ನೀ ಹೋದರೂ..
ಶೀಲಾ ಭಂಡಾರ್ಕರ್
ನಿನ್ನ ನೆನಪುಗಳು..
ನನ್ನ ಬಳಿಯೇ ಉಳಿದಿವೆ
ನಿನ್ನ ಜತೆ ಹೋಗದೆ..
ಇನ್ನೂ ..
ಚೆನ್ನಾಗಿ ಬೆಳೆಯುತ್ತಿವೆ..ದಟ್ಟವಾಗಿ
ಮನದ ತೋಟದೊಳಗೆ
ನೀನಾಡಿದ್ದ ಮಾತುಗಳು
ಆಸೆಯಿಂದ ಕತ್ತೆತ್ತುತ್ತವೆ ಆಗಾಗ
ಹಳೆಯ ಆಲದ ಮರದ
ಪೊಟರೆಯೊಳಗಿನಿಂದ
ಮರಿ ಕೋಗಿಲೆಗಳು ಇಣುಕಿದ ಹಾಗೆ.
ಎಷ್ಟು ದೂರದವರೆಗೆ
ನಡೆದು ಬಂದಿವೆ ನೋಡು
ಆ ನೆನಪುಗಳು ಬರಿಗಾಲಿನಲ್ಲಿ.
ಬೇಸಿಗೆಯಿಂದ ಮಳೆಯವರೆಗೆ
ಬಾಲ್ಯದಿಂದ ತಾರುಣ್ಯದವರೆಗೆ
ಅಡಗಿ ಕುಳಿತು
ಸಂಭಾಷಿಸುತ್ತವೆ ಕೆಲವು
ತಮ್ಮ ತಮ್ಮಲ್ಲೇ
ಒಳಕೋಣೆಯೊಳಗೆ.
ಎಲ್ಲವೂ ನೆನಪಿದೆ ನನಗೆ
ನಿನ್ನ ಪ್ರೀತಿ. ನಿನ್ನ ಮಾತು..
ತಿಳಿ ಹಾಸ್ಯ ಮತ್ತು ನಿನ್ನ ನಗೆ.
ನೇರಳೆ ಹಣ್ಣೆಂದು ತಿನ್ನಿಸಿದ
ಬೇವಿನ ಹಣ್ಣಿನ ರುಚಿಯೂ
ಮರೆತಿಲ್ಲ ಇನ್ನೂ ನನಗೆ
ಕಹಿ ಹಾಗೆಯೇ ಉಳಿದುಕೊಂಡಿದೆ..
ನಾಲಿಗೆಯ ಮೇಲೆ.
********