ಗಜಲ್ ಸಂಗಾತಿ
ಅನಸೂಯ ಜಹಗೀರದಾರ ಅವರ ಗಜಲ್


ಇಂದು ಹಾಲಿಗೆ ಹಾಲಾಗಲಿ ನೀರಿಗೆ ನೀರಾಗಲಿ ಹೇಳಿಬಿಡುವೆ
ಹಾಲಾಹಲವೇ ಕುಡಿದರೂ ಸರಿ ಏನಾದರಾಗಲಿ ಹೇಳಿಬಿಡುವೆ
ದಿನವೂ ನೋಡುತ್ತಿರುವೆ ಅಕ್ರಮವನು ಎಷ್ಟೂಂತ ಮೌನವಿದು
ನೆಮ್ಮದಿ ಕಳೆದುಕೊಳ್ಳುವ ಭಯವಿದೆ ಆದದ್ದಾಗಲಿ ಹೇಳಿಬಿಡುವೆ
ಫಲಾನುಭವಿಗಳಿಲ್ಲ ವಂಚನೆಗೆ ಸಿಲುಕಿ ನರಳುವ ಕಂದಮ್ಮಗಳಿವೆ
ಕಲಬೆರಕೆ ಮನಗಳ ಆಳ್ವಕೆ ಇಲ್ಲಿ ಸತ್ಯ ಕೂಗಾಗಲಿ ಹೇಳಿಬಿಡುವೆ
ದಿನ ದಿನವೂ ಯಾರಿಗೆ ಬೇಕು ಉಸಿರುಗಟ್ಟಿಸುವ ಜೀವನವು
ಒಂದು ದಿನ ಸಾಯುವುದೇ ಆದರೆ ಇಂದೇ ಆಗಲಿ ಹೇಳಿಬಿಡುವೆ
ಹಣದ ವಾಸನೆಗೆ ರಣ ಹದ್ದುಗಳು ಕೇಕೇ ಹಾಕಿ ಸುತ್ತುತ್ತವೆ *ಅನು*
ದಿಕ್ಕುಗಾಣದ ಕೂಗುಗಳ ಕೇಳಿ ಹೇಗೆ ಸುಮ್ಮನಾಗಲಿ ಹೇಳಿಬಿಡುವೆ
ಅನಸೂಯ ಜಹಗೀರದಾರ




ಅನ್ಯಾಯದ ವಿರುದ್ಧ ಸಿಡಿದೆದ್ದು ನಿಂತ ಜೀವದ ನೋವನ್ನು ಸಮರ್ಥವಾಗಿ ಬಿಂಬಿಸಿದ ಗಜಲ್ ನ್ನು ರಚಿಸಿದ ನಿಮಗೆ ಧನ್ಯವಾದಗಳು ಅನಸೂಯ ಅವರೇ….
ಧನ್ಯವಾದಗಳು ಮೇಡಮ್.
ಅಥ೯ಪೂರ್ಣ ಸಾಲುಗಳು. ಧನ್ಯವಾದಗಳು.
ಕವನ ತುಂಬಾ ಅರ್ಥಗರ್ಭಿತವಾಗಿ ಮೂಡಿ ಬಂದಿದೆ.