ನಾನೆಲ್ಲಿದ್ದೇನೆ?‌ ಜಯಂತಿ ಕೆ.ವೈ ಅವರ ಕವಿತೆಯ ಪ್ರಶ್ನೆ!

ವಿಶಿಷ್ಟ ಗುರುತಿನ ಸಂಖ್ಯೆ
ಶಾಶ್ವತ ಖಾತೆ ಸಂಖ್ಯೆ
ಪಡಿತರ ಚೀಟಿ
ಗುರುತಿನ ಚೀಟಿ
ಅಂಕಪಟ್ಟಿಯ ದಿನಾಂಕಗಳಲ್ಲಿ
ಹರಿದುಹಂಚಿ ಹೋಗಿರುವ ನಾನು
ನನ್ನನ್ನು ಹುಡುಕುತ್ತಿದ್ದೇನೆ.

ಭಾವಕ್ಕೂ ಬುದ್ಧಿಗೂ ದಿನನಿತ್ಯದ ಸಂಘರ್ಷ
ಮನದ ಗದ್ದಲಕ್ಕೆ
ಮೌನದ ಹೊದಿಕೆ
ಹೊರನೋಟಕೆ ಸುಲಭವಾಗಿ ದಕ್ಕದ
ನನ್ನೊಳಗಣ ನಾನು
ನನ್ನನ್ನು ಹುಡುಕುತ್ತಿದ್ದೇನೆ

ನಾನಿದ್ದೇನೆಂದು ಜಾಹೀರು ಪಡಿಸುವ ನನ್ನ ಹೆಬ್ಬಟ್ಟಿನ ಗುರುತಿನ ಯಂತ್ರ
ನಾನು ಬದುಕಿದ್ದೇನೆಂದು
ಸಾಬೀತುಪಡಿಸುವ
ಉಸಿರಾಟಕ್ಕಿಂತ ಮಹತ್ವ ಪಡೆದುಕೊಂಡಾಗ
ನನ್ನೊಳಗಣ ನನ್ನನ್ನು
ನಾನು ಹುಡುಕುತ್ತಿದ್ದೇನೆ.

ನನ್ನದೇ ಇರುವು
ನನ್ನೊಳಗಿನ ಅರಿವು
ಮುಖಾಮುಖಿಯಾದ ಆ ಹೊತ್ತು
ಬರಿದೇ ಜಗತ್ತು ಬಯಲಾದಂತೆ ನನ್ನೊಳಗಣ ನಾನು ಎಲ್ಲೆಂದು ಹುಡುಕುತ್ತಲೇ ಇದ್ದೇನೆ.


Leave a Reply