ಕಾವ್ಯಯಾನ

ಗಝಲ್

Wedding Rings

ಡಾ.ಗೋವಿಂದ ಹೆಗಡೆ

ಎಲ್ಲೆಲ್ಲೋ ನುಗ್ಗುತ್ತ ಸರಿಯಾದ ಹಾದಿ ಮರೆತುಹೋಗಿದೆ
ಬಳಸುದಾರಿಗಳ ಬಳಸುತ್ತ ನೇರದ ಹಾದಿ ಮರೆತುಹೋಗಿದೆ

ಒಂದೋ ಓಲೈಕೆ,ಹಲ್ಲುಕಿರಿತ ಅಥವಾ ಕತ್ತಿಮಸೆತ
ಮಾತು ಚರ್ಚೆಗಳಲ್ಲಿ ಸಹಜದ ಹಾದಿ ಮರೆತುಹೋಗಿದೆ

ಮತಿ ಕೃತಿಗಳ ನಡುವೆ ಎಷ್ಟು ಅಂತರ ಗೆಳೆಯ
ಎಲ್ಲವೂ ಇವೆ ಇಲ್ಲಿ, ಆತ್ಮದ ಹಾದಿ ಮರೆತುಹೋಗಿದೆ

ಮಾತು ಮನಸುಗಳಲ್ಲಿ ಪೇರಿಸಿದೆ ಪೆಡಸುತನ
ಬದುಕಿನ ಓಟದಲ್ಲಿ ಪ್ರೇಮದ ಹಾದಿ ಮರೆತುಹೋಗಿದೆ

ಎದೆಯ ಪಿಸುಮಾತುಗಳಿಗೆ ಜಾಗವೆಲ್ಲಿದೆ ಗೆಳತಿ
ನೋವಿನಲೆಗೆ ಕಿವಿಯಾದ ಹಾದಿ ಮರೆತುಹೋಗಿದೆ

ವ್ಯಕ್ತದ ಮೂಲಕ ಹಾದು ಅವ್ಯಕ್ತವ ಸೇರುವುದಿತ್ತು
ಎಲ್ಲಿ ಆ ದನಿ,ಅದು ತೋರಿದ ಹಾದಿ ಮರೆತುಹೋಗಿದೆ

ಹಗಲು ರಾತ್ರಿಗಳ ಲೋಲಕದಲ್ಲಿ ಸಿಲುಕಿದ್ದಾನೆ ‘ಜಂಗಮ’
ಹಿಡಿಯಬೇಕಿರುವ ಹೆಜ್ಜೆಮೂಡದ ಹಾದಿ ಮರೆತುಹೋಗಿದೆ

**********

Leave a Reply

Back To Top