ಅನುಭವ

                      ಮನೆ……. ಹಕ್ಕಿ ಮನೆ



ಅನುಪಮಾ ರಾಘವೇಂದ್ರ

                      ಮನೆ……. ಹಕ್ಕಿ ಮನೆ

       ಈ ಮರೆವು  ಅನ್ನೋದು ಮನುಷ್ಯರಿಗೆ ಮಾತ್ರವೋ….? ಅಲ್ಲಾ ಪ್ರಾಣಿ ಪಕ್ಷಿಗಳಿಗೂ ಇರುತ್ತೋ…..? ನನಗೀ ಸಂಶಯ ಬರಲು ಕಾರಣವೇನೋ ಇದೆ. ಕೆಲವು ದಿನಗಳ ಹಿಂದಿನ ಘಟನೆ……

         ಸಂಜೆ ವೇಳೆ ಹಟ್ಟಿ ಬಳಿಗೆ ಹೋದಾಗ ಹಟ್ಟಿಯ ಒಳಗಿನಿಂದ ಹಕ್ಕಿಯೊಂದು ಪುರ್ರನೆ ಹಾರಿ ಹೋಯ್ತು. ಮರುದಿನ ಬೆಳಗ್ಗೆಯೂ ಅದೇ ರೀತಿ ಹಕ್ಕಿ  ಹಾರುವುದು ಕಂಡಿತು. ಹಕ್ಕಿಗಳ ಕಿಚ ಪಿಚ ಸುಮಧುರವಾದ ಸಂಗೀತ…… ನಾನು ಹೋದ ಕ್ಷಣದಲ್ಲಿ ನಿಂತು ಬಿಡುತ್ತದೆ. ನಾನು ಹೋಗುವುದನ್ನು ದೂರದಿಂದಲೇ ಕಂಡು  ಹಾರಿ ಹೋಗುತ್ತದೆ. ಪದೇ ಪದೇ ಘಟನೆ ಮರುಕಳಿಸಿದಾಗ ಏನೋ ಕುತೂಹಲ……. ಅಡಗಿ ನಿಂತು ಗಮನಿಸಿದೆ. ಹಟ್ಟಿಯ ಗೋಡೆಯಲ್ಲಿ ಹಲವಾರು ಕಿಂಡಿಗಳಿವೆ.  ಒಂದು ಕತ್ತಲಿನ ಮೂಲೆಯ ಕಿಂಡಿಯಲ್ಲಿ ಹಕ್ಕಿಯೊಂದು ಮನೆ ಕಟ್ಟಿಕೊಂಡಿದೆ.

       ಹುಲ್ಲಿನ ಮನೆಯೋ….., ಹಂಚಿನ ಮನೆಯೋ…..,ತಾರಸೀ ಮನೆಯೋ….. ವ್ಯತ್ಯಾಸವೇ ಇಲ್ಲ. ಮಣ್ಣಿನ ನೆಲವೋ…. , ಸಿಮೆಂಟ್ ನೆಲವೋ…., ಗ್ರಾನೈಟ್ ನೆಲವೋ….. ಸಂಶಯವೂ ಇಲ್ಲ.  ಆಹಾ…… ಬೇರು ನಾರುಗಳನ್ನು ಸೇರಿಸಿ ನಿರ್ಮಿಸಿದ ಸುಂದರವಾದ ಮನೆ. ಮನೆ ಅನ್ನುವುದಕ್ಕಿಂತಲೂ ಪುಟ್ಟ ಗೂಡು ಎನ್ನುವುದೇ ಸೂಕ್ತವಲ್ಲವೇ…..  ಗೂಡಿನ ಸುತ್ತಮುತ್ತ ಸೂಕ್ಷ್ಮವಾಗಿ ಗಮನಿಸಿದೆ. ಒಂದು ಕಿಂಡಿಯಲ್ಲಿ ಗೂಡು , ಪಕ್ಕದ ಎರಡು ಕಿಂಡಿಗಳಲ್ಲಿ ಅಲ್ಪ ಸ್ವಲ್ಪ ಬೇರು ನಾರುಗಳು , ಅರೆಬರೆ ಕಟ್ಟಿದ ಗೂಡು….! ಇದೇಕೆ ಹೀಗೆ….? ಗೂಡು ಕಟ್ಟುವಾಗ ಯಾವ ರೀತಿಯ ನಾರುಗಳು ಬೇಕು ಎಂಬ ಆಯ್ಕೆಗಾಗಿ ತಂದು ಇಟ್ಟಂತೆಯೂ ಕಾಣುವುದಿಲ್ಲ.  ಗೂಡು ಕಟ್ಟಲು ಆರಂಭಿಸಿದ ಹಕ್ಕಿಗೆ ತಾನು ಯಾವ ಕಿಂಡಿಯಲ್ಲಿ ಗೂಡು ಕಟ್ಟುತ್ತಿರುವೆ ಎಂಬುದು ಮರೆತು ಹೋಗಿರಬಹುದೇ….? ‘ಮರೆವು ಎಂಬುದು ಮನುಷ್ಯರಿಗೆ ಮಾತ್ರವೇ…? ಪ್ರಾಣಿ ಪಕ್ಷಿಗಳಿಗೂ ಇದೆಯೇ…..?’ ಎಂಬ ಸಂಶಯ ನನಗೆ ಬಂದದ್ದು ಈ ಕಾರಣಕ್ಕಾಗಿ.   

     ದಿನದಲ್ಲಿ ಕಡಿಮೆಯೆಂದರೆ ನಾಲ್ಕು ಬಾರಿಯಾದರೂ ಹಟ್ಟಿಗೆ ಹೋಗಿ ನೋಡುವ ಹುಚ್ಚು. ಇಷ್ಟಾದರೂ ಹಕ್ಕಿ ನನ್ನ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸಿಕೊಳ್ಳಲೇ ಇಲ್ಲ.  ಆ ದಿನ ಗೂಡಿನಲ್ಲಿ ಕಂಡದ್ದು ಮೂರು ಮೊಟ್ಟೆ! ತವರಿಗೆ ಬಂದವಳ ಬಾಣಂತನ ಮಾಡಿಸಿ ಕಳುಹಿಸುವ ಜವಾಬ್ದಾರಿ ಇಲ್ಲವೇ….. ಪ್ರತಿದಿನ ಹಟ್ಟಿಯ ಒಂದು ಮೂಲೆಯಲ್ಲಿ ಒಂದಿಷ್ಟು  ಗೋಧಿ, ಭತ್ತ, ಅಕ್ಕಿಕಾಳುಗಳನ್ನು ಇಟ್ಟೆ. ಹಕ್ಕಿ ಮೊದಲೆರಡು ದಿನ ನಾನಿಟ್ಟ ಕಾಳುಗಳ ಕಡೆ ತಿರುಗಿಯೂ ನೋಡದ್ದು ನನ್ನ ಮನಸಿಗೇಕೋ ಬೇಸರ. ಮತ್ತೆರಡು ದಿನ ಕಳೆದಾಗ ನಾನಿಡುವ ಕಾಳುಗಳನ್ನು ಆಸೆಯಿಂದ ಆರಿಸಿಕೊಂಡದ್ದು ಸುಳ್ಳಲ್ಲ. ಮೊಟ್ಟೆಯೊಡೆದು ಮರಿಗಳು ಹೊರ ಬರುವ ಕ್ಷಣಕ್ಕಾಗಿ ತಾಯಿ ಹಕ್ಕಿಗಿಂತ ಹೆಚ್ಚು ಕಾತರದಿಂದ ಕಾದುಕೊಂಡಿರುವವಳು ನಾನೇ ಏನೋ……?

   ಅದೊಂದು ದಿನ ಗೂಡನ್ನು ಇಣುಕಿ ನೋಡುವಾಗ ಮುದ್ದು ಮುದ್ದಾದ ಮೂರು ಪುಟಾಣಿಗಳು. ನಾನು ಅಲ್ಲಿಗೆ ಹೋಗುತ್ತಿದ್ದಂತೆ ಇನ್ನೂ ಕಣ್ಣು ಬಿಡದ ಪಾಪಚ್ಚಿಗಳು ಕೊಕ್ಕನ್ನು ದೊಡ್ಡದಾಗಿ ತೆರೆದು , ಚಿಂವ್ ಚಿಂವ್ ದನಿಯೊಂದಿಗೆ ತಲೆ ಎತ್ತಿದವು. ಪಾಪ…. ಅಮ್ಮ ಬಂದಿರಬಹುದೆಂಬ ಭಾವ. ಅಮ್ಮ ಎಲ್ಲೋ ಆಹಾರದ ಅನ್ವೇಷಣೆಯಲ್ಲಿರಬಹುದು. ಅವುಗಳಿಗೇನು ನಮ್ಮಂತೆ ಎಣ್ಣೆ- ನೀರೇ…… ಬಾಣಂತನವೇ…. ನನಗೆ ಮಗ ಹುಟ್ಟಿದ ಸಮಯದಲ್ಲಿ ಎರಡು ತಿಂಗಳು ಕೋಣೆಯೊಳಗೆ ಬಂಧಿಯಾಗಿದ್ದು, ಎಣ್ಣೆ ಹಚ್ಚಿ , ಬಿಸಿ ನೀರು ಸ್ನಾನ , ಪಥ್ಯದ ಊಟ , ವಿಶ್ರಾಂತಿ ಎಲ್ಲ  ನೆನಪುಗಳೂ ಮರುಕಳಿಸಿದವು. ಅಷ್ಟೊತ್ತಿಗಾಗಲೇ ಒಂದು ಹಕ್ಕಿ ಬಾಯಿಯಲ್ಲಿ ಏನನ್ನೋ ಕಚ್ಚಿಕೊಂಡು ಹಾರಿ ಬರುವುದು ಕಂಡೆ. ಅದರ ಅಮ್ಮನೋ …. ಅಪ್ಪನೋ ಅರಿಯೆ . ನನ್ನನ್ನು ಕಂಡು ದೂರದಲ್ಲೇ ಕುಳಿತುಕೊಂಡಿತು. ನನ್ನಿಂದಾಗಿ ಪುಟಾಣಿಗಳು ಹಸಿದುಕೊಂಡಿರುವುದು ಬೇಡವೆಂದು ದೂರ ಸರಿದೆ. ಮಕ್ಕಳಿಗೆ ತಿನ್ನಿಸಿ ಪುರ್ರನೆ ಹಾರಿ ಹೋಯಿತು.

      ಮನೆಯೊಳಗಿದ್ದರೂ ನನ್ನ ಮನಸೆಲ್ಲ ಪುಟ್ಟ ಕಂದಮ್ಮಗಳ ಕಡೆಗೇ ಇತ್ತು. ಮೂರು ಮಕ್ಕಳಲ್ಲಿ ಎಷ್ಟು ಹೆಣ್ಣು….?  ಎಷ್ಟು ಗಂಡು …?ಎಂಬ ಯೋಚನೆ ಒಂದು ಕಡೆ .  ಪ್ರಾಣಿ ಪಕ್ಷಿಗಳು ಹೆಣ್ಣು ಗಂಡೆಂಬ ಬೇಧ ಭಾವ ಮಾಡುತ್ತವೆಯೇ…? ಅದೇನಿದ್ದರೂ ನಮ್ಮಂತಹ ಮನುಷ್ಯರಿಗೇ ಎಂಬ ಯೋಚನೆ ಇನ್ನೊಂದು ಕಡೆ. ನಮಗೆ ಮನೆಯೊಳಗೆ ಗಂಡು ಬೇಕು . ಹಟ್ಟಿಯಲ್ಲಿ ಹೆಣ್ಣೇ ಬೇಕು. ಎಲ್ಲದರಲ್ಲಿಯೂ ತನ್ನ ಲಾಭವನ್ನೇ ನೋಡುವ ಸ್ವಾರ್ಥಿಗಳು….!

      ಆಗಾಗ ಹೋಗಿ ಗೂಡನ್ನು ಇಣುಕಿ ನೋಡುವುದು ಅಭ್ಯಾಸವಾಯ್ತು. ಸಣ್ಣ ಸದ್ದಾದರೂ  ತಿನ್ನಲು ಬಂದಿರಬಹುದೆಂದು ಬಾಯಿ ತೆರೆಯುವುದು, ಉಳಿದ ಸಮಯದಲ್ಲಿ ನಿದ್ದೆ ಮಾಡುವುದು ಈ ಮರಿಗಳಿಗೆ ಇಷ್ಟೇ ಕೆಲಸವೋ….. ನನ್ನ ಕಲ್ಪನೆಗೆ ನನಗೇ ನಗು ಬಂತು. ಚಿಕ್ಕ ಮಗುವಿನ ಮೂಗು, ತುಟಿಗಳನ್ನು ಮುಟ್ಟಿದರೆ ತಿನ್ನಲು ಬಾಯಿ ತೆರೆಯುತ್ತದೆ. ಉಳಿದ ಸಮಯದಲ್ಲಿ ಮಲಗಿ ನಿದ್ರಿಸುತ್ತದೆ. ಇದು ಸಹಜ ತಾನೇ…. ಎಲ್ಲಾ ಜೀವಿಗಳೂ ಅದರದರ ಕಾಲಕ್ಕೆ ಆಯಾ ಕೆಲಸ ಕಾರ್ಯಗಳನ್ನು ಕಲಿತು ನಡೆಸಿಕೊಂಡು ಹೋಗುತ್ತವೆ.

           ನನ್ನ ಹೆಜ್ಜೆಯ ಸದ್ದಿಗೆ ಎಚ್ಚರಗೊಳ್ಳುವ ಮರಿಗಳು ಚಿಂವ್ ಚಿಂವ್ ಎನ್ನುತ್ತಾ ದೊಡ್ಡದಾಗಿ ಬಾಯಿ ಅಗಲಿಸುವುದನ್ನು ನೋಡುವುದೇ ಚಂದ.  ನನಗೆ ಇದೊಂದು ಆಟ. ಆ ಮರಿಗಳಿಗೆ ಎಷ್ಟು ಸಂಕಟವಾಗಿತ್ತೋ ಆ ದೇವರೇ ಬಲ್ಲ. ಈ ದೃಶ್ಯಗಳನ್ನು ಮೊಬೈಲಿನಲ್ಲಿ ಸೆರೆ ಹಿಡಿಯುವ ಬಯಕೆಯಾಗಿ ಮೊಬೈಲ್ ಹಿಡಿದು ಹಟ್ಟಿಯ ಕಡೆಗೆ ನಡೆದೆ. ಎಲ್ಲಿದ್ದನೋ ನನ್ನ ಮಗ…! ಕಣ್ಣೆದುರು ಪ್ರತ್ಯಕ್ಷ. ನನ್ನನ್ನು ತಡೆದು ನಿಲ್ಲಿಸಿ “ಏನು ಆಪುಟಾಣಿಗಳ ವಿಡಿಯೋ ಮಾಡುವ ಯೋಚನೆಯಾ…..?” ಕೇಳಿದ. “ಹೌದು ಎಷ್ಟು ಸುಂದರ ಮರಿಗಳು . ಅವುಗಳ ಚಿಂವ್ ಚಿಂವ್ ಕೂಗು, ಬಾಯಿ ಅಗಲಿಸುವ ದೃಶ್ಯ ಎಲ್ಲವೂ ಅದ್ಭುತ” ಎಂದೆ. “ಇನ್ನೂಕಣ್ಣು ಬಿಡದ ಮರಿಗಳಿಗೆ ಯಾಕೆ ಹಿಂಸೆ ಕೊಡುತ್ತೀ…? ಅವುಗಳಿಗೆ ನಿನ್ನಿಂದಾಗಿ ತೊಂದರೆ “ ಎಂದ. “ತೊಂದರೆ ಏನಿಲ್ಲ. ನಾನು ಅವುಗಳನ್ನು ಮುಟ್ಟುವುದೇ ಇಲ್ಲ. ಸುಮ್ಮನೆ ನೋಡಿ ವಿಡಿಯೋ ಮಾಡಿ ಬರುವೆ” ಎಂದೆ. “ ನಿನ್ನಿಂದಾಗಿ ಆ ಮರಿಗಳ ನಿದ್ರೆ ಹಾಳಾಗಲೂ ಬಹುದು. ನಿನ್ನನ್ನು ಅಲ್ಲಿ ಕಂಡು ಅದರ ಅಮ್ಮ ಹತ್ತಿರ ಬರದೇ ಇರಲೂ ಬಹುದು. ನಿನಗೆ ನೆಮ್ಮದಿಯಲ್ಲಿರುವವರನ್ನು ಕಂಡರೆ ಹೊಟ್ಟೆ ಉರಿಯಾ…? ನಾನು ಬೆಳಗ್ಗೆ ಒಳ್ಳೆ ನಿದ್ದೆಯಲ್ಲಿರುವಾಗಲೂ ಹೀಗೇ ಕಿರಿಕಿರಿ ಮಾಡ್ತಾ ಇರ್ತೀಯ….” ಅಂದ. ಅವನ ಮಾತಿಗೆ ಬೆಲೆ ಕೊಟ್ಟು ಆ ದೃಶ್ಯಗಳನ್ನು ಸೆರೆ ಹಿಡಿಯುವ ಯೊಚನೆ ಬಿಟ್ಟೆ. ಆದರೂ ಸಮಾಧಾನವೇ ಇಲ್ಲ. ಒಂದೆರಡು ಸಲ ಮೊಬೈಲ್ ತರುವ ಪ್ರಯತ್ನ ಮಾಡಿ ಸಿಕ್ಕಿ ಬಿದ್ದದ್ದೂ ಆಯ್ತು. ಮಗನ ಹದ್ದಿನ ಕಣ್ಣನ್ನು ತಪ್ಪಿಸಲು ಸಾಧ್ಯವಾಗಲೇ ಇಲ್ಲ. ಕೊನೆಗೆ ,  ಫ್ಲ್ಯಾಷ್ ಲೈಟ್ ಹಾಗೂ ಮೊಬೈಲ್ ಕಿರಣಗಳು ಪ್ರಾಣಿ ಪಕ್ಷಿಗಳಿಗೆ ಎಷ್ಟು ಹಾನಿಕಾರಕ .ಅದರಲ್ಲೂ ಇನ್ನೂ ಕಣ್ಣು  ಬಿಡದ ಮರಿಗಳಿಗೆ ಎಷ್ಟು ಮಾರಕ. ಇದು ಅಪರಾಧ ಕೂಡಾ….  ಎಂಬುದನ್ನು ಇಂಟರ್ ನೆಟ್ಟಿನಲ್ಲಿ ತೋರಿಸಿಕೊಟ್ಟ. ಮಕ್ಕಳಿಂದಲೂ ನಾವು ಕಲಿಯುವುದು ಸಾಕಷ್ಟಿದೆ ಎಂಬುದನ್ನು ಅರಿತುಕೊಂಡೆ. ಇದಾದ ಮೇಲೆ ಮನಸ್ಸು ಹಟ್ಟಿಯ ಕಡೆಗೆ ಸೆಳೆದರೂ ದೇಹಕ್ಕೆ ಕಡಿವಾಣ ಹಾಕಿ ನಿಲ್ಲಿಸಿದೆ. ದಿನಕ್ಕೊಂದೆರಡು ಬಾರಿ ದೂರದಿಂದಲೇ ನೋಡಿ ಸಮಾಧಾನ ಪಟ್ಟುಕೊಂಡೆ.

    ಆ ಹಕ್ಕಿಯ ಹೆಸರೇನೆಂದು ತಿಳಿಯುವ ಕುತೂಹಲದಿಂದ ಗೂಗಲಣ್ಣನಲ್ಲಿ ಜಾಲಾಡಿದೆ. ಹಕ್ಕಿಯನ್ನು ಸ್ಪಷ್ಟವಾಗಿ ನೋಡದ ಕಾರಣ ಗೂಗಲಣ್ಣ ಸರಿಯಾದ ಮಾಹಿತಿ ನೀಡಲಿಲ್ಲ.  ಅಲ್ಲೂ ಒಂದೇ ರೀತಿಯ ಹಕ್ಕಿಗಳು ಹಲವಾರು. ನಮ್ಮ ಆತ್ಮೀಯರೊಬ್ಬರಲ್ಲಿ ವಿಚಾರಿಸಿದಾಗ ,ಈ ಹಕ್ಕಿ ಕೆಂಪು ಕೊರಳಿನ ನೊಣ ಹಿಡುಕ (Tickle’s Blue flycatcher) ಎಂದು ತಿಳಿಯಿತು. ದಿನ ನಿತ್ಯ ನವಿಲು, ಕಾಗೆ , ಕೊಕ್ಕರೆ , ಮರಕುಟಿಗ , ಮಡಿವಾಳ ಹಕ್ಕಿಗಳನ್ನು ನೋಡಿ ಪರಿಚಯವಿದ್ದರೂ ಈ ಹೆಸರು ನನಗೆ ಹೊಸದು.

       ಕೊನೆಗೂ ಆ ದಿನ ಬಂದೇ ಬಂತು…….. ನಾನು ಹಟ್ಟಿಯ ಕಡೆಗೆ ಹೋಗುವಾಗ ದೊಡ್ಡ ಹಕ್ಕಿ ಅಲ್ಲೇ ಪಕ್ಕದಲ್ಲಿದ್ದ ಮರದಲ್ಲಿ ಕುಳಿತು ಜೋರಾಗಿ ಚೀರುತ್ತಿತ್ತು. ಆಶ್ಚರ್ಯವೆಂದರೆ ಯಾವತ್ತೂ ನನ್ನನ್ನು ಕಂಡ ಕೂಡಲೇ ಹಾರಿ ಹೋಗುತ್ತಿದ್ದ ಹಕ್ಕಿ ಇಂದು ಜಾಗ ಬಿಟ್ಟು ಕದಲಲೇ ಇಲ್ಲ. ಗೂಡಿನ ಕಡೆಗೆ ನೋಡಿದೆ . ಮರಿಗಳಿಲ್ಲ. ನನ್ನೆದೆ ಧಸಕ್ಕೆಂದಿತು. ಏನಾಗಿರಬಹುದು…..?  ಬೇರೆ ಯಾವುದಾದರೂ ಹಕ್ಕಿಗಳು ಧಾಳಿ ಮಾಡಿರಬಹುದೇ…….? ಹಾವೋ… ಬೆಕ್ಕೋ…… ಇನ್ಯಾವುದಾದರೂ ಪ್ರಾಣಿಗಳೋ ಆಕ್ರಮಣ ಮಾಡಿರಬಹುದೇ….? ನನ್ನ ಕೈ ಕಾಲುಗಳಲ್ಲಿ ಸಣ್ಣ ನಡುಕ. ನನಗೇ ಇಷ್ಟು  ಭಯವಾಗಿದೆ. ಇನ್ನು ಆ ಕಂದಮ್ಮಗಳ  ಅಪ್ಪ ಅಮ್ಮನ ಪರಿಸ್ಥಿತಿ …….. ಅಯ್ಯೋ…. ಯಾರಿಗೂ ಬೇಡಪ್ಪಾ…… ಆದರೂ ನನ್ನ ಕಣ್ಣುಗಳು ಸುತ್ತ ಮುತ್ತ ಹುಡುಕುತ್ತಲೇ ಇದ್ದವು. ಮರದ ಮೇಲಿದ್ದ ಹಕ್ಕಿಯ ಚೀರಾಟವನ್ನು ಗಮನಿಸಿದೆ. ಅದರ ದೃಷ್ಟಿ ಅಲ್ಲೇ ಕೆಳಗೇ ಇತ್ತು. ಆ ಕಡೆಗೆ ನೋಡಿದೆ. ಅಬ್ಬಾ…..ಮರಿ ಅಲ್ಲೇ ಇದೆ. ಹಾಗಿದ್ದರೆ ಹಕ್ಕಿಯ ಕಿರುಚಾಟ ಯಾಕಾಗಿ…..? ಆ ಮರಿ ಗೂಡಿನಿಂದ ಅಲ್ಲಿವರೆಗೆ ಹೇಗೆ ಬಂತು…? ಹೋ…… ಮಗ ಮೊತ್ತ ಮೊದಲ ಬಾರಿಗೆ ಅಂಬೆಗಾಲಿಟ್ಟು ಮುಂದೆ ಮುಂದೆ ಬರುವಾಗ ಮುಗ್ಗರಿಸಿದ್ದು , ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯಲು ಅಪ್ಪನ ಕೈಯ ಆಸರೆ ಬಯಸಿದ್ದು ಒಂದೊಂದಾಗಿ ಕಣ್ಣ ಮುಂದೆ ಬಂತು. ಅಂದರೆ ಈ ಮರಿಯೂ ಹಾರಲು ಕಲಿಯುತ್ತಿದೆ. ಮರದಲ್ಲಿದ್ದ ಹಕ್ಕಿ ಹುರಿದುಂಬಿಸುತ್ತಿದೆ. ಇನ್ನಷ್ಟು ಹತ್ತಿರದಿಂದ ಮರಿಯ ಫೊಟೋ ತೆಗೆಯಲು  ಹತ್ತಿರ ಹತ್ತಿರ ಹೋಗುತ್ತಿದ್ದಂತೆ ಆ ಮರಿಯೂ ಪುರ್ರನೆ ಹಾರಿ ಹೋಯ್ತು. ಅಷ್ಟು ಹೊತ್ತು ಚೀರಾಡುತ್ತಿದ್ದ ಹಕ್ಕಿ ಸಂತೋಷದಿಂದ ಹಾಡುತ್ತಾ ಹಾರಿತು. ಹಕ್ಕಿ ಮನೆಯೊಂದಿಗೆ ನನ್ನ ಮನವೂ ಬರಿದಾಯ್ತು.

      ಆ ಗೂಡು ಹಕ್ಕಿ ಜೋಡಿಯ ನಿರೀಕ್ಷೆಯಲ್ಲಿದೆಯೋ……. ಇಲ್ಲವೋ….  ನಾನರಿಯೆ. ನಾನಂತೂ ಇನ್ನೊಂದು ಹಕ್ಕಿ ಜೋಡಿಯ ನಿರೀಕ್ಷೆಯಲ್ಲಿರುವೆ.

************

5 thoughts on “ಅನುಭವ

  1. ಇದೇ ಅನುಭವ ನನಗೂ ಆಗಿತ್ತು, ನಮ್ಮ ಮನೆ ಯಲ್ಲಿ ಪಿಕಳಾರ, ಅಂದ್ರೆ ಬುಲ್ ಬುಲ್ ಹಕ್ಕಿ ಗೂಡುಕಟ್ಟಿ ಸಂತಾನೋತ್ಪತ್ತಿ ನಡೆಸಿತ್ತು.ನಿತ್ಯವೂ ಮನೆಯೊಳಗಿಂದ ಅಡಿ ಗೆ ಕೋಣೆಯಲ್ಲಿ ರುವಾಗ ಹಕ್ಕಿ ಗಳ ಶಬ್ದ, ಮನಸ್ಸು ತಡೆಯದೆ ಹೋಗಿ ನೋಡಿ ದರೆ ಹಕ್ಕಿ ಗಳು ಗೂಡು ಕಟ್ಟುವ ಸಂಭ್ರಮ ದಲ್ಲಿದ್ದ ವು.ನಿತ್ಯವೂ ಆಗಾಗ ಅವುಗಳ ಭೇಟಿ,ಮೂರು ಮರಿಗಳು ಬೆಳೆದು ನನ್ನೆದುರೇ ಪುರ್ರನೆ ಹಾರಿಹೋದವು,ಮನಸ್ಸಿಗೇನೋ ಖುಷಿ.ಕಾಯುತ್ತಿದ್ದೇನೆ ಈಗಲೂ ಇನ್ನೊಂದು ಜೋಡಿ ಗಾಡಿ, ನಿಮ್ಮ ಬರಹ ಉತ್ತಮ ವಾಗಿದೆ

    1. ಗಾಳಿ ಮಳೆಗೆ ಮರಬಿದ್ದು ಕುಟುರನ ಹಕ್ಕಿ ಮರಿಯನ್ನು ನನ್ನ ಅತ್ತೆ ಸಾಕಿದ ಘಟನೆನನ್ನ ಕಣ್ಮುಂದಿದೆ.

  2. ತುಂಬಾ ಭಾವನಾತ್ಮಕ ವಾಗಿ ಬರೆದಿದ್ದೀರ. ಚೆನ್ನಾಗಿದೆ

  3. ತುಂಬಾ ಚೆನ್ನಾಗಿದೆ ಈರೀತಿಯ ಅನುಭವಗಳು ನನಗೂ ಕೆಲವು ಭಾರಿ ಆಗಿವೆ, ನಿಮ್ಮ ಲೇಖನ ಓದುವಾಗ ನನಗೂ ನೆನಪುಗಳ ಸರಮಾಲೆ ಮರುಕಳಿಸಿತು.

Leave a Reply

Back To Top