ಶರಣಾಗು ಚಕ್ರವರ್ತಿಯೇ!!
ನಿನ್ನ ಕಿರೀಟಗಳಲಿ ಅಂಟಿಸಿದ
ವಜ್ರಗಳು ಇಲ್ಲವಾಗುತ್ತವೆ
ನೀನು ಕೂತ ಸಿಂಹಾಸನದ
ಕಾಲುಗಳಿಗೆ ಗೆದ್ದಲಿಡಿಯುತ್ತವೆ
ನಿನ್ನರಮನೆಯ
ಬುನಾದಿ
ಕುಸಿದು ಬೀಳುತ್ತದೆ.
ನಿನ್ನ ಅಂತ:ಪುರದ ರಾಣಿಯರು
ಅವರ ದಾಸಿಯರು
ಕಾವಲಿನ ಸೇವಕರ ಜೊತೆ
ಓಡಿ ಹೋಗುತ್ತಾರೆ
ನಿನ್ನ ವಂದಿ ಮಾಗಧರು
ಶತ್ರು ಸೈನ್ಯದ ಜೊತೆ ಸೇರಿ
ಕತ್ತಿಮಸೆಯುತ್ತಾರೆ.
ನೀನಾಳಿದ ನರಸತ್ತ ನಾಮರ್ದ ಪ್ರಜೆಗಳೆಲ್ಲ
ವೀರ್ಯವತ್ತಾಗಿ
ಹೊಸ ಸೂರ್ಯನ
ಹುಟ್ಟಿಸುತ್ತಾರೆ
ಹೊಸ ಹೂತೋಟಗಳ ಬೆಳೆಸುತ್ತಾರೆ
ಇರುಳ
ಬಣ್ಣವನೆಲ್ಲ ಅಳಿಸಿ
ಹಗಲಿನ ಬೆಳಕಿನ ಬಣ್ಣ
ಬಳಿಯುತ್ತಾರೆ
ನಿನ್ನ ಶಸ್ತ್ರಾಗಾರದ ಖಡ್ಗಗಳನ್ನೆಲ್ಲ
ಕಡಲಿಗೆಸೆದು
ಆ ಕೊಠಡಿಯಲ್ಲಿ ವೀಣೆ ತಂಬೂರಿಗಳನ್ನಿಡುತ್ತಾರೆ
ನಿನ್ನೆಲ್ಲ ವಿಜಯದ
ಸಂಕೇತವಾಗಿ
ಕಟ್ಟಿಸಿದ
ಸ್ಮಾರಕ ಸ್ಥಾವರಗಳನ್ನೆಲ್ಲ
ಒಡೆದು ಹಾಕಿ
ಅಲ್ಲಿ
ಮಕ್ಕಳಿಗೆ ಹಾಲು ನೀಡುವ
ಕೆಂದಸುಗಳ ಕಟ್ಟುತ್ತಾರೆ!
ಸುಮ್ಮನೆ
ಶರಣಾಗಿಬಿಡು
ಬಡಿದಾಡಿ ಹೈರಾಣಾಗಬೇಡ!
********
ಕು.ಸ.ಮದುಸೂದನರಂಗೇನಹಳ್ಳಿ
ಅದ್ಭುತ ಸರ್……..
ಬಹುಮುಖಿಯಾಗಿ ಕಂಡ ಕವಿತೆ…ವಿವಿಧ ಮಜಲುಗಳಾಗಿ ಕಂಡರೂ ಅಂತಃಸತ್ವ ಒಂದೇ ಎಂಬ ಭಾವವ ಒಡಮೂಡಿಸುತ್ತದೆ