ಮಹಿಳೆ

ನಾನು ಹೆಣ್ಣೆಂಬ ಹೆಮ್ಮೆ ನನಗಿದೆ!

ಐಶ್ವರ್ಯ .ಎಲ್

ನಾನೊಂದು ಹೆಣ್ಣಾಗಿ ಈ ವಿಷಯದ ಬಗ್ಗೆ ಬರೆಯೋಕೆ ನನಗ್ಯಾವ ಮುಜುಗರವಾಗ್ಲಿ, ಅವಮಾನವಾಗ್ಲಿ‌ ಇಲ್ಲ. ಬದಲಾಗಿ ನಾನೊಬ್ಬ ಹೆಣ್ಣೆಂಬ ಹೆಮ್ಮೆ ನನಗಿದೆ. ನೀವೆಲ್ಲ ಅನ್ಕೊಬಹುದು ಇದೇನು ಜಗಜ್ಜಾಹೀರು ಮಾಡೊ ವಿಷಯಾನ ಅಂತ ಆದ್ರೆ ಜಗತ್ತಿನ ಅದೆಷ್ಟೊ ಜೀವಗಳಿಗೆ ಗೊತ್ತಿಲ್ಲ ಹೆಣ್ತನದ ನಿಗೂಢತೆ, ನೋವುಗಳ ಬಗ್ಗೆ.

ಕಂಬಳಿ ಹುಳುವದು ರೆಕ್ಕೆ ಕಟ್ಟುವ ಕಾಲದಂತೆ ಮೊಣಕಾಲಿನವರೆಗೂ ಲಂಗವೆತ್ತಿ ಕುಂಟೆಬಿಲ್ಲೆ ಆಡುತ್ತಿದ್ದವಳಿಗೆ ಹಿಂದೆಂದೂ ಆಗದಂತ ಕಿಬ್ಬೊಟ್ಟೆಯ ಬಾಧ, ಅಲ್ಲಿಂದಲೇ ಶುರುವಾಯ್ತೆನೋ ಹೆಣ್ಣೊಬ್ಬಳ ದೈಹಿಕ ಹೋರಾಟ, ಮಾನಸಿಕ ಸ್ಥಿಮಿತಗಳ ತೊಳಲಾಟ, ಜಗತ್ತಿನೆದುರು ಎಲ್ಲವನ್ನೂ ಬಚ್ಚಿಟ್ಟು ಹೆಣ್ತನದ ನಿಗೂಢತೆಯನ್ನು ಕಾಪಾಡಿಕೊಳ್ಳೊ ಹಠ. ಸಣ್ಣದಾಗಿ ಕಿಬ್ಬೊಟ್ಟೆಯಿಂದ ಶುರುವಾದ ನೋವು ಬೆನ್ನು ಮೂಳೆಗೆಲ್ಲ ವ್ಯಾಪಿಸಿ ಒಟ್ಟಾಗೆ ಮುರಿದಂತಾಗಿ, ತೊಟ್ಟುಡುಗೆಗೆಲ್ಲ ತೇವವಾಗುಂತೆ ತೊಟ್ಟಿಕ್ಕುವ ಮುಟ್ಟು ಮಂದಿ ಮುಂದೆಲ್ಲ ಮುಜುಗರವ ತರಿಸುತ್ತೆ. ಮುಟ್ಟೆಂಬುದು ಮೂದಲಿಸೋ ವಿಷಯವಲ್ಲ. ಅದೊಂದು ಹೆಣ್ಣಿಗಿರುವ ದೈವೀ ಶಕ್ತಿ.
ಪುರಾಣದ ಪುಟಗಳನ್ನ ತಿರುವಿ ಹಾಕಿದ್ರೆ ಇಂದ್ರನು ವೃತ್ರಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಾಗ ಇಂದ್ರನಿಗೆ ಬ್ರಹ್ಮಹತ್ಯಾ ದೋಷ ಬರುತ್ತೆ. ಆಗ ಇಂದ್ರ ತನ್ನ ದೋಷಾನ ಮೂರು ಜನರಿಗೆ ಹಂಚುತ್ತಾನೆ. ನದಿ, ವೃಕ್ಷ, ಮತ್ತೆ ಹೆಣ್ಣು. ಆ ಹೆಣ್ಣೆ ಅದಿತಿ. ನೀರು ಹರಿಯುವಾಗ ನೊರೆಯಾಗಿ, ಮರದಲ್ಲಿ ಹಾಲಾಗಿ, ಹೆಣ್ಣಿಗೆ ರಕ್ತಸ್ರಾವದ ಮುಟ್ಟಾಗಿ. ಬಟ್ ಹೆಣ್ಣು ಯಾವತ್ತೂ ಇದನ್ನ ಶಾಪ ಅನ್ಕೊಂಡಿಲ್ಲ ಯಾಕಂದ್ರೆ ಹುಟ್ಟಿನ ಗುಟ್ಟಡಗಿರುವುದೇ ಈ ಮುಟ್ಟಲ್ಲಿ. ತಾಯ್ತನದ ಸುಖಕ್ಕೊಂದು ನೈಸರ್ಗಿಕ ಕ್ರೀಯೆ….
ಪ್ರತಿ ತಿಂಗಳು ಹೆಣ್ತನವ ನೆನಪಿಸಿ, ದೇಹವನ್ನೊಂಚೂರು ಹಿಂಸಿಸಿ ಹೆಣ್ಣನ್ನು ಜಗತ್ತಿನೆದುರು ಮತ್ತಷ್ಟು ಶಕ್ತಳನ್ನಾಗಿ ಬಿಂಬಿಸ್ತಿದೆ. ಮುಂದಲೆಯಲ್ಲಿ ನಾಲ್ಕು ಕೂದಲು ಉದುರಿದ್ರೆ ಸಾಕು ಊರೇ ತಲೆ ಮೇಲೆ ಬಿದ್ದಂಗೆ ಆಡೋ ಗಂಡಸರ ಎದುರು ಪ್ರತಿ ತಿಂಗಳು ಐದು ದಿನಗಳ ಕಾಲ ರಕ್ತದ ಮಡುವಲ್ಲಿದ್ರು ಯಾವುದನ್ನೂ ತೋರಿಸ್ಕೊಳದೆ ಎಂದಿನಂತೆ ತನ್ನ ಕೆಲಸದಲ್ಲಿ ಒಳಗೊಳಗೆ ನೋವನ್ನ ತಡೆದು ಹಿಡಿಯೊ ಶಕ್ತಿ ಹೆಣ್ಣಿಗಷ್ಟೆ ಇದೆ ಅನ್ಸತ್ತೆ. …

ಶಾಲೆಗೋ/ ಕೆಲಸಕ್ಕೊ ಹೋಗೊ ಹೆಣ್ಮಕ್ಕಳ ಮುಟ್ಟಿನ ದಿನಗಳು ಅವಳ ಬಟ್ಟೆಯ ಮೇಲಾದ ಒಂದೆರಡು ರಕ್ತದ ಹನಿಗಳ ಕಂಡು ನಕ್ಕಷ್ಟು ಸಲೀಸಲ್ಲ. ಮುಟ್ಟೆಂಬುದು ಮೊದಲೇ ನಿರ್ಧರಿಸಿ ಬರುವಂತದ್ದಲ್ಲ. ಅವಳ ದೈಹಿಕ, ಮಾನಸಿಕ, ಒತ್ತಡ, ಸ್ಥಿಮಿತಗಳ ಮೇಲೆ ಅವಲಂಬಿಸಿರತ್ತೆ.
ಯಾವುದೋ function ಅಥವಾ office. ಮೀಟಿಂಗ್
ಮಧ್ಯದಲ್ಲಿ ಮುಟ್ಟಾದರೆ ಧೀಡಿರನೆ ಎದ್ದು ಹೊರ ಹೋಗೊಕಾಗಲ್ಲ, ಎಲ್ಲರ ನಡುವೆನೆ ಆ ವಿಷಯವನ್ನ ಪ್ರಸ್ತಾಪಿಸೋಕು ಆಗಲ್ಲ. ಅದೆಲ್ಲ ಮುಗಿಯೊ ವರೆಗೂ ಕಾದಿದ್ದು ಎಲ್ಲರೂ ಹೋದ್ಮೆಲೆ ಏಳ್ಬೇಕು ಯಾಕಂದ್ರೆ ಹಿಂಭಾಗದಲ್ಲಾಗಬಹುದಾದ ಒದ್ದೆ ಎಲ್ಲಿ ಯಾರಿಗೆ ಕಾಣ್ಸತ್ತೊ ಅನ್ನೊ ಭಯ.‌ಹಿಂದೆ ತಿರುಗಿ ತಿರುಗಿ ನೋಡ್ಕೊಂಡು ಹೆಜ್ಜೆ ಅಂತರಾನ ಸಣ್ಣಕ್ಕಿಟ್ಟು ಹೆಣ್ತನಾನ ಕಾಪಾಡ್ಕೊಬೇಕು.
ಒಂದು ಹೆಣ್ಣು ಗಂಡಿನೆದುರು ದೈಹಿಕವಾಗಿ ಬೆತ್ತಲಾದಷ್ಟು ಮಾನಸಿಕವಾಗಿ ಬೆತ್ತಲಾಗಳಾರಳು. ಆದರೂ ತನ್ನ ಗಂಡನೆದುರು ಎಲ್ಲವನ್ನೂ ಹೇಳಿ ಕೊಳ್ತಾಳೆ ಅಂದ್ರೆ ಅವಳು ನಿಮ್ಮಿಂದ ಒಂದೆರಡು ‌ಸಮಾಧಾನದ ಮಾತುಗಳನ್ನೊ, ಸಾಂಗತ್ಯಾನೊ ಬಯಸ್ತಿದಾಳೆ ಅಂತ ಅರ್ಥ ಹೊರತು ನೀವು ಅವಳನ್ನ ಕೂರ್ಸಿ ಅಡುಗೆ ಮಾಡಿ ಹಾಕ್ಲಿ ಅಂತಲ್ಲ. ಜೀವನ ಪೂರ್ತಿ ನಿಮಗೋಸ್ಕರ ಅಂತಾನೆ ದುಡಿಯೊ ಅವಳಿಗೆ ಅದೆಷ್ಟು ಜನ ಗಂಡಂದಿರು ಅವಳ ಮುಟ್ಟಿನ ದಿನದಲ್ಲಿ ಅಡುಗೆ ಮಾಡಿ ಹಾಕ್ತಿರ?….

ಶಾಸ್ತ್ರ ಸಂಪ್ರದಾಯದ ಹೆಸರಲ್ಲಿ ಮೂರು ದಿನ ಹೊರಗಿಟ್ಟು ಮಾಡೋದು ಬೇಡ. ಮುಟ್ಟಿಂದಲೆ ಹುಟ್ಟು ಅನ್ನೊ ನಗ್ನ ಸತ್ಯ ಎಲ್ಲರಿಗೂ ಗೊತ್ತಿದ್ರು ಮುಟ್ಟದರೆ ಮೈಲಿಗೆ ಅನ್ನೊ ಅನಿಷ್ಟ ಪದ್ದತಿಗಳು ಇಂದಿಗೂ ಜೀವಂತವಾಗಿದೆ. ಮದುವೆ ಮುಂಜಿಗಳಿಗೆ , ಹಬ್ಬ ಸಂಭ್ರಮದಲ್ಲಿ ಪಾಲ್ಗೊಳ್ಳೊಹಾಗಿಲ್ಲ,ಹರಕು ಕಂಬಳಿ, ಹಳೆ ಬೆಡ್ ಶೀಟ್, ತಲೆದಿಂಬಿಗೊಂದೆರಡು ಗೋಣಿಚೀಲ, ಕೂತಲ್ಲಿಂದ ಏಳೊ ಹಾಗಿಲ್ಲ, ಅಬ್ಬಬ್ಬಾ ನಮ್ಮದೇ ದೇಹದ ಮೇಲೆ ನಮಗೆ ಜಿಗುಪ್ಸೆ ಬರೊತರ.
ಜಗತ್ತಿನಲ್ಲಿ ಯಾರು ಯಾರ ನೋವನ್ನೂ ಅನುಭವಿಸೋಕಾಗಲ್ಲ ಆದರೆ ಅನುಕಂಪದಿ, ಅನುರಾಗದಿ ಸ್ಪಂದಿಸಬಹುದು. ಒಬ್ಬ ಗಂಡನ ನಿಜವಾದ ಪ್ರೀತಿ ತಿಳಿಯೋದು ಹೆಣ್ಣಿನ ಅಸಹಾಯಕತೆಯಲ್ಲಿ ಮತ್ತೆ ಅವಳ ಅನಾರೋಗ್ಯದಲ್ಲಿ. ನೀವು ನಿಜವಾಗಲೂ ನಿಮ್ಮ ಹೆಂಡ್ತಿನ ಪ್ರೀತ್ಸೋದೆ ನಿಜವಾದ್ರೆ ಅವಳ ಮುಟ್ಟಿನ ದಿನಗಳಲ್ಲಿ ಸ್ನಾನಕ್ಕೆ ಬಿಸಿ ನೀರು ಕಾಯಿಸ್ಕೊಡಿ ತಲೆಯಿಂದ ಪಾದದವರೆಗೆ ಇಳಿಯೊ ಬಿಸಿ ನೀರಿನ ಮಜ್ಜನ ಅದೆಷ್ಟೊ ಹಿತ ಅನ್ಸತ್ತೆ. ಆ ಹೊತ್ತಲ್ಲಿ ದೈಹಿಕವಾಗಿ ಕಿರಿ ಕಿರಿ ಆಗ್ತಿರೊದ್ರಿಂದ ಮಾನಸಿಕವಾಗಿ ಸ್ವಲ್ಪ ಸಿಟ್ಟು ಬರ್ತಿರತ್ತೆ ಎರಡು ದಿನ ಸಮಾಧಾನದಿಂದ ಸುಧಾರಿಸ್ಕೊಳ್ಳಿ, ಮೆಡಿಕಲ್ಗಳಿಗೆ ಹೋಗಿ ಅವಳಿಗೆ ಬೇಕಾಗಿರೊ ಸ್ಯಾನಿಟರಿ ಪ್ಯಾಡ್ಗಳನ್ನ ತಂದು ಕೊಡಿ, ಅಂಗಡಿಗಳಿಗೆ ಹೋಗಿ ಇದ್ನೆಲ್ಲ ಕೇಳೊದ್ರಿಂದ ನೀವ್ಯಾರು ನಗೆಪಾಟಲಿಗೆ ಗುರಿಯಾಗಲ್ಲ, ಯಾಕಂದ್ರೆ ಹುಟ್ಟಿನ ಹಿಂದಿದ್ದ ಮುಟ್ಟಿನ ಮಹತ್ವ ತಿಳಿದ ಯಾವ ಗಂಡಸು ಕೂಡ ನಗೋದಿಲ್ಲ.ಗಂಡನಾದವನು ಮಾತ್ರ ಹೀಗಿರಬೇಕಂತಲ್ಲ ಒಬ್ಬ ಲವರ್, ಒಬ್ಬ ಅಣ್ಣನಾದವನೂ ಕೂಡ ಇದೆಲ್ಲ ತಿಳ್ಕೊಬೇಕು. ಯಾವ ಹೆಣ್ಣು ಕೂಡ ಬಾಯ್ಬಿಟ್ಟು ಹೇಳಲ್ಲ ಯಾಕಂದ್ರೆ ಮುಟ್ಟನ್ನೊದು ಬರಿ ಮೂರು ದಿನದ ಸಂಕಟವಲ್ಲ, ನೋವಿನ ಮೂಟೆಯಲ್ಲ, ಕಿಬ್ಬೊಟ್ಟೆಯಲ್ಲಾಗುವ ಏರು ಪೇರಿನ ಇಳಿವ ರಕ್ರಸ್ತಾವದಂತೆ ಮಾನಸಿಕ ಭಾವನೆಗಳ ತೊಳಲಾಟ…
ಹೆಣ್ತನಕ್ಕಿದು ಅನಿವಾರ್ಯ, ಅವಶ್ಯಕತೆ ಅನ್ನೋದು ಪ್ರತಿಯೊಂದು ಹೆಣ್ಣಿಗೂ ಅರ್ಥವಾಗಿದೆ ಇನ್ನೆನ್ನಿದ್ದರು ಅರ್ಥ ಮಾಡಿಕೊಳ್ಳುವ ಸರದಿ ಗಂಡಸರದ್ದೆ….

=======================================

ಪರಿಚಯ:

ಊರು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಪುಟ್ಟ ಹಳ್ಳಿ
ಓದಿದ್ದು ಬಿ.ಕಾಂ
ಪ್ರಸ್ತುತ ಬೆಂಗಳೂರಿನ ಒಂದು ಕಂಪನಿಯಲ್ಲಿ ಕೆಲಸ

Leave a Reply

Back To Top