ಸರ್ವಮಂಗಳ ಜಯರಾಂ ಅವರ ಗಜಲ್

ನಮ್ಮೂರಿನ ಕಾಲುದಾರಿ ಹಿರಿದಾಗಲೇ ಇಲ್ಲ ಗೆಳೆಯ /
ಧೂಳು ಮೆತ್ತಿದ ಬದುಕು ಹಸನಾಗಲೇ ಇಲ್ಲ ಗೆಳೆಯ /

ಅದೆಷ್ಟು ಶತಮಾನ ಕಳೆದರೂ ಡಾಂಬರು ಕಾಣಲಿಲ್ಲ /
ಗುಡಿಸಲುಗಳ ಸೆಗಣಿ ನೆಲ ನಯಸ್ಸಾಗಲೇ ಇಲ್ಲ ಗೆಳೆಯ /

ಇಂದಿಗೂ ಬುಡ್ಡಿ ದೀಪ ಕತ್ತಲಿನ ಗೂಡು ಬೆಳಗಲು /
ಇಂಗಿ ಹೋದ ಕಂಗಳ ಬೆಳಕು ಭರವಸೆಯಾಗಲೇ ಇಲ್ಲ ಗೆಳೆಯ /

ತುತ್ತು ತುತ್ತಿಗೂ ತತ್ವಾರ ಒಡಲ ಬೇಗೆ ತಣಿಸಲು /
ಮಸಣದೂರಿನಲ್ಲೂ ನೆಲೆ ಇಲ್ಲದೆ ಆಸರೆಯಾಗಲೇ ಇಲ್ಲ ಗೆಳೆಯ /

ಒಂದಾದರೂ ಜೀವಕ್ಕೆ ಉಸಿರು ತುಂಬಬೇಕು ಮಾಧುರಿ /
ಸಾವು ನೋವಿನ ನಡುವೆ ಹೋರಾಟದ ಜಯವಾಗಲೇ ಇಲ್ಲ ಗೆಳೆಯ /

———————————————-

Leave a Reply