
ಅಂಕಣ ಸಂಗಾತಿ
ಗಜಲ್ ಗಂಧ
ವೈ ಎಂ ಯಾಕೊಳ್ಳಿ
ವಾರದ ಗಜಲ್
ಅನಸೂಯಾ ಜಹಗಿರದಾರ

ಕಾಯುವಿಕೆಯೇ ಪ್ರೇಮವೆನ್ನುವ ತೀವ್ರ ತಹತಹದ ಭಾವನೆಯ ಶ್ರೀಮತಿ ಅನಸೂಯಾ ಜಹಗೀರದಾರ ಅವರ ಗಜಲ್ ಹೀಗಿದೆ.

*ಮುಡಿದ ಮೊಗ್ಗುಗಳು ಬಾಡಿದವು ಅವನು ಬರಲಿಲ್ಲ
ಇರುಳ ತಾರೆಗಳು ಮರುಗಿದವು ಅವನು ಬರಲಿಲ್ಲ
ಎಂದಿಲ್ಲದಂತೆ ಇಂದು ಗಾಳಿ ಜೋರಾಗಿ ಬೀಸಿ ಪಿಸುಗುಟ್ಟಿತು
ಉರಿವ ಶಮೆಗಳು ಮಬ್ಬಾದವು ಅವನು ಬರಲಿಲ್ಲ
ಶಯನ ಕೋಣೆಯ ಗೋಡೆ ಏಕಾಂಗಿತನಕೆ ಸಾಕ್ಷಿಯಾಯಿತು
ಕಣ್ಣ ಹನಿಗಳು ಕೆನ್ನೆಗಿಳಿದು ಹರಿದವು ಅವನು ಬರಲಿಲ್ಲ
ಅವಳುಸಿರ ದನಿ ಜೋರೆನಿಸಿ ಅಸಹನೀಯ ಕರ್ಕಶವೆನಿಸಿತು
ಎದೆಯ ಕವಾಟಗಳು ಮುಚ್ಚಿದವು ಅವನು ಬರಲಿಲ್ಲ
ಈ ಮನೆಯಲಿ ಗಳಿಕೆ ಏನೂ ಉಳಿಯಲಿಲ್ಲ ಅನು
ಸಮಾಧಿಯ ಹೂಗಳು ಒಣಗಿದವು ಅವನು ಬರಲಿಲ್ಲ
****
ಅನಸೂಯಾ ಜಹಗಿರದಾರ
ವಿಶ್ಲೇಷಣೆ

ಸಮಕಾಲೀನ ಕನ್ನಡದ ಪ್ರಮುಖ ಗಜಲ್ ಕಾರ್ತಿಯರಲ್ಲಿ ಒಬ್ಬರು ಅನಸೂಯಾ ಜಹಗಿರದಾರ ಅವರು. ಅವರೂ ಕೂಡಾ ಕೊಪ್ಪಳ ನೆಲದ ಗಟ್ಟಿ ಗಜಲ್ ಪ್ರತಿಭೆ ಎನ್ನುವದು ವಿಶೇಷ. ಅನೆಕ ಶ್ರೇಷ್ಠ ಗಜಲ್‌ಕಾರರನ್ನು, ಗಜಲ್‌ಕಾರ್ತಿಯರನ್ನು ಕೊಟ್ಟ ನೆಲ ಕೊಪ್ಪಳ ಎನ್ನುವದು ಎಲ್ಲರಿಗೂ ತಿಳಿದದ್ದೇ ಆಗಿದೆ. ಅನಸೂಯಾ ಅವರು ಕಥೆ, ಕಾವ್ಯ ಗಜಲ್ ಕಿರುಗವಿತೆಗಳು ಹೀಗೆ ಅನೇಕ ಪ್ರಕಾರಗಳಲ್ಲಿ ಬರೆಯುತ್ತ ಬಂದಿರುವವರು.
ಅವರದು ಬಹುಮುಖ ಪ್ರತಿಭೆ. ಅವರು ಹಿಂದೂಸ್ಥಾನಿ ಸಂಗೀತ ಕಲಾವಿದರು, ಕವಯಿತ್ರಿ, ಬರಹಗಾರರು ಜೊತೆಗೆ ವೃತ್ತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರು . ಒಡಲ ಬೆಂಕಿ (ಕವನ ಸಂಕಲನ) ನೀಹಾರಿಕೆ (ಹನಿಗವನಗಳು) ಪರಿವರ್ತನೆ ( ಕಥಾ ಸಂಕಲನ) ಆತ್ಮಾನುಸಂಧಾನ ( ಗಜಲ್ ಸಂಕಲನ) ಹೀಗೆ ನಾಲ್ಕು ಸಂಕಲನಗಳು ಬೇರೆ ಬೇರೆ ಪ್ರಕಾರಗಳಲ್ಲಿ ಕೃತಿಗಳು ಪ್ರಕಟಣೆಯಾಗಿವೆ. ಇವರು ಡಾ.ಡಿ.ಎಸ್ ಕರ್ಕಿ ಕಾವ್ಯ ಪ್ರಶಸ್ತಿ, ಮಂಡ್ಯದ ಸಿರಿಗನ್ನಡ ಪ್ರತಿಷ್ಠಾನದಿಂದ ಕಾವ್ಯಶ್ರೀ ಪ್ರಶಶ್ತಿ, ಕುವೆಂಪು ರಾಜ್ಯ ಕಾವ್ಯ ಪುರಸ್ಕಾರ, ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಕೊಪ್ಪಳ ಜಿಲ್ಲಾ ಒಕ್ಕೂಟ ಮಹಿಳಾ ಪುರಸ್ಕಾರ, ಸಂಯುಕ್ತ ಕರ್ನಾಟಕ ಯುಗಾದಿ ಕಾವ್ಯ ಸ್ಪರ್ಧೆ ಮೆಚ್ಚುಗೆ ಬಹುಮಾನ, ಅತ್ಯುತ್ತಮ ವಿಶೇಷ ಶಿಕ್ಷಕಿ ರಾಜ್ಯ ಪ್ರಶಸ್ತಿ, ಹೀಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾಮಾಜಿಕ ಜಾಲತಾಣದ ವ್ಯಾಟ್ಸಪ್ ಗುಂಪುಗಳಲ್ಲಿ ಇವರ ಹೊಸ ಹೊಸ ಗಜಲ್‌ಗಳನ್ನು ಓದಿ ಸವಿಯುವದು ಕಾವ್ಯ ರಸಿಕರಿಗೆ ದೊರೆತ ಅವಕಾಶವಾಗಿದೆ.
೨೦೨೧ರಲ್ಲಿ ಆತ್ಮಾನುಸಂಧಾನ ಎಂಬ ಗಜಲ್ ಸಮಕಲನ ಪ್ರಕಟವಾಯಿತು. ಅದರೊಳಗಿಂದ ಈ ಮೇಲಿನ ಗಜಲ್ ನ್ನು ‘ ಗಜಲ್ ಗಂಧ’ ಸಂಚಿಕೆಗಾಗಿ ಈ ಗಜಲ್ ಆರಿಸಿಕೊಂಡಿದ್ದೇನೆ .
‘ಅನು’ ಎಂಬ ಕಾವ್ಯನಾಮದಿಂದ ಗಜಲ್ ಬರೆಯುವ ಶ್ರೀಮತಿ ಅನಸೂಯಾ ಜಹಗೀರದಾರ ಅವರ ಈ ಗಜಲ್ ಪ್ರೇಮದ ನಿರಾಶೆಯ ತಹತಹವನ್ನು ಸಾರುತ್ತದೆ. ಇಲ್ಲಿ ತನ್ನ ಒಲವಿನ ಇನಿಯನಿಗಾಗಿ ಕದಿರುವ ಪ್ರೇಮಿಯೊಬ್ಬಳು ತೀವ್ರವಾದ ನಿರಾಶೆಯಲ್ಲಿದ್ದಾಳೆ ಅವನು ಬಾರದಿರುವ ನೋವನ್ನು ವ್ಯಕ್ತಪಡಿಸುತ್ತಿದ್ದಾಳೆ ಮಹಾದೇವಿಯಕ್ಕ ಚನ್ನಮಲ್ಲಿಕಾರ್ಜುನನ ಹುಡುಕಿ ಹೊರಟಾಗ ಅವನ ಕಾಣದೇ ‘ಕಂಡಿರೇ ಕಂಡಿರೆ’ ಎಂದು ಗಿರಿಯ ತರು ಮರಗಳನ್ನು ಕೇಳುವ ತೀವ್ರತೆ ಇಲ್ಲಿಯೂ ಕಾಣಿಸಿದೆ .ತೀವ್ರವಾದ ಪ್ರೇಮವೂ ಭಕ್ತಿಯ ಹಾಗೆಯೇ ಅಲ್ಲವೇ?
ಅವನ ಇರುವಿಕೆ ಎಂಬುದೇ ದೀಪದ ಬೆಳಕಿನಂತೆ. ಅವನಿಲ್ಲದ ಆ ವಿರಹವೇ ಅವಳಿಗೆ ಕತ್ತಲೆಯ ಅನುಭವ ತರುತ್ತದೆ. ಸದಾ ಉರಿಯುವ ದೀಪಗಳು ಅವನಿಲ್ಲದ ಕಾರಣ ಮಬ್ಬಾಗಿವೆ. ಆದರೂ ಅವನ ಬರುವಿಕೆಯ ನಿರಿಕ್ಷೆ ಸಫಲವಾಗದೇ ಅಕೆ ಸೋತಿದ್ದಾಳೆ.
ನಿಜವಾದ ಪ್ರೇಮಿ ತನ್ನ ದೆಹವನ್ನು ಸಿಂಗರಿಸಿಕೊಳ್ಳುವುದೇ ತನ್ನ ಪ್ರೇಮಿಯ ಬರುವಿಕೆಗಾಗಿ. ಅವನು ಬಂದು ಮೆಚ್ಚದಿದ್ದರೆ ಅವಳು ಮಾಡಿಕೊಂಡ ಅಲಂಕಾರ ವ್ಯರ್ಥವೇ ಎನ್ನುವದು ಅವಳ ಅಭಿಪ್ರಾಯ. ಇಲ್ಲಿ ಯ ಪ್ರೇಮಿಯೂ ತನ್ನವನು ಬರುವನೆಂದು ತಲೆ ತುಂಬ ಅರಳಿದ ಮಲ್ಲಿಗೆಯನ್ನು ಹೆರಳಿಗೆ ಅಲಂಕರಿಸಿಕೊಂಡು ಕಾದಿದ್ದಾಳೆ. ಅವಳ ಇನಿಯ ಬಂದು ಆ ಹೂಮುಡಿಯನ್ನು ಆಘ್ರಾಣಿಸಿದಾಗಲೇ ಆ ಮುಡಿದ ಹೂವಿಗೊಂದು ಸಾರ್ಥಕ್ಯ ಬರುವದು ಎನ್ನುವದು ಅವಳ ಅಸೆ. ಅದರೆ ಆತ ಬರದೇ
*ಮುಡಿದ ಮೊಗ್ಗುಗಳು ಬಾಡಿದವು ಅವನುಬರಲಿಲ್ಲ
ಇರುಳ ತಾರೆಗಳು ಮರುಗಿದವು ಅವನು ಬರಲಿಲ್ಲ*
ಅವನ ಸಲುವಾಗಿ ಕಾಯ್ದ ಹೂಗಳು ಬಾಡಿದರೆ. ಇರುಳ ತಾರೆಗಳು ಅವನ ಆಗಮನ ವಿಲ್ಲದೇ ಅವರಿಬ್ಬರೂ ಕೂಡಿ ಸಂಭ್ರಮಿಸುವ ಘಳಿಗೆಗಳ ತಮ್ಮ ಕಣ್ಣ ತುಂಬಿಸಿಕೊಳ್ಳದೆ ಅವು ಮರುಗಿದುವಂತೆ.ಬಣ್ಣನೆಯ ಸಹಜತೆ ಗಜಲ್ ಕಾವ್ಯದ ಸೇರ್ ಗೆ ಒಂದು ರೋಮಾಂಚನವನ್ನು ತಂದುಕೊಟ್ಟಿದೆ. ಮುಂದುವರೆದು
*ಎಂದಿಲ್ಲದಂತೆ ಇಂದು ಗಾಳಿ ಜೋರಾಗಿ ಬೀಸಿ ಪಿಸುಗುಟ್ಟಿತು
ಉರಿವ ಶಮೆಗಳು ಮಬ್ಬಾದವು ಅವನು ಬರಲಿಲ್ಲ*
ಎನ್ನುತ್ತದೆ .ಅವನಿಲ್ಲದ ಕಾರಣ ಗಾಳಿಗೆ ಇಂದು ಜೋರು ಪ್ರಾಪ್ತವಾಗಿದೆ ಅದು ಜೋರಾಗಿ ಬೀಸಿ ಅವನಿಲ್ಲದಿರುವಿಕೆಯಲ್ಲಿ ಅವಳ ಕಿವಿಯಲ್ಲಿ ಪಿಸುಗುಡುತ್ತದೆ. ಈ ಪಿಸುಗುಡುವಿಕೆಯಲ್ಲಿ ಒಂದು ಅವ್ಯಕ್ತ ನೋವಿದೆ. ಅದು ಅವಳ ಏಕಾಂತದ ನಿರಾಸೆಗೆ ಸಾಕ್ಷಿಯಾದರೆ ಉರಿಯುತ್ತಿದ್ದ ಶಮೆಗಳಿಗೂ (ದೀಪ) ನಿರಾಶೆ ಪ್ರಾಪ್ತವಾಗಿ ಅವು ಮಬ್ಬಾಗುತ್ತವೆ. ಅವನಿಲ್ಲದ ಮೇಲೆ ಅವಳಿಗೆ ಏಕಾಂತವೇ ಗತಿಯಲ್ಲವೇ ಆಗ ಗೋಡೆಗಳೂ ಏಕಾಂಗಿತನ ಅನುಭವಿಸುತ್ತವೆ. ಅದನ್ನೆ ಮುಂದಿನ ಶೇರ್
*ಶಯನ ಕೋಣೆಯ ಗೋಡೆ ಏಕಾಂಗಿತನಕೆ ಸಾಕ್ಷಿಯಾಯಿತು
ಕಣ್ಣ ಹನಿಗಳು ಕೆನ್ನೆಗಿಳಿದು ಹರಿದವು ಅವನು ಬರಲಿಲ್ಲ*
ಎಂದು ಬಣ್ಣಿಸುತ್ತದೆ. ಅವನಿಲ್ಲದ ಕಾರಣ ಮೂಡಿದ ದು:ಖವನ್ನು ಯಾರು ಕಳೆದಾರು. ಆಕೆಗೀಗ ಅಳುವೊಂದೇ ಸಂಗಾತಿ. ಅಂತೆಯೆ ಗಜಲ್ ಕಣ್ಣ ಹನಿಗಳು ಕೆನ್ನೆಗಿಳಿದುದನ್ನು ಹೇಳುತ್ತದೆ. ಅವಳ ಅಳು ಈಗ ಆ ಏಕಾಂಗಿ ಕೋಣೆಯಲ್ಲಿ ತಾನೇ ತಾನಾಗಿ ಹರಿಯುತ್ತದೆ. ಅವಳ ದನಿ ಅವಳಿಗೆ ಜೋರೆನಿಸಿ ಕರ್ಕಶ ಭಾವ ನೆ ಮೂಡಿಸಿ
*ಅವಳುಸಿರ ದನಿ ಜೋರೆನಿಸಿ ಅಸಹನೀಯ ಕರ್ಕಶವೆನಿಸಿತು
ಎದೆಯ ಕವಾಟಗಳು ಮುಚ್ಚಿದವು ಅವನು ಬರಲಿಲ್ಲ*
ಅತ್ತೂ ಅತ್ತೂ ಅವಳ ದನಿ ಅವಳಿಗೇ ಅಸಹನೀಯ ಎನಿಸಿ ಬಿಡುತ್ತದೆ. ದು:ಖದ ಕಾರಣ ಅವಳಿಗುಂಟಾದ ನೋವು ಮಾತಿಗೆ ನಿಲುಕದ್ದು. ಎದೆಯ ಬಾಗಿಲೇ ಬಂದಾದAತೆನಿಸಿ ಅಲ್ಲಿ ಉಳಿದಿರುವದು ಕೇವಲ ದು:ಖ ಮಾತ್ರ ಎನಿಸಿಬಿಡುತ್ತದೆ. ಆವಾಗ ಮನೆಯೂ ಶೂನ್ಯವೆನಿಸಿ
*ಈ ಮನೆಯಲಿ ಗಳಿಕೆ ಏನೂ ಉಳಿಯಲಿಲ್ಲ ‘ಅನು’
ಸಮಾಧಿಯ ಹೂಗಳು ಒಣಗಿದವು ಅವನು ಬರಲಿಲ್ಲ*
ಅವಳ ಸ್ವಂತ ಮನೆಯೇ ಈಗ ಪರಕೀಯವೇನಿಸಿ ಬಿಡುತ್ತದೆ. ಪ್ರೇಮ ಶೂನ್ಯತೆಯ ಮನೋಭಾವದಿಂದ ಉಂಟಾಗುವ ಒಂಟಿತನ ಖಂಡಿತವಾಗಿಯೂ ಮಾತಲ್ಲಿ ವಿವರಿಸಲಾಗದ್ದು. ಅದನ್ನೆ ಗಜಲ್ಕಾರ್ತಿ ಮನೆಯನ್ನು ಮನೆಯಂದು ಭಾವಿಸಿಲ್ಲ. ಅವನಿಲ್ಲದ ಮನೆ ಈಗ ಅವಳಿಗೆ ಮನೆಯಂತೆ ತೋರದೆ ಸಮಾಧಿ ಎನಿಸಿ ಬಿಡುತ್ತದೆ. ಆದರೆ ಸಮಾಧಿಯಾದರೇನು? ಒಂದು ಕಾಲಕ್ಕೆ ಹೂ ತುಂಬಿದ ಹೂಗಿಡಗಳ ಪ್ರದೇಶವಾಗಿದ್ದ ಜಾಗ ಅದು. ಈಗ ಹೂಗಳು ಒಣಗಿ ಹೋದರೂ ಅವನು ಬರಲೇ ಇಲ್ಲ ಎನ್ನುವ ನಿರಾಶೆ ಅವಳನ್ನು ಕಾಡುತ್ತದೆ. ಒಟ್ಟಾರೆ ಅವನಿಲ್ಲದ ದು:ಖವೇ ಗಜಲ್‌ನ ಸ್ಥಾಯಿಭಾವವಾಗಿದೆ.

.
ಪ್ರೇಮದಲ್ಲಿ ನಿರೀಕ್ಷೆ ಎಂಬುದು ಸದಾ ಇರುವಂಥದೆ . ಇಂದಲ್ಲ ನಾಳೆ ತನ್ನ ಪ್ರೇಮಿ ಅಥವಾ ಪ್ರೇಮಿಸಿದಾಕೆ ಬಂದಾರು ಎಂಬ ನಿರಿಕ್ಷೆ ಅಲ್ಲಿ ಸಹಜ. ಅದು ಬಾಳಿನ ಮೂಲ ಸೂತ್ರ ಕೂಡಾ. ಆದರೆ ಅವನ ಅಥವಾ ಅವಳ ಬರುವಿಕೆ ಸುಳ್ಳಾದಾಗ ಆಗುವ ನೋವು ಯಾರನ್ನೂ ಬಿಡಲಾರದು. ಒಲಿದ ಮೇಲೆ ಒಲ್ಲೆ ಎನ್ನುವ ಘಾತ ಅನುಭವಿಸಿದ ಹೃದಯಕ್ಕೆ ಮಾತ್ರ ಆ ನೋವಿನ ಪರಿಣಾಮ ಅರಿವಿಗೆ ಬರುವಂಥದು. ಜಗತ್ತಿನಲ್ಲಿ ಈ ಪ್ರೇಮ ಎನ್ನುವದು ಇರದೇ ಇದ್ದರೆ ಈ ಜಗತ್ತು ಎಷ್ಟು ಬರುಡಾಗುತ್ತಿದ್ದಿತೋ .ಆದರೆ ಪ್ರೇಮ ಸಫಲವಾಗದೇ ಇದ್ದವರ ದು:ಖದಿಂದಲೂ ಈ ಜಗತ್ತು ಬೇಯುತ್ತಿದ್ದ ಪರಿಯನ್ನು ಮಾತಲ್ಲಿ ವರ್ಣಿಸಲಾಗದೆ ಗಜಲ್ ಅದನ್ನು ಶೇರ್ ಗಳಲ್ಲಿ ಅದನ್ನು ಹಿಡಿಯುವ ಪ್ರಯತ್ನ ಮಾಡಿದೆ. ಈ ಭಾವದಲ್ಲಿಯೇ ಗಜಲ್ ಕಾವ್ಯದ ಸಫಲ ಸಾಲುಗಳು ಮೂಡಿವೆ ಎನಿಸುತ್ತದೆ.
ಡಾ.ವೈ.ಎಂ.ಯಾಕೊಳ್ಳಿ

ಧನ್ಯವಾದಗಳು ಸರ್