ಇನ್ನಷ್ಟು ಯೌವನ ಕೊಡು
ಮಂಜುನಾಥ ನಾಯ್ಕ
ಹಾಲುಮಾರುವ ಹುಡುಗ ಕಾಜುಗಣ್ಣಿನ ವಿನೋದ
ನೊರೆ ಹಾಲಿನಂತವನು ಪೇಟೆಯ ತುಂಬ
ಹಾಲು ಹಂಚುವ ಉಮೇದಿ
ಕಾಜುಗಣ್ಣ ಬಿಂಬಗೊಳಗೆ
ಉಫ್ ಉಫ್ ಎಂದು ರಸ್ತೆ ಉಬ್ಬಿನಲಿ ತುಳಿದಿದ್ದಕ್ಕೆ ಸೈಕಲ್ಲು
ಬಿದ್ದು ರಕ್ತಕಾರಿಕೊಂಡ ಹೆಬ್ಬಟ್ಟಿನ ಉರಿ ಬ್ರೇಕೊತ್ತಿದೆ
ಸೈಕಲ್ಲಿನ ವೇಗಕ್ಕೆ
ಅಪ್ಪನ ಕ್ಯಾನ್ಸರಿಗೆ, ಅಮ್ಮನ ಮಧುಮೇಹಕ್ಕೆ
ಚಂದನದ ಕೊರಡು
ತೇಯುತ್ತಿದೆ ಬೀದಿಯಲಿ
ಕಾಯುತ್ತಿದೆ
ಹಾಲಿನ ಮನಸ್ಸೊಂದು
ಮಗನ ಬರುವಿಕೆಗೆ
ಅಡುಗೆ ಮನೆಯಲಿ ಬೇನೆಯಲಿ
ಬೇಯುವ ಹಂಚಿನ ರೊಟ್ಟಿ
ಐನೋರ ತೋಟದ ಮರದ ತುದಿಗೇರಿ ಅಡಿಕೆಗೊನೆ,ಸಿಂಗಾರ,ಸಿಯಾಳ
ಕಾಯಿ ಕೊಯ್ವ ಈರಜ್ಜ
ಕಸರತ್ತುಗಯ್ಯುತ್ತಾ
ಆಕಾಶ ಮುಟ್ಟುವಂತೆ
ಮರದ ತುದಿಯಲಿ
ಒಂದೊಂದೇ ಫಲಗಳ
ಎಸೆಯುವ ಕೆಳಗೆ
ನುಣ್ಣಗೆ ಜಾರುವ ಮರ
ತಡವರಿಸುವುದು ಒಮ್ಮೊಮ್ಮೆ ಈರನ ಕಾಲು
ಕೆಳಗೆ ಭೂಮಿ ಬಾಯ್ತೆರೆದು ಕಾದಿದೆ
ಬಿಡಾರದೊಳಗೆ ಈರಜ್ಜನ
ಗುಡಿಸಲೊಡತಿ
ಕೊಳೆ ಅಡಿಕೆ ಅಂಬಡಿ ಎಲೆಗೆ
ತಿಕ್ಕುತ್ತಾ ಚಿಪ್ಪೆಕಲ್ಲಿನ ಸುಣ್ಣವ ನುಣ್ಣಗೆ ಬೈಗಿನಲಿ
ಈರಜ್ಜನಡೆದು ಬರುವ ತೋಡಿನಲಿ
ಇಣುಕಿಣುಕಿ ನೋಡುತ್ತಾ
ಬೆಚ್ಚಗಾಗುತಿದೆ ಬಿಸಿನೀರು
ಹಬೆ ಹಬೆ ಹಂಡೆಯಲಿ
ಬೆಚ್ಚನೆಯ ಬದುಕ ಗೂಡೊಳಗೆ
ನಸುಕಲಲ್ಲಿ ಬೈಗೆ ಬಂಗುಡೆ
ಸಮದಾಳೆ,ಕುಡುತ್ಲಿ,ಪೇಡಿ ಏಡಿಗಳ ಹೊತ್ತು ಬರುವ ನಮ್ಮೂರ ಬೆಸ್ತರ ಪದ್ಮಕ್ಕನ ಮಗಳು ತುಂಬು ಬಸುರಿ
ಪಾತಿದೋಣಿಗೆ ಗಂಡ
ಉದರದ ಗೇಣಿಗೆ ಅವ್ವ
ದಣಪೆಯಾಚೆ ನಿಂತು ನೀಕುವಳು
ಖಾಲಿ ಬುಟ್ಟಿಹೊತ್ತ ಅಮ್ಮನ
ನಿರಾಳ ಹೆಜ್ಜೆ ಸದ್ದಿಗೆ
ಪೇಟೆಯಲಿ ಪದ್ಮಕ್ಕನ ಮೀನಿಗೆ
ಚೌಕಾಸಿಯ ಕೂಗು ಜೋರಾಗಿದೆ
ಸಾಸಿವೆಯ ದರಕ್ಕೆ ಮಾರಿ
ಮನೆಯ ದಾರಿ ಹಿಡಿದಿದ್ದಾಳೆ
ಅಲ್ಲಿ ತುಂಬು ಬಸುರಿಯ
ವೇದನೆ ಜೋರಾಗಿದೆ
ಸಾಗುವ ಹೆಜ್ಜೆಗಳಿಗೆಲ್ಲಾ
ಇನ್ನಷ್ಟು ಯೌವನ ಕೊಡು ದಿವ್ಯವೇ
ಕಾಯುವ ಹೃದಯಗಳೆಲ್ಲಾ
ಹಸುಳೆಯಂತದ್ದು.
************
ಹಾಲು ಮಾರುವ ವಿನೋದ, ತೋಟದ ಕೆಲಸ ಮಾಡುವ ಈರಜ್ಜ, ಮೀನು ಮಾರುವ ಪದ್ಮಕ್ಕ ಇಂಥ ಶ್ರಮ ಜೀವಿಗಳು ಇನ್ನೊಬ್ಬರ ಸುಖಕ್ಕಾಗಿ ತಮ್ಮನ್ನು ತಾವು ಜೀವನ ಪೂರ್ತಿ ಸವೆದು ಹೋಗುವ ಪರಿ, ಅವರಿಗಾಗಿ ಕಾಯುವ ಮನೆಯೊಳಗಿನ ಅಸಹಾಯಕ ಜೀವಗಳನ್ನು ಕವಿಯ ಒಳಗಣ್ಣು ಕಂಡು, ದುಡಿಯುವ ಜೀವಕೆ ಇನ್ನಷ್ಟು ಯೌವನ ಕೊಡಲು ಬೇಡಿಕೆ ಇಡುವ ಕವಿ ಮನಸ್ಸು ತನ್ನ ಬದುಕಿನ ಸುತ್ತಮುತ್ತಲಲ್ಲಿ ಸುಳಿದಾಡಿದ ಜೀವವನ್ನೇ ಕವಿತೆಯಲ್ಲಿ ಸೆರೆ ಹಿಡಿದ ರೀತಿ ಚೆನ್ನಾಗಿದೆ.