ಭಾಷೆ ಸಂಗಾತಿ
ರಾಜು ಪವಾರ್
ಮೂಲ ಹೆಸರು ಮರೆಯಾಗದಿರಲಿ

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ, ಕನ್ನಡಿಗನೇ ಸಾರ್ವಭೌಮ, ಕನ್ನಡ ನಮ್ಮನೆ ದೇವ್ರು! ಹೀಗೆ ಹಲವು ರೀತಿಯ ಕನ್ನಡ ಪ್ರೇಮ ಕನ್ನಡಿಗರಾದ ನಮ್ಮಲ್ಲಿ ಕಾಣುತ್ತೇವೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಕೂಡ ಎಲ್ಲ ನಾಮ ಫಲಕಗಳಲ್ಲಿ ಶೇ.೬೦ ಕನ್ನಡವಾಗಿರಬೇಕು ಎಂದು ಕಾನೂನು ಕೂಡ ಮಾಡಿದೆ.ಈ ಹಿಂದೆ ಇಂಗ್ಲೀಷಮಯವಾಗಿದ್ದ ಕೆಲ ಊರುಗಳ ಹೆಸರುಗಳನ್ನು ಸಹ ಕನ್ನಡಿಕರಣಗೊಳಿಸಿ ತನ್ನ ಕನ್ನಡ ಪ್ರೀತಿಯನ್ನು ತೋರಿಸುತ್ತ ಬಂದಿದೆ.ಆದರೆ ಕೆಲ ಅಚಾತುರ್ಯ, ಕನ್ನಡ ಅನುಷ್ಠಾನಗೊಳಿಸುವ ಅಧಿಕಾರ, ಕೆಲಸವನ್ನು ಕನ್ನಡಿಗರಲ್ಲದ ಅಧಿಕಾರಿಗಳಿಗೆ ವಹಿಸಿದಾಗ(ಕನ್ನಡಿಗರಾಗಿದ್ದೂ ಕನ್ನಡದ ಕಾಳಜಿ ಇಲ್ಲದವರಿದ್ದಾಗ) ಆಗುವ ನಷ್ಟ ಮಾತ್ರ ಕನ್ನಡಕ್ಕೆ. ಒಂದು ಕಡೆ ಗೂಗಲ್ ಮಾರಿಯ ಕದಂಬ ಬಾಹುವಿನಲ್ಲಿ ಕನ್ನಡದ ಹೆಸರುಗಳು ವಿಲ ವಿಲ ಅಂತ ಒದ್ದಾಡುತ್ತಿದ್ದರೆ ಮತ್ತೊಂದು ಕಡೆ ಕನ್ನಡಿಗರ ಅಚಾತುರ್ಯದಿಂದ ಕನ್ನಡದ ಮೂಲ ಹೆಸರಿಗೆ ಧಕ್ಕೆ ಬರತೊಡಗಿದೆ. ಇದಕ್ಕೊಂದು ಉದಾಹರಣೆ ಹಿಗಿದೆ….!
ಬ್ಯಾಂಕ್ ಕೆಲಸದ ನಿಮಿತ್ತ ಕೆಂಗೇರಿಯಿಂದ ಬಿಡದಿಗೆ ಹೊರಟಿದ್ದೆ. ಬಿ.ಎಂ.ಟಿ.ಸಿ ಯ ವಿದ್ಯುತ್ ಚಾಲಿತ ಬಸ್ ಹತ್ತಿದೆ. ಈ ತರದ ಬಸ್ ಹತ್ತಿದ್ದು ಇದೇ ಮೊದಲು.ಪರಿಸರ ಪ್ರೀತಿಯ, ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ಬಸ್ ಗಳು ಪರಿಣಾಮಕಾರಿಯೂ ಕೂಡ. ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ತಂತ್ರಜ್ಞಾನ ಬಳಸಿ ಆಯಾ ನಿಲ್ದಾಣ ಬಂದಾಗ ನಿಲ್ದಾಣದ ಹೆಸರನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಹೇಳುವ ವ್ಯವಸ್ಥೆ ಸೊಗಸಾಗಿದೆ ಹಾಗೂ ಉಪಕಾರಿಯೂ ಕೂಡ. ಹೊಸ ಪ್ರಯಾಣಿಕರಿಗೆ, ಮೊಬೈಲ್ ನಲ್ಲಿ “ಮುಳುಗಿ” ಕುಳಿತಿರುವ ಕೆಲ ಪ್ರಯಾಣಿಕರಿಗೆ ತಾವು ಇಳಿಯಬೇಕಾದ ನಿಲ್ದಾಣ ಬಂತು ಎಂದು ಎಚ್ಚರಿಸುವ ವ್ಯವಸ್ಥೆ ಎಲ್ಲರೂ ಮೆಚ್ಚಲೇ ಬೇಕು. ಆದರೆ ನಿಲ್ದಾಣಗಳ ಹೆಸರುಗಳನ್ನು ಹೇಳುವಾಗ,ಉಚ್ಚರಿಸುವಾಗ (ಧ್ವನಿಮುದ್ರಿಸುವಾಗ) ಸರಿಯಾಗಿ ಹೇಳಲಾಗಿದೆಯೇ,ಉಚ್ಚಾರಣೆ ಸ್ಪಷ್ಟವಾಗಿದೆಯೇ ಎಂದು ತಿಳಿದುಕೊಳ್ಳುವುದು ಮುಖ್ಯ. ಮೊಬೈಲ್ ನಲ್ಲಿ ಮಗ್ನನಾಗಿದ್ದ ನಾನು ‘ಚೆಕ್ ಪೋಸ್ಟ್’, ‘ರಾಜ ರಾಜೇಶ್ವರಿ ಆಸ್ಪತ್ರೆ’, ‘ರಾಮೋಹಳ್ಳಿ ಗೇಟ್’, ‘ಕುಂಬಳಗೋಡು’ ಹೀಗೆ ಪ್ರತಿ ನಿಲ್ದಾಣ ಬರುವ ಮುಂಚೆ ಧ್ವನಿ ಬರುತ್ತಿತ್ತು.ಆದರೆ ‘ರಾಮೋಹಳ್ಳಿ’ ಯನ್ನು ಇಂಗ್ಲೀಷ್ ನಲ್ಲಿ ಹೇಳುವಾಗ ‘ರಾಮೋಹಲ್ಲಿ’ ಎಂಬ ಉಚ್ಚಾರಣೆ ಕೇಳಿ ಕಸಿವಿಸಿಯಾಯಿತು. ಮುಂದೆ ಸಾಗುತ್ತ ‘ಕಣ್ಣು ಮಿಂಕಿ’ ಎಂದು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಧ್ವನಿ ಕೇಳಿಸಿತು. ಆದರೆ ಇದು ‘ಕಣಿಮಿಣಿಕೆ’ ಎಂದಾಗಬೇಕು (ಈ ಹಿಂದೆ ಹೀಗೆಯೇ ಬರೆಯಲಾದ ಫಕಲ ಇತ್ತು). ಮುಂದೆ ಸಾಗುತ್ತ ‘ದಲಾಯಿ ಲಾಮಾ ಇನ್ಸ್ಟಿಟ್ಯೂಟ್’ ನ್ನು ‘ದಾಯಿಲಾಮಾ……’ ಎಂದು ಉಚ್ಚರಿಸಿತು. ಹೀಗೆ ಕನ್ನಡದ, ಮೂಲ ಹೆಸರುಗಳನ್ನು ಅಪ ಭ್ರಂಶ ಮಾಡಿದರೆ ಹೇಗೆ!? ಇದು ಮೂಲ ಹೆಸರು ಮರೆಯಾಗುವುದಕ್ಕೆ ಮುನ್ನುಡಿ ಬರೆದಂತೆಯೇ. ಹೊಸಬರಿಗೆ ಇದು ಗೊತ್ತಿರುವುದಿಲ್ಲ ಕೂಡ. ಅವರು ಸಹ ತಪ್ಪು ತಪ್ಪಾಗಿ ಉಚ್ಚರಿಸಲು ಹಾಗೂ ಬಳಸಲು ತೊಡಗುತ್ತಾರೆ. ಇದನ್ನು ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ಸರಿಪಡಿಸಬಹುದಲ್ಲವೆ!? ಇದು ಒಂದು ಮಾರ್ಗದ ನಿಲ್ದಾಣಗಳ ಹೆಸರುಗಳ ಉದಾಹರಣೆ ಅಷ್ಟೇ. ಹೀಗೆ ಬೇರೆ ಬೇರೆ ಮಾರ್ಗಗಳ ನಿಲ್ದಾಣಗಳ ಹೆಸರುಗಳಲ್ಲಿ ಸಹ ಈ ತಪ್ಪು ಆಗಿದ್ದರೆ ಅದು ಕೂಡ ಸರಿಪಡಿಸಬಹುದಲ್ಲವೆ!? ಸರಿಪಡಿಸಿಯಾರು ಎಂಬ ಆಶಾಭಾವನೆ…
ರಾಜು ಪವಾರ್
