ನಿನ್ನದೇ ಜಪದಲ್ಲಿ
ವೀಣಾ ಪಿ.
ಏಕಪತ್ನಿ ರಾಮನಿಗೆ ವನ-ವೈಭೋಗಗಳಲಿ
ಅನ್ಯ ಸ್ತ್ರೀಯಿಲ್ಲ ಸತಿ ಸೀತೆ ಹೊರತು..
ಕೃಷ್ಣನನೆದೆಯಲ್ಲಿ ಅನುರಣಿತ ರಾಗದಲಿ
ಅನ್ಯ ಪ್ರೇಮವದಿಲ್ಲ
ಅನುರಾಗಿ ರಾಧೆ ಹೊರತು..
ಮೀರಾ-ಶಬರಿಯರಲ್ಲಿ ಅನ್ಯ ತುಡಿತವದಿಲ್ಲ
ಕೃಷ್ಣ-ರಾಮರ ಪರಮ ಕಾಮ್ಯದ ಹೊರತು..
ಸ್ವರ-ಶೃತಿಯ ಬೆಸೆಯುವ ಸರಸತಿಯ ಮೀಟು ತಂತಿ
ಅನ್ಯವಾದ್ಯವಲ್ಲವದು ವೀಣಾ..
ಹಂಗಿನರಮನೆ ತೊರೆದ ಪ್ರೇಮದೀ ಗುಡಿಯಲ್ಲಿ
ಬೇರೆ ಮಾತುಗಳಿಲ್ಲ ನಿನ್ನ ಜಪದ ಹೊರತು..
*******