ಸಂವಾದ
ಜ್ಯೋತಿ ಡಿ.ಬೊಮ್ಮಾ.
ಹೌದು ಪಾಶ್ಚಾತ್ಯ ಸಂಸ್ಕೃತಿಯೆ ಚನ್ನ
ಒತ್ತಾಯದ ಬದುಕು ಅವರಾರು ಬದುಕರು
ಹೊಂದಾಣಿಕೆಯ ಪ್ರಯತ್ನವೇ ಮಾಡರವರು
ನಮ್ಮಂತಲ್ಲ ಒಳಗೊಂದು ಹೊರಗೊಂದು
ಇಷ್ಟವಿಲ್ಲದವನ/ಳೊಂದಿಗೆ ಏಗುವ ರಗಳೆ
ಕುಡಿದು ಪೀಡಿಸುವ ಗಂಡನೊಡನೆ ಸಹಬಾಳ್ವೆ
ಇಲ್ಲಿ ಮಕ್ಕಳಾಗದಿದ್ದರು ತಾನೆ ತಪಿತಸ್ಥಳು ಲೋಕಕ್ಕೆ
ಅವನು ಗಂಡಸು..ಅವನಲ್ಲೆನು ಕೊರತೆ..!
ಮಕ್ಕಳಾದ ಮೇಲೆ ಇನ್ನೆನಿದೆ. ಅನುಸರಿಸಿಕೊಂಡು ಹೋಗುವದೊಂದೆ.
ಅವರಾದರೂ ಎಲ್ಲಿರುತ್ತಾರೆ ಕೊನೆವರೆಗೆ ನಮ್ಮವರಾಗಿ..!
ಬಿಟ್ಟು ಬಿಡುವದೊಳಿತು ಮನಸ್ಸಿಗೊಪ್ಪದು
ಸುಮ್ಮನಿರು ,ಮಾತು ಬೇರೆ ಆತ್ಮ ಬೇರೆ
ಎರಡು ಒಂದಾಗಬೇಕಾದರೆ ತೆರೆ ಸರಿಸಿ ಬದುಕಬೇಕು.
ಬಯಸಿ ದೊರಕಿಸಿಕೊಂಡದ್ದು ಹಳತಾಗದೆ..!
ಹಾಗಂತ ಹೊಂದಾಣಿಕೆಯಲ್ಲೆ ಬದುಕಬೇಕೆ..
ದೇವತೆಗಳ ನೆಲೆವೀಡು ನಮ್ಮ ನಾಡು
ಸುಸಂಸ್ಕತಿ ಉಳ್ಳದ್ದು.
ಪುರುಷ ದೇವರೆಲ್ಲ ಬಹುಪತ್ನಿತ್ವ ಸ್ಥರೆ
ಶ್..ಕದ್ದು ಕೇಳುವ ಕಿವಿಗಳಿವೆ ಇಲ್ಲಿ.
ಕದ್ದು ಏನು ಮಾಡಿದರು ನಡೆಯಬಹುದಿಲ್ಲಿ..
ಇರುವದನ್ನೆ ಒಪ್ಪಿಕೊಂಡರು ಬದುಕಿದರಾಗದೆ..?
ನೀವು ಬುದ್ದಿ ಜೀವಿಗಳು ,ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುವವರು..
ಎಡ ಬಲವೆಂದು ಎಗ್ಗಿಲ್ಲದೆ ಬಡಿದಾಡುವ
ಗೊಡ್ಡು ವಾದಿಗಳು..
ನೈಜತೆ ಮರೆಮಾಚಿ ಕಲ್ಪನೆಯಲ್ಲಿ ಬದುಕುವರು..
ಯಾಕೋ..ಅಲ್ಲಗಳೆಯಲಾಗಲಿಲ್ಲ.
**********
ಅಪೇಕ್ಷಿತ ಬದುಕು ನಮಗೆಲ್ಲಿ?
ಎಲ್ಲದಕೂ ಹೋರಾಟ,ಸಮಾಜದ ನಿಂದನೆಯ
ಜಗ್ಗಾಟ ,ಅಷ್ಟರಲ್ಲಿ ಬದುಕಿನ ಕೊನೆ ಪುಟ.
Super, Congrates