ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಾಲ್ಯದ ಆ ಕನಸು-ಕನವರಿಕೆಗಳು
ದಿನ- ದಿನಕ್ಕೂ ಕಮರುತ್ತಿವೆ.
ನಗು-ಉತ್ಸಾಹಗಳೇ ತುಂಬಿದ್ದ ಮುಖದಲ್ಲಿ
ಇಂದು ಬರೀ ನೋವಿನ ಗೆರೆಗಳೇ ರಾರಾಜಿಸಿವೆ.
ಇಂದೇಕೋ ಬದುಕು ಬಡವಾಗಿದೆ…!!

ಜೀವನಕ್ಕೆ ಭರವಸೆಯಾಗಿದ್ದ ಹಿರಿಯ ಜೀವಗಳು
ಕಾಲನ ಹೊಡೆತಕ್ಕೆ ಒಂದೊಂದಾಗಿ ಕಳಚಿವೆ.
ಮೊಗೆದಷ್ಟೂ ಬತ್ತದ ಅವರ ಜೀವನ ಪ್ರೀತಿ,
ಅನುಭವವಾಣಿಗಳೂ ಚಿತೆಯನ್ನೇರಿ ಅಗ್ನಿಗಾಹುತಿಯಾಗಿವೆ.
ಇಂದೇಕೋ ಬದುಕು ಬಡವಾಗಿದೆ…!!

ಬೇಸಿಗೆಗೆ ಬತ್ತಿ ಪಾತಾಳಕ್ಕಿಳಿದ ಬಾವಿಯ ನೀರಿನಂತೆ
ಬದುಕಿನ ಈ ದು:ಖದ ದಾವಾಗ್ನಿಗೆ ಕಣ್ಣೀರುಗಳೂ ಬತ್ತಿವೆ.
ಹತಾಶೆ-ನಿರಾಶೆಗಳೇ ಬದುಕಿನ ಬಹುಪಾಲು ಆವರಿಸಿವೆ.
ಜೀವನದ ನಶ್ವರತೆ ಮತ್ತೊಮ್ಮೆ ಬಯಲಾಗಿದೆ.
ಇಂದೇಕೋ ಬದುಕು ಬಡವಾಗಿದೆ…!!

ಎಲ್ಲವನ್ನೂ ಎದುರಿಸಬಲ್ಲೆ ಎಂಬ ಧೈರ್ಯ
ಉಡುಗಿ, ಮನಸ್ಸು  ಭಾವೋದ್ವೇಗದಿಂದ ಕಂಪಿಸಿದೆ.
ಕುಳಿತರೆ ಕುಸಿದ ಅನುಭವವಾಗುತ್ತಿದೆ.
ನಡೆದರೆ ನೆಲವೇ ನುಂಗುವ ಭಾವ ಆವರಸಿದೆ.
ಇಂದೇಕೋ ಬದುಕು ಬಡವಾಗಿದೆ…!!

ಬದುಕಿಗೆ ಜೀವಾಳವಾಗಿದ್ದ ಮಾತುಗಳೂ ಬರಿದಾಗಿವೆ.
ಮನಸ್ಸು ತಲ್ಲಣಿಸಿ ಮೌನಕ್ಕೆ ಹಂಬಲಿಸಿದೆ.
ದೇಹವೂ ಬಳಲಿ ಬೆಂಡಾಗುತ್ತಿದೆ.
ಬದುಕು ಅದೇಕೋ ಬರಡಾಗಿದೆ…!!
ಇಂದೇಕೋ ಬದುಕು ಬಡವಾಗಿದೆ…!!


About The Author

6 thoughts on “ಸುನೀಲ ಕುಮಾರ ದೇಸಾಯಿ ಅವರ ಕವಿತೆ-ಬದುಕು ಬಡವಾಗಿದೆ…!!”

      1. ತಮ್ಮ ಪ್ರೋತ್ಸಾಹ ಹಾಗೂ ಪ್ರಶಂಸೆಗೆ ಅನಂತ ಧನ್ಯವಾದಗಳು ಸರ್…

  1. ಸೂಪರ್ ಸರ್ ಜೀವನದಲ್ಲಿ ಏನೇ ಕಷ್ಟ ಬಂದರು ಬದುಕಿ ಬಾಳಬೇಕೆಂಬುದನ್ನು ಕವಿತೆ ಮುಖಾಂತರ ತಿಳಿಸಿದಿರಿ

Leave a Reply

You cannot copy content of this page

Scroll to Top