ಗಜಲ್ ಸಂಗಾತಿ
ವಾಣಿ ಯಡಹಳ್ಳಿಮಠ ಅವರ ಗಜಲ್


ಬೇಕಂತಲೇ ಮರೆತು ಮುನ್ನಡೆದವರಿಗೆ ,
ನೆನಪಿಸಿಕೊಂಡು ಬಿಕ್ಕಳಿಕೆ ಕಳುಹಿಸಲಾರೆ
ಒಲ್ಲೆಂದು ತಿರುಗಿ ನೋಡದೆ ಹೋದವರಿಗೆ,
ಮುತ್ತಿಕ್ಕಿ ಒಲವಿನ ಓಲೆ ರವಾನಿಸಲಾರೆ
ಚಂದ್ರ ಚುಕ್ಕಿಗಳು ಸಾಕ್ಷಿ ಹೇಳಿದವು
ನನ್ನ ಮೂಕ ಪ್ರೀತಿಗೆ ಮೌನದಿ
ನೋಡಿ ನೋಡದಂತೆ ನಡೆದವರಿಗೆ,
ಬೆಳದಿಂಗಳ ಬಣ್ಣ ವಿವರಿಸಲಾರೆ
ಅದೆಷ್ಟು ನಿಷ್ಕಲ್ಮಶ ಎನಿಸುತಿತ್ತು
ನೀ ಅಂದು ಎರೆದ ಒಲವ ಧಾರೆ
ಆದರೆ ನಿಷ್ಕಾಳಜಿಯಿಂದ ದೂರವಾದವರಿಗಾಗಿ
ಇಂದು ನಿಡುಸುಯ್ದು ವಿಷಾದಿಸಲಾರೆ
ಬಣ್ಣ ಬಣ್ಣದ ಕಪಾಟುಗಳಾಗಿವೆ ಈ ಜಗದ
ಜನರ ಹೃದಯಗಳು ನಿಜಕ್ಕೂ
ತೆರೆಯದ ಕದಗಳನು ಬಡಿ ಬಡಿದು
ಬಾ ಎಂದು ಕೈಮುಗಿದು ಆಹ್ವಾನಿಸಲಾರೆ
ವಾಣಿಯ ಹೃದಯದಲಿ ನಿನಗಿಂದಿಗೂ
ದಿನನಿತ್ಯ ಒಲವಿನಾರಾಧನೆ ನಿಜ
ಆದರೆ ನಿನ್ನೊಲವು ಪಡೆಯಲು ಅನುದಿನವೂ
ನನ್ನೀ ಕೋಮಲ ಕಂಗಳನು ಅಳಿಸಲಾರೆ..
ವಾಣಿ ಯಡಹಳ್ಳಿಮಠ




1 thought on “ವಾಣಿ ಯಡಹಳ್ಳಿಮಠ ಅವರ ಗಜಲ್”