ಗಝಲ್
ದೀಪಾಜಿ
ಬದುಕು ಬಯಲಾಗಿದೆ ಬಾಳು ಹಣ್ಣಾಗಿದೆ ಬೇಕೆ ನಿನಗೀಗ ದೀಪ
ದೇಹ ಬೆಂಡಾಗಿದೆ ಮನವೂ ಮಾಗಿಹೋಗಿದೆ ಬೇಕೆ ನಿನಗೀಗ ದೀಪ
ಸುತ್ತಲು ಆವರಿಸಿ ನಿಂತ ಮಬ್ಬುಗತ್ತಲಿಗೆ ಎಷ್ಟೆಣ್ಣೆ ಸುರಿವೆ
ಬಾಯ್ತುಂಬಿಕೊಂಡ ಗಾಳಿ ಉದುವ ದ್ವೇಷಿಗಳಿಗೆ ನಂಜಿದೆ ಬೇಕೆ ನಿನಗೀಗ ದೀಪ
ಒಂದಿಷ್ಟು ಮೆಟ್ಟಿಲಾಚೆ ಬಾಗಿಲಿಲ್ಲದ ಬದುಕೊಂದಿದೆ
ಸುತ್ತೆಲ್ಲ ಸಣ್ಣಗೆ ಮಳೆ ಇದೆ ದೀವಟಿಗೆ ಕುಡಿ ಮೇಲೆ ಅಂಗೈ ಹಿಡಿದೆ ಬೇಕೆ ನಿನಗೀಗ ದೀಪ..
ಕೂಸೆರಡು ಕೈಹಿಡಿದು ಪ್ರೇಮದಾರಿ ತೋರಿಸುತಿವೆ
ಮುಳ್ಳ ಕಣಿವೆಯ ಮೇಲೆ ಮಮತೆಯ ಸೇತುವೆ ಕಟ್ಟಲಾಗಿದೆ ಬೇಕೆ ನಿನಗೀಗ ದೀಪ..
ಗಂವ್…ಎನ್ನುವ ಯೌವನವಿಲ್ಲ ಹುಚ್ಚೆಬ್ಬಿಸುವ ಕಾಮದ ತಹತಹಿ ಇಲ್ಲ
ಇದ್ದುದೊಂದೆ ವಾತ್ಸಲ್ಲ ಹಿಡಿಯಷ್ಟು ಒಲವು ಇದೆ ಬೇಕೆ ನಿನಗೀಗ ದೀಪ…
*******
One thought on “ಕಾವ್ಯಯಾನ”