ನಮ್ಮ ದೇಶ ಭಾರತ ಹಲವು ಧರ್ಮಗಳ ಬೀಡು.  ಇಲ್ಲಿ ಅನೇಕರು ತಮ್ಮ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಲೇ,  “ಮಾನವ ಧರ್ಮಕ್ಕೆ ಜಯವಾಗಲಿ…”ಎನ್ನುವ ಅರ್ಥದಲ್ಲಿ ಅನೇಕ ತತ್ವಗಳನ್ನು ತಿಳಿಸಿದ್ದಾರೆ.  ಮಾನವ ಜೀವ ರಾಶಿಗಳಿಗೆ ಅಷ್ಟೇ ಅಲ್ಲದೆ, ಈ ನೆಲದ ಮೇಲಿರುವ ಸಕಲ ಜೀವರಾಶಿಗಳಿಗೂ ಲೇಸನ್ನು ಬಯಸಿದ ಅನೇಕ ದಾರ್ಶನಿಕರ  ಬಹುದೊಡ್ಡ ಪರಂಪರೆ ಈ ನೆಲಕ್ಕಿದೆ.

  ಇಲ್ಲಿ ಧರ್ಮಾತೀತವಾಗಿ, ಜಾತ್ಯಾತೀತವಾಗಿ ಅನೇಕ ಶರಣರು, ಸಂತರು, ಋಷಿಮುನಿಗಳು ಅಲ್ಲದೆ ಸಮಾಜ ಸುಧಾರಕರು, ತತ್ವಜ್ಞಾನಿಗಳು, ಸೂಫಿಗಳು, ದಾಸರು.. ಮುಂತಾದವರು ತಾವು ಕಂಡುಕೊಂಡ ಸತ್ಯಗಳನ್ನು, ಬದುಕಿನ ಆಶಯಗಳನ್ನು,  ಹಾಡಿನ ಮೂಲಕ, ವಚನಗಳ ಮೂಲಕ, ಕೀರ್ತನೆಗಳ ಮೂಲಕ, ನೆಲದಲ್ಲಿ ಬಿತ್ತಿದ್ದಾರೆ.  ಹಾಗಾಗಿ ಭಾರತವೆಂದರೆ, ಅದು ಬಹುತ್ವದ ಪ್ರತೀಕ. ಭಾರತವನ್ನು ಏಕ ಧರ್ಮ, ಏಕ ಜಾತಿ, ಏಕ ಭಾಷೆಯೆಂದು  ಯಾವತ್ತಿಗೂ ಪರಿಗಣಿಸುವಂತಿಲ್ಲ..! ಪರಿಗಣಿಸಿದರೂ ಈ ನೆಲಕ್ಕೆ ಅದು ಒಗ್ಗುವುದಿಲ್ಲ. ಇಲ್ಲಿ ಹಲವು ಭಾಷಿಕರು, ಧರ್ಮಿಯರು, ಆಚರಣೆಗಳು… ಒಳಗೊಂಡಿರುವುದರಿಂದಲೇ ಭಾರತ ಅಷ್ಟೊಂದು ಸಾಂಸ್ಕೃತಿಕವಾಗಿ ಸಮೃದ್ಧ ನಾಡಾಗಿದೆ.

 ಒಂದು ಕಾಲದಲ್ಲಿ ಯಾವುದೇ ಸಂತರು, ಶರಣರು, ಊರುಗಳಿಗೆ ಬಂದರೆ ಅವರಿಗೆ ಪ್ರತಿಯೊಬ್ಬರು ಆದಾರಾತಿತ್ಯದಿಂದ ಬರಮಾಡಿಕೊಂಡು, ಅವರನ್ನು ಗೌರವಿಸುತ್ತಿದ್ದರು. ಅವರ ಆದರ್ಶಗಳನ್ನು ಪಾಲಿಸುತ್ತಿದ್ದರು. ಅವರು ಹಂಚುತ್ತಿದ್ದ ತತ್ವಗಳನ್ನು, ನೈತಿಕ ಮೌಲ್ಯಗಳನ್ನು, ಬದುಕಿನ ಸಾರಗಳನ್ನು ಮನಸಾರೆ ಹೃದಯಪೂರ್ವಕವಾಗಿ ಕೇಳುತ್ತಿದ್ದರು. ಪ್ರತಿಯೊಬ್ಬ ಸಂತರಿಗೂ ಶರಣಾಗತಿಯನ್ನು ಅರ್ಪಿಸುತ್ತಿದ್ದರು. ಆದರೆ ಅರ್ಥ ಮಾಡಿಕೊಳ್ಳುವುದಕ್ಕೂ ಕಷ್ಟವಾಗಿದೆ. ಏಕೆಂದರೆ ಇಂದು ನಮ್ಮ ನೆಲ ಹಲವು ಅಡ್ಡಗೋಡೆಗಳಿಂದ ಕಟ್ಟಿಹಾಕಿದ್ದೇವೆ.  ಮುಳ್ಳಿನ ಬೇಲಿಗಳನ್ನು ನಿರ್ಮಿಸಿಕೊಂಡು, ನಮ್ಮನ್ನು ನಾವೇ ಬೆನ್ನು ತಟ್ಟಿಕೊಳ್ಳುತ್ತಿದ್ದೇವೆ. ವಿಶಾಲವಾಗಿ ಬದುಕಬೇಕಾದ ನಾವು ಇಂದು ಅನೇಕ ಬದುವುಗಳನ್ನು ಹಾಕಿಕೊಂಡು, ವಿಲವಿಲನೆ ಒದ್ದಾಡುತ್ತಿದ್ದೇವೆ. ಇದಕ್ಕೆ ಕಾರಣ ಅನೇಕ…
ಈ ಬಹುತ್ವ ನೆಲದ ಭಾರತದಲ್ಲಿ ಅಭಿಪ್ರಾಯ ಬೇಧಗಳು ಇಂದಿನಿಂದಲೂ ಬಂದಿವೆ. ಹಿಂದೆ ಪ್ರತಿಯೊಂದು ಅಭಿಪ್ರಾಯಗಳನ್ನು ತತ್ವ ಸಿದ್ಧಾಂತಗಳನ್ನು ಒಬ್ಬರಿಗೊಬ್ಬರು ಕಿವಿಗೊಟ್ಟು ಆಲಿಸುವ ಬಹುದೊಡ್ಡ ಹೃದಯವಂತಿಕೆಯಿತ್ತು. ಆದರೆ ಇಂದು ಕೇಳುವುದಿರಲಿ, ಅವುಗಳಿಗೆ ಬೆನ್ನುಕೊಟ್ಟು ನಿರಾಸೆ, ತಾತ್ಸಾರ ಭಾವನೆಗಳನ್ನು ಹೊರಗೆಡುವುತ್ತಿದ್ದೇವೆ.  “ನಮ್ಮ ಧರ್ಮವೇ ಶ್ರೇಷ್ಠ, ನಮ್ಮ ಸಿದ್ಧಾಂತ, ಮೌಲ್ಯಗಳೇ ಮುಖ್ಯ…” ಎನ್ನುತ್ತಲೇ,  ಪರಧರ್ಮಗಳ ತತ್ವ ಸಿದ್ಧಾಂತ, ಮಾನವೀಯ ಮೌಲ್ಯಗಳನ್ನು ನೋಡಿ ಕೇಳಿ ಅದನ್ನು ಅನುಸರಿಸುತ್ತಿಲ್ಲ. ಬದಲಾಗಿ ಅವರನ್ನು ಜಾತಿಯ ಬೇರುಗಳಲ್ಲಿ ಕಟ್ಟಿಹಾಕಿ, “ಅವರು ನಮ್ಮವರು ;  ಅವರು ನಮ್ಮ ಜನಾಂಗದವರು, ಅವರು ನಮ್ಮ ಜನಾಂಗದ ಅಸ್ಮೀಯತೆ…” ಎಂದು ಅವರ ಭಾವಚಿತ್ರಗಳನ್ನು ಮೆರವಣಿಗೆಯ ಮೂಲಕ ಪ್ರದರ್ಶಿಸಿ, ಒಂದು ಸೀಮಿತ ಜನಾಂಗದೊಂದಿಗೆ ಬಹಿರಂಗಗೊಳಿಸಿ, ಅವರನ್ನು ಕೂಡಿ ಹಾಕುತ್ತೇವೆ.  ಅವರ ವಿಶಾಲ ಹೃದಯದ ತತ್ವಗಳಿಗೆ ನಾವೇ ತಣ್ಣೀರು ಎರಚಿದಂತೆ ಆಗುವುದಿಲ್ಲವೇ..?  “ಇನ್ನು ಇವರು ನಮ್ಮ ಧರ್ಮದವರೆಂದು..”  ಇವರು ಹೇಳಿದ ಮಾನವೀಯ ಮೌಲ್ಯಗಳ ಸಿದ್ದಾಂತಕ್ಕೆ ಬೆನ್ನು ಮಾಡಿ, ಕೇವಲ ಅವರನ್ನು ಅವರ ಭಾವಚಿತ್ರಗಳನ್ನು ತಲೆಯ ಮೇಲೆ ಹೊತ್ತುಕೊಂಡು ತಲೆಯ ತುಂಬಾ ಅಧರ್ಮದ ಅಫೀಮನ್ನು ಅನುಭವಿಸುತ್ತಾ, ಪರಧರ್ಮ ಸಹಿಷ್ಣುತೆಯನ್ನು ಪಾಲಿಸದೆ ಪರಧರ್ಮಿಯರಿಗೆ ಅನೇಕ ತೊಂದರೆಗಳನ್ನು ಕೊಡುತ್ತಾ, ಅಂತ ಮಹಾನ್ ದಾರ್ಶನಿಕರನ್ನು ಮತ್ತೆ ಮತ್ತೆ ಬೇಲಿ ಹಾಕಿ ಬಂಧಿಸುತ್ತಿರುವ ಇದೆಯಲ್ಲ…! ಅದು ಯಾವತ್ತಿಗೂ ಕ್ಷಮೆಗೆ ಅರ್ಹವಲ್ಲ..!!

ಇನ್ನೂ, ಕೆಲವು ಸಾಧು ಶರಣರನ್ನು, ಸಂತರನ್ನು, ಅವರು ಉತ್ತರದವರು, ದಕ್ಷಿಣದವರು ಅಥವಾ ಆ ಪ್ರದೇಶದವರು, ಆ ಭಾಷಿಕರು, ಈ ಭಾಷಿಕರು ಎನ್ನುತ್ತೇವೆ..!  ಅವರಿಗೆ ಪ್ರದೇಶದ ಗಡಿಯನ್ನು ಹಾಕಿ ಆ ಗಡಿಯೊಳಗೆ ಗುಡಿಯನ್ನು ಕಟ್ಟಿ, ವಿಲವಿಲನೆ ಒದ್ದಾಡುವಂತೆ ನಾವೇ ಇಂದು ಮಾಡುತ್ತಿದ್ದೇವೆ.  ಗಡಿಯೊಳಗೆ ಕೂಡಿಸಿ, ಗುಡಿಯೊಳಗೆ ಬಂಧಿಸಿ, ಗಡಗಡನೆ ಅವರನ್ನೇ ನಡುಗಿಸಿ ಬಂಧಿಸಿ ಅವರ ತತ್ವಗಳನ್ನು ಗಾಳಿಗೆ ತೂರಿ ತೇಲಾಡುತ್ತಿರುವ ನಾವುಗಳು ಮಾಡುತ್ತಿರುವುದು ಸರಿಯೇ..?

ಉದಯಿಸುವ ಸೂರ್ಯನ ಬೆಳಕು, ಬೀಸುವ ತಂಗಾಳಿ, ಹರಿಯುವ ನೀರು, ಸುರಿಯುವ ಮಳೆ, ಉರಿಯುವ ಧಗೆಧಗೆಯ ಬೆಂಕಿ, ನಾವಿರುವ ನೆಲ… ಇವುಗಳಿಗೆ ಎಲ್ಲಿದೆ ಜಾತಿ…? ಎಲ್ಲಿದೆ  ಧರ್ಮ..?  ಇವು ಪ್ರಕೃತಿಯ ಚರಾಚರ ವಸ್ತುಗಳ ಪ್ರತಿರೂಪ. ಈ “ಪ್ರಕೃತಿಯೇ ದೇವರು..”ಎಂದು ನಾವು ನಂಬುತ್ತೇವೆ.
ಆದರೆ,  ನಮ್ಮ ದಾರ್ಶನಿಕರನ್ನು ಸಂತ, ಶರಣರನ್ನು ವಿವಿಧ ಕಟ್ಟಳೆಗಳಲ್ಲಿ ಬಂಧಿಸಿದ್ದೇವೆ. ಭಾವಚಿತ್ರಗಳಲ್ಲಿ ಬಿಗಿಯಾಗಿ ಕಟ್ಟು ಹಾಕಿಸಿದ್ದೇವೆ.  ಸರ್ಕಲ್ ಸರ್ಕಲ್ ಗಳಲ್ಲಿಯೂ ಎತ್ತರ ಎತ್ತರವಾದ ಮೂರ್ತಿಗಳನ್ನು ನಿಲ್ಲಿಸಿ, ಧೂಳು  ಕುಡಿಯಲು ಬಿಟ್ಟಿದ್ದೇವೆ.  ಅವರ ತತ್ವಗಳನ್ನು ಅಷ್ಟೇ..!  ನಾವು ನಿಷ್ಠೆಯಿಂದ ಗಾಳಿಗೆ ತೂರಿದ್ದೇವೆ. ಅವರ ಮಾತುಗಳನ್ನು ಮೆಲ್ಲಗೆ ಇರಿದು ಕೊಂದಿದ್ದೇವೆ.
“ಇವ ನಮ್ಮವ, ಇವ ನಮ್ಮವ ಇವ ನಮ್ಮ ಮನೆಯ ಮಗನೆಂದೆನಿಸಯ್ಯ…” ಎಂದ ಬಸವಣ್ಣನನ್ನು ಬೇರೊಂದು ಗಡಿಯಲ್ಲಿ ಬಿಗಿಯಾಗಿ ಕಟ್ಟಿ ಹಾಕಿದ್ದೇವೆ.
“ಕುಲ ಕುಲವೆಂದು ಹೊಡೆದಾಡದಿರಿ , ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ..” ಎಂದ ಕನಕನನ್ನು ಜಾತಿಯ ಜೋಕಾಲಿಯಲ್ಲಿ ಉಯ್ಯಾಲೆಯಾಡಿಸುತ್ತಿದ್ದೇವೆ..
 “ಎಲ್ಲರನ್ನೂ ಪ್ರೀತಿಸಿ..” ಎಂದು ಬುದ್ಧ ಗುರುವನ್ನು ಗೊತ್ತು ಗುರಿಯಿಲ್ಲದೆ ಕಟ್ಟಿ ಹಾಕಿದ್ದೇವೆ,  “ಸರ್ವರನ್ನು ಪ್ರೀತಿಸು : ಆದರೆ ಅಸಹಾಯಕರನ್ನು ಎತ್ತಿಕೊ..” ಎಂದ ಪೈಗಂಬರನನ್ನು ಧರ್ಮದ ದೃಷ್ಟಿಯಿಂದ ಬೇರೊಂದು ನೆಲೆಗೆ ನೇತುಹಾಕಿದ್ದೇವೆ.
“ತಪ್ಪು ಮಾಡಿದವರನ್ನು ಸದಾ ಕ್ಷಮಿಸು..” ಎಂದ ಏಸುಕ್ರಿಸ್ತನನ್ನೇ ಶಿಲುಬೆಗೇರಿಸಿ, ಗಹಗಹಿಸಿ ನಕ್ಕವರು ನಾವು..! ಧರ್ಮವನ್ನು, ದೇವರನ್ನು, ಶರಣ-ಸಂತರನ್ನೂ  ನಾವು ಯಾವತ್ತಿಗೂ ಸೀಮಿತಗೊಳಿಸಬಾರದೆನ್ನುವ ಸಾಮಾನ್ಯ ತಿಳುವಳಿಕೆ ನಮ್ಮಲ್ಲಿ ಇಲ್ಲವಾಯಿತಾ..? ಎನ್ನುವ ನೋವು ಎಲ್ಲರನ್ನೂ ಕಾಡುವುದಾದರೂ ಯಾವಾಗ..?

ದಾರ್ಶನಿಕರ   ಚಿಂತನೆಗಳನ್ನು ಒಂದು ಜಾತಿ ,ಧರ್ಮ ,ಪಂಥ …ವಿವಿಧ ಕವಲುಗಳಿಗೆ ಕಟ್ಟಿಹಾಕಿ ಅವರನ್ನು ಸೀಮಿತಗೊಳಿಸುವುದು ಒಳಿತಲ್ಲ.  ಅವರ   ಸಿದ್ಧಾಂತಗಳು,    ಮಾನವೀಯ ಮೌಲ್ಯಗಳು, ನೈತಿಕ ತಳಹದಿಯ ಅನೇಕ ಮಾನವ ಪರ ಅಭಿಲಾಷೆಗಳನ್ನು ನಾವೆಲ್ಲ ಬದುಕಿನಲ್ಲಿ ಪಾಲಿಸೋಣ.


Leave a Reply

Back To Top