ದಿಕ್ಸೂಚಿ

ತೊಂದರೆ ಕೊಡಬೇಡಿ ಅಂತ ಹೇಳಿಬಿಡಿ

Achieve, Woman, Girl, Jumping, Running

ಜಯಶ್ರೀ.ಜೆ.ಅಬ್ಬಿಗೇರಿ

ಮೊದಲೇ ಓದಿನ ಒತ್ತಡ. ಇದು ಸಾಲುವುದಿಲ್ಲ ಎಂಬಂತೆ ಬಹು ದಿನಗಳಿಂದ ಬೆನ್ನು ಬಿಡದಿರುವ ಕೆಲ ವೈಯುಕ್ತಿಕ ಸಮಸ್ಯೆಗಳು. ತಲೆ ತಿನ್ನುತ್ತಿವೆ. ಒಂದಿಷ್ಟು ಹೊತ್ತು ಎಲ್ಲೋ ಒಂದು ಕಡೆ ಹೋಗಿ ಮೌನವಾಗಿದ್ದು ಬರೋಣವೆಂದರೆ ನಿಮ್ಮ ಗೆಳೆಯ/ ಗೆಳತಿ ನಿಮಗೆ ಸಂಬಂಧವಿಲ್ಲದ ಯಾವುದೋ ವಿಷಯ ಹೇಳಿ ತಲೆ ತಿನ್ನುತ್ತಿದ್ದರೆ ಕೋಪ ನೆತ್ತಿಗೇರಿ ಬಿಡುತ್ತದೆ. ಖಂಡ ತುಂಡವಾಗಿ ಹೇಳಿ ಹೊರಗೆ ಅಟ್ಟಬೇಕೆನಿಸಿದರೂ ಹಾಗೆ ಮಾಡಲು ಸಾಧ್ಯವಿಲ್ಲವೆಂದು ಹೇಗೋ ಸಹಿಸಿಕೊಳ್ಳುತ್ತೀರಿ. ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗ್ತಿದೀನಿ ಯಾವುದು ಕ್ಲಿಕ್ ಆಗುತ್ತೋ ಗೊತ್ತಿಲ್ಲ. ತರಾತುರಿಯಲ್ಲಿ ಓದಿ ಮುಗಿಸಬೇಕು ಎಂದುಕೊಳ್ಳುತ್ತಿರುವಾಗ ಪಕ್ಕದ ಮನೆಯ ಟಿವಿ ವ್ಯಾಲ್ಯೂಮ್ ಕಿವಿಗಡಚಿಕ್ಕುವಂತೆನಿಸಿ ಅಸಾಧ್ಯ ಸಿಟ್ಟು ಉಕ್ಕಿ ಬರುತ್ತದೆ. ನೆರೆಯ ಹುಡುಗರು ತಮ್ಮ ಪರೀಕ್ಷೆಗಳು ಮುಗಿದಿವೆ ಎಂಬ ಖುಷಿಯಲ್ಲಿ ಮನೆಯ ಮುಂದೆ ಜೋರಾಗಿ ಕಿರುಚುತ್ತ ಆಡುತ್ತಿವೆ. ಹೇಗೆ ಇವರಿಗೆಲ್ಲ ಬುದ್ಧಿ ಹೇಳಿ ನಾನು ಏಕಾಗ್ರತೆಯಿಂದ ಓದುವುದು? ಹೇಗೆ ?
ಅದರಲ್ಲೂ ಇಷ್ಟು ದಿನ ಮನೆಯಲ್ಲಿ ಸ್ವಂತ ಕೋಣೆಯಲ್ಲಿ ಓದಿ ರೂಢಿಯಿದ್ದವರು ಹಾಸ್ಟೆಲ್‌ಗೆ ಪಿಜಿಗಳಿಗೆ ಸೇರ್ಪಡೆಯಾದರೆ ಮುಗಿದೇ ಹೋಯ್ತು. ನಮ್ಮ ಗೋಳು ಕೇಳುವವರಾರೂ ಇಲ್ಲ ಎಂದೆನಿಸಿಬಿಡುತ್ತದೆ. ಅತಿ ಹೆಚ್ಚು ಅಂಕ ಗಳಿಸಿದವರು ಇಂಥ ಹೊಂದಾಣಿಕೆಯ ತೊಂದರೆಗಳಿಂದ ಓದಿನಲ್ಲಿ ಹಿಂದೆ ಬೀಳುವ ಪ್ರಸಂಗಗಳು ಇಲ್ಲದಿಲ್ಲ. ಬಸ್‌ನಲ್ಲಿ ಪ್ರಯಾಣಿಸುವಾಗ ಕಿಟಕಿಯಿಂದ ತೂರಿ ಬರುವ ಗಾಳಿ ನಿಮಗೆ ಆಗಿ ಬರುವುದಿಲ್ಲ. ಮುಂದೆ ಕುಳಿತ ನಿಮ್ಮ ಗೆಳೆಯ ಮುದ್ದಾಂ ಕಿಟಕಿ ತೆರೆದಿಡುತ್ತಾನೆ. ಸಿನಿಮಾ ಥೇಟರ್‌ನಲ್ಲಿ ನಿಮ್ಮ ಮುಂದೆ ಕುಳಿತ ವ್ಯಕ್ತಿಯ ತಲೆ ಅಡ್ಡ ಬರುತ್ತಿದೆ. ನಿಮ್ಮ ಪಕ್ಕಕ್ಕೆ ನಿಂತು ಬೀಡಿ ಸಿಗರೇಟ್ ಸೇದುವವರನ್ನು, ರೈಲ್ವೇ ಪಯಣದಲ್ಲಿ ನಿಮಗೆ ತಲೆ ಸುತ್ತು ತರಿಸುವ ಗುಟಕಾ ವಾಸನೆ, ಪಾನ್ ಜಗಿದು ಉಗಿಯುವರನ್ನು, ಮಲಗುವ ಸಮಯವಾದರೂ ಏರು ದನಿಯಲ್ಲಿ ಮಾತನಾಡುವವರನ್ನು ಕಂಡಾಗ ಮೈ ಉರಿಯುತ್ತದೆ. ಇಂಥ ತೊಂದರೆಗಳ ಸಾಲು ಸಾಲು ಪಟ್ಟಿಯನ್ನು ಮಾಡಬಹುದು.ನೋಡೋಕೆ ಕೇಳೋಕೆ ಇವೆಲ್ಲ ತೀರ ಸಣ್ಣ ಪುಟ್ಟ ತೊಂದರೆಗಳೆನಿಸಿದರೂ ಇವು ಹೆಚ್ಚು ಸಮಯ ಮುಂದುವರೆದರೆ ಆಗುವ ತೊಂದರೆ ಮತ್ತು ಹಾನಿ ಅಷ್ಟಿಷ್ಟಲ್ಲ. ಬಹುತೇಕ ಳಷ್ಟು ಸಲ ಈ ತೊಂದರೆಗಳನ್ನು ಬಾಯಿ ಮುಚ್ಚಿ ಸಹಿಸಿಕೊಂಡು ಬಿಡುತ್ತೀರಿ.ನೀವು ಹೀಗೆ ಈ ತೊಂದರೆಗಳನ್ನು ಸಹಿಸುವ ಅಗತ್ಯವೇ ಇಲ್ಲ. ತೊಂದರೆ ಕೊಡುವವರು ತಮ್ಮ ಚಾಳಿಯನ್ನು ರಾಜಾರೋಷವಾಗಿ ಮುಂದುವರೆಸಿಕೊಂಡು ಹೋಗುತ್ತಾರೆ. ಇಂಥ ತೊಂದರೆಗಳಿಂದ ಬಚಾವಾಗುವುದು ಹೇಗೆ ಅಂತ ಅನಿಸ್ತಿದೆಯಲ್ಲವೇ? ಹಾಗಾದರೆ ಮುಂದಕ್ಕೆ ಓದಿ.

ಭಯ ಬಿಡಿ

ತೊಂದರೆ ಕೊಡುವವರಿಗೆ ಮುಕ್ತವಾಗಿ ನಿಮ್ಮಿಂದ ತೊಂದರೆ ಆಗ್ತಿದೆ ಎಂದು ಹೇಳೋದಕ್ಕೆ ತುಂಬಾ ಭಯ ಆಗುತ್ತಿದೆಯೇ? ನಿಮ್ಮ ಮೇಲೆ ನಡೆದು ಹೋಗಲು ಜನಗಳಿಗೆ ಬೇಕಾಗಿಲ್ಲ. ನೀವು ಮಲಗಲು ಇಚ್ಛಿಸುವವರೆಗೆ ತೊಂದರೆ ಕೊಡಲು ದಾರಿ ಮಾಡಿ ಕೊಡಬೇಡಿ. ರಾಮಕೃಷ್ಣ ಪರಮಹಂಸರು ಹೇಳಿದಂತೆ ಮನವೆಂಬ ಆನೆಗೆ ಬುದ್ಧಿಯೇ ಅಂಕುಶ. ಬುದ್ಧಿಯನ್ನು ಬಳಸಿ ನಯವಾಗಿ ಮತ್ತು ನೇರವಾಗಿ ಮೆಲುದನಿಯಲ್ಲಿ ಹೇಳಿ. ನಿಮ್ಮ ಸೌಜನ್ಯಪೂರಿತ ನಡೆಗೆ ಪ್ರತಿಯಾಗಿ ತೊಂದರೆಯ ಕಿರಕಿರಿ ನಿಲ್ಲುವುದು. ದಯವಿಟ್ಟು, ಸ್ವಲ್ಪ, ಅನ್ನುವ ಶಬ್ದಗಳನ್ನು ಬಳಸಿ. ಇವು ಖಂಡಿತ ಪರಿಣಾಮ ಬೀರುವವು. ಮುಂದಿನ ವ್ಯಕ್ತಿ ಅಪರಿಚಿತನಾಗಿದ್ದರೆ ಹೀಗೆ ಹೇಳುವಾಗ ತುಟಿಯ ಮೇಲೆ ಸ್ನೇಹಪೂರ್ವಕವಾದ ನಗೆಯಿದ್ದರೆ ಉತ್ತಮ. ಮಾತುಗಾರಿಕೆ ಎಂಥ ಸಮಸ್ಯೆಯನ್ನೂ ಬಗೆಹರಿಸಬಲ್ಲದು. ಆದ್ದರಿಂದ ಸಂವಹನ ಕೌಶಲ್ಯವನ್ನು ನಿಮ್ಮದಾಗಿಸಿಕೊಳ್ಳಲು ನಿರಂತರ ಪ್ರಯತ್ನಿಸಿ.

ಇತರರಿಗೆ ಕಾಯಬೇಡಿ

ನಿಮಗಾಗುತ್ತಿರುವ ತೊಂದರೆಯನ್ನು ಯಾರೋ ಬಂದು ಬಗೆಹರಿಸುತ್ತಾರೆ ಅಂತ ಕಾಯುತ್ತ ಕುಳಿತುಕೊಳ್ಳಬೇಡಿ. ಗಾಂಧೀಜಿಯವರು ಹೇಳಿದಂತೆ ಸ್ವ ಸಹಾಯವೇ ಅತ್ಯುತ್ತಮ ಸಹಾಯ. ಹಲವು ಬಾರಿ ನಿಮಗೆ ತೊಂದರೆ ಆಗುತ್ತಿದೆ ಅಂತ ಮುಂದಿನವರಿಗೆ ಗೊತ್ತಿಲ್ಲದೇನೂ ಇರಬಹುದು. ನೀವೇ ಸ್ವತಃ ಮುಂದುವರೆದು ತೊಂದರೆ ನಿಲ್ಲಿಸಲು ಹೇಳಿ. ಹೀಗೆ ಹೇಳಿಕೊಳ್ಳುವುದರಿಂದ ಅವರು ತಿದ್ದಿಕೊಳ್ಳುತ್ತಾರೆ. ನಮ್ಮ ಅತ್ಯಂತ ಕಷ್ಟ ಅನುಭವಗಳಿಂದ ನಾವು ಸಾಕಷ್ಟು ಕಲಿಯುತ್ತೇವೆ ಎನ್ನುವುದು ಸತ್ಯ ಹಾಗಂತ ಇಂಥ ಕಿರಿಕಿರಿಗಳನ್ನು ಸಹಿಸುವುದು ತರವಲ್ಲ. ನೀವು ಹೊಂದಿರುವ ಜ್ಞಾನ ಮತ್ತು ಅನುಭವಗಳನ್ನು ಉಪಯೋಗಿಸಿಕೊಳ್ಳಿ. ಕೆಲವೊಮ್ಮೆ ನೀವು ತಾಳ್ಮೆಯಿಂದ ಹೇಳಿದರೂ ಆ ಕಡೆಯಿಂದ ಒರಟಾದ ಮಾತಿನ ಪ್ರತಿಕ್ರಿಯೆ ಬರಬಹುದು.ತಾಳ್ಮೆಯು ಸಂತೋಷದ ಬೀಗದ ಕೈ.ಆತುರವು ಸಂಕಟದ ಬೀಗದ ಕೈ. ಎಂಬುದನ್ನು ಮನದಟ್ಟು ಮಾಡಿಕೊಳ್ಳಿ..ನೀವು ತಾಳ್ಮೆ ಕಳೆದುಕೊಂಡು ವರ್ತಿಸಿದರೆ ಜಗಳ ತಪ್ಪಿದ್ದಲ್ಲ.ಎಚ್ಚರಿಕೆ ವಹಿಸಿ.

ಬೇಡ ಹೊಂದಾಣಿಕೆ.

ಹೊಂದಾಣಿಕೆಯೇ ಜಾಣತನ ಅಂತಾರೆ ಅಂಥದ್ದರಲ್ಲಿ ಹೊಂದಾಣಿಕೆ ಬೇಡ ಅಂದರೆ ಹೇಗೆ? ಅಂತಿದ್ದೀರಾ! ನಿಮ್ಮ ಏಳ್ಗೆಗೆ ಅಡೆತಡೆಯಾಗುವ ಗೆಳೆಯ/ತಿಯರ ನಡುವಳಿಕೆಗಳ ಜೊತೆಗೆ ಹೊಂದಾಣಿಕೆ ಬೇಡವೇ ಬೇಡ. ನೀವು ಮುಖ್ಯವಾದ ಕೆಲಸದಲ್ಲಿರುವಾಗ ನಿಮ್ಮನ್ನು ತಮ್ಮ ಅಮುಖ್ಯ ಕೆಲಸಕ್ಕೆ ಹಾಜರಾಗುವಂತೆ ಒತ್ತಾಯಿಸುವವರ ಜೊತೆಗೆ ರಾಜಿಯಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ತೊಂದರೆಯನ್ನು ಸಹಿಸಿಕೊಳ್ಳಬೇಡಿ. ನಿಮ್ಮ ಬುದ್ಧಿಯೇ ನಿಮಗೆ ಗುರು ಎಂಬ ವಿಲಿಯಮ್ ಷೇಕ್ಸ್ ಪಿಯರ್ ನ ಸೊಗಸಾದ ನುಡಿಯಂತೆ ಚಾಣಾಕ್ಷತನದಿಂದ ಸ್ನೇಹಿತರಿಗೆ ತಿಳಿ ಹೇಳಿ.ಅವರಿಂದ ನಿಮಗೆ ತೊಂದರೆಯಾಗುತ್ತಿದೆ ಎಂದು ಅರ್ಥೈಸಿಕೊಳ್ಳುವಂತೆ ಹೇಳಿ. ನಿಮ್ಮ ಬುದ್ಧಿಮಾತು ಅವರು ತಪ್ಪು ತಿದ್ದಿಕೊಳ್ಳುವಂತಿರಬೇಕು. ಮುಖಕ್ಕೆ ಹೊಡೆದಂತೆ ಹೇಳಿ ಮುಖ ಕಟ್ಟಿಕೊಳ್ಳಬೇಡಿ.

ನಿಂದಿಸಿ ನುಡಿಯದಿರಿ

ನಿಮಗೆ ತೀರಾ ಆಪ್ತರಾದವರು ನೆಂಟರಿಷ್ಟರು ತಮಗೆ ಗೊತ್ತಿಲ್ಲದಂತೆ ತೊಂದರೆ ಕೊಡುವವರ ಪಟ್ಟಿಯಲ್ಲಿರಬಹುದು. ಅಂಥವರಿಗೆ ಎಲ್ಲರೆದುರು ನೀವು ಹೀಗೆ ನಡೆದುಕೊಳ್ಳುತ್ತಿರುವುದು ನನಗೆ ತುಂಬಾ ಕಿರಿಕಿರಿ ಆಗುತ್ತಿದೆ. ನನಗೆ ಸತಾಯಿಸಬೇಡಿ ಅಂತ ಜೋರಾಗಿ ಹೇಳಬೇಡಿ. ನಿಂದಿಸಿ ನುಡಿಯದಿರಿ ಯಾರನು. ನಿಂದನೆ ಮುಜುಗರಕ್ಕೆ ಎಡೆಮಾಡಿಕೊಡುವುದಲ್ಲದೇ ಮನಸ್ಸನ್ನು ಒಡೆಯುತ್ತದೆ. ಇದು ಶಾಶ್ವತವಾಗಿ ಸಂಬಂಧವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಬಹುದು. ಆದ್ದರಿಂದ ನೀವಿಬ್ಬರೇ ಇದ್ದಾಗ ಅವರ ಯಾವ ನಡುವಳಿಕೆ ನಿಮಗೆ ತೊಂದರೆ ಆಗುತ್ತಿದೆಯೋ ಸ್ಪಷ್ಟವಾಗಿ ಹೇಳಿಬಿಡಿ.

ಇರಲಿ ಕೊಂಚ ಹೊಂದಾಣಿಕೆ

ಬಿಜಿ ದಿನಚರಿಯ ಜೀವನದಲ್ಲಿ ಇಂಥ ತೊಂದರೆಗಳ ಬಗೆಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ ನೆಮ್ಮದಿ ಹಾಳಾಗುತ್ತದೆ. ಕೆಲಸದ ನಡುವೆ ಇವು ಅಡ್ಡ ಗೋಡೆಗಳಾಗಿ ದೊಡ್ಡ ಕಂದಕಗಳಾಗಿ ನಿಂತು ಬಿಡುವ ಸಾಧ್ಯತೆಗಳೂ ಇಲ್ಲದಿಲ್ಲ.ಕೆಲ ಸಲ ತೊಂದರೆಯಾಗುತ್ತಿದೆ ಅಂತ ಹೇಳಿದರೂ ಕಷ್ಟ ಹೇಳದಿದ್ದರೂ ಕಷ್ಟ ಅನ್ನುವ ಸಂದಿಗ್ಧ ಪರಿಸ್ಥಿತಿ ಬರುತ್ತದೆ. ಹೊಂದಾಣಿಕೆ ಮಾಡಿಕೊಳ್ಳುವ ವಿಷಯದಲ್ಲೂ ಕ್ಯಾತೆ ತೆಗೆಯಲು ನೋಡಬೇಡಿ. ಹೊಂದಾಣಿಕೆಯೇ ಜೀವನ ಎಂದಿದ್ದಾರೆ ಬಲ್ಲವರು. ಹೊಂದಾಣಿಕೆಯ ಕೊರತೆ ಸಹಜವಾದರೂ ಅದು ಕೆಲವು ಸಲ ದೊಡ್ಡ ಬಿರುಕು ಮೂಡಿಸುತ್ತದೆ. ‘ಇಡೀ ಜಗತ್ತು ಹೊಂದಾಣಿಕೆಯ ಸುತ್ತ ಗಿರಕಿ ಹೊಡಿಯುತ್ತದೆ’ ಎಂದು ಪ್ರಾಜ್ಞವಾಗಿ ಹೇಳಿದ್ದಾನೆ ಫ್ರೆಂಚ್ ಕವಿ ಚಾಲ್ಸ್ ð ಬೋದಿಲೇರ್
ಮಾನವ ನೆಮ್ಮದಿ ಬಯಸುವ ಜೀವಿ. ಸ್ನೇಹ ಜೀವಿ ಕೂಡ.. ಸಂಬಂಧಗಳ ಬಲೆಯಲ್ಲಿ ತೀವ್ರ ವಿಶ್ವಾಸವಿಟ್ಟುಕೊಂಡವನು. ನನಗೆ ತೊಂದರೆ ಕೊಡುತ್ತಿದ್ದೀರಿ ಎಂದು ಭಾವುಕರಾಗಿ ಕಿರುಚದೇ ಸಹಜವಾಗಿ ತೊಂದರೆ ಕೊಡಬೇಡಿ ಅಂತ ಹೇಳಿಬಿಡಿ.ತೊಂದರೆಗಳ ಲೋಕದ ಚಿಂತೆಯನ್ನು ದೂರ ಸರಿಸಿ ಉತ್ತಮ ಭವಿಷ್ಯಕ್ಕಾಗಿ ಶಾಂತಿಯಿಂದ ವರ್ತಮಾನದಲ್ಲಿ ಜೀವಿಸೋಣ. ಬದುಕನ್ನು ಬದಲಿಸಿಕೊಳ್ಳೋಣ ಅಲ್ಲವೇ?

**************

3 thoughts on “ದಿಕ್ಸೂಚಿ

Leave a Reply

Back To Top