ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರತಿಯೊಬ್ಬ ಕವಿ ಈ ದಿನ ಓದಬೇಕಾದ, ತಿಳಿದಿರಬೇಕಾದ ಬರಹ ಇದು…ಸೇವ ಮಾಡಿ ಇಟ್ಟುಕೊಳ್ಳಿ.ನೀವು ಈ ಲೇಖನದ ವಿಷಯ ಮಾತಾಡುವ ಸಂದರ್ಭದಲ್ಲಿ ಈ ಲೇಖಕನ ಹೆಸರು ನೆನಪಿಸಿ ಸಾಕು.ಧನ್ಯತೆ.
ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕವಿಗಳ ಕೊಡುಗೆ ಕುರಿತು ಮಂಡಿಸಿದ ಬಹು ಅಮೂಲ್ಯವಾದ ಲೇಖನ ಇದು. ಈಗಾಗಲೇ ಈ ಪ್ರಬಂಧ ಅನೇಕ ಕಡೆ ಪ್ರಕಟ ಆಗಿದೆ.ಇಲ್ಲಿಯದನ್ನೇ ಮೇಲೆ ಕೆಳಗೆ ಮಾಡಿ ನಿಮ್ಮ ಲೇಖನ ಆಗಿಸಿಕೊಳ್ಳಬೇಡಿ.ಅಂತಹ ಮಹನೀಯರು! ಉಂಟು ಕೆಲವು ಕಡೆ.ಇಲ್ಲಿ ಅಂತಹವರಿಲ್ಲ ಆ ಮಾತು ಬೇರೆ.
ಓದುವ ಖುಷಿ, ನಿಮ್ಮದಾಗಲಿ.

ಸಿದ್ದರಾಮ ಹೊನ್ಕಲ್

*ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ..*

(ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಮಂಡಿಸಿದ ಪ್ರಬಂಧ)

ಲೇಖಕ – *ಡಾ.ಸಿದ್ಧರಾಮ ಹೊನ್ಕಲ್*

ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಮುಗಿದು ಈಗಾಗಲೇ 79 ವರ್ಷಗಳ ಸಂಭ್ರಮದಲ್ಲಿ ಈ ಅಗಸ್ಟ ೧೫ ರಂದು ನಾವು ಭಾರತದ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸ್ವಾತಂತ್ರ್ಯ ಹೋರಾಟದ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆಯನ್ನು ಕುರಿತು ಮಾತಾಡಲು ನನಗೆ ಅವಕಾಶ ಒದಗಿಸಿದ್ದಕ್ಕೆ ಮೊಟ್ಟ ಮೊದಲನೆಯದಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯವರಿಗೆ ಅದರ ಎಲ್ಲ ಸದಸ್ಯರಿಗೆ ಮತ್ತು ಅಧ್ಯಕ್ಷರಿಗೆ ಗೌರವಯುತ ವಂದನೆಗಳನ್ನು ಅರ್ಪಿಸಿ ನನ್ನ ಮಾತುಗಳನ್ನು ಆರಂಭಿಸುತ್ತಿದ್ದೇನೆ.

ಆ ಸ್ವಾತಂತ್ರ್ಯ ಪೂರ್ವದ ಸಂಗ್ರಾಮಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಸಾಕಷ್ಟು ಇದೆ. ನನಗೆ ಕಾವ್ಯ ಕ್ಷೇತ್ರದಿಂದ ಆದಂತಹ ಕೊಡುಗೆಯನ್ನು ಕುರಿತು ವಿಷಯ ಕೊಟ್ಟಿರುವದರಿಂದ ಹಾಗೂ ಹದಿನೈದು ನಿಮಿಷಗಳ ಸಮಯದ ಮಿತಿಯಲ್ಲಿ ಪ್ರಬಂಧ ಮಂಡಿಸಲು ಹೇಳಿರುವದರಿಂದ ಆ ನಿಗದಿತ ಅವಧಿಗೆ ಸಾಧ್ಯವಾಗುವಷ್ಟು ಇಲ್ಲಿ ನಾನು ನನಗೆ ದೊರೆತ ಆಕರಗಳ, ಕವಿತೆಗಳ ಹಿನ್ನೆಲೆಯಲ್ಲಿ ಪ್ರಾಮಾಣಿಕವಾಗಿ ನನ್ನ ಅನಿಸಿಕೆ ಹಂಚಿಕೊಳ್ಳಲು ಪ್ರಯತ್ನಿಸುವೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ. 

ನಮ್ಮ ಈ ಭಾರತದ ಬಹುತೇಕ ಜನತೆಗೆ ಒಂದು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರ ಗೊತ್ತು.ಅದು 1947 ಅಗಸ್ಟ್ ಹದಿನೈದರಂದು ದೊರೆತ  ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರ.ಆದರೆ ನಾನು ಬಂದಿರುವ‌ ಹೈದರಾಬಾದ್ ಕರ್ನಾಟಕದ ಅಂದರೆ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶದವರಾದ ನಮಗೆ ಈ ಸ್ವಾತಂತ್ರ್ಯ ಒಂದು ವರ್ಷ ಒಂದು ತಿಂಗಳು ತಡವಾಗಿ ದೊರೆಯಿತು.ಇಡೀ ದೇಶ‌ ಸ್ವಾತಂತ್ರ್ಯ ದ ಸಂಭ್ರಮದಲ್ಲಿ ಪುಳಕಗೊಂಡು ಜೈ ಭಾರತಮಾತೆ..ಎಂದು ಹರ್ಷದಿಂದ ಉದ್ಗಾರ ಮಾಡುವಾಗ ನಾವು ನಮ್ಮ ಪ್ರದೇಶದ ಜನ‌ ಅಖಂಡ ಭಾರತದ ಒಕ್ಕೂಟದಲ್ಲಿ ಸೇರದೇ ಹೊರಗೆ ಉಳಿದ ಹೈದರಾಬಾದ್ ನ ನಿಜಾಂನ ಹಾಗೂ ಆತನ ಸೇನಾಧಿಪತಿ ಕಾಸಿಂ ರಜ್ವಿ ಕಟ್ಟಿದ‌ ಖಾಸಗಿ ಸೈನ್ಯ ರಜಾಕಾರರ ಬೂಟು ಗಾಲಿನಿಂದ ಒದೆ ತಿನ್ನುತ್ತಾ,ಅವರ ದೌರ್ಜನ್ಯ,ಹಿಂಸೆ ಅತ್ಯಾಚಾರಕ್ಕೆ ಒಳಗಾಗಿ ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಿದ ತಿರಂಗಿ ಧ್ವಜ ದ ಸಂಭ್ರಮ ನೋಡಲಾಗದೇ; ಅದನ್ನು ಕಲ್ಪಿಸಿಕೊಳ್ಳಲು‌ ಸಹ ಭಯ ಭೀತರಾದಂತಹ ಪರಸ್ಥಿತಿಯಲ್ಲಿ ನಲುಗಿ ಹೋಗಿದ್ದರು. ಆ ಹಿನ್ನೆಲೆಯಲ್ಲಿ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕರೆ, ನಿಜಾಂ ಸರ್ಕಾರದ ಅಡಿಯಲ್ಲಿದ್ದ ಹೈದರಾಬಾದ್ ಕರ್ನಾಟಕದ ನಮಗೆ ಮತ್ತೋಂದು ಬಹು ಭೀಕರ ಹೋರಾಟ ಮಾಡಿದ ನಂತರ ಒಂದು ವರ್ಷ ಒಂದು ತಿಂಗಳು ತಡವಾಗಿ ಸ್ವಾತಂತ್ರ್ಯ ಸಿಕ್ಕಿತು.ಆ ಹಿನ್ನೆಲೆಯಲ್ಲಿ ನಾನು ಈ ಸಂದರ್ಭದಲ್ಲಿ ಎರಡು ಹೋರಾಟಗಳ ಕುರಿತು ನಮ್ಮ ಕನ್ನಡ ಕಾವ್ಯವನ್ನು ಗಮನಿಸಿ ಕಟ್ಟಿಕೊಡಲು ಯತ್ನಿಸುತ್ತೇನೆ.

ಯಾವುದೇ ಕಾಲಮಾನದಲ್ಲಿ ಲೇಖಕ,ಕವಿ,ಕಲಾವಿದ ನಾದವನು ಆ ಒಂದು ಕಾಲಮಾನದ ಸಾಕ್ಷಿ ಪ್ರಜ್ಞೆ ಯಾಗಿರುತ್ತಾನೆ. ತನ್ನ ಕಾಲಮಾನದಲ್ಲಿ ನಡೆದ ಯಾವುದೇ ವಿದ್ಯಮಾನಗಳಿಗೆ ಸ್ಪಂದಿಸುತ್ತಾನೆ.ಕವಿ ಲೇಖಕ ಬರಹಗಾರ ಒಟ್ಟಾರೆ ಅಕ್ಷರಬಲ್ಲ ಸೃಜನಜನಶೀಲ ವ್ಯಕ್ತಿ ಕಲಾವಿದ ಹೋರಾಟಗಾರ ಇವರೆಲ್ಲರೂ ಆ ಸಂದರ್ಭದಲ್ಲಿ ಸ್ಪಂದಿಸದೇ ಹೋದರೆ ಆತ ಸಮಾಜಿಮುಖಿ‌, ಜನಮುಖಿ ಕವಿಯಾಗಲಾರ.ಹೋರಾಟಗಾರನಾಗಲಾರ.ಕಲಾವಿದ ಆಗಲಾರ.

ಸಾಮಾನ್ಯ ಜನತೆ ಒಬ್ಬ ಅಥವಾ ಒಂದು ಸಮೂಹ ನಾಯಕತ್ವದಲ್ಲಿ ಯಾವುದೇ ಒಂದು ಹೋರಾಟವನ್ನು ರೂಪಿಸಿದವರ ಜೊತೆ ಆ ಹೋರಾಟಕ್ಕೆ ಕೈ‌ ಜೋಡಿಸುತ್ತಾರೆ. ಆಗ ಯಾವುದೇ ಒಂದು ಹೋರಾಟಕ್ಕೆ ಬೇಕಾದ ಹೋರಾಟದ‌ ಹಾಡುಗಳು,ಕವಿತೆಗಳು,ಮಾತುಗಳು,ಭಿತ್ತಿ ಚಿತ್ರಗಳು,ಒಟ್ಟಾರೆ ಆಗ ಸೃಷ್ಠಿಯಾದ ಸಾಹಿತ್ಯ ಬಹುಮುಖ್ಯ ವಾಗಿ ಜನಮನ ಸೆಳೆದು ಹೋರಾಟದ ಕಡೆಗೆ ಜನರನ್ನು ಆಕರ್ಷಿಸುವ ಹಾಗೂ ತಮ್ಮ ಆ ಹೋರಾಟದ ಹಿಂದಿನ‌ ಕೈ‌ಗೆ ಹಾಕಿದ ಬೇಡಿಯನ್ನು, ಬಂಧನವನ್ನು ಕಳಚಿಕೊಳ್ಳುವ‌ ಆ ಸಂದರ್ಭದಲ್ಲಿ ಆಗಬೇಕಾದ ದೈಹಿಕ ಮಾನಸಿಕ ಶಿದ್ಧತೆಗೆ ಒಂದು ಪ್ರೇರಣೆಯನ್ನು ಖಂಡಿತಾ ಸಾಹಿತ್ಯ ಕ್ಷೇತ್ರ ಒದಗಿಸುತ್ತದೆ.

ಆ ಎಲ್ಲಾ ಹಿನ್ನೆಲೆಯಲ್ಲಿ ಈಗ ಮೊದಲನೆದಾಗಿ ನಾನು ಅಗಷ್ಟ ೧೫-೧೯೪೭ ರಲ್ಲಿ ದೊರೆತ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ಕನ್ನಡದ ಕವಿಗಳ ಕಾವ್ಯದ ಕೊಡುಗೆ ಹಿನ್ನೆಲೆಯಲ್ಲಿ ಚರ್ಚಿಸುತ್ತೇನೆ.

ನಮ್ಮದಿ ನಮ್ಮದಿ ಭರತಭೂಮಿ ಹೆರವರ ನಂಬದಲೇ
ಜಗದೀಶ್ವರಂ ತಾನೇ ಧರಸಿ ನಾನಾವತಾರಗಳನು
ಕರೆವ ಸರ್ವಸ್ವಮಂ ಧರೆಯ ಸಂರಕ್ಷಿಸುವ ತೆರೆವ
ಕಲಿಸಿದ ಪೂರ್ವ ಪಾಠಶಾಲೆ…

ಜೈ ಭಾರತ ರಾಷ್ಟ್ರಗೀತೆಯ ಕೃತಿಯಲ್ಲಿರುವ ಈ ಕವಿತೆಯ,ಹಾಡಿನ ಮೂಲಕ ೧೯ ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ರಾಷ್ಟ್ರಾಭಿಮಾನಿ ಕವಿ ಎಂದೇ ಖ್ಯಾತರಾಗಿರುವ *ಶಾಂತಕವಿ* ಎಂಬ ಕಾವ್ಯನಾಮದ ಬಾಳಾಚಾರ್ಯ ಸಕ್ರಿಯವರ ಈ ಕವಿತೆಯ ಮೂಲಕ  ಹರಿದು ಬಂದ ಸ್ವಾತಂತ್ರ್ಯ ಸಂಗ್ರಾಮದ ಕಾವ್ಯವನ್ನು ಗಮನಿಸಬಹುದಾಗಿದೆ.

ಸ್ವಾತಂತ್ರ ಪೂರ್ವದ ಬ್ರಿಟಿಷರ ಆಳ್ವಿಕೆಯಲ್ಲಿ ನಲುಗಿದ ಭಾರತಾಂಬೆಯನ್ನು , ಈ ಭರತ ಭೂಮಿಯನ್ನು ಸ್ವತಂತ್ರಗೊಳಿಸಬೇಕೆಂಬ ಕಲ್ಪನೆ ಅದಾಗಲೇ ಕವಿ, ಲೇಖಕ, ಹೋರಾಟಗಾರರು, ಕಲಾವಿದರಲ್ಲಿ ಸೂಪ್ತವಾಗಿ ಮೊಳಕೆ ಒಡೆಯುತ್ತಿದ್ದ ಕಾಲವದು. 

ನವೋದಯ ಸಾಹಿತ್ಯದ ಹರಿಕಾರರಾದ ಬಿ ಎಂ ಶ್ರೀ ಅವರಿಂದ ಆರಂಭಗೊಂಡು ಆ ಕಾಲಮಾನದ ಎಲ್ಲ ಕವಿಗಳು ಸ್ವಾತಂತ್ರದ ಹೋರಾಟಕ್ಕೆ ತಮ್ಮ ಕಾವ್ಯದ ಮೂಲಕ ಸ್ಪಂದಿಸಿದ್ದು ಸ್ವಾತಂತ್ರ್ಯ ಹೋರಾಟದ ಇತಿಹಾಸ ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.

ತಂತ್ರ ವಾದ್ಯವು ಲೇಸು
ಮಂತ್ರಿಯ ಕಳೆ ಲೇಸು
ಯಂತ್ರ ವಾಹಕನ ದಯೆ ಲೇಸು
ಜಗದೀ ಸ್ವಾತಂತ್ರ್ಯವೇ ಲೇಸು

ಎಂದು ನಮ್ಮ ಲೋಕ ಸಂಚಾರಿ, ಲೋಕಾನುಭವಿ ಕವಿ ಸರ್ವಜ್ಞನು. ಈ ಜಗಕ್ಕೆ ಸ್ವಾತಂತ್ರ್ಯವೇ ಲೇಸು ಎಂದು ತಮ್ಮ ಬದುಕಿನ ಕಾಲ ಘಟ್ಟದಲ್ಲಿ ಹೇಳಿರುವುದು ಇಲ್ಲಿ ಉಲ್ಲೇಖನೀಯ.

12ನೇ ಶತಮಾನದ ಬಸವಾದಿ ಶರಣರ ಕಾಲದಿಂದಲೇ ಸ್ವತಂತ್ರ ವಿಚಾರಧಾರೆ ಜನಮನಕ್ಕೆ ತಲುಪಿ ಪ್ರತಿಯೊಬ್ಬರಲ್ಲಿ ವ್ಯಕ್ತಿ ಗೌರವ, ಆತ್ಮವಿಶ್ವಾಸ, ಸಮಾನತೆ, ಸ್ವಾತಂತ್ರ್ಯದ ಪರಿಕಲ್ಪನೆ ಈ ನೆಲದಲ್ಲಿ ಬಿಜಾಂಕುರವಾಗಿತ್ತು. ಇದು ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಹೆಮ್ಮರವಾಗಿ ಬೆಳೆದು ಇಡೀ ನಾಡು ನುಡಿ ಗಡಿದಾಟಿ ಇಡೀ ದೇಶವನ್ನೇ ವ್ಯಾಪಿಸಿದ್ದು ಸುಳ್ಳಲ್ಲ.

ಮುಖ್ಯವಾಗಿ ಯಾವುದೇ ದೇಶದ ಜನ ಸಮೂಹ ಹೆರವರ ಕಟ್ಟುಪಾಡುಗಳಲ್ಲಿ, ಉಸಿರುಗಟ್ಟಿಸುವ ವಾತಾವರಣದಲ್ಲಿ ತೆಲೆ ತಗ್ಗಿಸಿ ಬಹುದಿನ ಬದುಕಲಾಗುವುದಿಲ್ಲ.ಆ ಕಾಲಮಾನದ ಸಾಕ್ಷಿ ಪ್ರಜ್ಞೆಯುತ್ತಿರುವ ಕವಿ, ಲೇಖಕ, ಬರಹಗಾರ, ಪತ್ರಕರ್ತ ಸುಮ್ಮನೆ ಮೌನ ಪ್ರೇಕ್ಷಕರಾಗಿ ಉಳಿಯಲಾರರು.ಅದೇ ರೀತಿ ಈ ಸ್ವಾತಂತ್ರ್ಯದ ಸಂದರ್ಭದಲ್ಲಿ ಸಹ ತಮ್ಮ ಕಾವ್ಯದ ಮೂಲಕ ಸ್ವಾತಂತ್ಯ್ರದ ರೊಚ್ಚು ಕೆಚ್ಚು ಜನಮನಕ್ಕೆ ತಲುಪಿಸಿ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ ತಮ್ಮ ಕಾವ್ಯವನ್ನು ನೂರಾರು ಕವಿಗಳು ಹರಿಸಿದ್ದಾರೆ.ಅಕ್ಷರ ಬಾರದವರು ಜನಪದ ಹಾಡು,ಹಲಾಹಿ ಹಾಡು, ಲಾವಣಿ,ಭುಲಾಯಿ, ಗೀಗಿಪದಗಳ ಮೂಲಕ ತಮ್ಮ ರಾಷ್ಟ್ರಾಭಿಮಾನವನ್ನು ಪ್ರದರ್ಶಿಸಿ ಒಟ್ಟಾರೆ ಸ್ವಾತಂತ್ರ್ಯ ದ ಹೋರಾಟದಲ್ಲಿ ತೊಡಗಿದ ಮಹಾತ್ಮನನ್ನು ಒಳಗೊಂಡ ಎಲ್ಲಾ ಸಮರ ಸೇನಾನಿಗಳಿಗೆ ,ಮುಂದಾಳುಗಳಿಗೆ ಪೂರಕವಾಗಿ ಕೆಲಸ ಮಾಡಿದ್ದು ಗಮನೀಯವಾಗಿದೆ.

ಭಾರತಾಂಬೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ
ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವು ಬಿಡಿಸಿರಿ
@
ನಮ್ಮ ನಾಡಿನ ಹೆಣ್ಣು ಮಕ್ಕಳು ವೀರಶ್ರೀಯನು  ಬೀರುತ
ಒಮ್ಮನಸಿನೊಳೇ ರಾಷ್ಟ್ರ ಕಾರ್ಯಕ್ಕೆ ಪ್ರಾಣ ಕೊಡುತಿಹರಲ್ಲವೇ 

ನಮ್ಮ ದೇಶದ ಸಿರಿಯು ಎಲ್ಲವೂ ಅನ್ಯ ದೇಶವ ಸೇರಿತು ಒಮ್ಮೆಯಾದರೂ ಹೊಟ್ಟೆ ತುಂಬಾ ಅನ್ನ ಸಿಗದಂತಾಯಿತು

ದೇಶ ಸೇವೆಯ ಸಮರ ಕಾಲದಿ ಪ್ರಾಣ ಹೋದರು ನೋಡದೆ
*ದೇವ ಕೃಪೆಯನು ಪಡೆದು ದೇಶವನುಳಿಸಿಕೊಳ್ಳಲು

(ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ ಕೃತಿಯ ಅನಾಮಿಕ ಕವಿಯೊಬ್ಬರ ಕವಿತೆ)  ಹೀಗೆ ಅಜ್ಞಾತ ಕವಿ ಒಬ್ಬ ರಾಷ್ಟ್ರ ಪ್ರೇಮವನ್ನು ಮೆರೆದು,ಹಿಂದಿನ ಸಿರಿ ಸಂಪತ್ತಿನ ನಮ್ಮ ಭಾರತ ಹೇಗಾಗಿದೆ ನೋಡಿ. ತುತ್ತು ಅನ್ನವು ಸಿಗದಂತಾಗಿದೆ ಬಡ ಬಗ್ಗರಿಗೆ ಎಂದು ಎಚ್ಚರಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬನ್ನಿ. ಇದಕ್ಕಾಗಿ ಪ್ರಾಣ ಹೋದರು ಪರವಾಗಿಲ್ಲ. ದೇವಕೃಪೆಯಿಂದ ಹೋರಾಡಿ ಗೆಲ್ಲೋಣವೆಂದು ಹೇಳಿದ ಈ ಮೇಲಿನ ಕವಿತೆಯ ಆಶಯ ಇಡೀ ಕನ್ನಡ ಕಾವ್ಯದ ಒಳ ಹರಿವಾಗಿತ್ತು ಅನಿಸದಿರದು.

ಸತ್ತಂತಿಹರನ್ನು ಬಡಿದೆಚ್ಚರಿಸು …ಎಂಬ ಕವಿ ಕುವೆಂಪುರವರು

ಸಾರಿ ಬಾ ಸರ್ವರ್ಗೆ  ಸ್ವಾತಂತ್ರ್ಯಮಂ
*ಸಾರಿ ಬಾ ಸರ್ವರ್ಗೇ ಸಾಮ್ಯತ್ವಮಂ 
*ಸರ್ವಂಗೆ ಸಾರಿ ಬಾ ಸೌಹಾರ್ದಮಂ*
*ಸರ್ವ ಲೋಕದ ಸರ್ವ ಸಂತೋಷ ಮಂ
*ಸರ್ವರಿಂ  ಸರ್ವರಾ ಉದ್ಧಾರಮಮಂ*

 ( ಭಾರತ ಸ್ವಾತಂತ್ರ ಗಾಯತ್ರಿ ಕೃತಿಯ ಕವಿತೆ) ಕವಿತೆಯಲ್ಲಿ  ಉದಾತ್ತವಾಗಿ ಸರ್ವರಿಗೂ ಸ್ವಾತಂತ್ಯ ದ ಜೊತೆ ಜೊತೆಗೆ ಸೌಹಾರ್ದತೆ,ಸಂತೋಷ,ಸ್ವಾಮ್ಯತ್ವ ಹಾಗೂ ಏಳಿಗೆಯನ್ನು ಬಯಸುವ ಮೂಲಕ ಸ್ವಾತಂತ್ರ್ಯದ ಮೂಲಕ ದೊರೆಯಬಹುದಾದ ಸರ್ವ ಕನಸುಗಳನ್ನು ಕಟ್ಟಿಕೊಟ್ಟಿದ್ದಾರೆ. ಮುಂದುವರಿದು,ಮಹಾ ಕವಿ ಕುವೆಂಪು ಅವರು ಹೀಗೆ ಹೇಳಿದ್ದಾರೆ.

ಒಂದು ರಾಜ್ಯವ ಗೆದ್ದು ಸಿರಿಯನೆಲ್ಲವ ಕದ್ದು 
ಬಲವಂತರಾದವರು ಬಲವಿಲ್ಲದವರುಗಳ 
ತುಳಿಯುತ್ತಿರಲು ಜನರ ಮೊರೆ ಬಾನೆಡೆಗೆ 
ಮುಟ್ಟುತ್ತಿರಲು ಉರುಳುರುಳು ಹಗಲಿರಲು 
ಎಲೆ ಧರಣಿ! ನೀ ನಿಷ್ಕರುಣಿ

ಹೀಗೆ ಜನಮನದ ತವಕ ತಲ್ಲಣಗಳನ್ನು ಪಾರತಂತ್ರದ ಹಿನ್ನೆಲೆಯಲ್ಲಿ ಕವಿ ಕುವೆಂಪು ಅವರು ಅತ್ಯಂತ ಸಾತ್ವಿಕವಾಗಿಯೇ ಕಟ್ಟಿಕೊಟ್ಟು ರಾಜ್ಯದ ಸಿರಿಯನು ಕದ್ದವನು ಒಳಗಿನವನಾದರೂ ಅಷ್ಟೇ,ಅವನು ಹೊರಗಿನವನಾದರೂ ಅಷ್ಟೇ ಎಂದು ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ದೂರ್ತತನವನ್ನು ತೆರೆದಿಟ್ಟಿದ್ದಾರೆ.

@

*ಗೇಣು ಭೂಮಿಗಾಗಿ ಎನ್ನ ಪ್ರಾಣ ಹೋಗಲಿ ಎಂದೆನ್ನುವಿ ಕಾಣದೇನೋ ನಾಡೇ ಪರಾಧೀನವಾಗಿರುವುದು ಮನುಜಾ ಮಾತೃಭೂಮಿಯ..*

ಕವಿ ಮುದವೀಡು ಕೃಷ್ಣರಾಯರು..ಹೀಗೆ ಕಾವ್ಯದ ಮೂಲಕ ಕರೆನೀಡಿ ಒಡ ಹುಟ್ಟಿದವರ ಜೊತೆ ಒಡೆದಾಡುವ ನೀ ಪರಕೀಯರು ನಾಡೇ ಕಬಳಸಿದಾರೆ ಹೋರಾಡು ಎಂದು ಹೇಳುವುದು ಮನನೀಯವಾಗಿದೆ.

@

*ಹಿಂದು ಮಾತೆ ಬಂಧು ಭಾವದಿಂದ ನಿನ್ನ ಕಂದರು*

*ಒಂದು ಗೂಡಿ ಪಾರತಂತ್ರ್ಯ ಬಂಧವ ಹರಿದೊಗೆವೆವು*ಎಂದು ಕವಿಭೂಷಣ ಬೆಟಗೇರಿ ಕೃಷ್ಣಶರ್ಮ ಅವಳನ್ನು ತಾಯಿಗೆ ಹೋಲಿಸಿ ಅವಳ ಬಿಡುಗಡೆಗಾಗಿ ನಾವೆಲ್ಲ ಒಂದಾಗಬೇಕೆಂಬ ಸಂದೇಶ‌ ನೀಡಿದ್ದಾರೆ.

@

ಭಾರತಾಂಭೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ*
ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವು ಬಿಡಿಸಿರಿ*

ಎಂದು ಅನಾಮಿಕ ಕವಿಯೊಬ್ಬರ ಕವಿತೆಯ ಸಾಲುಗಳು ಇವು.ಇಂತಹ ನೂರಾರು ಅನಾಮಿಕ ಕವಿಗಳ ಕವಿತೆ ನಮಗೆ ಕಾಣಬರುತ್ತವೆ.ಕವಿ ಡಾ.ಸೂರ್ಯನಾಥ ಕಾಮತ ಅವರು ಸುಮಾರು ನೂರಾರು ಜನರ ನಾಲ್ಕು ನೂರಕ್ಕಿಂತ ಹೆಚ್ಚು ಕವಿತೆಗಳನ್ನು ಕವಿ ಜೆ ಎಸ್ ಎಸ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಇದ್ದಾಗ ಅವರ ಸಲಹೆ ಮೇರೆಗೆ ಸಂಪಾದಿಸಿಕೊಟ್ಟದ್ದನ್ನು ಬಿಡುಗಡೆಯ ಹಾಡುಗಳು ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.

ಆ ಸಂದರ್ಭದಲ್ಲಿ ದೇಶಿಯ ದುಮದುಮೆ ಬರೆದ ದಿ.ಶ್ರೀಧರ  ಖಾನೋಲ್ಕರ್ ಅವರ ಕಾವ್ಯನಾಮ ಸೀತಾತನಯ ಎಂಬವರದು ಪ್ರಕಟಿಸಿದ್ದ ಕಾರಣಕ್ಕೆ ದಿ.ರಂ.ರಾ.ದಿವಾಕರ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿತ್ತು. ಅವರ ತಾಯಿಯ ಹೆಸರು ಸೀತಾ ಇರುವ ಕಾರಣಕ್ಕೆ .ಹೀಗಾಗಿ ಅನೇಕ ಕವಿಗಳು ತಮ್ಮ ಹೆಸರು ಮರೆ ಮಾಚಿಕೊಂಡು ಭೂಗತವಾಗಿದ್ದುಕೊಂಡೆ ಜನತೆಯಲ್ಲಿ ಸ್ವಾತಂತ್ರ್ಯ ದ ಕಿಚ್ಚು ಹಚ್ಚಿದ್ದು ಕಾಣಬಹುದಾಗಿದೆ.

 *ವೀರರನ್ನು ನೆನೆದು ನೆನೆದು ವೀರರಾಗಿ ಉಳಿಯುವಾ*

 ಎಂಬ ಬೇಂದ್ರೆಯವರ ಕಾವ್ಯ ಎಂತಹವರನ್ನೂ ಕಾಡುವಂತಹದು. 1918ರ ಮುಂಚೆಯೇ ಬೇಂದ್ರೆಯವರು ತುತ್ತೂರಿ ಮತ್ತು ಆಹಾ ಸ್ವಾತಂತ್ರದೇವಿ.. ಎಂಬ ಕವಿತೆ ಬರೆದು ಜೈಲಿಗೂ ಹೋಗಿ ಬಂದಿದ್ದರು. ಹಕ್ಕಿಹಾರುತಿದೆ ನೋಡಿದಿರಾ, ಸ್ವಾತಂತ್ರ್ಯದ ರೆಕ್ಕೆ ಬಿಚ್ಚಿ ನೋಡಿದಿರಾ ಎಂದು ಕೇಳುವ ಬೆಂದ್ರೆಯವರು  ಕನ್ನಡವೂ, ಭಾರತವೂ ಜಗವೆಲ್ಲ ಒಂದೇ ಎಂಬ ಬಹು ವಿಶಾಲ ನೆಲೆಯಲ್ಲಿ ಈ ಸ್ವಾತಂತ್ರ್ಯದ ಹೋರಾಟದ ಕವಿತೆಗಳನ್ನು ನವೋದಯದ ಸಂಪ್ರದಾಯದ ನಂತರ ಇಡೀ ಕನ್ನಡ ಕಾವ್ಯ ಪ್ರಪಂಚಕ್ಕೆ ಹರಡಿದ್ದು ಅದು ಕಾವ್ಯದ ಅಂತ ಸತ್ವವೇ ಆಗಿದೆ.

 ಆರಂಭದಲ್ಲಿ ಮೈಸೂರು, ಕರಾವಳಿ ಪ್ರದೇಶದಲ್ಲಿಯ ಈ ನವೋದಯ ಕಾವ್ಯದ ಹರಿವು ನಂತರ ಉತ್ತರ ಕರ್ನಾಟಕ ಮುಂಬೈ ಕರ್ನಾಟಕದ ಕಡೆಗೆ ಸ್ವಲ್ಪ ವ್ಯಾಪಿಸಿತ್ತು.ಆದರೆ ದೇಶಿ ಕಾವ್ಯ ಪರಂಪರೆಯಲ್ಲಿ ಮುಳುಗಿದ್ದ ಹೈದರಾಬಾದ್ ಕರ್ನಾಟಕಕ್ಕೆ ನವೋದಯ ಸಾಹಿತ್ಯವಾಗಲಿ,ನವ್ಯ ಸಾಹಿತ್ಯವಾಗಲಿ ಗಾಢವಾಗಿ ಪರಿಚಯವೇ ಆಗಲಿಲ್ಲ.ಆ ಕಾರಣದಿಂದ ಈ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆ ಭಾಗದ ಕವಿಗಳಿಗೆ ಈ ಕಾವ್ಯ ಪ್ರೇರಣೆ ಆ ಘಟ್ಟದಲ್ಲಿ ತಲುಪಲೇ ಇಲ್ಲವೆಂದು ವಿಷಾದದಿಂದ ಹೇಳಬೇಕಾಗಿದೆ.(ಅದನ್ನು ಬೇರೆ ವಿಧಾನದಲ್ಲಿ ನಂತರ ಚರ್ಚಿಸೋಣ)

1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ನ ಮಹಾ ಅದಿವೇಶವು ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಅಲ್ಲಿ *ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು* ಎಂದು ಹುಯಿಲ್ ಗೋಳ ನಾರಾಯಣರಾಯರು  ಹಾಡಿದಾಗ ಇದು ಏಕಕಾಲಕ್ಕೆ ಕನ್ನಡ ನಾಡು ಹಾಗೂ ರಾಷ್ಟ್ರ ಅಭಿಮಾನದ, ಸ್ವಾತಂತ್ರದ ಕನಸುಗಳಿಗೆ ರೆಕ್ಕೆ ಕಟ್ಟಿದ ಅನುಭವ ಮೂಡಿಸಿದ್ದು ಮರೆಯಲಾಗದಂತಹದು ಎಂದು ಅನೇಕ ಕಡೆ ಉಲ್ಲೇಖಿಸಲಾಗಿದೆ.

ಮುಂದೆ 1929ರಲ್ಲಿ ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ವರಕವಿ ಬೇಂದ್ರೆಯವರು 

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ 
ಮಂಡಲ ಗಿಂಡಲುಗಳ ಗಡಮುಕ್ಕಿ
ತೇಲಿಸಿ ಮುಳುಗಿಸಿ ಖಂಡ ಖಂಡಗಳ 
ಸಾರ್ವಭೌಮರಾ ನೆತ್ತಿಯ ಕುಕ್ಕಿ 
ಹಕ್ಕಿ ಹಾರುತಿದೆ ನೋಡಿದಿರಾ !

ಎಂದು ಆಗಿನ ಬ್ರಿಟಿಷ್ ಸಾಮ್ರಾಜ್ಯದ ಕೊನೆಯ ದಿನಗಳು ಸಮೀಪಿಸಿವೆ ಎಂದು  ಹಾಡುವ ಮೂಲಕ ಇಡೀ ಕನ್ನಡದ ನೆಲದ ತುಂಬಾ ತಮ್ಮ ಕವಿತೆಯ ಮೂಲಕ ತಮ್ಮ ಸ್ವಾತಂತ್ರ್ಯದ ರೊಚ್ಚು ಕೆಚ್ಚು ತೋರಿ ಹೋರಾಟಕ್ಕೆ ಅಪಾರ ಬಲ ತುಂಬಿದ್ದರು.

ಸ್ವರಾಜ್ಯಾಭಿಲಾಷಿಗಳಿಗೆ ಸರಕಾರದ ಸಹಾಯ ತೊರೆದ ವೀರ ಭಾರತೀಯರಿಗೆ…ಅಭಿನಂದಿಸುವ ಮೂಲಕ ಪರಕೀಯರ ಪಾದ ತೊಳೆಯದೇ ಹೊರಬನ್ನಿ ಎಂಬ ಆಶಯದ ಕವಿತೆ ರಚಿಸಿದ್ದ ಭಾರತಿ ಕಾವ್ಯನಾಮದ ತಿರುಮಲೆ ರಾಜಮ್ಮ ಒಬ್ಬ ಮಹಿಳಾ ಕವಿಯಾತ್ರಿಯಾಗಿ ಹೋರಾಡಿದ್ದು ನೆನೆಯಲೇ ಬೇಕಿದೆ.

 ಶಾಂತ ಕವಿಗಳು, ಮಂಜೇಶ್ವರ ಗೋವಿಂದ ಪೈ,ಪಂಜೆ ಮಂಗೇಶರಾಯರು, ಎಂ ಎಸ್ ಕಾಮತ್, ಮುದವೀಡು ಕೃಷ್ಣರಾಯರು, ಸಾಲಿ ರಾಮಚಂದ್ರರಾಯರು, ವಿಸಿಯವರು ,ಆನಂದಕಂದ, ಭಾರತಿ, ಕುವೆಂಪು, ಬೇಂದ್ರೆಯವರು,ಶ್ರೀರಂಗರು, ಕಡೆಂಗೋಡ್ಲು ಶಂಕರ ಭಟ್ರು, ದಾಮೋದರ ಬಾಳಿಗಾ ಅವರು, ದಿನಕರ ದೇಸಾಯಿ,ತಿರುಮಲೇಶ ಭಟ್ರು, ಬೆಳಗೆರೆ ಜಾನಕಮ್ಮ, ಶಿವರಾಮ ಎಕ್ಕುಂಡಿ ಅವರು, ಕಾವ್ಯಾನಂದ ಕಾವ್ಯನಾಮದ ಸಿದ್ದಯ್ಯ ಪುರಾಣಿಕರು, ಬಿ.ಎ. ಸನದಿಯವರು, ಪಂಚಾಕ್ಷರಿ ಹಿರೇಮಠರು, ಶಾಂತರಸರು, ಡಾ.ಕೆ.ಮುದ್ದಣ್ಣ, ಸಗರ ಕೃಷ್ಣಮಾಚಾರಿಯವರು, ಮಾನ್ವಿ ನರಸಿಂಘರಾವ್ ಅವರು, ಹೀಗೆ ಅನೇಕ ಹಿರಿಯ ಶ್ರೇಷ್ಠ ಕವಿಗಳು ಕನ್ನಡ ನಾಡಿನಾದ್ಯಂತ ಈ ಒಂದು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಕಾವ್ಯರಚಿಸಿದ್ದಾರೆ.ಇಲ್ಲಿ ಉಲ್ಲೇಖಗೊಂಡವರು ಸ್ವಾತಂತ್ರ್ಯ ನಂತರದಲ್ಲಿಯು ಕಾವ್ಯ ರಚಿಸಿ,ಸಂಕಲನ ಪ್ರಕಟಿಸಿ ಜನಮನದಲ್ಲಿ ಉಳಿದವರು ಮಾತ್ರ.ಆದರೆ ಇಡೀ ಕನ್ನಡದ ನೆಲದಲ್ಲಿ ನೂರಾರು ಅಜ್ಞಾತ ಕವಿಗಳು ಆ ಸಂಗ್ರಾಮದಲ್ಲಿ ತನು ಮನ ಧನ ಜೀವವೇ ತ್ಯಾಗ ಬಲಿದಾನ ಮಾಡಿ ಕಾವ್ಯ ರಚಿಸಿಯು ಕಳೆದು ಹೋಗಿದ್ದಾರೆ.ಅಂತಹ ಅಪಾರ ಕವಿಗಳಿಗೊಂದು ಶರಣು..

ಗೋವಿಂದ ಪೈಗಳು 
ಭಾರತವನುಳಿಯುತ್ತಾ ನನಗೆ ಜೀವನ ವ್ಯರ್ಥ ಎಂಬಂತೆ ಈ ಕೊರಗು ಎಲ್ಲರದಾಗಿತ್ತು. ಆಗ ಇಡೀ ಜನ ಸಮೂಹ,
*ಮಾತೃಭೂಮಿ ಜನನಿ 
ನಿನ್ನ ಚರಣ ಸೇವೆ ಮಾಡುವಾ
@

ವಿಜಯೀ ವಿಶ್ವ ತಿರಂಗಿ ಪ್ಯಾರಾ
ಝೆಂಡಾ  ಊಂಚ ರಹೇ ಹಮಾರಾ..
@

ಚರಕ ಚಲಾ ಚಲಾ ಚಲಾಕೆ
ಲೇಂಗೇ ಸ್ವರಾಜ ಲೇಂಗೇ…

ಎಂದು ಹಾದಿ ಬೀದಿಯಲ್ಲಿ ಗುಂಪು ಗುಂಪಾಗಿ ಹಾಡುತ್ತಿದ್ದರಂತೆ.ಈ ಸಂದರ್ಭದಲ್ಲಿ ಲಾವಣಿ ಹಾಡುಗಳು, ಜನಪದ ಹಾಡುಗಳು ಸಹ ಜನ ಜನಿತವಾಗಿವೆ.

ಕವಿ ವೆಂ.ಸೀ.ರಾಘವ ಅವರ ಹಾಡು ಕವಿತೆಯ ಸಾರ್ಥಕತೆಯನು ಬಿಂಬಿಸುವಂತೆ ಈ ಕೆಳಗಿವೆ.

ಹಾಡು ಕಟ್ಟುವವನು ನಾಡು ಕಟ್ಟುವನಲಾ
ಹಾಡಿನೊಳಗಡಗಿಹುದು ಮಂತ್ರ ಶಕ್ತಿ 
*ನಾಡ ನಾಳಿನ ಬದುಕು ಹಾಡಿನಲಿ ಮೂಡಿಬರೆ *ಹಾಡಿನಿಂದಾಗದೇ ನಾಡ ಮುಕ್ತಿ?*
@

ದೇವನನು ಪೂಜಿಸಲು ಹಾಡು ಹೂವಿನ ಹಾರ 
ನಾಡ ನೆಚ್ಚರಿಸಲೇ ಕಹಳೆ-ಕೂಗು
ಭಾವುಕರ ರಂಜಿಸಲು ಭಾರತೀಯ ಕೈವೀಣೆ
ಜನಮನವ ಮಸೆಯ ಮೇಲಾದ ಸಾಣೆ.

ಹೀಗೆಂದು ಕವಿತೆ ,ಹಾಡುಗಳು ಜನಮನ ತಲುಪಿ‌ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಜೀವಗಳಿಗೆ ಶಕ್ತಿ, ಭಾವಾಭಿವ್ಯಕ್ತಿ ತುಂಬಿದ್ದು ಮರೆಯಲಾಗದು.ಆ ಕಾರಣದಿಂದಾಗಿಯೇ ಕವಿ ಅನಭಿಷಿಕ್ತ ಶಾಸಕ ಅಂದರೆ ಬದುಕಿರುವವರೆಗೆ,ಮರೆಯಾದ ಮೇಲೂ ಜನರ ಧ್ವನಿ ಎಂದು ಗುರುತಿಸಲ್ಪಡುವುದು.

ತಕ್ಕಡಿ ಹಿಡಕೊಂಡು ಬೇಪಾರ ಮಾಡುತ ಬಿಳುಪಾದ ಪರಕೀಯ ಜನರೆಲ್ಲರೂ ಬಂದು ಕಕ್ಕಸ ಬಡುತಲಿ ಕೂಡಿದರು.ನಮ್ಮ ಉಕ್ಕುವ ನಾಡನು ಕೆಡಿಸಿದರು..‌

 ಎಂಬ ದುಮು ದುಮಿ ಹಾಡು ಬರೆದ ಸೀತಾತನಯ ಹಾಗೂ ನೂರಾರು ಜನಪದ ಹಾಡುಗಳು,ಗೀಗಿ ಪದಗಳು,ಕಾವ್ಯ, ಕ್ರಾಂತಿ ಗೀತೆಗಳನ್ನು ಉದಾಹರಿಸಬಹುದಾಗಿದೆ.

 ಒಟ್ಟಾರೆಯಾಗಿ ಹೇಳಬೇಕಾದರೆ ಆ ಸ್ವಾತಂತ್ರ್ಯ ಪೂರ್ವದ ರಾಷ್ಟ್ರಾಭಿಮಾನಿ ಕವಿಗಳು,ಹೋರಾಟಗಾರರು, ಕಲಾವಿದರು, ಹಾಡುಗಾರರು ಹೀಗೆ ಸೃಜನಶೀಲ ಮನಸ್ಸಿನ ಎಲ್ಲರೂ ತಮ್ಮ ಕೊಡುಗೆಯನ್ನು ತಮ್ಮ ತಮ್ಮ ಮಾಧ್ಯಮದ ಮೂಲಕ ನೀಡಿದ್ದಾರೆ.ಕೆಲವರು ಬೆಳಕಿಗೆ ಬಂದಿದ್ದಾರೆ. ಕೆಲವರು ಅವರದೇ ಕಾರಣದಿಂದ ಅಜ್ಞಾತವಾಗಿಯು ಉಳಿದಿದ್ದಾರೆ.ಅವರೆಲ್ಲರನ್ನು ನಾವು ನೆನೆಯಲೇಬೇಕಿದೆ.ಈ ಸ್ವತಂತ್ರ್ಯ ಭಾರತದಲ್ಲೇ ಎಲ್ಲವನ್ನೂ ಬರೆದು ಬದುಕುವುದು ಕಷ್ಟ ಇರುವಾಗ ಆ ಸಂದರ್ಭದಲ್ಲಿಯ ಅವರ ಪರಸ್ಥಿತಿ ಹೇಗಿರಬಹುದು.ಅಲ್ಲವೆ. 

ಒಟ್ಟಾರೆಯಾಗಿ ನಮ್ಮ ಕನ್ನಡ ಕಾವ್ಯಲೋಕದ ಆಗಿನ ಕವಿಗಳು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಕಾವ್ಯ ರಚಿಸುವ ಮೂಲಕ ತಮ್ಮ ಸೇವೆ ಸಲ್ಲಿಸಿದ್ದು ನೆನೆಯುವ ಈ ಸಂದರ್ಭ ನಿಜಕ್ಕೂ ಧನ್ಯವು.ಆಗಿನ ಮಹಾತ್ಮ ಗಾಂಧಿ ಅವರ ಹಾಗೂ ಆಗಿನ ಎಲ್ಲ ನೇತಾರರ,ರಾಷ್ಟ್ರಾಭಿಮಾನಿಗಳ ಹೋರಾಟ, ಚಳುವಳಿ, ತ್ಯಾಗ ಬಲಿದಾನ ಗಳಿಂದ ದೇಶವು ಸ್ವಾತಂತ್ರ್ಯ ವನ್ನು ದಿನಾಂಕ ೧೫-೮-೧೯೪೭ ಪಡೆಯಿತು.ಇದು ಒಂದು ಘಟ್ಟ.

@@@

ಈಗ ಇದೇ ದೇಶದ ಇನ್ನೊಂದು ಸ್ವಾತಂತ್ರ್ಯ ಹೋರಾಟದ ಕಡೆಗೆ, ಹಾಗೂ ಆ ಭಾಗದ ಹೋರಾಟಕ್ಕೆ ಕವಿಗಳ ಕೊಡುಗೆಯನ್ನು ಗಮನಿಸಬೇಕಾದುದೂ ಸಹ ಬಹುಮುಖ್ಯ ಆಗುತ್ತದೆ.

ಇಡೀ ದೇಶ ಅಂದು ಸಂಭ್ರಮದಲ್ಲಿ ಇರುವಾಗ ಹೈದರಾಬಾದ್ ಕರ್ನಾಟಕ ಎಂದು ಗುರುತಿಸಿಕೊಂಡ ಆಗಿನ ಬೀದರ, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಕವಿ ಸಾಹಿತಿಗಳು, ಸಾಮಾನ್ಯ ಜನ ಜೈ ಭಾರತ ಮಾತೆ ಎಂದು ಕೂಗಲಾಗದೇ, ತಾವು ಸಹ ತಿರಂಗಿ ಝಂಡಾ ಹಾರಿಸಲು ಸಾಧ್ಯವಾಗದೇ,ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಿದ ಸ್ವಾತಂತ್ರ್ಯ ದ ಹಕ್ಕಿಯನು ಕಾಣಲಾಗದೇ ದಾಸ್ಯದಲ್ಲೇ ಮುಂದುವರಿದ ತಮ್ಮ ದುರದೃಷ್ಟಕತೆಗೆ ಹಳಿದುಕೊಂಡರು.ಅದಕೆ ಕಾರಣ ಅಂದರೆ ಇಲ್ಲಿಯ ಆಗಿನ ಅರಸು ನಿಜಾಮನು ಭಾರತದ ಒಕ್ಕೂಟದಲ್ಲಿ ಸೇರದೇ ಸ್ವತಂತ್ರವಾಗೇ ಉಳಿದನು.ಆ ಕಾರಣ ಈ ಕನ್ನಡದ ನೆಲಕ್ಕೆ,ಈ ಭಾಗಕ್ಕೆ ಆ ಸ್ವಾತಂತ್ರ್ಯ ಸಿಗಲಿಲ್ಲ.ಇದಕ್ಕಾಗಿ ಈ ಭಾಗದ ಜನ ಇನ್ನೊಂದು ಸಂಗ್ರಾಮವೇ ನಡೆಸಬೇಕಾಯಿತು.ಅದಕ್ಕೆ ಹೈದರಾಬಾದ್ ಕರ್ನಾಟಕದ ವಿಮೋಚನಾ ಚಳುವಳಿ ಎಂದೇ ಹೆಸರು ಬಂದಿದೆ.

ಈ ಹೈದರಾಬಾದ್ ಸಂಸ್ಥಾನ ದೇಶದಲ್ಲಿ ಯೇ ಅತಿ ದೊಡ್ಡ ಸಂಸ್ಥಾನ ಆಗಿತ್ತು.೮೨೦೦೦ ಸಾವಿರ ಚದುರ ಮೈಲಿಯಷ್ಟು ವಿಸ್ತರಣೆ ಹೊಂದಿತ್ತು.೧ ಕೋಟಿ ೬೦ ಲಕ್ಷ ಜನ ಸಂಖ್ಯೆ ಆಗ ಇತ್ತು.ಮಿಕ್ಕೆಲ್ಲ ಸಂಸ್ಥಾನ ಒಕ್ಕೂಟದಲ್ಲಿ ಸೇರಿಸಿದ ಮೇಲೆ ಈ ಕಡೆ ಗಮನಿಸಲು ಸರ್ಧಾರ ಪಟೇಲರ ನಿರ್ಧಾರ ಆಗಿತ್ತು. ಅದಕೆ ಕಾರಣಗಳು ಕೆಲವು ಹೇಳುತ್ತಾರೆ.ನೆಹರುಗೆ ಕಾಶ್ಮಿರದ ಮೇಲೆ ಮೋಹವಿದ್ದಂತೆ ಮೌಂಟಬ್ಯಾಟನ್ ಗೆ ಹೈದರಾಬಾದ್ ಮೇಲೆ ಮೋಹವಿತ್ತಂತೆ.ಆ ಕಾರಣ ಒಂದಷ್ಟು ಸಮಯ ನಿಜಾಮನಿಗೆ ಬಿಟ್ಟು ಕೊಡಲಾದದ್ದು ಇಂತಹ ರಾಜಕಾರಣ ಆಗಿತ್ತು.

ಈ ಭಾಗದಲ್ಲಿ ಕನ್ನಡ ಶಾಲೆಗಳೇ ಇರಲಿಲ್ಲವೆಂದ ಮೇಲೆ ಇಲ್ಲಿ ಕನ್ನಡ ಕವಿಗಳನ್ನು ಹುಡುಕುವುದು ಕಷ್ಟ ಸಾಧ್ಯವೇ ಆಗಿತ್ತು.ಉರ್ದು ಬೋರ್ಡ ಹೊರಗೆ ಹಾಕಿ ಒಳಗೆ ಕನ್ನಡ ಕಲಿಸುವ ಒಂದೆರಡು ಭಾಲ್ಕಿ ಮಠ ಪೀಠಗಳಂತಹವು ಆಗ ಕನ್ನಡ ಉಳಿಸುವ ಕೆಲಸ ಮಾಡಿವೆ.

ಇಡೀ ಕನ್ನಡ ಸಾಹಿತ್ಯಕ್ಕೆ ಬಂದ ೧೯ ನೇ ಶತಮಾನದ ಆರಂಭದ ನವೋದಯ ಸಾಹಿತ್ಯ ನಂತರದ ನವ್ಯ ಸಾಹಿತ್ಯ ಈ ಭಾಗಕ್ಕೆ ಪರಿಚಯವೇ ಇಲ್ಲವೆಂದು ಡಾ.ಬಸವರಾಜ ಸಬರದ ಅವರು ಹೈದರಾಬಾದ್ ಕರ್ನಾಟಕ ಅಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಬಹಳ ಅರ್ಥಪೂರ್ಣವಾಗಿ ದಾಖಲಿಸಿದ್ದು ಸತ್ಯವಾಗಿದೆ.ಈ ಭಾಗದಲ್ಲಿ ಕುರಿತೋದದೆಯು ಕಾವ್ಯ ಪ್ರಯೋಗ ಪರಿಣಿತ ಮತಿಗಳ ನಾಡೆಂದು ಕವಿರಾಜಮಾರ್ಗದ ಕವಿ ಶ್ರೀ ವಿಜಯ ಹೇಳಿದಂತೆ, ಈ ಭಾಗದಲ್ಲಿ ದೇಶಿ ಕಾವ್ಯ ಪರಂಪರೆ, ಅಧುನಿಕ ವಚನ ಸಾಹಿತ್ಯ ಹರಿದು ಬಂದಿದೆ.ದುಂದುಮಿ ಹಾಡುಗಳು,ಗೀಗಿ ಪದಗಳು, ಮೂಲಕ ಈ ಹೈದರಾಬಾದ್ ವಿಮೋಚನಾ ಹೋರಾಟಕ್ಕೆ ಪ್ರೇರಣೆ ನೀಡಿವೆ.

ನಿಜಾಮನು ಒಳ್ಳೆಯ ಅರಸನೇ ಆಗಿದ್ದನೆಂದು ಹೇಳಲಾಗುತ್ತದೆ.ಆದರೆ ಆತನ‌ ಸೇನಾಧಿಪತಿ ಆಗಿದ್ದ ಕಾಸಿಂ ರಜ್ವಿ ಎಂಬ ಮತಾಂಧನು ಸ್ವಾತಂತ್ರ್ಯ ಬಯಸಿದ ಹಿಂದು ಮುಸ್ಲಿಂ ರ ಮೇಲೆ ಅನ್ಯಾಯ, ಅತ್ಯಾಚಾರ,ಹಿಂಸೆ, ದೌರ್ಜನ್ಯದ ಹೊಳೆಯನ್ನು ಹರಿಸಿದ್ದಾನೆ.ಆತನು ಪುಂಡು ಪೋಕರಿಗಳ, ರಜಾಕಾರರು ಎಂಬ ಹೆಸರಿನ ಸೈನ್ಯವನ್ನು ಕಟ್ಟಿ ಈ ಭಾಗವನ್ನು ಆಗ ನರ ರಾಕ್ಷಸನಂತೆ ಕಾಡಿರುವುದು ಅನೇಕ ಕಥೆ,ಕವನ,ಬೀದಿ ನಾಟಕಗಳ ಮೂಲಕ ಇಂದಿಗೂ ಪರಸ್ಥಿತಿಯ ಭೀಕರತೆಯಿಂದ ನೆನೆಯುವಂತಿದೆ.ಆಗಿನ‌ ಪರಸ್ಥಿತಿ ನರಕ ಸದೃಶವಾಗಿತ್ತು.ಯಾವ ಸ್ವಾತಂತ್ರ್ಯ ಸಹ ಇರಲಿಲ್ಲ.ಪ್ರಜೆಗಳಿಗೆ ಮೂಲಭೂತವಾದ ಯಾವ‌ ಸ್ವಾತಂತ್ರ್ಯ ಇರಲಿಲ್ಲ.ಸಮಾನತೆ ಬೋಧಿಸಿದ ಮುಸ್ಲೀಂ ಪತ್ರಕರ್ತನನ್ನೆ ಗುಂಡಿಟ್ಟು ಕೊಲ್ಲಲಾಗಿತ್ತು.ಇದರ ಮೇಲೆ ಪರಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದಿತ್ತು.

ಸ್ವಾಮಿ ರಮಾನಂದ ತೀರ್ಥ ರೆಂಬ ಗಾಂಧಿವಾದಿಯ ನೇತೃತ್ವದಲ್ಲಿ ಸ್ವತಂತ್ರ ಭಾರತದಲ್ಲಿ ಸೇರಲು ಜನ ತುದಿಗಾಲ ಮೇಲೆ ನಿಂತು ಹೋರಾಟಕ್ಕೆ ಇಳಿದಿದ್ದರು.ಸರ್ಧಾರ ಶರಣಗೌಡ, ಚೆನ್ನಬಸಪ್ಪ ಕುಳಗೇರಿ, ಚೆನ್ನಬಸಪ್ಪ ಬೆಟದೂರು,ವಿದ್ಯಾಧರ ಗುರೂಜಿ,ಅಚ್ಙಪ್ಪಗೌಡ ಸುಬೇದಾರ, ಬ್ಯಾರಿಸ್ಟರ್ ವೆಂಕಟಪ್ಪ ನಾಯಕ,ಭಾವು ಸಾಹೇಬ ದೇವುಳಗಾಂವಕರ,ಕುಸುಮಾಕರ ದೇಸಾಯಿ, ಹುತಾತ್ಮನಾದ ಪತ್ರಕರ್ತ ಶೋಯೋವುಲ್ಲಾಖಾನ, ಹೀಗೆ ಅನೇಕರ ನೇತೃತ್ವದಲ್ಲಿ ನಿಜಾಮನ ವಿರುದ್ಧ ಹೋರಾಟ ರೂಪುಗೊಂಡಿತ್ತು.

ಆಗ ಕವಿಗಳಾಗಿದ್ದ ಡಾ.ಸಿದ್ಧಯ್ಯ ಪುರಾಣಿಕರು, ಶಾಂತರಸರು, ಪಂಚಾಕ್ಷರಿ ಹಿರೇಮಠ ರು,ಸಗರ ಕೃಷ್ಣಾಚಾರ್ಯರು,ಮಾನವಿ ನರಸಿಂಗರಾಯರು, ಹೋಳಿಶೇಷಗಿರಿರಾವ,ವಸಂತ ಕುಷ್ಟಗಿ, ಶಾಶ್ವತ ಸ್ವಾಮಿ ಮುಕುಂದಿಮಠ, ಜಯತೀರ್ಥ ರಾಜ ಪುರೋಹಿತರು, ಎ.ಕೆ.ರಾಮೇಶ್ವರ,ಭೀಮಸೇನರಾವ ಕುಲ್ಕರ್ಣಿ,ಏಜಾಜ ತಿಮ್ಮಾಪುರಿ,ಡಾ.ಕೆ ಮುದ್ದಣ್ಣ, ದತ್ತಾತ್ರೇಯ ಹೇರೂರು, ಮಾನ್ವಿ ನರಸಿಂಗರಾವ,  ಸ್ವಾಮಿ ನಾಯಕ, ಎಂ.ಎಸ್. ಮಹಾಂತಯ್ಯ,  ರಾಘವೆಂದ್ರ ಇಟಗಿ,ಡಾ.ದೇವೆಂದ್ರಕುಮಾರ ಹಕಾರಿ,ರೇವಣಸಿದ್ದಯ್ಯ ರುದ್ರಸ್ವಾಮಿಮಠ, ಎಸ್.ಎಸ್.ಬಾಣದ, ವೀರಣ್ಣ ಪಡಿಶೆಟ್ಟಿ, ರಾಘವೇಂದ್ರ ಕುಷ್ಟಗಿ,ಹಣಮಂತರಾವ ಮಾಸ್ತರ,ಡಾ.ಮಂದಾಕಿನಿ ತವಗ , ವೆಂಕಟರಾವ್ ನಾಯಕ,ಕೃಷ್ಣರಾವ ಗಧಾರ,ನಸರತ್ ಸಂಗವಿಭುಕವಿ, ಗಾಂಧಿ ವಾದಿ ಶರಣಪ್ಪ ದೇವದುರ್ಗ, ಜನಾರ್ದನ ದೇಸಾಯಿ, ರಾಮಣ್ಣ ಹವಳಿ,ಗೊರಬಾಳ ಹಣಮಂತರಾವ,ಕೀರ್ತನ ಕೇಸರಿ ಜಯರಾಮಾಚಾರ್ಯ ಕೊಪ್ಪದ ಹೀಗೆ ಅನೇಕ ಕವಿಗಳು ಕಾಣ ಸಿಗುತ್ತಾರೆ.ಆದರೆ ಆಗಿನ ಬೀದರ ಜಿಲ್ಲೆಯಿಂದ ಒಬ್ಬ ಕವಿಯು ಸಹ ಕಾಣಬರುವದಿಲ್ಲ ಎಂಬುದು ಸಹ ಇಲ್ಲಿ ದಾಖಲಿಸಲೇ ಬೇಕಿದೆ.ಅದಕೆ ಕಾರಣ ಅಂದರೆ ಅಲ್ಲಿ ಆಗ ಕನ್ನಡ ವಾತಾವರಣದ ಕೊರತೆಯೋ ಅಥವಾ ನಿಜಾಮ ಸರ್ಕಾರದ ಕೆಂಗಣ್ಣಿನ ಕಾರಣವು ಇರಬಹುದಾಗಿದೆ.

ರೈಲ್ವೆ ಯಲ್ಲಿ ಉದ್ಯೋಗಿ ಆಗಿದ್ದ ಜಯರಾಮಾಚಾರ ಕೊಪ್ಪದ ಅವರು ರೈಲಿನಲ್ಲಿ ಬಂದ ಮಹಾತ್ಮ ಗಾಂಧಿ ಅವರಿಗೆ ಹಾರ ಹಾಕಿದ ಒಂದೇ ಕಾರಣಕ್ಕೆ ಅವರನ್ನು ಉದ್ಯೋಗ ದಿಂದ ವಜಾ ಮಾಡಿದ್ದರಂತೆ.ಮುಂದೆ ಅವರು ಸ್ವಾತಂತ್ರ್ಯ ದ ಕುರಿತು ಅನೇಕ ಹಾಡುಗಳು ,ಕೀರ್ತನೆ ರಚಿಸಿ ಜನತೆಗೆ ತಮ್ಮ ಕಾವ್ಯದ ಮೂಲಕ ಸ್ವಾತಂತ್ರ್ಯದ ಹಂಬಲಕೆ ಪ್ರೇರಣೆ ನೀಡಿದ್ದಾರೆ.

*ಮಾನ್ವಿ ನರಸಿಂಗರಾವ ಅವರ ಕವಿತೆಯೊಂದು ಹೀಗಿದೆ*.

ವಂದನೆಯೇ ಗಡ ವಂದನೆಯೇ
ವೀರ ಯೋಧರಿಗೆ ವಂದನೆಯೇ
ಗಾಂಧಿ ಮಹಾತ್ಮನಿಗೆ ವಂದನೆಯೇ
ಗಾಂಧಿ ತತ್ವಗಳಿಗೆ ವಂದನೆಯೇ
ಅನ್ನ ನೀಡುವ ರೈತನಿಗೆ ವಂದನೆಯೇ
ಈ ದೇಶ ಭಕ್ತರಿಗೆ ವಂದನೆಯೇ
ಈ ಹೋರಾಟಗಾರರಿಗೆ ವಂದನೆಯೇ
ಸ್ವಾತಂತ್ರ್ಯಕ್ಕಾಗಿ ಪ್ರಾಣ ನೀಡುತಿರುವ 
ದೇಶ ಪ್ರೇಮಿಗಳಿಗೆ ವಂದನೆಯೇ….

ಹೀಗೆಂದು ಅವರು ಅಂದಿನ ಹೋರಾಟದಲ್ಲಿ ತೊಡಗಿದ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮ ಕಾವ್ಯದ ಮೂಲಕ ಶರಣು ಕೃತಜ್ಞತೆಗಳನು ಸಲ್ಲಿಸಿದ್ದು ಗಮನಿಸುವಂತಿದೆ.

1947-48 ರಲ್ಲಿ ಪ್ರಕಟವಾದ ಮುಸುಕುತೆರೆ ಕವನ ಸಂಕಲನದಲ್ಲಿ ಈ ವಿಮೋಚನಾ ಚಳುವಳಿ ಸಂದರ್ಭದಲ್ಲಿ ಬರೆದ ಕೆಲವು ಕವಿಗಳ ಕವಿತೆಗಳು ಈಗ ಲಭ್ಯವಿವೆ.

ಉದರ ಪೋಷಣೆಗೆಂದು ಕಡಲಿನಾಚೆಯ ಜನರು
ಬಂದು ನೆಲೆ ಊರಿದರು ನಿನ್ನ ಮನೆಯಂಗಣದಿ..
ಬಗೆಬಗೆಯ ತಂತ್ರಗಳ ಆಟವನು ಹೂಡಿದರು
ನಿನ್ನಣುಗರನು ದಾಸ್ಯದಾಗರಕೆ ದೂಡಿದರು
ಸ್ವಾತಂತ್ರ್ಯ ಸುರಮನೆಯ ನರಕವನು ಮಾಡಿದರು
ಪರತಂತ್ರ ಹರಿದೊಗೆದಯ ಬಯಸುವ ನಾಡವರ
ಸೆರೆಮನೆಗೆ ದೂಡುವರು…
…ನಾಡು ಕಾಡಾಯ್ತು  ಒಡಕುಗಳ ಬೀಡಾಯ್ತು
ಬಡತನಕೆ ತವರಾಯ್ತು ಪರತಂತ್ರ ಸ್ಥಿರವಾಯ್ತು
ಸ್ವಾತಂತ್ರ್ಯ ಕನಸಾಯ್ತು…
ಇನ್ನೆನಿತು ದಿನ ಮೌನ ನಿನ್ನ ಯಶಕಿದು ಊನ
ಭಾರತಿಯೇ ಬಾ ಹೊರಗೆ ಸೈರಣೆಯ ಮುಸುಕು ತೆಗೆ
ರಣಚಂಡಿ ನೀನಾಗಿ ಹೂಂಕರಿಸಿ ಕಣ ಕೆನೆಗೆ
ಸ್ವಾತಂತ್ರ್ಯ ದಾಹವದಿ ವೈರಿಗಳ ಬೇಗಮೊಗ
ದಾಸ್ಯದ ಮುಸುಕುತೆಗೆ….
ಶಿವಲೆಂಕ ರಾಯಚೂರು

ಇವರು ಏಕಕಾಲಕ್ಕೆ ಬ್ರಿಟಿಷ್ ಸಾಮ್ರಾಜ್ಯದ ಹಾಗೂ ನಿಜಾಮನ ವಿರುದ್ಧದ  ಎರಡು ಸಂದರ್ಭಕ್ಕೆ ಪ್ರತಿಭಟಿಸಿ ತಮ್ಮ ಕಾವ್ಯ ಕಟ್ಟಿರುವದು ಗಮನಿಸಬಹುದಾಗಿದೆ.ಈ ಭಾಗದ ಎಲ್ಲ ಕವಿಗಳು ಅತ್ಯಂತ ಸಹಜವಾಗಿ ತಮ್ಮ ಆಡು ಭಾಷೆಯಲ್ಲಿ ಕಾವ್ಯ ಕಟ್ಟಿದ್ದಾರೆ.ಇವರ ಯಾರ ಕವಿತೆಗಳಲ್ಲಿ ಕಲಾತ್ಮಕಕತೆ ಹುಡುಕಬೇಕಿಲ್ಲ.

ಈ ಮೇಲಿನ ಕವಿತೆ ಗಮನಿಸಬಹುದಾಗಿದೆ.ಒಂದು ಕಡೆ ಬ್ರಿಟಿಷ್ ಸಾಮ್ರಾಜ್ಯ ಷಾಯಿ,ಅದರ ಕೆಳಗಡೆ ನಿಜಾಮ ಸರಕಾರ,ಅದರ ಕೆಳಗಡೆ ಗೌಡ ಕುಲಕರ್ಣಿಗಳೆಂಬ, ನಿಜಾಮನಿಂದ ನೇಮಕಗೊಂಡವರು ಈ ಎಲ್ಲರ ದೌರ್ಜನ್ಯ ಸಹಿಸಿ ಬದುಕುವ ಪರಿಸ್ಥಿತಿ ಜನಗಳದಾಗಿತ್ತು.

ಆಗ ಬೇಗಂ ಪಾಕಿಸ್ತಾನ ಎಂಬ ಕವಿತೆಯನ್ನು ನಿಜಾಂ ಸರ್ಕಾರದ ವಿರುದ್ಧವಾಗಿ ಬರೆದಿದ್ದ ಶಾಂತರಸರು ಅದೇನಾದರೂ ಅವರ ಗಮನಕ್ಕೆ ಬಂದಿದ್ದರೆ ತಮ್ಮ ಕೊಲೆಯಾಗುತ್ತಿತ್ತು ಎಂದು ಈ ಬರಹದ ಲೇಖಕನಾದ ನನ್ನ ಮುಂದೆ ಸಲವು ಸಲ ಹಂಚಿಕೊಂಡಿದ್ದರು.

ಎಲ್ಲೆಡೆಯೂ ನಾಡಿನಲ್ಲಿ ನಡೆದಿಹುದು ಗೋಳಾಟ
ಬಡವ ಬಲ್ಲಿದರೆಂಬ ಭೇದಭಾವನೆಯಾಟ
ಅನ್ನವಿಲ್ಲದೇ ಜನರು ಸಾಯುತಿರೆ ಪಟಪಟ
ಆಳುವವರು ನಡೆಸಿಹರು ಕುಟಿಲ ಕಪಟದ ಮಾಟ…
ವಿಶ್ವ ಬೀಣೆಯ ಮೇಲೆ ಜನತೆ ಬೆರಳೆಳೆದು
ಹಾಡುತಿರೆ ಸ್ವಾತಂತ್ರ್ಯ ಗಾನ ಎದೆ ಬಿರಿದು
ದೂಡುತಿರೆ ಪರತಂತ್ರ್ಯ ಸತ್ಯದಿಂ ತುಳಿದು
ದನಿಗೆಟ್ಟು ಕೂಗುತಿಹೆ ಸ್ವಾರ್ಥ ಬಗಬಗೆದು…
ಎಲ್ಲರೊಡನೊಡಗೂಡು ದೊರಕುವುದು ಜಯಮಾಲೆ
ಇಲ್ಲದಿರೆ ಇಹುದೆಂದಿಗೂ ನರಕ ನೆಲೆ
ತಿಳಿ ನಿನ್ನ ನೀ ನಿನಗಿಹುದು ಹಾಲ್ಜೇನ
ಸುಖ ಶಾಂತಿ ಪಡೆವೆ ಬೇಗಂ ಪಾಕಿಸ್ತಾನ!!

ಹೀಗೆಂದು ನಿಜಾಂನನ್ನು ಪಾಕಿಸ್ತಾನದ ಬೇಗಂ ಆಗಿಸಿ ಬಹುದೊಡ್ಡ ಕವಿತೆ ಬರೆದು ಆಗಿನ ಇಲ್ಲಿಯ ಪರಿಸ್ಥಿತಿಯನ್ನು ಕಟ್ಟಿಕೊಟ್ಟಿದ್ದಾರೆ.ಕೇವಲ ಕವಿತೆ ಬರೆದು ಸಹ ಕೂಡದೇ ಶಾಲೆಯಲ್ಲಿ ವಂದೇಮಾತರಂ ಕೂಗಿ ಶಾಲೆಯಿಂದ ಹೊರ ಹಾಕಿಸಿಕೊಂಡಿದ್ದಾರೆ.ಮುಂದೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ತಮ್ಮ ಊರಿನಲ್ಲಿ ಬಾರತದ ಧ್ವಜ ಹಾರಿಸಿ ಲಾಟಿ ಏಟು ತಿಂದಿದ್ದಾರೆ.ಇವರು ಕಾವ್ಯ ಮತ್ತು ತಮ್ಮ ಕಥೆಗಳ ಮೂಲಕ ಆ ಕಾಲದ ಚರಿತ್ರೆಯನ್ನು ಕಣ್ಢ ಮುಂದೆ ನಿಲ್ಲುವಂತೆ ಕಟ್ಟಿಕೊಟ್ಟಿದ್ದಾರೆ.

ಕಾವ್ಯಾನಂದ ಕಾವ್ಯನಾಮದ ಸಿದ್ದಯ್ಯ ಪುರಾಣಿಕ ರ ಸಲಾಂ ಸಾಬ ಹಿಂದು ಮುಸ್ಲಿಂ ರ ಭಾವನಾತ್ಮಕ ಸಂಬಂಧ ದ ಹಿನ್ನೆಲೆಯಲ್ಲಿ ಬರೆದ ಕವಿತೆ ಆಗಿದೆ.ನಿಜಾಮ ಆಗಲಿ, ಕಾಸಿಂ ರಜ್ವಿ ಆಗಲಿ ಮುಸ್ಲಿಂ ಆಳರಸರಾಗಿದ್ದ ಕಾರಣದಿಂದ ಇಲ್ಲಿ ಹಿಂದು ಮುಸ್ಲಿಂ ದ್ವೇಷ ಬೇಡ ಎಂಬ ಸೌಹಾರ್ದತೆಯ ಹಾಗೂ ಈ ನೆಲಕ್ಕೆ ವಿಮೋಚನೆ ಬೇಕೆ ಬೇಕು ಎಂಬ ಹಿನ್ನೆಲೆಯಲ್ಲಿ ಈ ಕವಿತೆ ಇದೆ.ಅನಗತ್ಯ ದ್ವೇಷ ಬೇಡ ಎಂಬುದು ಈ ಕಾವ್ಯದ ಮೂಲ ಆಶಯ.

ಸ್ವ ಸ್ತ್ರೀಯ ಬಚ್ಚಿಟ್ಟು ಪರಸ್ತ್ರಿಯರನು ಕಂಡು ಕೆರಳುವುದು ಕಾಮೇಚ್ಚೆ! ಹಿಂದುಗಳ ಕಂಡೊಡನೇ ಎಂದಿವರ ನುಂಗುವೆನು ಎಂದು ತಳಮಳಿಸುವನು! ಭಾರತದ ವೈರಿಯಿವ! ಹಾವ್ಗೆ ಹಾಲೆರೆಯದಿರು! ಇತ್ತಂಡದಲಿ ಸಿಕ್ಕು ಮನಕೆ ಕವಿಯಿತು ಮಂಕು ಶತಮಾನ ಕಳೆದರೂ ಭಾರತವ ನಮ್ಮದಲೆ ಮಕ್ಕೆಯಿಹ ದಿಕ್ಕಿಗೇ ಕಣ್ಣಿಟ್ಟು ನೋಡಿ ಕೂಳಿಕ್ಕಿ ಸಲಹಿದ ನಾಡಿನೊಕ್ಕಟ್ಟ ಮುರಿದವರು ತಕ್ಕವರೇ ಕರುಣೆಗೆ ? ಸಾಯಲಿವರಿದೆ ರೀತಿ! ಎಂದು ಗುಡುಗಿದ ದನಿಗೆ -“ಕನಲದಿರು ಕರುಣೆಯೇ,

ಭಾರತದ ವೈರಿಗಳು ಬಡ ತುರುಕರಲ್ಲ!ಸಿರಿ ತಲೆಗೇರಿ ಕುಣಿಯುತಿಹ ಸ್ವಾರ್ಥಿಗಳು ಕೆಲವು ಜನ;

ಬಡ ತುರುಕ ಬೇಡುವುದು ಅನ್ನ – ಅಲ್ಲ ಪಾಕಿಸ್ತಾನ! ಇವರೊಡನೆ ದ್ವೇಷವೇ? ನಾಲ್ಕಾಣೆಯನ್ನಿತ್ತೆ;”ಸಲಾಮ ಸಾಬ” ಅವನ ಹಿಗ್ಗನು ಕಂಡು ಹಿಗ್ಗಿತೆನ್ನೆದೆ! ಇಂದು ಹೊಟ್ಟೆ ತುಂಬಾ ಉಣ್ಣುವನು ಹಸಿದ ಜೀವಿ! ಹುಟ್ಟಿ ನೊಳಗಿರಬಹುದು- ಹಸಿದ ಹೊಟ್ಟೆಯಲಿ ಕುಲವುಂಟೆ…ಸಲಾಮಸಾಬ..ಸಲಾಮ ಸಾಬ.

ಹಸಿದ ಬಡ ಮುಸ್ಲಿಂನಿಗೆ ಹೊಟ್ಟೆ ತುಂಬಾ ಅನ್ನಬೇಕೆ ಹೊರತು ಪಾಕಿಸ್ತಾನ ಅಲ್ಲ.ಹಸಿವೆಗೆ ಕುಲವುಂಟೇ ಎಂದು ಕೇಳುವ ಮೂಲಕ ಆ ಜನರ ನಯ ವಿನಯದ ಬಗ್ಗೆ ಒಳ್ಳೆಯತನದ ಬಗ್ಗೆ ಸಲಾಂ ಸಾಬ ಎಂದು ಅವರು ನೀಡುವ ಗೌರವದ ಹಿನ್ನೆಲೆಯಲ್ಲಿ ಮತಿಯ ಸಾಮರಸ್ಯ ಹಾಗೂ ನಿಜಾಮನ ವಿರುದ್ಧದ ಹೋರಾಟವನು ಸಹ ಈ ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.

@

ಹಿಂದು ಮುಸ್ಲಿಂ ಕ್ರೈಸ್ತ ಫಾರ್ಸೀ ಲಿಂಗಾಯತರ್ ಒಂದಾಗಿ ಭಾರತ ಸ್ವಾತಂತ್ರ್ಯ ಕಾಣುವರ್ ಮತವೆಂಬುದೇ ರಾಜ್ಯ; ಮತವೆಂಬುದೇ ಧರ್ಮ ಎಲ್ಲ ಮತಗಳ್ ತಮ ತಮಗೆ ರಾಜ್ಯವನು, ಧರ್ಮವನು, ತತ್ವಗಳ ಬೇಡುತ್ತ ಕಲಹಗಳನೆಸಗುತ್ತಾ ಭಾರತದ ಸ್ವಾತಂತ್ರ್ಯ ಮಣ್ಣು ಮಾಡಿಹರು! ಎಲ್ಲ ಮತ ಅಲ್ಲಿರಲಿ; ಧರ್ಮ ಮಲಗಿರಲಿ

ಎಂದು *ವಿ.ಎಂ.ಗುಂಡಾಚಾರ್ಯ* ಎನ್ನುವ ಕವಿಗಳು ಈ ಸಂದರ್ಭದಲ್ಲಿ ಕಟ್ಟಿದ ಕವಿತೆಯಲಿ ನಿಮ್ಮ ನಿಮ್ಮ ಧರ್ಮಕ್ಕಾಗಿ ಹೊಡೆದಾಡಬೇಡಿ.ಸ್ವಾತಂತ್ರ್ಯಕ್ಕಾಗಿ ಹೋರಾಡಿ ಎಂಬ ಕಳಕಳಿ ಹೊಂದಿದ್ದಾರೆ.ಇವರಿಗೆ ಆಗಿನ ಜಾಗತೀಕ ಹಾಗೂ ದೇಶದೊಳಗಿನ ಎಲ್ಲ ವಿದ್ಯಾಮಾನಗಳು ಬಲ್ಲವರಾಗಿದ್ದರು ಎಂಬುದು ಅವರ ಪೂರ್ಣ ಕವಿತೆ ಧ್ವನಿಸುತ್ತದೆ.ಫ್ಯಾಸಿಜಂ,ನಾಝಿಜಂ,ಸೋಸಿಯಾಲಿಜಂ, ಕಮುನಿಜಂ ಹೀಗೆ ಎಡಪಕ್ಷಗಳು,ಬಲಪಕ್ಷಗಳ ಉದಾಹರಣೆ ನೀಡಿ ಈ ದ್ವೇಷ ನಿಲ್ಲಿಸಿ ದೇಶದಲ್ಲಿ ಶಾಂತಿ ನೆಲೆಸುವಂತಾಗಲಿ ಎಂದು ಹಂಬಲಿಸಿದ್ದು ವಿಶೇಷವಾಗಿದೆ.

ಸರುವವೆಡೆಗೈದನತಿ ಉಗ್ರತರ ಭಾಷಣ ಸರುವರಲಿ ತುಂಬಿದನು ಜೀವಕಳೆ ಹುರುಪುಗಳ ಸರ್ವ ವಿಧದಿಂದ ಗೈದನು ಸಿದ್ಧತೆಗಳನು ಸೆರೆಗೆ ಸಿದ್ದಾಯ್ತು ಜನ ತೋರಿದೆಲ್ಲ ಹಂಗುಗಳ ಹೀಗೆಂದು ಕವಿ ದತ್ತಾತ್ರೇಯ ಹೇರೂರು ಅವರು ಆಗಿನ ಹೈದರಾಬಾದ್ ಕರ್ನಾಟಕದ ವಿಮೋಚನಾ ಹೋರಾಟದ ಮುಂಚೂಣಿಯಲ್ಲಿ ಇದ್ದ ಸ್ವಾಮಿ ರಮಾನಂದ ತೀರ್ಥ ರ ಕುರಿತು ಅವರ ಹೋರಾಟದ ಹಿನ್ನೆಲೆಯಲ್ಲಿ ಕಾವ್ಯರಚಿಸಿದ್ದಾರೆ.ಆಗಿನ ಸಾಮಾನ್ಯ ಜನರಿಗೆ ತ್ಯಾಗ ಬಲಿದಾನಗಳಿಗೆ ಅಣಿ ಮಾಡುವುದು ಸಾಮಾನ್ಯ ಸಂಗತಿ ಆಗಿರಲಿಲ್ಲ.

ಹಾವಳಿಯೊಳಗೆ ರಜಾಕಾರರ 
ಕಾವಲಿಗೈದರು ಸೇರಿ ಸಿಬಿರ ಸಾವಿಗೆ
ಬೆದರದೆ ಎದುರಿಸಿ ಸರಕಾರ 
ಜೀವತೆತ್ತರು ಬಲಿದಾನ ಭಟರು…

ಹೀಗೆ ಇವರು ಶಾಲೆಯ ಲಾವಣಿಗಳನ್ನು ಸಹ ರಚಿಸಿ ಆಗ ರಜಾಕಾರರ ವಿರುದ್ಧ ಹೋರಾಡಲು ಗುಪ್ತವಾಗಿ ನಡೆಸುತ್ತಿದ್ದ ಸೇನಾ ಶಿಬಿರ ಸೇರಿ ಬಲಿದಾನ ನೀಡಿದವರ ಕುರಿತು ಜನಮಾನಸಕ್ಕೆ ತಿಳಿಸುವ ಅನೇಕ ಹಾಡು ಹಾಗೂ ಕವಿತೆಗಳನ್ನು ರಚಿಸಿದ ಕವಿಯಾಗಿದ್ದಾರೆ.

*ಸ್ವಾಮಿನಾಯಕ ಎಂಬ ಕವಿ..*. ಉಸ್ಮಾನಿಯಾ ವಿವಿಯ ಗ್ರಂಥಾಲಯ ದಲ್ಲಿ ಕೆಲಸ ಮಾಡುತ್ತಿದ್ದು ಸಹ ಹೋರಾಟದ ಕವಿತೆಗಳನ್ನು ರಚಿಸಿದ್ದರು.

ಎನ್ನ ಕರುಳಿನ ಮಾಲೆ ನಿನ್ನ ಶಿರದೊಳಗಿಟ್ಟು ನರಗಳನು ಬಗೆದೊಂದು ವೀಣೆಯನು ಮಾಡಿ ನಿನ್ನ ಗುಣಗಳ ಹಾಡಲೇನಮ್ಮತೆಗೆದಿಡಲೇ ಶಿರಕಮಲ ನಿನ್ನಡಿಯೊಳಮ್ಮನಿನ್ನ ಮಗನಲ್ಲವೇನಮ್ಮ ನಾನು ವರದ ಹಸ್ತವನಿಟ್ಟುಕಳುಹಮ್ಮ ನೀನು ತಾಯೇ…ಎಂದು ಕೇಳುವ ಮೂಲಕ ಕನ್ನಡಾಂಬೆ ಹಾಗೂ ಭಾರತಾಂಬೆಯನು ಏಕಕಾಲಕ್ಕೆ ಸ್ಮರಿಸಿ ತಾಯಿಯ ಮೂಲಕ ತನ್ನ ಅರ್ಪಣೆಯ ಮನೋಭಾವದ ಮೂಲಕ ಅಪ್ರತಕ್ಷವಾಗಿ ಸ್ವಾತಂತ್ರ್ಯ ದ ಹಂಬಲ ವ್ಯಕ್ತ ಪಡಿಸಿದ್ದು ಗಮನಿಸಬೇಕಿದೆ.

ರಾಘವೇಂದ್ರ ಇಟಗಿ:-ಸ್ವಾತಂತ್ರ್ಯದ ಆಂದೊಲನದಲ್ಲಿಯು ಬೆಂದವರು.ನಂತರ ಹೈದರಾಬಾದ್ ನಿಜಾಮನ ಸಂದರ್ಭದಲ್ಲಿ ಸಾಕಷ್ಟು ಕವಿತೆಗಳನ್ನು ರಚಿಸಿದ್ದಾರೆ.ಆದರೆ ಕವಿತೆಗಳು ಅಲಭ್ಯವಾಗಿವೆ…ಕ್ಷಿತಿಜ ಕೋದಂಡ ಎಂಬ ಕೃತಿ ಯಲ್ಲಿ ಅವರ ಕವಿತೆಗಳಿವೆ.

ಡಾ.ದೇವೆಂದ್ರ ಕುಮಾರ ಹಕಾರಿ- ಜಾನಪದ ಸಾಹಿತ್ಯದಲ್ಲಿ ಅಪಾರ ಹೆಸರು ಮಾಡಿದ ಇವರು ಹೈಕದವರು.ಆದರೆ ಬಹಳ ಜನ ಇವರನ್ನು ಧಾರವಾಡದವರೆಂದು ಬಗೆಯುತ್ತಾರೆ.ಇವರ ಬಿಡುಗಡೆ ಸಂಕಲನದಲ್ಲಿ ಅನೇಕ ಸ್ವಾತಂತ್ರ್ಯ ದ ಹಂಬಲದ ರೊಚ್ಚು ಕೆಚ್ಚು ತುಂಬಿದ ಕವಿತೆಗಳಿವೆ ಎಂದು ಕೇಳಿಬರುತ್ತದೆ.ದೈವಭಕ್ತಿ, ದೇಶಭಕ್ತಿ,ಕಾಣುತ್ತೇವೆ.

ಡಾ.ಪಂಚಾಕ್ಷರಿ ಹಿರೇಮಠ ಅವರು ಸ್ವಾತಂತ್ರ್ಯ ಹೋರಾಟ ಹಾಗೂ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅನೇಕ ಕವಿತೆ ರಚಿಸಿದ್ದಾರೆ.ಸ್ವಾಮಿ ರಾಮಾನಂದ ತೀರ್ಥರ  ಮುಂದಾಳತ್ವದಲ್ಲಿ ವಿದ್ಯಾರ್ಥಿ ದಿಸೆಯಲ್ಲಿ ಸೇರಿ  ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಕೊಪ್ಪಳದ ಐತಿಹಾಸಿಕ ಕೋಟೆಯ ಜಿಲ್ಲಾಧಿಕಾರಿ ಕಚೇರಿ ಮೇಲೆ  ಭಾರತದ ಧ್ವಜ ಹಾರಿಸಿ ಅಲ್ಲಿಯ ಕಾವಲುಗಾರರಿಂದ ತಪ್ಪಿಸಿಕೊಂಡು ಮುಂದೆ ಕ್ರಾಂತಿಕಾರಿ ಸಂಘಟನೆ ಸೇರಿ ಹೈದರಾಬಾದ್ ವಿಮೋಚನಾ ಆದಮೇಲೆಯೇ ತಮ್ಮ ಊರಿಗೆ ಮರಳಿದ ಕವಿ ಹಾಗೂ ಕಲಿ ಇವರು.ಇವರ ಕವಿತೆಗಳು ನೂರಾರು ಸಂಖ್ಯೆಯಲ್ಲಿ ಇವೆ.ಇಂದಿಗೂ ಧಾರವಾಡ ದಲ್ಲಿದ್ದದೂ ಸಂತಸ ಹಾಗೂ ಅಭಿಮಾನದ ಸಂಗತಿ ಆಗಿದೆ.

*ನಿನ್ನ ಕೃಪೆಯಿಂದ ಕತ್ತಲೆಯು ಸತ್ತು ಚುಕ್ಕೆಗಳು ಕರಗಿ ಬೆಳಕಿನ ಧಾರೆಯಾಗಿ ಲೋಕದ ಬೀದಿ ಬೀದಿಯ ತುಂಬಾಬೆಳಂ ಬೆಳಕು ಸುರಿದಿದೆ ಕೆಳದಿ… ಎಂದು ವಿಮೋಚನೆ ನಂತರ ಸಂತಸದಿ ಹಂಚಿಕೊಂಡ ಕವಿತೆಯ ಸಾಲಿರಬಹುದು ಇದು.

ಹೀಗೆ ಹುಡುಕುತ್ತಾ ಹೋದರೆ ಇನ್ನೂ ಅನೇಕ ಕವಿಗಳು ಹೈದರಾಬಾದ್ ವಿಮೋಚನಾ ಚಳುವಳಿ ಭಾಗವಹಿಸಿ ಭಾರತದ ಗಣತಂತ್ರದ ಒಳಗಡೆ ಸೇರಲು ಬಯಸಿ ಅಪಾರ ಸಾವು ನೋವು ಅತ್ಯಾಚಾರ ಅನಾಚಾರ ಲೂಟಿಗೆ ಒಳಗಾದ ಜನರ ನೋವುಗಳು ಕಾವ್ಯವಾದದ್ದು ನಮಗೆ ಇನ್ನೂ ಹಸಹಸಿಯಾಗಿ ಕಾಣಸಿಗುತ್ತವೆ.ಆ ಕಾಸಿಂ ರಜ್ವಿಯ ರಜಾಕಾರರಲ್ಲಿ ಕೇವಲ ಮುಸ್ಲಿಂರು ಇರಲಿಲ್ಲ. ಸಮಾಜಘಾತುಕರೆಲ್ಲ ಅದರಲ್ಲಿ ಸೇರಿದ್ದರು.ಹಾಗಾಗಿ ಈ ಹೈದರಾಬಾದ್ ಕರ್ನಾಟಕದ ಜನತೆಗೆ ಅದೊಂದು ಕರಾಳ ಅಧ್ಯಾಯ.ಕೆಲವು ಮರೆಯುವದರಲ್ಲಿ ಸುಖವಿದೆ ಅನ್ನುತ್ತಾರಲ್ಲ.ಹಾಗೇ ಇವು ಮರೆತು ನಾವೆಲ್ಲ ಇಂದು ಹಿಂದು ಮುಸ್ಲಿಂ ಭಾಯಿ ಭಾಯಿ ಆಗಿ ಸೌಹಾರ್ದತೆಯ ಜೀವನ‌ ನಡೆಸಬೇಕಿದೆ.ಅದೇ ಮಾನವೀಯತೆಯ ಆಶಯವಾಗಿದೆ.


ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು & ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರು ಬೆಂಗಳೂರು, ಕಾವ್ಯಾಲಯ,ಲಕ್ಷ್ಮೀ ನಗರ, ಅಂಚೆ-ಶಹಾಪುರ-585223, ಯಾದಗಿರಿ ಜಿಲ್ಲೆ ,9945922151

About The Author

1 thought on “ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ..(ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಮಂಡಿಸಿದ ಪ್ರಬಂಧ)ಲೇಖಕರು-ಡಾ.ಸಿದ್ಧರಾಮ ಹೊನ್ಕಲ್”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಸರ್ ನಮಸ್ಕಾರ
    ಸ್ವಾತಂತ್ರ್ಯ ಪೂರ್ವದ ನೆನಪುಗಳನ್ನು ಅತ್ಯಂತ ಸವಿಸ್ತಾರವಾಗಿ ನವೋದಯ ಹಾಗೂ ನವೋದಯ ಪೂರ್ವ ಕವಿಗಳ ಕವಿತೆಗಳ ಹಿನ್ನೆಲೆಯಲ್ಲಿ ಮಾಡಿಕೊಟ್ಟಿದ್ದೀರಿ ಧನ್ಯವಾದಗಳು

Leave a Reply

You cannot copy content of this page

Scroll to Top