ಗಝಲ್
ಸುಜಾತಾ ಲಕ್ಮನೆ
ಗಂಟಿಕ್ಕಿ ಹುರಿ ಹುಬ್ಬು ಹಾರಿಸಿದಂತೆಲ್ಲ ನಾನೇನೂ ಬೆದರುವುದಿಲ್ಲ
ಪೊದೆ ಮೀಸೆಯಲ್ಲೇ ರೋಷ ಉಕ್ಕಿಸಬೇಡ ಸೊಪ್ಪು ಹಾಕುವುದಿಲ್ಲ
ತವರಲ್ಲಿ ಮುದ್ದಾಗಿ ಅಂಗೈಲೇ ಬುವಿ ಬಾನು ದೋಚಿದವಳು ನಾನು
ಕಣ್ಣಲ್ಲೇ ಕೆಣಕಿದಂತೆಲ್ಲ ಮೈ ಮನದ ಕಣಗಳೆಲ್ಲ ನವಿರೇಳುವುದಿಲ್ಲ
ನಿನ್ನಂತೆಯೇ ಆಡಿ ನಲಿದು ಬಣ್ಣದ ಲಂಗದಲಿ ಕನಸ ಜೀಕಿದವಳು
ಮಾತು ಮೌನಕೆ ಮಣಿವ ಬೆಳ್ನಗೆಯಲಿ ಸ್ವಂತಿಕೆ ನಳನಳಿಸುವುದಿಲ್ಲ
ನಿನ್ನ ಸೇವೆಯೇ ಎನ್ನ ಜೀವನದ ಪರಮ ಗುರಿಯೆಂಬ ಭ್ರಮೆಯೇಕೆ
ಸದಾ ಕೀಲುಗೊಂಬೆಯಂತೆ ನಡೆವ ಪರಿ ನನಗೂ ಇಷ್ಟವಾಗುವುದಿಲ್ಲ
ಕಾಲ ಮೇಲೆ ಕಾಲು ಹಾಕಿ ಕೂತು ಗಂಡು ಜನ್ಮವೆಂಬ ಬೀಗುವಿಕೆಯೇ
ಮಗ್ಗಲಿಗೆಳೆದು ಬರಸೆಳೆದರೆ ಹಗಲಿಡಿಯ ದರ್ಪ ಮರೆಯಾಗುವುದಿಲ್ಲ
ಒಮ್ಮೆಯಾದರೂ ಅಹರ್ನಿಶಿ ನಾ ಏಗಿದಂತೆ ಏಗಬಲ್ಲೆಯ ನೀನೂನು
ಒಡಲಗುದಿಯ ಸವರದಿರೆ ದಾಂಪತ್ಯ ಒಳಗೊಳಗೆ ಪದುಳಿಸುವುದಿಲ್ಲ
ನಿನಗಿರುವಂತೆಯೇ “ಸುಜೂ” ಗೂ ತನ್ನವರ ಹಿತಾಸಕ್ತಿ ಇರಬಾರದೇನು
ನಿನ್ನ ವರ್ತುಲವೇ ಅಂತಿಮವಾದರೆ ಸಾಮರಸ್ಯ ಸೊಗಯಿಸುವುದಿಲ್ಲ
*************
ಗಂಡಿನ ಧರ್ಪ ಖಂಡಿಸುತ್ತಲೇ ಪ್ರತಿಭಟನೆಯ ಜಾಡು ಹಿಡಿವ ಗಜಲ್ ಬೆಳೆವ ರೀತಿ ಚಂದ..
1995 ರ ತುಷಾರದಲ್ಲಿ ನಿಮ್ಮ ಕಂಡ ನೆನಪು..
ನಾನು ಕೂಡ ಆಗಿನ ತುಷಾರದ ಪ್ರೋತ್ಸಾಹದಿಂದಲೇ ಬೆಳೆದು ಬಂದವನು..
* ಫಾಲ್ಗುಣ ಗೌಡ ಅಚವೆ