ಪ್ರಶಸ್ತಿ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಕನ್ನಡದ ಹಿರಿಮೆ
ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ….
ಭಾನು ಮುಷ್ತಾಕ್”

ವಿಶ್ವದ ಚಿತ್ತವನ್ನು ಮತ್ತೊಮ್ಮೆ ಕನ್ನಡ ನಾಡಿನತ್ತ ಹೊರಳಿಸಿದ ವ್ಯಕ್ತಿ 2025ರ ಅಂತರಾಷ್ಟ್ರೀಯ ಪ್ರತಿಷ್ಠಿತ ಬುಕರ್ ಪ್ರಶಸ್ತಿಯನ್ನು ಪಡೆದ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್.
1948ರಲ್ಲಿ ಹಾಸನದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಭಾನು ಮುಷ್ತಾಕ್ ಅಂದಿನ ಸಾಂಪ್ರದಾಯಿಕ ಮುಸ್ಲಿಂ ಪರಿವಾರದ ರೀತಿ ನೀತಿಗಳಂತೆಯೇ ಬೆಳೆದರು. ಆಕೆ 8ನೇ ವಯಸ್ಸಿನಲ್ಲಿದ್ದಾಗ ಶಿವಮೊಗ್ಗಕ್ಕೆ ವಲಸೆ ಹೋದ ಅವರ ಕುಟುಂಬ ಭಾನು ಅವರನ್ನು ಕನ್ನಡ ಮಿಷನರಿ ಶಾಲೆಗೆ ದಾಖಲಾತಿ ಮಾಡಿತು. ಈಗಾಗಲೇ ಶಾಲೆಗೆ ಸೇರಿಸುವ ವಯಸ್ಸಿಗಿಂತಲೂ ತುಸು ದೊಡ್ಡವಳಾಗಿದ್ದ ಭಾನು ಅವರನ್ನು ಶಾಲೆಗೆ ಸೇರಿಸಿಕೊಳ್ಳಲು ಶಾಲೆಯ ಶಿಕ್ಷಕರು ಕೇವಲ ಆರು ತಿಂಗಳ ಒಳಗೆ ಆಕೆ ಕನ್ನಡವನ್ನು ಓದಿ ಬರೆಯಲು ಕಲಿಯಬೇಕೆಂಬ ಶರತ್ತಿನ ಮೇಲೆ ದಾಖಲು ಮಾಡಿಕೊಂಡರು. ಇಲ್ಲಿಂದಲೇ ಆರಂಭವಾಗಿತ್ತು ಭಾನು ಮುಷ್ತಾಕ್ ಅವರ ಹೋರಾಟದ ಬದುಕಿನ ಪಯಣ. ಸಮಯಕ್ಕಿಂತಲೂ ಮುಂಚೆಯೇ ಬಾನು ಅವರು ಕನ್ನಡವನ್ನು ಓದಲು ಮತ್ತು ಬರೆಯಲು ಕಲಿತರು.
ಓದು ಮತ್ತು ಬರಹಗಳಲ್ಲಿ ವಿಪರೀತ ಆಸಕ್ತಿಯನ್ನು ಹೊಂದಿದ್ದ ಬಾನು ಚಿಕ್ಕಂದಿನಿಂದಲೇ ಸಣ್ಣಪುಟ್ಟ ಲೇಖನಗಳನ್ನು, ಕವನಗಳನ್ನು ಬರೆಯುತ್ತಿದ್ದರು. ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ ಭಾನುವಿಗೆ ಸಹಜವಾಗಿಯೇ ಅಂದಿನ ಸಮಯದಲ್ಲಿ ಶಾಲೆಗೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯಲು ಪ್ರತಿರೋಧಗಳು ಒದಗಿದವು. ಎಲ್ಲ ಪ್ರತಿರೋಧಗಳನ್ನು ಎದುರಿಸಿ ಭಾನು ಪದವಿಯನ್ನು ಪೂರೈಸಿ ಮುಂದೆ ಕಾನೂನು ಶಿಕ್ಷಣವನ್ನು ಕೂಡ ಪಡೆದರು.

ಮುಂದೆ ತಮ್ಮ 26ನೇ ವಯಸ್ಸಿನಲ್ಲಿ ಪ್ರೇಮ ವಿವಾಹವನ್ನು ಮಾಡಿಕೊಂಡ ಬಾನು ಅವರು ಪತ್ರಕರ್ತರಾಗಿ ಕಾರ್ಯನಿರ್ವಹಿಸಲು ಆರಂಭಿಸಿದರು. ಬೆಂಗಳೂರಿನ ಆಕಾಶವಾಣಿ ಕೇಂದ್ರದಲ್ಲಿ ಕೂಡ ಇವರು ಕೆಲಸ ಮಾಡಿದರು. ಅಂದಿನ ದಿನಮಾನಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದ ಲಂಕೇಶ ಪತ್ರಿಕೆಗೆ ಬರೆಯಲು ಆರಂಭಿಸಿದರು.
ತಮ್ಮ 29ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ತಾಯಿಯಾದ ಭಾನು ಮುಷ್ತಾಕ್ ಅವರು ಹೆರಿಗೆಯ ನಂತರದ ತಮ್ಮ ಮಾನಸಿಕ ತುಮುಲಗಳನ್ನು ಹೊರ ಹಾಕುವ ನಿಟ್ಟಿನಲ್ಲಿ ಕಥೆಗಳನ್ನು ಬರೆಯಲು ಆರಂಭಿಸಿದರು. ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಅನುಭವಿಸುವ ಕಟ್ಟುಪಾಡುಗಳು ಮತ್ತು ವ್ಯಥೆಯ ಕುರಿತಾದ ಅವರ ಕಥೆಗಳು ಬಹುಬೇಗ ಓದುಗರನ್ನು ಸೆಳೆದವು. ಸಣ್ಣ ಕಥೆಗಳ ಆರು ಸಂಗ್ರಹಗಳನ್ನು ಅವರು ಹೊರ ತಂದರು.
ಇದೆಲ್ಲಕ್ಕಿಂತಲೂ ಮಿಗಿಲಾಗಿ ಅವರ ಆಸಕ್ತಿ ಇದ್ದದು ಬರವಣಿಗೆಯಲ್ಲಿ. ತಮ್ಮ ಮನಸ್ಸಿನ ವಿಚಾರಗಳನ್ನು ಸಾಮಾಜಿಕವಾಗಿ ಪ್ರಚುರ ಪಡಿಸುವುದು ಅವರ ಆಶಯವಾಗಿದ್ದು ಬರಹ ಬರವಣಿಗೆಯ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಅವಶ್ಯಕತೆಯನ್ನು ಅವರು ಮನಗಂಡರು.ಅವರ ಕಥೆ, ಕವನ, ನಿಬಂಧ, ಪ್ರಬಂಧಗಳು ಸಾಲು ಸಾಲಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಲಾರಂಭಿಸಿದವು.
ಸಾಮಾಜಿಕವಾಗಿ ಜನರು ಅನುಭವಿಸುತ್ತಿದ್ದ ಮೌಲ್ಯ ರಾಹಿತ್ಯತೆ, ತೊಂದರೆಗಳು ಗೊಡ್ಡು ಸಂಪ್ರದಾಯಗಳು ಮತ್ತು ಸಾಮಾಜಿಕ ಕಳಂಕಗಳ ವಿರುದ್ಧ ಬಾನು ಅವರ ಲೇಖನಗಳು ದನಿಯತ್ತಿ ತಪ್ಪಿತಸ್ಥರ ವಿರುದ್ಧ ಚಾಟಿ ಏಟಿನಂತೆ ಭಾಸವಾದವು. ವಿಚಾರವಂತರ, ಬುದ್ಧಿಜೀವಿಗಳ ಪ್ರೀತಿಗೆ ಪಾತ್ರರಾದರೆ, ತಿಳಿದುಕೊಳ್ಳಬೇಕೆಂಬ ಮನಸ್ಥಿತಿಯವರಿಗೆ ಪಾಠವಾದವು.
ಭಾನು ಅವರು ಬರೆದ ಕರಿ ನಾಗರಗಳು ಎಂಬ ಕಾದಂಬರಿಯನ್ನು ಹಸೀನಾ ಎಂಬ ಹೆಸರಿನ ಕನ್ನಡ ಚಲನಚಿತ್ರವಾಗಿದೆ. ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ಹಸೀನಾ ಎಂಬ ಹೆಸರಿನ ಕನ್ನಡ ಚಲನಚಿತ್ರದ ಮುಖ್ಯ ಪಾತ್ರಧಾರಿಯಾಗಿ ಅಭಿನಯಿಸಿದ ಖ್ಯಾತ ಕನ್ನಡ ಸಿನಿಮಾ ನಟಿ ತಾರಾ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ದೊರೆಯಿತು. ಈ ಚಿತ್ರದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಅನುಭವಿಸುವ ತೊಂದರೆಗಳ ಚಿತ್ರಣ ಇದೆ.
ಬರವಣಿಗೆಯ ಜೊತೆ ಜೊತೆಗೆ ಸಾಮಾಜಿಕವಾಗಿಯೂ ತಮ್ಮ ಛಾಪನ್ನು ಮೂಡಿಸಿದ ಬಾನು ಅವರು 1980 ರಿಂದಲೂ ಸಾಮಾಜಿಕ ಅವ್ಯವಸ್ಥೆಯ ವಿರುದ್ಧ ದನಿಯತ್ತಿ ಹೋರಾಡುವ ಮೂಲಕ ಗಮನ ಸೆಳೆದರು. ಮುಸ್ಲಿಂ ಸಮುದಾಯದ ಮೂಲಭೂತವಾದ ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧ ಅವರು ದನಿಯೆತ್ತಿದರು. ಕೋಮು ಸೌಹಾರ್ದ ವೇದಿಕೆಯ ಸದಸ್ಯರಾಗಿಯೂ ಕೂಡ ಅವರು ಕಾರ್ಯನಿರ್ವಹಿಸಿದರು.
ಮುಸಲ್ಮಾನ ಮಹಿಳೆಯರಿಗೆ ಮಸೀದಿಯಲ್ಲಿ ಪ್ರವೇಶಿಸಲು ಮತ್ತು ನಮಾಜು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹಠ ಹಿಡಿದ ಬಾನು ಅವರ ಕೃತ್ಯವನ್ನು ಖಂಡಿಸಿ ಅವರದೇ ಸಮುದಾಯದವರು ಸುಮಾರು ಮೂರು ತಿಂಗಳ ಕಾಲ ಅವರನ್ನು ಸಮುದಾಯದಿಂದ ಬಹಿಷ್ಕರಿಸಿದರು. ಆದರೆ ಭಾನು ಅವರು ಯಾವುದಕ್ಕೂ ಎದೆಗುಂದಲಿಲ್ಲ.
ಶಾಲೆ ಕಾಲೇಜುಗಳಲ್ಲಿ ಧರಿಸಬೇಕೆಂದು ಬಯಸುವ ಹಿಜಾಬ್ ಗಳನ್ನು ಧರಿಸಲು ಬಯಸುವ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಅವಕಾಶ ಮಾಡಿಕೊಡಬೇಕು ಎಂದು ಕೂಡ ಅವರು ಹೋರಾಡಿದರು.
ಭಾನು ಮುಷ್ತಾಕ್ ಅವರ ಕೃತಿಗಳು ತೆಲುಗು, ತಮಿಳು ಮಲಯಾಳಂ ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನುವಾದಗೊಂಡಿವೆ.
1999 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿರುವ ಭಾನು ಮುಷ್ತಾಕ್ ಅವರು
ಪ್ರತಿಷ್ಠಿತ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಕೂಡ ಭಾಜನರಾಗಿದ್ದಾರೆ.
1924ರಲ್ಲಿ ಹಸೀನಾ ಮತ್ತು ಇತರ ಕಥೆಗಳು ಎಂಬ ಇವರ ಅನುವಾದಿತ ಕೃತಿಗೆ ದೀಪಾ ಬಸ್ತಿ ಅವರು ಪ್ರತಿಷ್ಠಿತ ಪೆನ್ ಅವಾರ್ಡನ್ನು ಕೂಡ ಪಡೆದಿದ್ದಾರೆ.

ದೀಪಾ ಬಸ್ತಿ ಎಂಬ ಇಂಗ್ಲಿಷ್ ಲೇಖಕಿಯು ಭಾನು ಮುಸ್ತಾಕ್ ಅವರ 12 ಕಥೆಗಳನ್ನು “ಹಾರ್ಟ್ ಲ್ಯಾಂಪ್’ ಎಂಬ ಹೆಸರಿನಲ್ಲಿ ಸಂಗ್ರಹಿಸಿ ಅನುವಾದಿಸಿದರು. 1990 ರಿಂದ 2023ರ ವರೆಗೆ ಭಾನು ಮುಷ್ತಾಕ್ ಅವರು ಬರೆದ ಸುಮಾರು 12 ಸಣ್ಣ ಕಥೆಗಳನ್ನು ಸಂಗ್ರಹಿಸಿ ಬರೆಯಲಾಗಿರುವ ‘ಹಾರ್ಟ್ ಲ್ಯಾಂಪ್’ ಎಂಬ ಕೃತಿಯಲ್ಲಿ ಮುಸ್ಲಿಂ ಸಮಾಜದ ವಿಪರೀತ ಕಟ್ಟುಪಾಡುಗಳು, ಪಿತೃಸ್ವಾಮ್ಯದ ಸಾಮಾಜಿಕ ತೊಂದರೆಗಳು ಮತ್ತು ಸಾಮುದಾಯಿಕ ಕಟ್ಟುಪಾಡಿನ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಹಿಂಸೆಗೆ ಒಳಪಡಿಸುತ್ತಿರುವ ವಿಷಯಗಳನ್ನು ಕುರಿತಾದ ಸಮಸ್ಯೆಗಳ ಮೇಲೆ ಈ ಕಥೆಗಳು ಬೆಳಕನ್ನು ಚೆಲ್ಲುತ್ತವೆ.
ಇದೀಗ ಬಾನು ಮುಸ್ತಾಕ್ ಅವರಿಗೆ ಅಂತರಾಷ್ಟ್ರೀಯ ವಾಗಿ ದೊರೆಯುವ ಬುಕರ್ ಪ್ರಶಸ್ತಿಯು ಹಲವಾರು ವೈಶಿಷ್ಟ್ಯಗಳನ್ನು ಮೆರೆದಿದೆ. ಲಘು ಕಥೆಗಳ ಸಂಗ್ರಹಕ್ಕೆ ಮೊಟ್ಟಮೊದಲ ಬುಕರ್ ಪ್ರಶಸ್ತಿಯು ಕೂಡ ಇದಾಗಿದೆ ದೀಪ ಬಸ್ತಿಯವರು ಬುಕರ್ ಪ್ರಶಸ್ತಿಯನ್ನು ಪಡೆದ ಮೊಟ್ಟಮೊದಲ ಅನುವಾದಕರಾಗಿ ಹೊರಹೊಮ್ಮಿದ್ದಾರೆ.
ದೀಪಾ ಬಸ್ತಿ ಕೇವಲ ಈ ಕಥೆಗಳನ್ನು ಭಾವಾನುವಾದ ಮಾಡಿಲ್ಲ ಬದಲಾಗಿ ಭಾನು ಮುಷ್ತಾಕ್ ಅವರು ಬರೆದ ಹಲವಾರು ಕಥೆಗಳಲ್ಲಿ ಈ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಕೂಡ ಕಾರ್ಯನಿರ್ವಹಿಸಿದ್ದಾರೆ. . ಭಾನು ಮುಷ್ತಾಕ್ ಮತ್ತು ದೀಪಾ ಬಸ್ತಿ ಅವರ ಪಾಲಿಗೆ ಇದೊಂದು ಟೀಂ ವರ್ಕ್ ಆಗಿದ್ದು ಈ ಪ್ರಶಸ್ತಿಯು ದೊರೆತಿದ್ದು ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಹೆಮ್ಮೆಯ ಗರಿಯನ್ನು ಮೂಡಿಸಿದೆ. ಭಾರತೀಯ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ಅಗ್ರಸ್ಥಾನವನ್ನು ಒದಗಿಸಿದೆ.
ಎತ್ತಿನ ಗಾಡಿಯಿಂದ ವಿಮಾನಯಾನದವರೆಗಿನ ತಮ್ಮ ಜೀವನದ ಪಯಣದಲ್ಲಿ ತಮ್ಮ ಜೀವನ ಮಟ್ಟದಲ್ಲಿ ಬದಲಾವಣೆಯಾಗಿದೆಯೇ ಹೊರತು ತಮ್ಮ ಕಥೆಗಳು ಮಾತ್ರ ಸಾಮಾಜಿಕ ತೊಂದರೆಗಳ ವಿರುದ್ಧ ಬೆಳಕು ಚೆಲ್ಲುವ ರೀತಿಯಲ್ಲಿಯೇ ಮುಂದುವರೆಯುತ್ತವೆ ಎಂದು ಭಾನು ಮುಷ್ತಾಕ್ ಅವರು ತಿಳಿಸಿದ್ದಾರೆ.
2025ರ ಮೇ 20ರಂದು ಲಂಡನ್ ನಗರದ ಹೆಡ್ ಗಾರ್ಡನ್ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಡೆದ ಸುಮಾರು 67 ಸಾವಿರ ಡಾಲರ್ ಮೊತ್ತದ ಈ ಪ್ರಶಸ್ತಿಯನ್ನು ಭಾನು ಮುಸ್ತಾಪ್ ಮತ್ತು ದೀಪ ಬಸ್ತಿ ಅವರು ಜಂಟಿಯಾಗಿ ಸ್ವೀಕರಿಸಿದ್ದಾರೆ.
ಬುಕರ್ ಪ್ರಶಸ್ತಿ ಪುರಸ್ಕಾರದ ನಿರ್ಣಾಯಕರಲ್ಲಿ ಒಬ್ಬರಾದ ಮ್ಯಾಕ್ಸ್ ಪೋರ್ಟರ್ ಅವರು ಇಂಗ್ಲಿಷ್ ಓದುಗರಿಗೆ ಈ ಕೃತಿಯು ಹೊಸ ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ ಎಂದು ಈ ಕೃತಿಯನ್ನು ಕುರಿತು ಬಣ್ಣಿಸಿದ್ದಾರೆ. ಪ್ರತಿಷ್ಠಿತ ಗಾರ್ಡನರ್ ಪತ್ರಿಕೆಯು ಈ ಕೃತಿಯನ್ನು ಕುರಿತು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ತೊಂದರೆಗಳನ್ನು ಮತ್ತು ಪಿತೃ ಸತ್ತಾತ್ಮಕ ಸಮಾಜದ ಕಟ್ಟುಪಾಡುಗಳನ್ನು ಕುರಿತು ಹೊಸ ಬೆಳಕನ್ನು ಚೆಲ್ಲುವ ಈ ಕೃತಿಯು ಶಾಂತ ಮತ್ತು ವೈವಿಧ್ಯಮಯ ವಿಷಯವನ್ನು ಹೊಂದಿದ್ದರು ಕೂಡ ಸ್ಥಿರವಾದ ದೃಷ್ಟಿಕೋನವನ್ನು ಹೊಂದಿದೆ ಎಂದು ಬರೆದುಕೊಂಡಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಗರಿಮೆಯನ್ನು ಎತ್ತಿ ಹಿಡಿದಿರುವ 77ರ ಇಳಿ ವಯಸ್ಸಿನಲ್ಲಿಯೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬಾನು ಮುಷ್ತಾಕ್ ಅವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಮಸ್ತ ಕರ್ನಾಟಕವು ಮಾತ್ರವಲ್ಲದೆ ಜಗತ್ತಿನಾದ್ಯಂತ ಎಲ್ಲ ಭಾರತೀಯರು ಸಲ್ಲಿಸುತ್ತಿದ್ದಾರೆ.
ವೀಣಾ ಹೇಮಂತ್ ಗೌಡ ಪಾಟೀಲ್
