ಕಾವ್ಯಯನ

ಕಾಪಾಡಬೇಕಿದೆ

Nature, Lawn, At The Court Of, A Little

ರಾಮಕೃಷ್ಣ ಸುಗತ

ನೀವು ಆಯ್ಕೆ ಮಾಡಿದ್ದೀರಿ ಫಲವತ್ತಾದ ಮಣ್ಣನ್ನು
ಅಷ್ಟೇ ಆಸ್ಥೆಯಿಂದ ಬೆಳೆಸಿದ್ದೀರಿ ಹೂವಿನ ತೋಟವನ್ನು
ಕರೆಸಿದ್ದಿರೇನು ನಿಮ್ಮದೇ ದೇವಲೋಕದ ವರ್ಣಕರನ್ನು
ಎಷ್ಟು ಬಣ್ಣ ಬಣ್ಣದ ಹೂಗಳು
ತಿಳಿಯುತ್ತಿಲ್ಲ ಅವುಗಳ ವಾಸನೆ
ನೀವು ಆಯುವಂತರು ಸ್ವಾಮಿ
ಎಂದೋ ಕೊಯ್ದು ಬಿಟ್ಟಿದ್ದೀರಿ ನಮ್ಮ ಮೂಗನ್ನು

ಮನೆಯ ಹಿಂಭಾಗದಲ್ಲಿ ಹುಲ್ಲು ಬೆಳೆದಿದ್ದಕ್ಕೆ
ನೀವು ದೂರು ಕೊಡುತ್ತೀರಿ
ನೀವು ಪುಣ್ಯವಂತರು ಸ್ವಾಮಿ
ನೀವು ಕಾಲಿಟ್ಟು ಹೋದ ನಮ್ಮದೇ ಓಣಿಗಳಲ್ಲಿ
ಎಲ್ಲೋ ಮೂಲೆಯಲ್ಲಿ ಚಿಗುರುವ ಚಿಗುರಿಗೂ
ಅರ್ಜಿ ಹಾಕುತ್ತಿದ್ದೇವೆ ಅನ್ಯಗ್ರಹ ಜೀವಿಗಳಂತೆ

ಪ್ರೀತಿಯೆಂದರೆ ಕುದಿಯುವ ನಿಮ್ಮನ್ನು
ಚಳಿಗಾಲದ ತಂಪು ರಾತ್ರಿಗಳು ಏನೆಂದು ಕಾಡಿಯಾವು
ನೀವು ಆರೋಗ್ಯವಂತರು ಸ್ವಾಮಿ
ನಾವು ಬೆಚ್ಚಗೆ ಮಲಗಿದರೆ
ನಿದ್ರಾಹೀನತೆಯಿಂದ ಬಳಲುತ್ತೀರಲ್ಲಾ
ಕನಿಷ್ಠ ನಮ್ಮ ಮನೆಗೆ ಬೆಂಕಿ ಹಚ್ಚುವಾಗಲಾದರೂ
ಬಿಸಿಲಿಗೆ ನಿಂತುಕೊಳ್ಳಿ

ಸರಿ ನಾನಿನ್ನು ಬರುತ್ತೇನೆ
ಎದೆಯಲ್ಲಿ ಉಗಿಯ ಬಂಡಿಯೊಂದು ಓಡುತ್ತಿದೆ
ನಿತ್ಯವೂ ನೋವು ಹೊತ್ತು ಸಾಗುತ್ತಿದೆ
ಯಾರೋ ಕಟ್ಟಿಟ್ಟ ನಿಲ್ದಾಣಕ್ಕೆ
ನನ್ನ ಹೆಸರಿಟ್ಟಿದ್ದಾರೆ
ಇದೀಗ ನಾನು ಇಳಿಯಲೇಬೇಕಿದೆ
ಹಳಿಯನ್ನೇ ಕಸಿವವರ ಮಧ್ಯೆ ಸರಕನ್ನು ಕಾಪಾಡಬೇಕಿದೆ

**********

Leave a Reply

Back To Top