ಅಜ್ಜನಮನೆಯೆನ್ನುವ ಜೀವನಪಾಠ…..

ಅಜ್ಜ ನೆನಪಿಗೆ ಬಂದಾಗಲೆಲ್ಲ ಅಜ್ಜನಮನೆ ಎನ್ನುವ ಮಮತೆಯ ಮಲ್ಹಾರವೊಂದು ಮನಸ್ಸನ್ನೆಲ್ಲ ತುಂಬಿಕೊಳ್ಳುತ್ತದೆ. ಈ ಪ್ರೀತಿ-ಮಮಕಾರಗಳ ಮೂಲವನ್ನೊಮ್ಮೆ ಕೆದಕಿ ನೋಡಿ! ಅಜ್ಜಿಯ ಸೆರಗಿನಂಚಿನ ಪ್ರೀತಿಯ ಸೆಲೆಯೊಂದು, ಅಜ್ಜನ ಕಿರುಬೆರಳಿನ ಅಭಯವೊಂದು ನಾವಿಡುವ ಪ್ರತೀ ಹೆಜ್ಜೆಯನ್ನೂ ಸಲಹುತ್ತಿರುತ್ತದೆ. ಎಷ್ಟೇ ಆಧುನಿಕ ಜೀವನಶೈಲಿಯಾದರೂ, ಅಪಾರವಾದ ಸ್ನೇಹಬಳಗವಿದ್ದರೂ ಅಜ್ಜ-ಅಜ್ಜಿ ಎನ್ನುವ ಪ್ರೀತಿಯ ಬಲೆಯೊಂದರಲ್ಲಿ ಬದುಕಿನುದ್ದಕ್ಕೂ ಬಂದಿಯಾಗಿರುತ್ತೇವೆ; ಅಚ್ಚರಿಯೆಂದರೆ ಆ ಬಂಧನ ನಮಗೆಂದೂ ಹೊರೆಯೆನ್ನಿಸುವುದಿಲ್ಲ. ಅಜ್ಜನ ಕಥೆಯಲ್ಲಿ ಬರುವ ನೂರಾರು ಮೂಟೆಗಳ ಭತ್ತದ ದಾಸ್ತಾನನ್ನು ರಾತ್ರೋರಾತ್ರಿ ಖಾಲಿ ಮಾಡಿದ ಇರುವೆಗಳ ದಂಡು, ಅಜ್ಜಿ ತೋರಿಸಿದ ಕಾಕಣ್ಣ ಗುಬ್ಬಣ್ಣನ ಸ್ನೇಹಲೋಕ ಯಾವುದೂ ಕಟ್ಟುಕಥೆಯೆನ್ನಿಸದೇ ವಯಸ್ಸಿಗನುಗುಣವಾಗಿ ರೂಪ ಬದಲಾಯಿಸಿ ನಮ್ಮೊಳಗೆ ಶಾಶ್ವತವಾಗಿ ಉಳಿದುಕೊಳ್ಳುತ್ತವೆ.


ಅಜ್ಜನ ಕಥೆಯಲ್ಲೊಬ್ಬ ರಾಜನಿದ್ದ. ಪ್ರಜೆಗಳಿಗೆಲ್ಲ ಪ್ರಿಯನಾಗಿದ್ದರೂ, ನೆರೆರಾಜ್ಯಗಳಿಗಿಂತ ಸುಭಿಕ್ಷವಾದ ರಾಜ್ಯ ತನ್ನದೆನ್ನುವ ಅಹಂಕಾರದಲ್ಲಿ ಮೆರೆಯುತ್ತಿದ್ದ. ಸಾಮಂತರಿಂದ ಕಪ್ಪಕಾಣಿಕೆಯಾಗಿ ಬಂದ ದವಸ-ಧಾನ್ಯಗಳ ಮೂಟೆಗಳನ್ನು ಗೋದಾಮುಗಳಲ್ಲಿ ಶೇಖರಿಸಿ, ಬರಗಾಲದ ಸಮಯದಲ್ಲೋ ಅಥವಾ ನೆರೆರಾಜ್ಯಗಳು ಸಹಾಯ ಕೋರಿ ಬಂದಾಗಲೋ ಸಮಯೋಚಿತವಾಗಿ ಉಪಯೋಗಿಸುತ್ತಿದ್ದ. ಗೋದಾಮುಗಳಿಗೆ ಕಾವಲುಗಾರರನ್ನು ನೇಮಿಸಿ, ತಾನೇ ಖುದ್ದಾಗಿ ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸುತ್ತಿದ್ದ. ಮೂರು ತಿಂಗಳಿಗೊಮ್ಮೆ ಆಸ್ಥಾನ ಪಂಡಿತರಿಂದ ದಾಸ್ತಾನಿನ ದಾಖಲೆಯನ್ನು ಪರಿಷ್ಕರಿಸಿ, ಶ್ರೀಮಂತಿಕೆಯ ಡಂಗುರ ಸಾರುತ್ತಿದ್ದ. ಕಪ್ಪ ಕೊಡಲಾಗದ ಸಾಮಂತರು, ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ರೈತರಿಗೆಲ್ಲ ರಾಜನ ಈ ಅಹಂಕಾರದ ಬಗ್ಗೆ ಅಸಮಾಧಾನವಿದ್ದರೂ, ಅಸಹಾಯಕತೆಯಿಂದ ಮೌನವಾಗಿ ಸಹಿಸುತ್ತಿದ್ದರು. ಒಮ್ಮೆ ಹೀಗೇ ಗೋದಾಮುಗಳ ಮೇಲ್ವಿಚಾರಣೆ ನಡೆಸುತ್ತಿದ್ದಾಗ ಚೀಲದಲ್ಲಿರುವ ಭತ್ತಗಳೆಲ್ಲ ಖಾಲಿಯಾಗುತ್ತಿರುವುದು ರಾಜನ ಗಮನಕ್ಕೆ ಬಂತು. ಕಾವಲುಗಾರರನ್ನು ಬದಲಿಸಿ ನೋಡಿದ; ಪ್ರಯೋಜನವಾಗಲಿಲ್ಲ. ದಿನಗಳು ಕಳೆದಂತೆ ಭತ್ತದ ಗೋದಾಮಿನಲ್ಲಿ ಖಾಲಿಚೀಲಗಳು ಮಾತ್ರ ಉಳಿದುಕೊಂಡವು. ಪರಿಹಾರವಿಲ್ಲದ ಈ ಸಮಸ್ಯೆ ರಾಜನಿಗೆ ಸವಾಲಾಗಿ ಪರಿಣಮಿಸಿತು. ಸೇನಾಧಿಪತಿ ತಾನೇ ಖುದ್ದಾಗಿ ಭತ್ತದ ಗೋದಾಮಿನ ಕಾವಲಿಗೆ ನಿಂತ. ಆದರೂ ಭತ್ತ ಮಾತ್ರ ಖಾಲಿಯಾಗುತ್ತಲೇ ಇತ್ತು. ಆಸ್ಥಾನ ಪುರೋಹಿತರನ್ನು ಕರೆಸಿ ಪೂಜೆ-ಪುನಸ್ಕಾರಗಳನ್ನು ಮಾಡಿಸಿದ. ಹೋಮ-ಹವನಗಳಿಂದಲೂ ಭತ್ತದ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ದಕ್ಷ ಹಾಗೂ ಬಲಿಷ್ಠನಾದ ತಾನು ಭತ್ತದ ಕಾಳಿನಿಂದ ಸೋಲನ್ನು ಅನುಭವಿಸಿದ ದುಃಖದಿಂದ ಅವಮಾನಿತನಾದ ರಾಜ, ಸಮಸ್ಯೆಗೆ ಪರಿಹಾರ ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಘೋಷಿಸಿದ. ರಾಜ್ಯದ ಮೂಲೆಮೂಲೆಗಳಿಂದ ವಿದ್ವಾಂಸರು, ಪಂಡಿತೋತ್ತಮರೆಲ್ಲ ಬಂದು ಗೋದಾಮನ್ನು ಜಾಲಾಡಿದರೂ ಭತ್ತ ಕಾಣೆಯಾಗಲು ಕಾರಣ ಸಿಗದೇ ರಾಜ ಪರದಾಡುತ್ತಿರುವಾಗ ಬಡರೈತನೊಬ್ಬ ಅರಮನೆಗೆ ಬಂದ. ರಾತ್ರಿ ತಾನೇ ಗೋದಾಮನ್ನು ಕಾವಲು ಕಾಯುವುದಾಗಿ ಹೇಳಿದ. ಕತ್ತಲಾಗುತ್ತಿದ್ದಂತೆ ಇರುವೆಗಳ ದಂಡೊಂದು ರಾಜಾರೋಷವಾಗಿ ಗೋದಾಮಿನೊಳಗೆ ಪ್ರವೇಶ ಮಾಡಿ ಶಿಸ್ತಿನಿಂದ ಭತ್ತವನ್ನು ಸಾಗಿಸುತ್ತಿರುವುದು ರೈತನ ಕಣ್ಣಿಗೆ ಬಿತ್ತು. ಕತ್ತಿ-ಗುರಾಣಿಗಳಿಲ್ಲದ ಇರುವೆಗಳ ಸೈನ್ಯವೊಂದು ತನ್ನನ್ನು ಸೋಲಿಸಿದ ಪರಿಗೆ ರಾಜ ಬೆರಗಾದ; ತಲೆಗೇರಿದ್ದ ಅಹಂಕಾರದ ಮದ ಕಳಚಿಬಿತ್ತು. ಅಂದಿನಿಂದ ಬಡಜನರಿಂದ ಕಪ್ಪ ವಸೂಲಿ ಮಾಡುವುದನ್ನು ನಿಲ್ಲಿಸಿದ. ಹೀಗೇ ಅಜ್ಜನ ಕಥೆಯ ಇರುವೆ ಒಂದು ಪಾಠ ಕಲಿಸಿದರೆ, ಆಮೆ ಇನ್ನೊಂದು ನೀತಿಯನ್ನು ಬೋಧಿಸಿತು. ಬಾಲ್ಯದ ಮನರಂಜನೆಗೆ ಒದಗಿಬಂದ ಕಥೆಗಳೆಲ್ಲ ಬದುಕಿನುದ್ದಕ್ಕೂ ಜೊತೆಗೇ ನಿಂತು ಕಾಲಕಾಲಕ್ಕೆ ಅಗತ್ಯವಿರುವ ಪಾಠಗಳನ್ನೆಲ್ಲ ಕಲಿಸಿದವು. ಇರುವೆಯ ದಂಡೊಂದು ಭತ್ತದ ಗೋದಾಮನ್ನು ಖಾಲಿ ಮಾಡುವುದು ಸತ್ಯಕ್ಕೆ ದೂರವಾದರೂ, ಅಹಂಕಾರವೊಂದು ತಲೆಗೇರಿದ ಅರಿವಾದಾಗಲೆಲ್ಲ ರಾಜನ ಅಸಹಾಯಕತೆ ಎದುರು ಬಂದು ನಿಂತಂತಾಗುತ್ತದೆ.


ಅಜ್ಜಿಯ ಕಥೆಯಲ್ಲೊಂದು ಹಳ್ಳಿಯಿತ್ತು. ಆ ಹಳ್ಳಿಯ ಜನರಷ್ಟೇ ಅಲ್ಲದೇ, ಪ್ರಾಣಿ-ಪಕ್ಷಿಗಳೂ ಸಹ ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದವು. ಊರಿನ ಕೊನೆಯಲ್ಲೊಂದು ದೊಡ್ಡ ಕೆರೆಯಿತ್ತು. ಆ ಕೆರೆಯ ಪಕ್ಕ ಗುಬ್ಬಣ್ಣನ ಹುಲ್ಲಿನ ಮನೆಯೊಂದಿತ್ತು. ಕೆರೆಗೆ ಬಟ್ಟೆ ತೊಳೆಯಲು ಬರುತ್ತಿದ್ದ ಕಾಕಣ್ಣ ಗುಬ್ಬಣ್ಣನೊಂದಿಗೆ ಸ್ನೇಹ ಬೆಳೆಸಿತು. ಒಂದು ಮಧ್ಯಾಹ್ನದ ಹೊತ್ತು ಬಟ್ಟೆ ತೊಳೆಯಲು ಬಂದ ಕಾಕಣ್ಣ ಗುಬ್ಬಣ್ಣನನ್ನು ಮಾತನಾಡಿಸಲು ಮನೆಯೊಳಗೆ ಹೋದರೆ, ಗುಬ್ಬಣ್ಣ ಕಾಣಿಸಲಿಲ್ಲ. ಮೂಲೆಯಲ್ಲಿದ್ದ ಗೂಡಿನಲ್ಲಿ ಗುಬ್ಬಣ್ಣನ ಮೂರು ಮೊಟ್ಟೆಗಳು ನಿಶ್ಚಿಂತೆಯಿಂದ ಬೆಚ್ಚಗೆ ಕುಳಿತಿದ್ದವು. ಅವುಗಳನ್ನು ನೋಡಿದ್ದೇ ಕಾಕಣ್ಣನ ಬಾಯಲ್ಲಿ ನೀರೂರಿ, ಗುಬ್ಬಣ್ಣನೊಂದಿಗಿನ ತನ್ನ ಸ್ನೇಹವನ್ನು ಮರೆತು ಮೂರೂ ಮೊಟ್ಟೆಗಳನ್ನು ತಿಂದು ಮುಗಿಸಿತು. ಕೆರೆಗೆ ನೀರು ತರಲೆಂದು ಹೋಗಿದ್ದ ಗುಬ್ಬಣ್ಣ ಮನೆಗೆ ಬರುವಷ್ಟರಲ್ಲಿ ಮನೆಯಿಂದ ಹೊರಹೋಗುತ್ತಿದ್ದ ಕಾಕಣ್ಣನನ್ನು ನೋಡಿದ್ದೇ ಸಂದೇಹದಿಂದ ಒಳಗೆ ಹೋಗಿ ನೋಡಿದರೆ, ಮೊಟ್ಟೆಗಳೆಲ್ಲ ಕಾಣೆಯಾಗಿದ್ದವು. ಕಾಕಣ್ಣನ ಮೋಸದಿಂದ ನೊಂದ ಅಸಹಾಯಕ ಗುಬ್ಬಣ್ಣ ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ದಿನಗಳನ್ನು ದೂಡುತ್ತಿತ್ತು. ಹೀಗಿರುವಾಗ ಮಳೆಗಾಲದ ಒಂದು ಸಂಜೆ ಕಾಕಣ್ಣ ತನ್ನ ಎರಡು ಮರಿಗಳೊಂದಿಗೆ ಆಶ್ರಯ ಕೋರಿ ಗುಬ್ಬಣ್ಣನ ಮನೆಗೆ ಬಂತು. ಸಗಣಿಮನೆಯಲ್ಲಿ ವಾಸಿಸುತ್ತಿದ್ದ ಕಾಕಣ್ಣನ ಮನೆ ಮಳೆಗೆ ಕರಗಿಹೋಗಿತ್ತು. ಕಾಕಣ್ಣನ ಅಸಹಾಯಕತೆಗೆ ಮರುಗಿ ಗುಬ್ಬಣ್ಣ ದ್ವೇಷ ಮರೆತು ಕಾಕಣ್ಣನನ್ನು ಕ್ಷಮಿಸಿ, ಕಾಕಣ್ಣನ ಮರಿಗಳನ್ನು ತನ್ನದೇ ಮರಿಗಳೆನ್ನುವ ಮಮಕಾರದಲ್ಲಿ ಕಾಪಾಡಿತು. ಕಾಕಣ್ಣ ಗುಬ್ಬಣ್ಣ ತಮ್ಮ ಸ್ನೇಹವನ್ನು ಮರಳಿ ಪಡೆದುಕೊಂಡು ಊರಿಗೊಂದು ಮಾದರಿಯಾದವು. ಹೀಗೇ ಪ್ರೀತಿ-ವಾತ್ಸಲ್ಯಗಳ ಕಥೆಗಳನ್ನು ಹೆಣೆಯುತ್ತ, ಸಹನೆ-ಸಾಮರಸ್ಯಗಳಿಂದ ಬದುಕನ್ನು ಹಸನಾಗಿಸಿಕೊಂಡ ಅಜ್ಜಿ ಕಲಿಸಿದ ಪಾಠಗಳನ್ನು ಕ್ಲಾಸ್ ರೂಮೊಂದು ಕಲಿಸಿಕೊಟ್ಟ ನೆನಪಿಲ್ಲ. ಉಪ್ಪಿನಕಾಯಿ ಆಸೆಗೆ ಮಾವಿನಹೋಳುಗಳಿಗೆ ಉಪ್ಪನ್ನು ಬೆರೆಸುವಾಗಲೆಲ್ಲ, ಆಸೆ-ಆಕಾಂಕ್ಷೆಗಳ ಹದ ತಪ್ಪದಂತೆ ಸಲಹುವ ಅಜ್ಜಿಯ ನೆನಪಿಗೆ ಶರಣಾಗುತ್ತೇನೆ.


ಅಜ್ಜಿಗೆ ಮಾವಿನಮರಗಳೆಡೆಗೆ ಅಪಾರವಾದ ಪ್ರೇಮವಿತ್ತು. ಬೇಸಿಗೆರಜದ ಅಜ್ಜನಮನೆಯ ಮಾವಿನ ಸೀಸನ್ನೆಂದರೆ ನಮಗೆಲ್ಲ ಹಬ್ಬ. ಮನಸೋಇಚ್ಛೆ ಮಾವಿನಹಣ್ಣು ತಿನ್ನುತ್ತಿದ್ದ ನಾವೆಲ್ಲ ಗೊರಟೆಯನ್ನು ಬಿಸಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಅಜ್ಜಿಯದಾಗಿತ್ತು. ಸಂಜೆಯಾಗುತ್ತಿದ್ದಂತೆ ಮೊಮ್ಮಕ್ಕಳನ್ನೆಲ್ಲ ಸೇರಿಸಿಕೊಂಡು ವಾಕಿಂಗ್ ಹೊರಡುತ್ತಿದ್ದ ಅಜ್ಜಿ, ಗೊರಟೆಗಳನ್ನೆಲ್ಲ ಹಳೆಯ ಪೇಪರಿನಲ್ಲಿ ಸುತ್ತಿ ಎಲ್ಲರ ಕೈಗೂ ಕೊಡುತ್ತಿದ್ದಳು. ಅಂಗಳದಂಚಿಗೋ, ದಾರಿಯ ಬದಿಯಲ್ಲೋ, ಬೆಟ್ಟದ ಖಾಲಿ ಜಾಗದಲ್ಲೋ ಅಂಗೈಯಗಲದ ಚಿಕ್ಕಚಿಕ್ಕ ಗುಂಡಿಗಳನ್ನು ತೆಗೆದು ಒಂದೊಂದೇ ಗೊರಟೆಯನ್ನು ಅವುಗಳಲ್ಲಿ ಹಾಕಿ ಮಣ್ಣು ಮುಚ್ಚುತ್ತಿದ್ದೆವು. ಬೇಸಿಗೆ ಮುಗಿದು ಮಳೆ ಶುರುವಾದಂತೆಲ್ಲ ಗೊರಟೆಗಳೆಲ್ಲ ಜೀವ ಪಡೆದು ಚಿಗುರೊಡೆಯುತ್ತಿದ್ದವು. ಚಿಗುರಿದ ಗಿಡಗಳಿಗೆಲ್ಲ ಅಜ್ಜಿ ಗಿರಿಜೆಯೆಂತಲೋ, ಗಂಗೆಯೆಂತಲೋ ನಾಮಕರಣ ಮಾಡುತ್ತಿದ್ದಳು. ಹೀಗೇ ಗಿಡ-ಮರಗಳನ್ನೆಲ್ಲ ಹೆಣ್ಣಾಗಿ ಅರಳಿಸಿದ ಅಜ್ಜಿ ಪ್ರಕೃತಿಯನ್ನು ತಾಯಿಯಾಗಿ ಪೊರೆದವಳು. ಮೊದಲಮಳೆಗೆ ಜೀವತಳೆದ ಪ್ರತೀ ಚಿಗುರನ್ನೂ ಅಜ್ಜಿಯ ಸೆರಗೊಂದು ನೆರಳಾಗಿ ಕಾಯುತ್ತಿರಬಹುದು.


ತನ್ನ ಮಮತೆಯ ನೆರಳಿನಲ್ಲಿ ಜೀವಕ್ಕೊಂದು ನೆಲೆ ಒದಗಿಸಿದ ಅಜ್ಜನಮನೆ ಕಲಿಸಿದ ಜೀವನ ಪಾಠಗಳೆಲ್ಲ ಇಂದಿಗೂ ಪ್ರಸ್ತುತ. ನೀತಿಕಥೆಗಳನ್ನು ಹೇಳುತ್ತಾ, ನೀತಿ ತಪ್ಪದೇ ಬದುಕಿದ ಅಜ್ಜ-ಅಜ್ಜಿ ಸಲಹಿದ ಮರಗಳ ಪೊಟ್ಟರೆಗಳಲ್ಲಿ ಇರುವೆಗಳ ಸೈನ್ಯವೊಂದು ಭತ್ತದ ರಾಶಿಯ ಮೇಲೆ ನಿಶ್ಚಿಂತೆಯಿಂದ ನಿದ್ರಿಸುತ್ತಿರಬಹುದು; ಪೊಟ್ಟರೆಯ ಸ್ವಲ್ಪ ಮೇಲೆ ಗುಬ್ಬಣ್ಣನ ಹುಲ್ಲಿನ ಬೆಚ್ಚನೆಯ ಮನೆಯೊಂದಿರಬಹುದು; ಮನೆಯೊಳಗೊಂದು ಪುಟ್ಟ ಗುಬ್ಬಣ್ಣ ರೆಕ್ಕೆ ಬಲಿಯುವ ಗಳಿಗೆಗಾಗಿ ಕಾಯುತ್ತಿರಬಹುದು. ಸಹನೆಯಿಂದ ಕಾದು, ಹದವಾಗಿ ಬಲಿತು ಈಗಷ್ಟೇ ನೆಲಕ್ಕುರುಳಿದ ಮಾವಿನಹಣ್ಣಿಗೆ ಅಜ್ಜಿಯ ಸೆರಗು ದೊರಕಿ ಗೊರಟೆಯೊಂದು ಗಿಡವಾಗಿ ಚಿಗುರುವಂತಾಗಲಿ. ಕಾಯುವ, ಚಿಗುರುವ ಪ್ರಕ್ರಿಯೆಗಳೆಲ್ಲವನ್ನೂ ಸಹನೆಯಿಂದ ಪೊರೆಯುವ ಅಜ್ಜನಮನೆಯ ಪ್ರೀತಿಯ ಅಲೆಯೊಂದು ಚಾಚಿರುವ ಅಂಗಾಲುಗಳನ್ನೆಲ್ಲ ಸ್ಪರ್ಶಿಸಿ ಹೃದಯದೆಡೆಗೆ ಹರಿಯುತ್ತಿರಲಿ.

*******

ಲೇಖಕರ ಬಗ್ಗೆ ಎರಡು ಮಾತು:

ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

3 thoughts on “

Leave a Reply

Back To Top