“ಪರೀಕ್ಷೆ – ಒತ್ತಡ ನಿವಾರಣೆಗೆ ಬೇಕು ಪೋಷಕರ ಪ್ರೇರಣೆ.”ಜಯಲಕ್ಷ್ಮಿ ಕೆ. ಅವರ ವಿಶೇಷ ಲೇಖನ

ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಒರೆಹಚ್ಚುವ ಪ್ರಮುಖ ಅಂಶ ಪರೀಕ್ಷೆ. ಯಾವ ವಿಷಯಗಳಲ್ಲಿ ತಮ್ಮ ಮಕ್ಕಳ ಕಲಿಕೆ ನಿಧಾನಗತಿಯಲ್ಲಿದೆ? ಯಾವ ವಿಷಯದ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು? ಈ ಎಲ್ಲ ವಿಚಾರಗಳ ಬಗ್ಗೆ ಪೋಷಕರ ಕಣ್ತೆರೆಸುವ   ಒರೆಗಲ್ಲೇ ಪರೀಕ್ಷೆ. ಮಕ್ಕಳು ಎಷ್ಟೇ ಜಾಣರಿರಲಿ ‘ಪರೀಕ್ಷೆ ‘ ಎನ್ನುವ ಪದ ಅವರಿಗೆ ಆತಂಕ … ಭಯ … ಉದ್ವೇಗ.. ಇತ್ಯಾದಿಗಳನ್ನು ಹುಟ್ಟುಹಾಕುವ ಅಂಶವೇ ಸರಿ. ಯಾವ ವಯಸ್ಸಿನ ಮಕ್ಕಳೇ ಆಗಿರಲಿ, ಅವರ ಉದ್ವೇಗ ಸಹಜವೇ. ಮಕ್ಕಳ ಮಾನಸಿಕ ಒತ್ತಡ  ಆತಂಕ ನಿವಾರಣೆಗೆ ಪೋಷಕರ ಸಹಕಾರ ಅತ್ಯಗತ್ಯ.

 ಎಲ್ಲಾ ಮಕ್ಕಳ ಜ್ಞಾನದ ಮಟ್ಟ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವು ಮಕ್ಕಳು ಶೈಕ್ಷಣಿಕ ವರ್ಷ ಆರಂಭ ಆದ ದಿನದಿಂದಲೇ ಓದುವ -ಕಲಿಯುವ ಅಭ್ಯಾಸ ರೂಢಿಸಿಕೊಂಡಿದ್ದರೆ ಇನ್ನು ಕೆಲವರು  ಪರೀಕ್ಷೆಯ ವೇಳಾಪಟ್ಟಿ ದೊರೆತ ಮೇಲೆಯೇ ಓದಲು ಆರಂಭಿಸುವರು. ಮತ್ತೆ ಕೆಲವರು ವರ್ಷವಿಡೀ ಓದನ್ನು ನಿರ್ಲಕ್ಷಿಸಿ, ಯಾವ ಕಿರು ಪರೀಕ್ಷೆಗಳಿಗೂ ಆದ್ಯತೆ ನೀಡದೆ, ವಾರ್ಷಿಕ ಪರೀಕ್ಷೆಯ ಹಿಂದಿನ ದಿನ ನಿದ್ದೆ ಬಿಟ್ಟು ಓದುವರು.ದಿನದ ಪಾಠವನ್ನು ಆ ದಿನವೇ ಓದುವ ಶಿಸ್ತಿನ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸಲು ಅಷ್ಟೇನೂ ಆತಂಕ ಇರಲಾರದು. ಆದರೆ ಪರೀಕ್ಷೆ ಬಂದಾಗ ಓದುವ ಪರಿಪಾಠವಿರುವ ಮಕ್ಕಳಿಗೆ ಶಿಕ್ಷಕರ ಪೋಷಕರ ವಿಶೇಷ ಕಾಳಜಿ, ಪ್ರೇರಣೆ, ಪ್ರೋತ್ಸಾಹ ಅತ್ಯಗತ್ಯ. ಇಂತಹ ಮಕ್ಕಳ ಬಗ್ಗೆ ಅಪ್ಪ -ಅಮ್ಮ ಜವಾಬ್ದಾರಿ ವಹಿಸದೆ ಎಲ್ಲ ಹೊಣೆಗಾರಿಕೆಯನ್ನು ಶಿಕ್ಷಕರ ಮೇಲೆ ಹೊರಿಸಿದರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

. ಇದೀಗ ಪರೀಕ್ಷೆಯ ಸಮಯ ಸನ್ನಿಹಿತವಾಗುತ್ತಿದೆ. ಈಗ ಕಳೆದು ಹೋದ ದಿನಗಳ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ. ಹಾಗಾದರೆ ಉಳಿದ ಈ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸಲು,ಪರೀಕ್ಷೆಯನ್ನು ನಿರ್ಭೀತಿಯಿಂದ ಎದುರಿಸಲು ಹೇಗೆ ಸಹಕರಿಸಬಹುದು…?

ಆಶಾದಾಯಕ ನುಡಿಗಳು

ಕಲಿಕೆಯಲ್ಲಿ ನಿಧಾನಗತಿಯಲ್ಲಿ ಇರುವ ಮಕ್ಕಳಿಗೆ ಪೋಷಕರು ಆಡುವ ಆಶಾದಾಯಕ ನುಡಿಗಳು ಆತ್ಮ ವಿಶ್ವಾಸವನ್ನು ತುಂಬಬಲ್ಲವು. ಮಕ್ಕಳ ಕಲಿಕಾ ನ್ಯೂನತೆಗಳನ್ನು ಮತ್ತೆ ಮತ್ತೆ ಅವರೆದುರು ಆಡಿ ತೋರದೆ, ಇನ್ನೂ ಕಾಲಮಿಂಚಿಲ್ಲ, ಈಗ ಇರುವ ಅವಧಿಯಲ್ಲಿ ಓದಿದರೂ ಉತ್ತಮ ಅಂಕ ಗಳಿಸಬಹುದು ಎಂಬ ನಂಬಿಕೆ ಅವರ ಮನದಲ್ಲಿ ಮನೆ ಮಾಡುವ ರೀತಿಯಲ್ಲಿಯೇ ಪೋಷಕರ ಮಾತುಗಳಿರಬೇಕು. ಇಂತಹ ಭರವಸೆಯ ಮಾತುಗಳು ಮಕ್ಕಳ ಮನಸಿನ ಮೇಲೆ ಒಳ್ಳೆಯ ಪರಿಣಾಮ ಬೀರಬಲ್ಲವು, ಆತ್ಮ ವಿಶ್ವಾಸ ತುಂಬಬಲ್ಲವು. ನಮ್ಮ ಬೆಂಬಲಕ್ಕೆ ಪೋಷಕರು ಇದ್ದಾರೆ ಎನ್ನುವ ನಂಬುಗೆಯ ಮನಸ್ಥಿತಿಯನ್ನು ಅವರಲ್ಲಿ ಹುಟ್ಟು ಹಾಕುವ ಗುರುತರ ಜವಾಬ್ದಾರಿ ಪೋಷಕರದ್ದು.

ನಿರಂತರ ಓದಿಗೆ ಪೂರಕ ವಾತಾವರಣ.


ಮಕ್ಕಳ ಮನಸಿಗೆ ಧೈರ್ಯ ತುಂಬಿ ಅವರಲ್ಲಿ ಆತಂಕ ಕಡಿಮೆ ಮಾಡಿದರೆ ಸಾಲದು ಕಡಿಮೆ ಸಮಯದಲ್ಲಿ ಮಕ್ಕಳನ್ನು ಓದಿಸಿ ಕಲಿಸುವ ಜವಾಬ್ದಾರಿ ಪೋಷಕರಲ್ಲಿ ಸದಾ ಜಾಗ್ರತವಾಗಿರಬೇಕು. ಮನೆಯ ಸಮಸ್ಯೆಗಳು ಯಾವುದೇ ಇರಲಿ, ಮಕ್ಕಳ ಓದಿಗೆ ಪೂರಕ ವಾತಾವರಣವನ್ನು ಪೋಷಕರು ಕಲ್ಪಿಸಿಕೊಡಬೇಕು. ತನ್ನ ಕಲಿಕೆಗಾಗಿ ಮನೆ ಮಂದಿಯೆಲ್ಲ ತೊಂಕಕಟ್ಟಿ ನಿಂತಿದ್ದಾರೆ ಎನ್ನುವ ಮಗುವಿನ ಅರಿವು ಅದನ್ನು ಪಟ್ಟು ಹಿಡಿದು ಓದುವಂತೆ ಪ್ರೆರೇಪಿಸಬಲ್ಲುದು. ಮಗುವಿನ ನಿರಂತರ ಓದಿಗೆ ಅಪ್ಪ ಅಮ್ಮನ ತ್ಯಾಗ ಅತ್ಯಗತ್ಯ. ವರ್ಷದ ಆರಂಭದಿಂದಲೇ ಮಗುವನ್ನು ಓದಿಸದೇ ಇದ್ದದ್ದು ತಮ್ಮ ತಪ್ಪು ಎನ್ನುವ ಚಿಂತನೆ ಪೋಷಕರಲ್ಲಿ ಮೂಡಬೇಕು.

ವೇಳಾಪಟ್ಟಿ.

ಪರೀಕ್ಷೆಗೆ ಉಳಿದಿರುವ ದಿನಗಳು ಮತ್ತು ಯಾವ ವಿಷಯದ ಓದಿಗೆ ಎಷ್ಟು ಪ್ರಾಶಸ್ತ್ಯ ನೀಡಬೇಕು ಎಂಬುದರ ಆಧಾರದಲ್ಲಿ ಅಮ್ಮ ಅಥವಾ ಅಪ್ಪ ಸ್ವತಃ ತಾವೇ ಒಂದು ವೇಳಾಪಟ್ಟಿಯನ್ನು ಮಾಡಿ ಅದರಂತೆ ಓದಿಸುವುದೊಳಿತು. ಇಲ್ಲಿ ವಿಷಯಾಧಾರಿತ ಶಿಕ್ಷಕರ ಸಹಾಯ ಪಡೆಯಬಹುದು. ಶಾಲೆಯಲ್ಲಿ ಶಿಕ್ಷಕರು ಮನೆಯಲ್ಲಿ ಪೋಷಕರು ಹೀಗೆ ಎರಡೂ ಕಡೆಯಿಂದ ಮಕ್ಕಳ ಓದಿಗೆ ಬೆಂಬಲ ದೊರೆತಾಗ ಕಲಿಕಾ ಪ್ರಗತಿ ಸಾಧ್ಯ.

ಪುನರಾವರ್ತನೆಯ ವಿಚಾರಗಳಿಗೆ ಮೊದಲ ಆಧ್ಯತೆ.

ಮಕ್ಕಳು ಪಠ್ಯಪುಸ್ತಕದ ಎಲ್ಲ ಅಂಶಗಳನ್ನೂ ಕಲಿಯಬೇಕು, ಜ್ಞಾನ ಗಳಿಸಬೇಕು, ನಿಜ. ಆದರೆ ಮಕ್ಕಳು ಪಾಸಾಗುವುದಕ್ಕೇ ಶ್ರಮಿಸುವ ಹಂತದಲ್ಲಿ ಇದ್ದಾರೆ ಎನ್ನುವ ಅಂಶ ಮನದಟ್ಟಾದಾಗ ಶಿಕ್ಷಕರು ಶಾಲೆಯಲ್ಲಿ ಬರೆಯಿಸಿದ ಪುನರಾವರ್ತನೆಯ ಅಂಶಗಳತ್ತ ಹೆಚ್ಚಿನ ಆದ್ಯತೆ ನೀಡುವುದು ಉತ್ತಮ. ವರ್ಷ ಪೂರ್ತಿ ಶಾಲೆಯಲ್ಲಿ ನಡೆಸಿದ ಕಿರು ಪರೀಕ್ಷೆ, ಮದ್ಯಾವಧಿ ಪರೀಕ್ಷೆ ಇತ್ಯಾದಿ ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳಿಗೆ ಉತ್ತರ ಕಲಿಯಲು ಪ್ರೋತ್ಸಾಹ ನೀಡಬೇಕು. ಆಗಾಗ ಶಾಲಾ ಶಿಕ್ಷಕರ ಒಡನಾಟ ಒಳ್ಳೆಯದು.

ಗೆಳೆಯ -ಗೆಳತಿಯರ ಬಗ್ಗೆ ಅರಿವಿರಲಿ.

ಪೋಷಕರಿಗೆ ತಮ್ಮ ಮಕ್ಕಳ ಗೆಳೆಯ ಗೆಳತಿಯರ ಬಗ್ಗೆ ಸ್ವಲ್ಪ ಮಟ್ಟಿಗಾದರೂ ಅರಿವಿರಬೇಕು. ಗೆಳೆತನ ಮಕ್ಕಳ ಕಲಿಕೆಯ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಮಕ್ಕಳ ಸ್ನೇಹಿತರನ್ನು ದೂರುವ ಯಾ ತೆಗಳುವ ಕೆಲಸ ಖಂಡಿತಾ ಸಲ್ಲದು. ಹಾಗೆಂದು ಮಕ್ಕಳನ್ನು ಈ ಅವಧಿಯಲ್ಲಿ ಹುಟ್ಟುಹಬ್ಬದ ಆಚರಣೆ, ಸಮ್ಮಿಲನ, ಅದು -ಇದು ಎಂದು ಒಗ್ಗೂಡದಂತೆ ಕಾಯುವ ಜವಾಬ್ದಾರಿ ಪೋಷಕರದ್ದು. ಈ ನಿಟ್ಟಿನಲ್ಲಿ ಸೂಕ್ಷ್ಮವಾಗಿ ಮಕ್ಕಳಿಗೆ ತಿಳಿ ಹೇಳುವ ಜಾಣ್ಮೆ ಅಪ್ಪ -ಅಮ್ಮನಿಗಿರಬೇಕು.

ಆರೋಗ್ಯಕರ ಸ್ಪರ್ಧೆಗೆ ಪ್ರೋತ್ಸಾಹ -ಹೋಲಿಕೆ ಬೇಡ.

ಕಲಿಕೆಯಲ್ಲಿ ಸಾಧನೆ ಮಾಡುತ್ತಿರುವ  ಬೇರೆ ಮಕ್ಕಳ ಬಗ್ಗೆ ಪೋಷಕರಿಗೆ ಆದರವಿರಲಿ. ಆದರೆ ತಮ್ಮ ಮಕ್ಕಳನ್ನು ಅವರಿಗೆ ಹೋಲಿಸಿ ಅನಾರೋಗ್ಯಕರ ಮನಸ್ಥಿತಿಯನ್ನು ಮಕ್ಕಳ ಮನದಲ್ಲಿ ಹುಟ್ಟುಹಾಕುವುದು ಸರ್ವಥಾ ಸಲ್ಲದು. ಇದರಿಂದ ಮಕ್ಕಳಲ್ಲಿ ದ್ವೇಷ ದ ಮನೋಭಾವ ಮೂಡೀತೆ ಹೊರತು ಕಲಿಕೆಗೆ ಇದು ಪ್ರೇರಣೆ ಆಗದು. ಸಾಧ್ಯ ವಾದರೆ ಪ್ರಗತಿ ಸಾಧಿಸಿದ ಮಕ್ಕಳ ಓದಿನ ಪರಿಯನ್ನು ತಿಳಿದು ಅದರಂತೆ ಮಕ್ಕಳನ್ನು ಓದಿಸಬಹುದು.

ಆಹಾರ -ಆರೋಗ್ಯ.

ಪರೀಕ್ಷಾ ದಿನಗಳು ಹತ್ತಿರವಾದಂತೆ ಪೋಷಕರು ಮಕ್ಕಳ ಆರೋಗ್ಯದ ಮೇಲೆ ಮತ್ತಷ್ಟು ಕಾಳಜಿ ವಹಿಸಬೇಕಾಗುತ್ತದೆ. ಆರೋಗ್ಯದ ಏರುಪೇರು ಕಲಿಕೆಯ ಮೇಲೆ ಅಗಾದ ಪರಿಣಾಮ ಬೀರಬಲ್ಲುದು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಶಾಲೆಯಲ್ಲಿ ವಿಶೇಷ ತರಗತಿಗಳನ್ನು ನಡೆಸುವ ಸಂದರ್ಭ ಮಕ್ಕಳನ್ನು ಅವರ ಪಾಡಿಗೆ ಬಿಡದೆ ಅವರನ್ನು ಶಾಲೆಗೆ ಬಿಡುವ ಮತ್ತು ಕರೆದುಕೊಂಡು ಹೋಗುವ ಪೂರ್ಣ ಜವಾಬ್ದಾರಿಯನ್ನು ಪೋಷಕರು ಹೊರಲೇಬೇಕು. ಕೆಲವೊಂದು ಪೋಷಕರಿಗೆ ಮಕ್ಕಳು ಸ್ಪೆಷಲ್ ಕ್ಲಾಸ್ ಗೆ ಹೋಗುತ್ತಿದ್ದಾರೋ ಇಲ್ಲವೋ, ಈ ಬಗ್ಗೆ ಸ್ವಲ್ಪವೂ ಅರಿವಿರುವುದಿಲ್ಲ. ಶಿಕ್ಷಕರು ಫೋನ್ ಮಾಡಿ ವಿಚಾರಿಸಿದ ಮೇಲೂ ಎಚ್ಚರಗೊಳ್ಳದ ಅಪ್ಪ ಅಮ್ಮ ಇದ್ದಾರೆ.

ಒತ್ತಡ ಬೇಡ : ಪ್ರೋತ್ಸಾಹವಿರಲಿ.

ಪೋಷಕರ ಒತ್ತಡದ ಮಾತುಗಳು ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಸಬಲ್ಲುದು. ನಿರಾಸೆ ಮೂಡಿಸುವ ನುಡಿಗಳು, ನಿಂದನೆಯ ಮಾತುಗಳು, ಮಕ್ಕಳ ಆತ್ಮ ವಿಶ್ವಾಸವನ್ನು ಕುಗ್ಗಿಸಿಬಿಡುತ್ತವೆ. ಆದ ಕಾರಣ ಪೋಷಕರು ಸದಾ ಸ್ಫೂರ್ತಿದಾಯಕ ಮಾತುಗಳನ್ನೇ ಆಡುತ್ತೀರಬೇಕು.

ವಿರಾಮದ ಅವಧಿ ಯೋಜನಾಬದ್ಧವಾಗಿರಲಿ.

ಮೆದುಳಿಗೆ ಅಪಾರ ಶಕ್ತಿಯಿದೆ. ಆದರೆ ಅದಕ್ಕೂ ಒಂದು ವಿರಾಮ ಬೇಕು. ನಿರಂತರವಾಗಿ ಅದು ವಿಷಯಗಳನ್ನು ಗ್ರಹಿಸಲಾರದು. ಮಕ್ಕಳು ಚುರುಕು ಬುದ್ಧಿಯವರಾಗಿರಲಿ, ಮಂದ ಗತಿಯವರಾಗಿರಲಿ, ವಿಷಯದ ಗ್ರಹಿಕೆಗೆ ಒಂದು ಮಿತಿಯಿರುತ್ತದೆ. ಒಂದು ತಾಸಿನ ಓದಿನ ಬಳಿಕ ಒಂದು ವಿರಾಮ ಬೇಕೇ ಬೇಕು. ಆ ವಿರಾಮದ ಅವಧಿಯಲ್ಲಿ ಏನು ಮಾಡಬೇಕು … ಮಕ್ಕಳು ಏನು ಮಾಡುತ್ತಾರೆ ಎನ್ನುವುದರ ಅರಿವು ಪೋಷಕರಿಗೆ ಇರಬೇಕು. ಒಂದು ಗಂಟೆಯ ಓದಿನ ಬಳಿಕ ಹತ್ತು ನಿಮಿಷದ ವಿರಾಮ ಸಾಕು. ಆ ಸಮಯದಲ್ಲಿ ಟಿ ವಿ, ಮೊಬೈಲ್ ಬಳಕೆ ಖಂಡಿತ ಬೇಡ.  ರೆಸ್ಟ್ ಎಂದು ಮೊಬೈಲ್ ಹಿಡಿದ ಮಗುವನ್ನು ಓದಿನೆಡೆಗೆ ಕರೆ ತರಲು ಕಷ್ಟ.ಸಾಕು ಪ್ರಾಣಿಗಳ ಜೊತೆಗೆ ಆಟ ಆಡಬಹುದು. ಹಸಿರನ್ನು ವೀಕ್ಷಿಸಬಹುದು. ಅಪ್ಪ -ಅಮ್ಮನ ಜೊತೆಗೆ ಏನಾದರೂ ಆಟ ಆಡಬಹುದು.ಒಟ್ಟಿನಲ್ಲಿ ವಿರಾಮದ ಚಟುವಟಿಕೆಗಳ ಮೇಲೆ ಗಮನ ಇರಲಿ.

ಪ್ರತಿ ಮಗು ಕೂಡಾ ವಿಭಿನ್ನ ಎನ್ನುವ ತಿಳುವಳಿಕೆ.

ಕೆಲವು ಮಕ್ಕಳು ಓದಿನಲ್ಲಿ, ಕೆಲವರು ಆಟದಲ್ಲಿ, ಕೆಲವರು ಸಾಂಸ್ಕೃಟಿಕ ಸ್ಪರ್ಧೆಗಳಲ್ಲಿ, ಹೀಗೆ ಒಂದೊಂದು ಮಗುವಿನಲ್ಲಿ ಒಂದೊಂದು ಕಲೆಯನ್ನು ದೇವರು ಸೃಷ್ಟಿಸಿರುತ್ತಾರೆ. ಆದ ಕಾರಣ ಯಾವುದೇ ಪೋಷಕರು ನಿರಾಸೆ ಹೊಂದುವ ಅಗತ್ಯವಿಲ್ಲ.ಕೆಲವರಿಗೆ ಕೆಲವು ವಿಷಯಗಳು ಕಷ್ಟವಾಗಬಹುದು. ಆದರೆ ನಿರಂತರ ಅಭ್ಯಾಸದಿಂದ ಸಾಧನೆ ಸಾಧ್ಯ. ಆತ್ಮವಿಶ್ವಾಸವಿರಲಿ.


One thought on ““ಪರೀಕ್ಷೆ – ಒತ್ತಡ ನಿವಾರಣೆಗೆ ಬೇಕು ಪೋಷಕರ ಪ್ರೇರಣೆ.”ಜಯಲಕ್ಷ್ಮಿ ಕೆ. ಅವರ ವಿಶೇಷ ಲೇಖನ

Leave a Reply

Back To Top