ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
ʼಅವಳೆಂದರೆʼ

ಚೆಲುವಿನ ಸಿರಿ
ಒಲವಿನ ಝರಿ
ಪ್ರೇಮದ ಗಿರಿ.!
ಅವಳೆಂದರೆ….
ಮೋಹಕ ತಾರೆ
ಚುಂಬಕ ಧಾರೆ
ಪ್ರೀತಿಯ ನೀರೆ.!
ಅವಳೆಂದರೆ…
ಬಳಲದ ಮಾಧುರ್ಯ
ಬಾಡದ ಸೌಂದರ್ಯ
ಬತ್ತದ ಔದಾರ್ಯ.!
ಅವಳೆಂದರೆ…
ಇಂಪಿಡುವ ಗಾನ
ಕಂಪಿಡುವ ಮೌನ
ತಂಪಿಡುವ ಧ್ಯಾನ
ಬದಲಾದರೂ ಕಾಲ
ರೀತಿ ಪ್ರತೀತಿ ಜಾಲ
ಅವಳಂದಿಗು ಇಂದಿಗು
ಬದಲೇ ಆಗದ ಅದೇ..
ಸತ್ಯ ಅನುರಾಗಶಿಲ್ಪ.!
ಅಕ್ಕರೆ ಸಕ್ಕರೆಯ
ನಿತ್ಯ ಚೈತನ್ಯರೂಪ.!
ಮಾಸದ ಮಸುಕಾಗದ
ಪ್ರೀತಿಯ ಸ್ವರೂಪ.!
ಆರದೆ ಅಳಿಯದೆ
ಬೆಳಗುವ ಚಿರದೀಪ.!
ಅವಳೆಂದರೆ……
ಉಪಮೆಗಳಿಗೆ ಸಿಗದ
ಜೀವದ ಒಲುಮೆ.!
ಭಾವದ ಚಿಲುಮೆ.!
ಅವಳೆಂದರೆ……
ಅವಳು ಅವಳಷ್ಟೆ..!!
ಭಾಷಾತೀತ ಪದಾತೀತ
ಹೃದ್ಯ ಜೀವಭಾವಾಂಬುಧಿ.!!!
ಎ.ಎನ್.ರಮೇಶ್. ಗುಬ್ಬಿ.




