ಕೌದಿ
ಸ್ಮಿತಾ ರಾಘವೇಂದ್ರ
ಮಂಚದ ಅಂಚಿನ ಮೂಲೆಯಲ್ಲೋ
ನಾಗಂದಿಗೆಯ ಹಾಸಿನಲ್ಲೋ
ತುಕ್ಕು ಹಿಡಿದ ಟ್ರಂಕಿನೊಳಗೋ ಭದ್ರವಾಗಿಯೇ ಇರುವ ಗಂಟು.
ಆಗಾಗ ಸುಮ್ಮನೇ ಎಳೆದು ತಂದು
ಗಂಟಿಗೆ ಕೈ ಹಚ್ಚಿದಾಗೆಲ್ಲ
ತರಾತುರಿಯ ಕೆಲಸವೊಂದು ಹಾಜರು
ಸಮಯ ಹೊಂದಿಸಿಕೊಂಡು
ಬಿಚ್ಚಿಕೊಳ್ಳುತ್ತವೆ ರಾಶಿ ರಾಶಿ ನೆನಪು
ಹರಿದಿಲ್ಲ,ಹುಕ್ಕು ಕಿತ್ತಿಲ್ಲ,
ಮಾಸಿದ್ದೂ ಇಲ್ಲ
ಮುದ್ದೆಯಾದ ಗೆರೆಗಳ ತುಂಬ
ಆಪ್ಯಾಯ ಕಂಪು
ಮತ್ತೆ ಹೆಗಲೇರುವ ಒನಪು
ಸಂಜೆ ಹೊತ್ತಿಗೆ ಸಾಕೆನ್ನಿಸುತ್ತದೆ
ಇಳಿಸಂಜೆಯ ಬದುಕಿನಂತೆ.
ಬಿಡಿಸಿಕೊಳ್ಳಲಾಗದ ನಂಟಿನಂತೆ
ಬಣ್ಣ ಬಣ್ಣದ ಅರಿವೆಗಳ ಅರಿಯಬೇಕು
ಇನ್ನೂ
ಬದುಕು ಸವೆದ ಪುಟಗಳ ಮಸುಕು ಅಕ್ಷರಗಳಂತೆ
ತೊಟ್ಟು ಸಂಭ್ರಮಿಸಿದ ಹಲವು ಭಾವ
ಬಿಡಲಾಗದು ಬಳಸಲಾಗದು
ಆದರೂ ಇರಬೇಕು ಜೊತೆಯಾಗಿ
ಮುದುಡಿದ ಕನಸುಗಳು.
ಹೊಸ ಭಾವ ತುಂಬುವ ಹುರುಪಿನಲಿ
ಯಾವುದೋ ಗಳಿಗೆಯಲ್ಲಿ
ಕತ್ತರಿಗೆ ಸಿಕ್ಕು ಚಂದನೆಯ ಚೌಕ ಚೌಕ
ಮತ್ತೆ ಜೋಡಿಸಿ ಅಂದ ನೋಡುವ
ಸಿಂಪಿಯ ಉತ್ಸಾಹ
ವಿಶಾಲವಾಗಿ ಹರಡಿಕೊಂಡ
ಹಳೆಯ ಹೆಂಚಿನ ಮನೆಯಂತೆ
ಆಪ್ತ ಆಪ್ತ
ಕಳೆದ ಬದುಕನ್ನೇ
ಬರಸೆಳೆದು ಹುದುಗಿಸಿ
ಮೆತ್ತಗಾಗಿಸುತ್ತವೆ
ಪ್ರತೀ ರಾತ್ರಿ.
ನೀಟಾದ ಎಳೆಗಳು ಹೇಳುತ್ತವೆ
ಮತ್ತೆ ಮತ್ತೆ ಹೊಲಿ ಬದುಕ ಕೌದಿಯಂತೆ.
*************