ಗಝಲ್
ಸ್ಮಿತಾ ಭಟ್
ಗೂಡಿನಲ್ಲಿ ಕನಸುಗಳು ಆಗಮನಕ್ಕಾಗಿ ಕಾಯುತ್ತಿವೆ
ಗಡಿಯಲ್ಲಿ ಬದುಕುಗಳು ಶಾಂತಿಗಾಗಿ ಕಾಯುತ್ತಿವೆ.
ಕುದಿಯುವ ಜ್ವಾಲಾಗ್ನಿ ಸಿಡಿದೇಳುವುದು ಸತ್ಯ
ಮೌನದಲಿ ಜೀವಗಳು ಪ್ರೀತಿಗಾಗಿ ಕಾಯುತ್ತಿವೆ
ಗಡಿ ಗೆರೆಗಳು ನೆಮ್ಮದಿಯ ನೀಡಿದ್ದುಂಟೇ ಎಲ್ಲಾದರೂ
ಬಲಿದಾನದ ದೀವಿಗೆಗಳು ಬೆಳಕಿಗಾಗಿ ಕಾಯುತ್ತಿವೆ
ಕೋಟೆ ಕಟ್ಟಿ ಆಳಿದವರೆಲ್ಲ ಉಳಿದಿರುವರೇ ಎಲ್ಲಾದರೂ
ಹೆಪ್ಪುಗಟ್ಟಿದ ದ್ವೇಷಗಳು ಸೋಲಿಗಾಗಿ ಕಾಯುತ್ತಿವೆ.
ಅಸ್ತ್ರ,ಶಸ್ತ್ರಗಳೇ ಮಾತಿಗಿಳಿಯುತ್ತಿವೆ ಜಗದೊಳಗೆ
ಅಮಾಯಕರ ಉಸಿರು ನಂಬಿಕೆಗಾಗಿ ಕಾಯುತ್ತಿವೆ.
ಯದಾ ಯದಾಹಿ ಧರ್ಮಸ್ಯ ಅನ್ನುತ್ತೀಯಲ್ಲೋ “ಮಾಧವ”
ಬುವಿಯೊಡಲ ನೋವುಗಳು ನಿನ್ನ ನ್ಯಾಯಕ್ಕಾಗಿ ಕಾಯುತ್ತಿವೆ
*********