ಸ್ವಾತ್ಮಗತ

ಪ್ರೋ.‘ಸಿಜಿಕೆ’ ಎಂಬ ರಂಗ ಪ್ರಜ್ಞೆ

ಪ್ರೋ.‘ಸಿಜಿಕೆ’ ಎಂಬ ರಂಗ ಪ್ರಜ್ಞೆಯೂ..!
ಸಿಜಿಕೆ ರಂಗ ದಿನವೂ.!!

‘ಸಿಜಿಕೆ’ ಎಂದರೆ ಅದೊಂದು ಮಹಾ ರಂಗಪರಂಪರೆಯ ಸಂಕೇತ. ತನ್ನ ಸುತ್ತಲಿನವರನ್ನು ಒಟ್ಟು ಸಮಾಜವನ್ನು ಸಾಂಸ್ಕೃತಿಕ, ರಾಜಕೀಯ ಪ್ರಜ್ಞೆ ಮತ್ತು ಹೋರಾಟದ ಮನೋಭಾವನೆಯ ರಂಗ ಚಟುವಟಿಕೆಗಳ ಮೂಲಕ ಪ್ರಭಾವಿಸಿದ ರಂಗ ಚೇತನ. ದೇಶ, ಕಾಲ ಆಯಾ ಸಂದರ್ಭದಲ್ಲಿ ಎದುರಿಸುವ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ರಂಗ ಬದ್ಧತೆಯೊಂದಿಗೆ ದಿಟ್ಟತನದಿಂದ ಮೆರೆದ ಮಹಾ ಜಗಜಟ್ಟಿ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಸಿ.ಜಿ.ಕೃಷ್ಣಸ್ವಾಮಿ ಪಕ್ಕಾ ದೇಸಿ ಪ್ರತಿಭೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಕನಾಮಿಕ್ಸ್‌ ಪ್ರೊಫೆಸರ್‌ ಆಗಿ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡುವುದರ ಜೊತೆಗೆ ರಾಜಧಾನಿ ಬೆಂಗಳೂರಿನ ಮೂಲಕ ಇಡೀ ನಾಡಿನ ಸಾಂಸ್ಕೃತಿಕ ಲೋಕ ಬೆಳಗಿದ ಪರಿಯೇ ಒಂದು ಅದ್ಭುತ ರಂಗ ಇತಿಹಾಸ.
ದೈಹಿಕವಾಗಿ ಸ್ವತಃ ಸಹಜವಾಗಿ ಓಡಾಡಲಾಗದ ಸ್ಥಿತಿ. ಆದರೂ ಏರಿದ್ದು ಮಾತ್ರ ರಂಗಕುದುರೆ. ಆಗಿನಿಂದ ಅಂದರೆ 80 ಮತ್ತು 90ರ ದಶಕದ ಅತ್ಯಂತ ಕ್ರಿಯಾಶೀಲ ಅವಧಿಯಿಂದ ಕೊನೆಗಾಲದವರೆಗೂ ಅವರು ರಂಗಭೂಮಿಯಲ್ಲಿ ಶರವೇಗದ ಸರದಾರ..!

ಜಂಗಮತ್ವ ಎನ್ನುವುದು ಅವರ ಒಟ್ಟು ಬದುಕಿನ ಸ್ವರೂಪವೇ ಆಗಿತ್ತು. ಕಲಾಕ್ಷೇತ್ರ ಹೆಚ್ಚೂ ಕಮ್ಮಿ ಅವರ ಕರ್ಮಭೂಮಿಯೇ ಆಗಿತ್ತು. ಸಂಸ ಬಯಲು ರಂಗಮಂದಿರದ ಖಾಲಿ ಸ್ಟೇಜ್‌ ಮೇಲೆ ಅಂಗಾತ ಮಲಗಿ ಆಕಾಶವನ್ನು ದಿಟ್ಟಿಸುತ್ತ ರಂಗಭೂಮಿಯಲ್ಲಿ ನವತಾರೆಗಳನ್ನು ಸೃಷ್ಟಿಸುವ ಕನಸು ಕಾಣುವುದು ಅವರ ಖಯಾಲಿಯೇ ಆಗಿತ್ತು. ಅಂಥ ಖಯಾಲಿಯಿಂದಲೇ ನಾಡಿನ ತುಂಬ ಹಲವು ರಂಗಪ್ರತಿಭೆಗಳು ದೊಡ್ಡ ಮಟ್ಟದ ಸ್ಟಾರ್‌ ಆಗಿದ್ದು. ತಮ್ಮ ತವರು ಜಿಲ್ಲೆಯ ಸಾಣೆಹಳ್ಳಿಯಲ್ಲೂ ಅವರು ಬೆಳೆಸಿದ ರಂಗಸಂಸ್ಕೃತಿ ಅವಿಸ್ಮರಣೀಯ.

ಸದಾ ಯುವ ಮನಸುಗಳು ಮತ್ತು ಕ್ರಿಯಾಶೀಲರ ಜೊತೆ ಒಡನಾಟದಲ್ಲಿರುತ್ತಿದ್ದ ಈ ರಂಗಚೇತನ ಕಟ್ಟಿದ ನಾಟಕಗಳೆಷ್ಟೊ, ನೀಡಿದ ಪ್ರಯೋಗಗಳೆಷ್ಟೋ. ಬೆಳೆಸಿದ ರಂಗಸಾಹಿತಿ, ನಿರ್ದೇಶಕ, ತಂತ್ರಜ್ಞ, ನಟ, ನಟಿಯರೆಷ್ಟೊ. ಅವರ ಎಲ್ಲ ರಂಗಪ್ರಯೋಗಗಳು ಆಯಾ ಕಾಲದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಕ್ಷಿ ಪ್ರಜ್ಞೆಯೂ ಹೌದು.
ಸಿಜಿಕೆ ಅವರ ‘ಒಡಲಾಳ’ ರಂಗಪ್ರಯೋಗ ರಂಗಭೂಮಿಯಲ್ಲಿ ಒಂದು ದೊಡ್ಡ ಮೈಲುಗಲ್ಲು. ಹಾಗೆಯೇ ಬೆಲ್ಚಿ, ಮಹಾಚೈತ್ರ, ದಂಡೆ, ಅಂಬೇಡ್ಕರ್‌, ರುದಾಲಿ ಇತ್ಯಾದಿ ರಂಗಪ್ರಯೋಗಗಳು ರಂಗಾಸಕ್ತರ ಜನಮಾನಸದಲ್ಲಿ ಅಚ್ಚಳಿಯದ ನೆನಪು. ಪ್ರಜ್ಞೆಯ ಭಾಗ.

ಮಹಾನ್‌ ರಂಗಜೀವಿ ಸಿಜಿಕೆ ಕಾಲವಾಗಿ (2006) ವರ್ಷಗಳೇ ಸಂದಿವೆ. ಅವರ ನೆನಪಿಗೆ ರಂಗಾಸಕ್ತರು ಸೇರಿ ‘ರಂಗನಿರಂತರ’ ಸಂಸ್ಥೆಯ ನೇತೃತ್ವದಲ್ಲಿ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ ಆಯೋಜಿಸುತ್ತ ಬಂದಿದ್ದಾರೆ. ಈ ವರ್ಷವೂ ರಂಗೋತ್ಸವದ ಐದು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ಕಳೆಕಟ್ಟಲಿದೆ. ಆ ಮೂಲಕ ಸಿಜಿಕೆ ಅವರನ್ನು ಅರ್ಥಪೂರ್ಣವಾಗಿ ಸ್ಮರಿಸಲಾಗುತ್ತಿದೆ.

ಸಿಜಿಕೆ ಬೀದಿರಂಗ ದಿನವೂ..!–

ಕನ್ನಡ ರಂಗಭೂಮಿ ಹಾಗೂ ಬೀದಿ ನಾಟಕಗಳಿಗೆ ಅಪಾರ ಕೊಡುಗೆ ನೀಡಿದ ಪ್ರಸಿದ್ಧ ರಂಗಕರ್ಮಿ ಸಿಜಿಕೆ ಅವರ ಹುಟ್ಟುಹಬ್ಬವನ್ನು ಜೂ. ೨೭ ರಂದು ಎಲ್ಲಾ ಕಡೆ ಯೂ ರಂಗಭೂಮಿಯ ಆಸಕ್ತಿ ಇರುವವರು ‘ಸಿಜಿಕೆ ಬೀದಿ ರಂಗ ದಿನ’ ವನ್ನಾಗಿ ವಿಶಿಷ್ಟವಾಗಿ ಆಚರಿಸರುತ್ತಾರೆ.

ನಗರದ ಸಂಸ್ಕೃತಿ ಪ್ರಕಾಶನ, ಚಿಗುರು ಕಲಾ ತಂಡ ಹಾಗೂ ಬೆಂಗಳೂರಿನ ಸಂಸ ಥಿಯೇಟರ್, ಅವಿರತ ಪುಸ್ತಕ ಹಾಗೂ ಬೆಂಗಳೂರು ಆರ್ಟ್ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಬೆಳಿಗ್ಗೆ ೧೦-೩೦ ಗಂಟೆಗೆ ಇಲ್ಲಿನ ರಾಘವ ಕಲಾ ಮಂದಿರದ ಆವರಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಜಾನಪದ, ಬೀದಿ ರಂಗ ಗೀತೆ, ಕ್ರಾಂತಿ ಹಾಗೂ ವೈಚಾರಿಕ ಗೀತೆಗಳನ್ನು ಪ್ರಸ್ತುತಪಡಿಸಲಾಗುವುದು.

ಸಿಜಿಕೆ ನೆನಪಿನಲ್ಲಿ ರಾಜ್ಯದ ೩೦ ಜಿಲ್ಲೆಗಳಲ್ಲಿ ಇಡೀ ದಿನ ವಿಚಾರ ಸಂಕಿರಣ, ಸಿಜಿಕೆ ರಂಗ ಹುಡುಕಾಟ, ಬೀದಿ ನಾಟಕ, ಸಿಜಿಕೆ ರಂಗ ಪುರಸ್ಕಾರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ.

ಹೀಗಿದೆ ಪ್ರೋ.ಸಿಜಿಕೆ ಪರಿಚಯ ಮತ್ತು ಸಿಜಿಕೆಯ ಬೀದಿ ರಂಗಭೂಮಿಯ ದಿನದ ಪ್ರಯೋಗಗಳ ಅವಿರತ ಪ್ರಯತ್ನವೂ.

*********

ಕೆ.ಶಿವು.ಲಕ್ಕಣ್ಣವರ

Leave a Reply

Back To Top