂತಿದೆ  ನೋಡು
ತಿಂಗಳನ  ಹಾಲ್ಜೊನ್ನ  ಜೇನಿನೊಲು  ಸುರಿಯುತಿದೆ  ನಿನ್ನೊಲವಿಗೆ

ಕಾಲಂದುಗೆಯ  ಕಿರುಗೆಜ್ಜೆ  ಉಲಿದು ನಾದ ರಿಂಗಣಿಸಿದೆ
ಬೇಗಂಳ ಪ್ರೇಮಗಾನ ಮಧುರವಾಗಿ  ಧ್ವನಿಸುತಿದೆ  ನಿನ್ನೊಲವಿಗೆ


One thought on “ಹಮೀದಾಬೇಗಂ ದೇಸಾಯಿ ಅವರ ಗಜಲ್”

  1. ನಿನ್ನೊಲವಿನ ಚಮತ್ಕಾರ ತುಂಬಾ ಚೆನ್ನಾಗಿ ಅಭಿವ್ಯಕ್ತಗೊಂಡಿದೆ.

Leave a Reply