ಆಗಂತುಕ ಮಳೆ
ಬಾಲಕೃಷ್ಣ ದೇವನಮನೆ
ಧೋ… ಧೋ… ಸುರಿವ
ಇಂಥದೇ ಧಾರಾಕಾರ ಮಳೆ ಬಂದಾಗ
ಹೃದಯದಲಿ ನೋವು ಹೆಪ್ಪುಗಟ್ಟಿ
ಹನಿಯುವ ಕಂಬನಿ ಮಳೆಯ ಜೊತೆ ತೋಯ್ದು ಮರೆಯಾಗುತ್ತದೆ.
ಕಳೆದ ಸಲ
ಮಳೆ ಸುರಿದು ನದಿ ಉಕ್ಕಿ,
ನುಗ್ಗಿದ ಪ್ರವಾಹ ಮನೆ ಹೊಸಿಲು ದಾಟಿ
ಹಿಂಬಾಗಿಲಲಿ ಹೊರಟಾಗ
ಮನೆಯೊಳಗಿನ ದವಸ-ಧಾನ್ಯ,
ದುಡ್ಡು-ಬಂಗಾರ, ಪಾತ್ರೆ-ಪಗಡೆ,
ಅರಿವೆಯಷ್ಟೇ ಅಲ್ಲ
ಕೊಟ್ಟಿಗೆಯ ದನಕರು
ಅಂಗಳದಲ್ಲಿ ಮಲಗುತ್ತಿದ್ದ ನಾಯಿ
ಮನೆಯೊಳಗೆ ಆಡುತ್ತಿದ್ದ ಬೆಕ್ಕು
ಮುಂಜಾವದಲಿ ಎಬ್ಬಿಸುತ್ತಿದ್ದ ಕೋಳಿ
ಆಸೆ ಕನಸುಗಳೆಲ್ಲವೂ
ರಾತ್ರೋರಾತ್ರಿ
ತೇಲಿ ಹೋಗುವಾಗ ಉಳಿದದ್ದು
ಗಂಜಿಕೇಂದ್ರದಲ್ಲಿದ್ದ ಜೀವ ಮಾತ್ರ!
ಮೇಲ್ಛಾವಣಿ ಕುಸಿದು
ಅಡ್ಡಡ್ಡ ಮಲಗಿದ ಗೋಡೆಗಳ ನಡುವೆ
ಕ್ಷಣಮಾತ್ರದಲಿ ಕೊಚ್ಚಿಹೋದ ಕನಸು
ವಿಲವಲ ಒದ್ದಾಡುವಾಗ
ಭಾವನೆಗಳು ಮಡುವುಗಟ್ಟಿ
ಉಮ್ಮಳಿಸುವ ದುಃಖ
ಮುರಿದ ಬದುಕು
ಕಂಬನಿಯಾಗಿ ಮಳೆಯೊಂದಿಗೆ ಹರಿದದ್ದು
ಯಾರಿಗೂ ಅರ್ಥವಾಗುವುದಿಲ್ಲ.
ಈಗೀಗ ಮಳೆಯೆಂದರೆ ಭಯ!
ಅದೂ ಧಾರಾಕಾರ ಮಳೆಯೆಂದರೆ ಮತ್ತೂ ಭಯ…!!
ಮತ್ತೆ ಕಟ್ಟಿಕೊಂಡ ಬಾಳ ಕನಸು
ದೇವರೇ ಕೊಚ್ಚಿ ಹೋಗದಿರಲಿ…