
ಪುಸ್ತಕ ಸಂಗಾತಿ
ಡಾ.ದಸ್ತಗೀರಸಾಬ್ ದಿನ್ನಿ
‘ಮಧು ಬಟ್ಟಲಿನ ಗುಟುಕು’
ನವಿರು ಭಾವದ ಕಚಗುಳಿ ಇಡುವ ಗಜಲುಗಳು
ಪ್ರಭಾವತಿ ಎಸ್.ದೇಸಾಯಿ



ಮಧು ಬಟ್ಟಲಿನ ಗುಟುಕು (ಗಜಲ್ ಗಳು )
ಕವಿ : ಡಾ.ದಸ್ತಗೀರಸಾಬ್ ದಿನ್ನಿ
ಪ್ರಕಾಶನ :.ಜುನೇದ್ ಪ್ರಕಾಶನ,ಬಳ್ಳಾರಿ
ಪ್ರಕಟಿತ ವರ್ಷ : 2024.
ಪುಟ 72. ಬೆಲೆ.100
ಮೊ : 9448220710
ದುಂಬಿ ಹೂವಿಂದ ಹೂವಿಗೆ ಹಾರುತ್ತ, ಪ್ರತಿ ಹೂವಿಂದ ಒಂದು ಹನಿ(ಗುಟುಕು)ಮಕರಂದ ಹೀರುತ್ತ, ವಸಂತಕಾಲದಲ್ಲಿ ಸಂಭ್ರಮಿಸುತ್ತ, ಆಷಾಢದಲ್ಲಿ ಪರಿತಪಿಸುತ್ತ, ಜೇನು ತಯಾರಿಸುತ್ತದೆ.ಅದೇ ತೆರನಾಗಿ ಕವಿಯು ಸಂಸಾರ, ಸಮಾಜದ ನೋವು,ನಲಿವಿನ ಗುಟುಕುಗಳನ್ನು ಹೀರಿ ಮೈ ಮರೆತು ರಚಿಸುವ ಹೃದಯದ ಕಾವ್ಯವೇ ಗಜಲ್.
ಗಜಲ್ ಅರಬಿ ಶಬ್ದವಾದರೂ ಅಲ್ಲಿ ಸಾಹಿತ್ಯವಾಗಿ ಬೆಳೆಯಲಿಲ್ಲ. ಇರಾನ್ ದೇಶದ ಫಾರ್ಸಿ ಭಾಷೆಯಲ್ಲಿ ಒಂದು ವಿಶಿಷ್ಟವಾದ ಕಾವ್ಯ ಪ್ರಕಾರವಾಗಿ ಬೆಳೆಯಿತೆಂದು ಇತಿಹಾಸ ಹೇಳುತ್ತದೆ . ಫಾರ್ಸಿಯಿಂದ ಭಾರತಕ್ಕೆ ಬಂದ ಗಜಲ್ ಕಾವ್ಯ ಉರ್ದು ಭಾಷೆಯಲ್ಲಿ ವಿಶಿಷ್ಟವಾಗಿ ಬೆಳೆಯಿತು. ಭಾರತದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಈ ದೇಶದ ಲೋಕಗೀತೆಯಾಗಿ ಜನ ಮನವನ್ನು ಗೆದ್ದಿತು . ಕನ್ನಡ ಜಾಯಮಾನಕ್ಕೆ ಒಗ್ಗುವಂತೆ ಕನ್ನಡ ಗಜಲ್ ಗಳ ರಚನೆಯನ್ನು ಯಾವ ರೀತಿಯಾಗಿ ರಚಿಸಬೇಕೆಂದು ಶಾಂತರಸರು ತೋರಿಸಿಕೊಟ್ಟರು . ಇಂದು ಕನ್ನಡದ ಗಜಲ್ಕಾರರು ಅದೇ ಮಾರ್ಗದಲ್ಲಿ ಗಜಲುಗಳನ್ನು ರಚಿಸುತ್ತಿದ್ದಾರೆ . ಹಿರಿಯ ಕವಯತ್ರಿ ಶಶಿಕಲಾ ವಸ್ತ್ರದ್ ಅವರು ಗಜಲ್ ಎಂದರೆ ಉರ್ದು ಕಾವ್ಯದ ಕಂಬನಿಗಳು ಮತ್ತು ಗಾಯಗೊಂಡ ಹರಿಣಿಯ “ಆಹ್” ಎಂದು ವ್ಯಾಖ್ಯಾನಿಸಿದ್ದಾರೆ . ಗಜಲ್ ಹೃದಯದ ಕಾವ್ಯ ವಾಗಿದ್ದು ತನ್ನ ನೋವು ನಲಿವುಗಳನ್ನು ತನ್ನ ಸುತ್ತ ಹೆಣೆದುಕೊಂಡು ಓದುಗರ ಹೃದಯವನ್ನು ತಟ್ಟುತ್ತದೆ . ಗಜಲಿನ ಸ್ಥಾಯಿ ಗುಣವಾದ ಪ್ರೀತಿ , ಪ್ರೇಮ , ವಿರಹ, ಕಾಯುವಿಕೆ , ಕಾಡುವ ನೆನಪು, ಒಂಟಿತನದ ನೋವು , ವ್ಯಾಮೋಹ, ಮೋಹ , ಅನುರಾಗ ,ಇವುಗಳನ್ನು ಮಧುರ ಮೃದು ಭಾಷೆಯಲ್ಲಿ ರೂಪಕಗಳೊಂದಿಗೆ ವ್ಯಕ್ತಪಡಿಸುವ ಕಾವ್ಯವಾಗಿದೆ . ಇಂದು ಕೆಲವರು ಸುಡುವ ವರ್ತಮಾನಗಳನ್ನು ,ಮಹಿಳಾ ಸಂವೇದನೆಗಳನ್ನು, ಮಹಿಳಾ ದೌರ್ಜನ್ಯಗಳನ್ನು , ಸಾಮಾಜಿಕ ಕಳಕಳಿಯನ್ನು ಗಜಲ್ ಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ .
.ದಸ್ತಗೀರಸಾಬ್ ದಿನ್ನಿ ಅವರು ರಾಯಚೂರು ಜಿಲ್ಲೆಯವರಾಗಿದ್ದು ಸದ್ಯ ಬಳ್ಳಾರಿಯ ಸರಳಾದೇವಿ ಸತೀಶ್ಚಂದ್ರ ಅಗರವಾಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಇವರು ಕಣ್ಣಮುಂದಿನ ಬೆಳಕು (ಕಾವ್ಯ) ಸಾಹಿತ್ಯ ಸಲ್ಲಾಪ (ವಿಮರ್ಶೆ) ದಿನ್ನಿ ತಾಳಪಲ್ಲಿ ವೆಂಕಟಯ್ಯ , ಹೈದರಾಬಾದ್ ಕರ್ನಾಟಕ ಬೀದಿ ನಾಟಕಗಳು , ತಾಳಕೇರಿ ಬಸವರಾಜ್ , ಆದಯ್ಯ (ಸಂಶೋಧನೆ ) ಕೃತಿಗಳನ್ನು ಪ್ರಕಟಿಸಿದ್ದಾರೆ.ಜಾಗತೀಕರಣ ಮತ್ತು ಸಂಸ್ಕೃತಿ , ಎಲ್ಲ ಕಾಲದ ಬೆಳಕು ,ಸೂರ್ಯನ ಬೆಳದಿಂಗಳ ಕನಸು ,ಬಿಸಿಲು ಚೆಲ್ಲಿದ ನೆರಳು , ಬಿಸಿಲ ಹೂ , ಕಲರವ , ಆಧುನಿಕ ಕಾವ್ಯ, ಕರುಳ ಬೆಂಕಿಯ ಪತಂಗ -ಮಿರ್ಜಾ ಗಾಲಿಬ್ ಮುಂತಾದ ಕೃತಿಗಳ ಸಂಪಾದನೆ ಮಾಡಿದ್ದಾರೆ .ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಬಹುಮಾನ ,ಕ್ರೈಸ್ತ ಕಾಲೇಜಿನ ಬೇಂದ್ರೆ ಕಾವ್ಯ ಸ್ಪರ್ಧೆ ,ಹಾಗೂ ಸಂಕ್ರಮಣ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿವೆ .
ಡಾ.ದಸ್ತಗೀರಸಾಬ್ ದಿನ್ನಿ ಅವರ ಕೃತಿ ಮಧು ಬಟ್ಟಲಿನ ಗುಟುಕು ಸಂಕಲನದಲ್ಲಿ ಒಟ್ಟು 66 ಉತ್ತಮ ಗಜಲುಗಳಿದ್ದು ಈ ಸಂಕಲನಕ್ಕೆ ಹಿರಿಯ ಕವಿ ಹೆಚ್. ಎಸ್. ಶಿವಪ್ರಕಾಶ ಅರ್ಥಪೂರ್ಣವಾದ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ . ಸಂಕಲನದ ಪ್ರಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನು ದಿನ್ನಿಯವರು ಗಜಲ್ ನಡೆದು ಬಂದ ದಾರಿ ಮತ್ತು ಗಜಲ್ ರಚನಾ ರೀತಿ,ನೀತಿಗಳ ಬಗ್ಗೆ ವಿವರವಾಗಿ ಬರೆದಿದ್ದಾರೆ . ಕೃತಿಯ ಮುಖ ಚಿತ್ರವನ್ನು ಕಲಾವಿದರಾದ ಸುಧಾಕರ ದಬೆ೯ ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ.ಇದರಿಂದ ಕೃತಿಗೆ ಇನ್ನಷ್ಟು ಮೆರಗು ಬಂದಿದೆ .
‘ಮಧು ಬಟ್ಟಲಿನ ಗುಟುಕು’ ಈ ತೀರ್ಷಿಕೆ ವಿಶಿಷ್ಟವಾದ ಅರ್ಥವನ್ನು ಓದುಗರಿಗೆ ಕೊಡುತ್ತದೆ .ಗುಟುಕು ಗುಟುಕಾಗಿ ಕುಡಿದಾಗ ಪಾನಿಯ ಸವಿ ಹೆಚ್ಚಾಗುವಂತೆ ಸಂಕಲನದ ಒಂದೊಂದೇ ಗಜಲ್ ಗಳನ್ನು ಓದಿ ಮನದಲ್ಲಿ ಮೆಲಕು ಹಾಕುತ್ತಾ ಹೋದಂತೆ ಓದಿದ ಗಜಲ್ ನಶೆ ಏರಿ ಮನ ಓಲಾಡುತ್ತದೆ . ಲೌಕಿಕ ಪ್ರೀತಿಯಿಂದ ಆಲೌಕಿಕ ಪ್ರೀತಿಯ ಕಡೆಗೆ ಓದುಗರನ್ನು ಕರೆದುಕೊಂಡು ಹೋಗುತ್ತದೆ . ಇದೇ ನಿಜವಾದ ಗಜಲ್ ದ ಉದ್ದೇಶವಾಗಿರುತ್ತದೆ . ಬೆಂದ ನೊಂದ ಹೃದಯಕ್ಕೆ ಈ ಗಜಲ್ ಗಳು ನೆಮ್ಮದಿಯನ್ನು ನೀಡುತ್ತವೆ .ದಿನ್ನಿಯವರು ಗಜಲ್ ಗಳ ರಚನೆಯಲ್ಲಿ ಪಳಗಿದವರಾಗಿದ್ದು ಮತ್ತು ಉರ್ದು ಭಾಷೆ ಬಲ್ಲವರಾಗಿದ್ದು ಉತ್ತಮ ಗಜಲ್ ಗಳನ್ನು ಬರೆದು ಸಂಕಲನದ ರೂಪದಲ್ಲಿ ಓದುಗರ ಕೈಗಿಟ್ಟಿದ್ದಾರೆ .
ನೋವುಂಡ ಜೀವ ಕಣ್ಣೀರು ಒರೆಸಿ ಪ್ರೀತಿಯನ್ನು ಉಣಿಸಿದಿ
ಹೊಂಗೆ ನೆರಳಿಗೆ ಕೂತು ಅಧರಗಳ ಮಧುವನು ಕುಡಿಸಿದಿ
ನೊಂದ ಹೆಣ್ಣಿಗೆ ಅವಳ ಪ್ರಿಯತಮ ಯಾವ ರೀತಿಯಾಗಿ ಸುಖ ಕೊಟ್ಟ ಎಂಬ ಬಗ್ಗೆ ಗಜಲ್ ದಲ್ಲಿ ಗಜಲ್ಕಾರರು ರೂಪಕಗಳೊಂದಿಗೆ ಸೊಗಸಾಗಿ ಹೆಣೆದಿದ್ದಾರೆ. ನೊಂದು ದಣಿದ ಜೀವಿಯ ಕಣ್ಣೀರನ್ನು ಒರೆಸಿ ಪ್ರೇಮಿಯೂ ಅಮೃತವನ್ನು ಉಣಿಸಿದ ಹೊಂಗೆ ಮರದ ನೆರಳಿನಲ್ಲಿ ಕೂಡಿಸಿ ಅಧರಗಳ ಜೇನು ಕುಡಿಸಿದ ಎಂದು ಹೇಳುತ್ತಾ ಮುಡಿಗೆ ಮಲ್ಲಿಗೆ ಮುಡಿಸಿ ಕೆನ್ನೆಯಲ್ಲಿ ಲಜ್ಜೆ ಇರಿಸಿ ಕಣ್ಣಲ್ಲಿ ಉತ್ಸಾಹ ಉಲ್ಲಾಸ ತುಂಬಿ ಬಾನ ನಕ್ಷತ್ರಗಳ ತೋರಿಸಿದೆ ಎನ್ನುವ ಸಾಲುಗಳಲ್ಲಿ ಜೀವನ ಪ್ರೀತಿ ವ್ಯಕ್ತವಾಗಿದೆ.
ಯಾತನೆಯ ಜೀವಕೆ ಸಂಜೆಯ ಹಾಡೊಂದು ಉಳಿಯಲಿ
ಹಸಿವಿನ ತಲ್ಲಣಕೆ ರೊಟ್ಟಿಯ ಚೂರೊಂದು ಉಳಿಯಲಿ
ದಿನವೆಲ್ಲ ಬಿಸಿಲಲ್ಲಿ ದುಡಿದು ದಣಿದ ಜೀವಿಗೆ ಸಂಜೆ ಮನ ತಣಿಸುವ ಹಾಡು ಕೇಳುವ ಭಾಗ್ಯವಿರಲೆಂದು ಗಜಲ್ ಕಾರರು ಹೇಳುತ್ತಾರೆ. ನಮ್ಮ ಜನಪದ ಹಾಡು ಕೃಷಿಕ ಜೀವಿಗಳಿಂದ ಕಟ್ಟಿದಂತಹ ಪದಗಳು ಆ ಹಾಡುಗಳು ಮನದ ನೋವು ಕಳವಳ ದಣಿವು ಎಲ್ಲವನ್ನು ನಿವಾರಿಸುವ ಶಕ್ತಿಯುತವಾದ ಹಾಡುಗಳಾಗಿದ್ದವು ಅಂತ ಒಂದು ಹಾಡು ಸಂಜೆ ಕೇಳುವ ಭಾಗ್ಯ ಈ ದಣಿದ ಜೀವಕ್ಕೆ ಇರಲೆಂದು ಗಜಲ್ಕಾರರು ಹೇಳುತ್ತಾ ಹಸಿವಿನಿಂದ ಕಂಗಾಲಾದ ಜೀವಕ್ಕೆ ಸಿರಿವಂತರ ಮೃಷ್ಟಾನ್ನ ಸಿಗದಿದ್ದರೂ ಚಿಂತೆ ಇಲ್ಲ ಹಸಿವು ಹಿಂಗಿಸುವ ಒಂದು ರೊಟ್ಟಿ ಚೂರೊಂದು ಸಿಕ್ಕರೆ ಸಾಕೆಂದು ಹೇಳುತ್ತ ಹೂ ಸಿಗದಿದ್ದರೂ ಹೂವಿನ ಕಂಪಾದರು ಸಿಗಲಿ ಎನ್ನುವ ಆಶಯ ಮನನೀಯವಾಗಿದೆ.
ನೆನಪುಗಳು ಬಿಸಿಲ ಹೂವಾಗಿ ಚುಚ್ಚುತಿವೆ ಮತ್ತೆ ಮತ್ತೆ
ಹಗಲು-ಇರುಳು ದೀರ್ಘವಾಗಿ ಉರಿಯುತಿವೆ ಮತ್ತೆ ಮತ್ತೆ
ಯೌವನದ ಸಮಯದಲ್ಲಿ ಬೆಸದ ಜೀವಿಗಳು ಒಂದಾಗಿ ಕಳೆದ ಮಧುರ ಗಳಿಗೆಗಳು ಒಂಟಿ ಜೀವಿಗೆ ಮತ್ತೆ ನೆನಪಾಗಿ ಕಾಡುತ್ತವೆ . ಅವು ಹೇಗೆ ಕಾಡುತ್ತವೆಂದರೆ ಬಿಸಿಲು ಹೂವಾಗಿ ಚುಚ್ಚುತ್ತವೆ ಈ ಬಿಸಿಲು ಹೂವು ಎಂಬುದೇ ಒಂದು ವಿಶೇಷ ಮುಳ್ಳಾಗಿ ಎಂದು ಹೇಳದೆ ಬಿಸಿಲು ಹೂವಾಗಿ ಚುಚ್ಚುತ್ತವೆ ಅಂದರೆ ಆ ನೆನಪುಗಳು ಕೂಡ ಮಧುರ ಯಾತನೆಯಾಗಿವೆ ಎನ್ನುವ ಕವಿ ಕಲ್ಪನೆ ವಿಶಿಷ್ಟವಾಗಿದೆ.
ವಸಂತಗಾಲ ಮತ್ತೆ ಹೂ ಮುಡಿದು ಬಂದಿದೆ ನೀನು ಬರಲಿಲ್ಲ
ನೆನಪಿನ ಹೊಳೆಯಲಿ ಮನಸು ಮೀಯುತಿದೆ ನೀನು ಬರಲಿಲ್ಲ
ನಿಸರ್ಗದ ಕ್ರಿಯೆಗಳು ನಿರಂತವಾಗಿ ಕಾಲಕಾಲಕ್ಕೆ ಸರಿಯಾಗಿ ಕರ್ತವ್ಯವನ್ನು ಮಾಡುತ್ತವೆ ಆದರೆ ಮನುಷ್ಯನು ತನ್ನ ಕರ್ತವ್ಯವನ್ನು ನಿಯಮಿತವಾಗಿ ಮಾಡುವುದಿಲ್ಲವೆಂದು ಪ್ರಿಯತಮೆ ತನ್ನ ಪ್ರಿಯಕರನಿಗೆ ಹೇಳುತ್ತಾಳೆ. ವಸಂತನು ಪ್ರತಿ ವರ್ಷ ಬರುವಂತೆ ನೇಮಿತವಾಗಿ ಬಂದು ಪ್ರಕೃತಿ ದೇವಿಯನ್ನು ಚಿಗುರಿಸಿ ಹೂಗಳನು ಅರಳಿಸಿ ಸಿಂಗರಿಸಿದ್ದಾನೆ .ನೀನು ಬರುವೆನೆಂದು ಹೇಳಿ ಬರಲಿಲ್ಲ ಯಾಕೆ ? ನಾನು ನಿನ್ನ ನೆನಪಿನ ಹೊಳೆಯಲ್ಲಿ ಮೀಯುತ್ತಿರುವೆ ಎಂದು ಪ್ರಿಯತಮೆ ಹೇಳುವುದನ್ನು ಗಜಲ್ ದಲ್ಲಿ ಪ್ರಕೃತಿಯ ಕ್ರಿಯೆ ಮತ್ತು ಮಾನವನ ಆಲಸ್ಯವನ್ನು ಸೊಗಸಾಗಿ ರೂಪಗಳೊಂದಿಗೆ ತುಲನಾತ್ಮಕವಾಗಿ ತೋರಿಸಿದ್ದಾರೆ ನೀನು ಬರಲಿಲ್ಲ ಎಂಬ ರದೀಫ್ ದೊಂದಿಗೆ ಪ್ರಿಯತಮೆಯ ಮನದ ತಳಮಳವನ್ನು ಚಿತ್ರಿಸಿದ್ದಾರೆ .
ಬೇಡವೆಂದರೂ ಮತ್ತೆ ಮತ್ತೆ ಹೆಜ್ಜೆಗಳು ಹೊರಳುತಿವೆ ನಿನ್ನ ಊರಿಗೆ
ಸುಮ್ಮನಿರದೆ ಕರಗಳು ಯಾಕೋ ಬಿಕ್ಷೆ ಬೇಡುತಿವೆ ನಿನ್ನ ಪ್ರೀತಿಗೆ
ಹೃದಯವನ್ನು ಕಳೆದುಕೊಂಡ ಪ್ರಿಯತಮ ಹೃದಯ ಕದ್ದ ಪ್ರೇಯಸಿಯ ಹುಡುಕಿಕೊಂಡು ಮನ ಬೇಡವೆಂದರು ಹೆಜ್ಜೆಗಳು ಅವಳ ಊರಿನ ದಾರಿಯ ಕಡೆಗೆ ಹೊರಳುತ್ತವೆ ಮತ್ತು ಅವಳನ್ನು ಸಂಧಿಸಿ ಪ್ರೇಮ ಭಿಕ್ಷೆಯನ್ನು ಬೇಡುತ್ತವೆಂದು ಹಾಗೂ ನಿನ್ನ ಆ ಬಟ್ಟಲು ಕಂಗಳ ಮಾದಕ ನೋಟ ನಿದ್ದೆ ಕದ್ದಿವೆ , ನೀನು ಹೂ ಆದರೆ ನಾನು ಕಂಪು ನಮ್ಮದು ಬಿಡಿಸಲಾರದ ಸಂಬಂಧವೆಂದು ಮೊದಲ ನೋಟದಲ್ಲಿ ನಾನು ನಿನ್ನ ಬಂಧಿಯಾಗಿದ್ದೇನೆಂದು ಪ್ರಿಯಕರ ತನ್ನ ಪ್ರಿಯತಮೆಗೆ ಪ್ರೇಮದ ಉನ್ಮಾದಲ್ಲಿ ವಿವರಿಸುತ್ತಾನೆ. ಇಂತಹ ಗಜಲುಗಳು ಸಂಕಲದುದ್ದಕ್ಕೂ ಇರುವುದು ಇದರ ಹೆಚ್ಚುಗಾರಿಕೆ .
ನಾನು ಜಗದ ಎಲ್ಲ ಕೊಳೆ ತೊಳೆವ ನೀರಾಗಬೇಕು
ಸುಡುವ ನೆಲದ ಎದೆ ಗಾಯವ ಮಾಯಿಸುವ ಮುಲಾಮಾಗಬೇಕು*
ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜದ ಭೂದೇವಿಯ ಋಣವನ್ನು ತೀರಿಸಲೇಬೇಕು ಅದಕ್ಕಾಗಿ ಗಜಲ್ಕಾಲರು ಈ ಗಜಲ್ ದಲ್ಲಿ ನಾನು ಹೇಗೆ ಸಮಾಜದ ಋಣ ತೀರಿಸಲು ಸಾಧ್ಯವೆಂದು ವಿವರಿಸುತ್ತಾರೆ . ಭೂಮಿಯ ಮೇಲಿನ ಕೊಳೆ ತೊಳೆಯಲು ನಾನು ನೀರಾಗಬೇಕು , ಸುಡುವ ನೆಲದ ಎದೆ ಗಾಯ ಮಾಯಿಸಲು ಮುಲಾಮು ಆಗಬೇಕು ,ಪರಿಸರ ಪ್ರಫುಲ್ಲವಾಗಿ ಇರಲು ಮಣ್ಣಾಗಿ ಮಳೆಯಲಿ ನೆನೆದು ಘಮವನ್ನು ಹರಡಬೇಕು ಹೀಗೆ ಉಪಯೋಗವಾಗುವ ವಸ್ತುವಾಗಿ ಪ್ರಕೃತಿಯ ಋಣ ತೀರಿಸ ಬಯಸುತ್ತಾರೆ .ಪ್ರಕೃತಿಯ ರೂಪಕಗಳನ್ನು ಇಲ್ಲಿ ವಿಭಿನ್ನ ವಾಗಿ ಅವರು ದುಡಿಸಿಕೊಂಡಿದ್ದಾರೆ .
ಒಟ್ಟಾರೆ ಮಧುಬಟ್ಟಲಿನ ಗುಟುಕು ಶೀರ್ಷಿಕೆಯ ಗಜಲ್ ಸಂಕಲನದ ಗಜಲ್ ಗಳು ಓದುಗರಿಗೆ ಉಲ್ಲಾಸವನ್ನು ಕೊಡುತ್ತ,ಚಿಂತನೆಗೆ ಹಚ್ಚುತ್ತವೆ. ಗಜಲ್ ದ ಸ್ಥಾಯಿ ಗುಣವಾದ ಪ್ರೀತಿ ,ಪ್ರೇಮ ,ವಿರಹ ,ಕಾಯುವಿಕೆ, ಕಾಡುವ ನೆನಪು ಈ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಗಜಲ್ ಗಳನ್ನು ರೂಪಗಳೊಂದಿಗೆ ತುಂಬಾ ಸೊಗಸಾಗಿ ರಚಿಸಿದ್ದಾರೆ . ಗಜಲ್ ಗಳಲ್ಲಿ ತಮ್ಮ ತಖಲ್ಲುಸ ವನ್ನು “ದಿನ್ನಿ “ಎಂದು ಉಪಯೋಗಿಸಿದ್ದಾರೆ . ಗಜಲ್ ಹಾಡು ಗಬ್ಬ ವೆಂಬುದನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಬೆಹರ್ ಮತ್ತು ಮಧ್ಯಮ ಬೆಹರ್ ದಲ್ಲಿ ಗಜಲ್ಗಳನ್ನು ರಚನೆ ಮಾಡಿದ್ದಾರೆ .ಓದುಗರಿಗೆ ತೃಪ್ತಿಯನ್ನು ಕೊಡುವ ಗಜಲ್ ಸಂಕಲನವಾಗಿದೆ.
ಕನ್ನಡ ಗಜಲ್ ಸಾಹಿತ್ಯ ಲೋಕಕ್ಕೆ ಈ ಕೃತಿ ಒಂದು ಉತ್ತಮವಾದ ಸೇರ್ಪಡೆ. ಕನ್ನಡ ಕಾವ್ಯಾಸಕ್ತರು, ವಿಮರ್ಶಕರು ಈ ಕೃತಿಯನ್ನು ಓದಿ ಹೆಚ್ಚು ಚರ್ಚೆಗೆ ಒಳಪಡಿಸಬೇಕಾದ ಅಗತ್ಯವಿದೆ ಎಂದು ನನಗನಿಸುತ್ತದೆ.

ಪ್ರಭಾವತಿ ಎಸ್.ದೇಸಾಯಿ
ವಿಜಯಪುರ
ಪ್ರಭಾವತಿ ಎಸ್.ದೇಸಾಯಿ
ವಿಜಯಪುರ