ಶಪಿತೆ
ಜಯಲಕ್ಷ್ಮೀ ಎನ್ ಎಸ್
ಅವನೋ ಗಡ್ಡ ಬಿಟ್ಟ ಕಾವಿ ತೊಟ್ಟ
ಕಾವಿರದ ಕಸುವಿರದ ತಾಪಸಿ…
ಇವಳೋ ಕಾನನದ ಕಣಕಣವ
ಕ್ಷಣ ಕ್ಷಣದ ಚಮತ್ಕಾರಗಳ
ಆಸ್ವಾದಿಸಿ ಆನಂದಿಸುವ ಚಿರಯೌವನೆ…!
ಹಾರುವ ಪತಂಗಗಳ ಚಲ್ಲಾಟ
ಕಂಡು ಒಳಗೊಳಗೇ ಕುತೂಹಲ..
ಕಣ್ಣು ಹೊರಳಿಸಲು ಜೋಡಿ ಜೋಡಿ
ಚಿಗರೆಗಳ ಚಿನ್ನಾಟಕೆ ಮರುಳು…
ಕೊಳದೊಳಗೆ ಕೊಕ್ಕಿಗೆ ಕೊಕ್ಕನಿಟ್ಟು
ಮುತ್ತಿಕ್ಕುವ ಜೋಡಿ ಅಂಚೆಗಳ ಸಲ್ಲಾಪ…
ರೆಂಬೆ ಕೊಂಬೆಗಳಲ್ಲಿ ಜಕ್ಕವಕ್ಕಿಗಳ
ಸ್ವಯಂ ಭಾಷೆಯ ಚಿಲಿ ಪಿಲಿ ಮಾತುಕತೆ…!
ಸಂಗಾತಿಯ ಸೆಳೆವ ಮಯೂರ ನರ್ತನಕೆ
ಮೈಮರೆವ ಮಾಯಾಂಗನೆ…
ಗೋಶಾಲೆಯೊಳಗಿನ ಖರಪುಟದ
ಸದ್ದಿಗೆ ಕಲ್ಪನೆಯ ಕಾವು……!
ದುಂಬಿಗಳ ಝೇಂಕಾರಕೂ
ಕಿವಿ ನಿಮಿರಿಸುವಳು…
ಅರಗಿಳಿಗಳ ಪ್ರಣಯ ಸಂಭಾಷಣೆಯ
ಅರಿತವಳಂತೆ ನಾಚುವಳು……!
ಅವನೋ ಸಾಧನೆಯಲಿ ತಲ್ಲೀನ
ಇವಳು ಇರುಳು ಪಲ್ಲಂಗದಲೂ ಒಂಟಿ
ಕಣ್ಣು ಮುಚ್ಚಲು ಚಿತ್ತ ಕದಡುವ
ಹಗಲಿನ ಚಿತ್ತಾರದ ಕನಸುಗಳು….!
ಕಲ್ಲಾದವಳ ಮೊಗ್ಗಿನ ಮನಸನು
ಅರಳಿಸಿದವನೊಬ್ಬ ಸಮಯ ಸಾಧಕ..
ಹೂಮನದ ಕಾಮಿನಿಯ ಶಪಿಸಿ
ಜಡವಾಗಿಸಿದವನೊಬ್ಬ ಮೋಕ್ಷಸಾಧಕ…!
ಅವನು ಸಾಧಿಸಿದ್ದೇನನ್ನು
ಸಂಯಮವ ತೊರೆದು….!
ಇವಳ ನಡಿಗೆಯ ಹಾದಿಗೆ
ಜಾರುಬಂಡೆಯಾದ
ಉನ್ಮಾದಗಳ ಶಪಿಸಬೇಕಿತ್ತು..