ತಬ್ಬಲಿ ಕವಿತೆ
ಮಾತುಗಳ ಅಟ್ಟಹಾಸದೊಳಗೆ
ಅಪಹಾಸ್ಯಕ್ಕೀಡಾದ ಮೌನ
ಶಬ್ದಗಳ ಜಾತ್ರೆಯೊಳಗೆ
ತೇರಿನ ಗಾಲಿಯಡಿ ಅಪ್ಪಚ್ಚಿಯಾಯಿತು.
ಮುಳ್ಳುಗಳ ಕಾವಲಿನಲಿದ್ದ ಹೂಗಳು
ನಗುವುದನ್ನೆ ಮರೆತುಬಿಟ್ಟವು
ವಿರಹದಲಿ ಬಣ್ಣಗೆಟ್ಟ ಚಿಟ್ಟೆಗಳು
ಹಸಿವಿನಲಿ ಕಂಗೆಟ್ಟವು.
ನಿನ್ನೆ ಸಂಜೆಯ ಮುದಿಬಿಸಿಲಲಿ
ಅಕಾಲ ಮಳೆಸುರಿಯುತು
ವಿದಾಯದ ಹೊತ್ತಿನಲಿ ಬಿಕ್ಕಿದವಳ
ನೋಡಿ ಒಂಟಿಹಕ್ಕಿ ಮಮ್ಮುಲ ಮರುಗಿತು.
ಕವಿತೆಯೊಂದ ಕಟ್ಟುವ ನೆಪದಲಿ
ಶಬ್ದಗಳ ಮಾರಣಹೋಮ
ಕವಿಯ ಸಮಾದಿಯ ಮೇಲೆ
ಅಪರಿಚಿತ ಓದುಗನ ಹೂಗುಚ್ಚ.
ಎರಡು ಸಾಲಾದರು ಬರೆದು ಹೋಗು
ಗೋಗರೆದ ಕವಿತೆಯೀಗ ತಬ್ಬಲಿ.
********
ಕು.ಸ.ಮಧುಸೂದನ
ವಾವ್ ಓದುಗರ ಹೃದಯದೊಳಕ್ಕೆ ನೇರ ಇಳಿಯುವ ನಿಮ್ಮ ಕವಿತೆಗಳಿಗೆ ನಮೋ ನಮೋ
ಮನೋಜ್ಞ ಕವಿತೆ….ಚಿಂತನೆಗೆ ಒರೆ ಹಚ್ಚುವುದು ಸುಂದರವಾಗಿದೆ ಸರ್…….