![](https://sangaati.in/wp-content/uploads/2024/09/veenahemanth.jpg)
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಬರವಣಿಗೆ ಅಷ್ಟು ಸುಲಭವೇ??
![](https://sangaati.in/wp-content/uploads/2025/02/pexels-photo-10676926.webp)
ಮನೆಯ ಅಷ್ಟು ಕೆಲಸಗಳ ಮಧ್ಯದಲ್ಲಿ ಅದು ಹೇಗೆ ಬರೆಯಲು ಸಮಯ ಹೊಂದಿಸಿಕೊಳ್ಳುತ್ತೀಯಾ ಎಂದು ಹಲವಾರು ಜನ ನನ್ನನ್ನು ಕೇಳುತ್ತಾರೆ. ಏನನ್ನಾದರೂ ಸಾಧಿಸಲೇಬೇಕೆಂಬ ಮನಸ್ತಿದ್ದರೆ ಯಾವ ಕೆಲಸವೂ ಅಸಾಧ್ಯವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ತುಸು ಸಮಯದ ಹೊಂದಾಣಿಕೆ, ಮುಖ್ಯ ವಿಷಯಗಳನ್ನು ಅಮುಖ್ಯ ವಿಷಯಗಳಿಂದ ಬೇರ್ಪಡಿಸಿ ಕಾರ್ಯನಿರ್ವಹಿಸುವ ಮೂಲಕ ಸಮಯವನ್ನು ಉಳಿಸಿ ನಮ್ಮ ನೆಚ್ಚಿನ ಹವ್ಯಾಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದು ಅಂತೆಯೇ
ಬರೆಯುವ ಕೆಲ ಸದುಪಾಯಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಸಾಕಷ್ಟು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಒಳ್ಳೆಯ ಓದು ನಮ್ಮನ್ನು ಉತ್ತಮ ಚಿಂತನೆಗೆ ಒಡ್ದುತ್ತದೆ. ವಿಭಿನ್ನ ವಿಷಯಗಳನ್ನು ಅರ್ಥೈಸಿಕೊಳ್ಳುವ ವಿಭಿನ್ನ ದೃಷ್ಟಿಕೋನಗಳನ್ನು ನಮಗೆ ತೋರುತ್ತದೆ.
ನಮ್ಮ ಸುತ್ತಣ ಸಮಾಜದ ಆಗುಹೋಗುಗಳ ಕುರಿತು ಒಂದು ಸೂಕ್ಷ್ಮ ಅವಲೋಕನ ನಮ್ಮದಾಗಿರಬೇಕು. ಯಾವುದನ್ನೂ ನಿರ್ಣಯಾತ್ಮಕವಾಗಿ ಪರೀಕ್ಷಿಸದೆ ವಸ್ತು ಸ್ಥಿತಿಯನ್ನು ಅಧ್ಯಯನ ಮಾಡಬೇಕು. ಬೇರೆಯವರು ಇರುವ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವ, ಅವರು ಎದುರಿಸುವ ಸಮಸ್ಯೆಗಳನ್ನು ಸವಾಲುಗಳನ್ನು, ಸಂತಸಗಳನ್ನು, ದುಃಖ ದಾರಿದ್ರ್ಯಗಳ ಸೂಕ್ಷ್ಮ ಅವಗಾಹನೆಯನ್ನು ಹೊಂದಿರಬೇಕು. ಸಾಮಾಜಿಕ ಸಮಸ್ಯೆಗಳತ್ತ ವಸ್ತುನಿಷ್ಠವಾಗಿಯೂ ಮತ್ತು ಭಾವನಾತ್ಮಕವಾಗಿಯೂ ಯೋಚಿಸುವ ಮನಸ್ಥಿತಿಯನ್ನು ಹೊಂದಿರಬೇಕು.
ಒಂದು ನೈಜವಾದ ಪದ ಮತ್ತು ವಾಕ್ಯದಿಂದ ಒಂದು ಇಡೀ ಲೇಖನವನ್ನು ಸಿದ್ಧಪಡಿಸಬಹುದು. ದೈನಂದಿನ ಕೆಲಸಗಳನ್ನು ಮಾಡುತ್ತಿರುವಾಗ ಪೇಪರ್ ಓದುವಾಗ ಯಾವುದೋ ಹಾಡು ಕಿವಿಗೆ ಬಿದ್ದಾಗ, ಚಲನಚಿತ್ರದ ಯಾವುದೋ ಒಂದು ಸಂಭಾಷಣೆಯ ಪದ ಇಲ್ಲವೇ ಆ ಹಾಡಿನ ಒಂದು ಸಾಲು ನಮ್ಮ ಮನಕ್ಕೆ ಕವಿದ ಮಬ್ಬನ್ನು ಹೊಡೆದೋಡಿಸಿ ನಮ್ಮನ್ನು ಚಿಂತನೆಗೆ ಒಡ್ದುತ್ತದೆ. ಅದರ ಕುರಿತೇ ಮನ ಧೇನಿಸತೊಡಗುತ್ತದೆ. ಲೇಖನದ ಶೀರ್ಷಿಕೆ ತಂತಾನೆ ಒಡ ಮೂಡುತ್ತದೆ. ಮತ್ತೆ ಕೆಲ ಬಾರಿ ಇಡೀ ಲೇಖನವನ್ನು ಬರೆದ ನಂತರ ಶೀರ್ಷಿಕೆಯನ್ನು ಬದಲಿಸಬೇಕಾಗಬಹುದು.
ಸಂಪೂರ್ಣ ಲೇಖನದ ಚಿತ್ರಣ ನಿಮ್ಮ ಮನದಲ್ಲಿ ಮೂಡುವವರೆಗೂ ಕಾಯಬೇಡಿ… ಮನದಲ್ಲಿ ಮೂಡಿದ ಭಾವನೆಗಳನ್ನು ಲೇಖನಿಯ ಮೂಲಕ ಕಾಗದದಲ್ಲಿ ಮೂಡಿಸುತ್ತಾ ಹೋಗಿ. ಲೇಖನ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಎನ್ನಿಸುವಾಗ ನಿಲ್ಲಿಸಿ ಏನು ಮಾಡಬೇಕೆಂದು ಯೋಚಿಸಿ. ಮತ್ತೊಮ್ಮೆ ಮೊದಲಿನಿಂದ ಆ ಲೇಖನವನ್ನು ಓದಿ. ಹೀಗೆ ಮಾಡಿದಾಗ ನೀವು ಬರೆಯುವಾಗ ನಿಮಗುಂಟಾಗುವ ತಡೆಗಳನ್ನು ನಿವಾರಿಸಿಕೊಳ್ಳಬಹುದು. ತುಸು ಹೆಚ್ಛೇ ಲೇಖನವನ್ನು ಬರೆದು ಕೊನೆಯ ಭಾಗವನ್ನು ಹಾಗೆಯೇ ಉಳಿಸಿದಾಗ ಮರುದಿನ ಮತ್ತಷ್ಟು ಉತ್ಸಾಹದಿಂದ ಅದನ್ನು ಬರೆಯಬಹುದು.
ಬಾವಿಯಲ್ಲಿ ತುಸು ನೀರನ್ನು ಉಳಿಸಿ ಮರುದಿನ ಮತ್ತೆ ಅದೇ ಸಮಯಕ್ಕೆ ನೈಸರ್ಗಿಕವಾಗಿ ಆ ಬಾವಿಯಲ್ಲಿ ನೀರು ತುಂಬಿಕೊಳ್ಳುವಂತೆ ನಿಮ್ಮ ಬರವಣಿಗೆಯ ಬಾವಿಯ ಸೆಲೆ ಎಂದೂ ಬತ್ತದಂತೆ ಕಾಯ್ದುಕೊಳ್ಳಿ.
ನಿಮ್ಮ ಮೆದುಳಿಗೆ ಮತ್ತು ಕೈಗಳಿಗೆ ತುಸು ವಿಶ್ರಾಂತಿ
ದೊರೆತಾಗ ಮತ್ತಷ್ಟು ಚೈತನ್ಯವನ್ನು ಹೊಂದುವ ಮೂಲಕ ಬರೆಯಿರಿ.
ಪ್ರತಿ ಬಾರಿಯೂ ಒಂದಷ್ಟು ಬರೆದ ಮೇಲೆ ಮತ್ತೆ ನೀವು ಬರೆದ ಬರಹವನ್ನು ಪುನರಾವಲೋಕನ ಮಾಡಿ. ಕೆಲ ದಿನಗಳ ನಂತರವೂ ನಿಮ್ಮ ಬರಹಗಳನ್ನು ಮತ್ತೆ ಪರಿಶೀಲನಾತ್ಮಕವಾಗಿ ಓದಿ. ಇದು ನಿಮ್ಮ ಬರವಣಿಗೆಯನ್ನು ಉತ್ತಮಗೊಳಿಸಲು ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ.
ನಿಮ್ಮ ಲೇಖನಗಳಲ್ಲಿ ಭಾವನೆಗಳನ್ನು ವಿವರಿಸಬೇಡಿ. ಲೇಖನವನ್ನು ಓದುವಾಗ ಭಾವನೆಗಳು ತನ್ನಿಂತಾನೇ ಉದ್ಭವಿಸಬೇಕು. ಅಂತಹ ಲೇಖನ ನಿಮ್ಮದಾಗಿರಲಿ. ಪತ್ರಿಕೆಗಳು ಕೂಡ ವಾಸ್ತವ ವಿಷಯಗಳನ್ನು ಭಾವನೆಗಳ ಮೂಲಕವೇ ವ್ಯಕ್ತಪಡಿಸುತ್ತವೆ. ನಿಜವಾದ ಭಾವನೆಗಳನ್ನು ಸತ್ಯ ಹಾಗೂ ಸತ್ವಪೂರ್ಣವಾಗಿ ವ್ಯಕ್ತಪಡಿಸಲು ನೈಜ ಬರವಣಿಗೆಯಿಂದ ಮಾತ್ರ ಸಾಧ್ಯವಾಗುತ್ತದೆ.
ಕಾಗದದಲ್ಲಿ ಲೇಖನಗಳನ್ನು ಬರೆದರೆ ಪೆನ್ಸಿಲ್ನಿಂದ ಬರೆಯಿರಿ… ಹಾಗೆ ಬರೆಯುವಾಗ ನೀವು ಎರಡನೇ ಬಾರಿ ಓದುವಾಗ ತಪ್ಪಿದ್ದಲ್ಲಿ ಇರೇಜರನಿಂದ ಅಳುಕಿಸಿ ತಿದ್ದಿ ಬರೆಯಲು ಅನುಕೂಲ. ಮೊಬೈಲ್ ನಲ್ಲಿ ಟೈಪ್ ಮಾಡುವಾಗ ವಾಯ್ಸ್ ಆಪ್ ನಲ್ಲಿ ಬರೆಯುವಾಗ ತುಸು ಜಾಗರೂಕತೆ ಇರಬೇಕು. ಸಂಪೂರ್ಣ ಲೇಖನವನ್ನು ಬರೆದ ಮೇಲೆ ಮತ್ತೊಮ್ಮೆ ಮರು ಪರಿಶೀಲಿಸಿ ತಪ್ಪಿದ್ದಲ್ಲಿ ತಿದ್ದಬೇಕು.
ಕೈಯಲ್ಲಿ ಲೇಖನಿ ಹಿಡಿದು ಬರೆಯುವುದು ತುಸು ಹೆಚ್ಚು ಆರಾಮದಾಯಕ
ಟೈಪ್ ಮಾಡುವಾಗ, ಪ್ರೂಫ್ ತಯಾರು ಮಾಡುವಾಗ
ಅತ್ಯಂತ ಅನುಕೂಲಕರ. ಇದರ ಜೊತೆಗೆ ಕೈಯನ್ನು ಬಳಸಿ ಬರೆಯುವಾಗ ಹೊಸ ವಿಷಯಗಳ ಕುರಿತು ಚಿಂತನೆ ಮಾಡಲು ಅವುಗಳನ್ನು ಸೂಕ್ಷ್ಮವಾಗಿ ಬಳಸಲು ಅನುಕೂಲ.
ವಿಷಯವನ್ನು ಚಿಕ್ಕದಾಗಿ ಚೊಕ್ಕದಾಗಿ ಬರೆಯಲು ರೂಡಿಸಿಕೊಳ್ಳಬೇಕು. ಭೌತಶಾಸ್ತ್ರದ ನಿಯಮಗಳಂತೆ ಗದ್ಯದ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ.
ಗದ್ಯದ ಪ್ರತಿಯೊಂದು ಪದವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ.
ವ್ಯಕ್ತಿ ಚಿತ್ರಣವನ್ನು ಬರೆಯುವಾಗ ಅನಿವಾರ್ಯವಿಲ್ಲದ ಹೊರತು ಇಸವಿಗಳನ್ನು ಕೈ ಬಿಟ್ಟು ವ್ಯಕ್ತಿಯ ಸಾಧನೆ ವ್ಯಕ್ತಿತ್ವದ ಚಿತ್ರಣಕ್ಕೆ ಅವಕಾಶ ಕೊಡಿ. ಒಂದೆರಡು ಮುಖ್ಯ ಸಂಗತಿಗಳನ್ನು ಬರೆಯುವ ಮೂಲಕ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿ.
ಅವರ ಬಾಲ್ಯ ಪಾಲಕರು ಮತ್ತು ಬೆಳೆದು ಬಂದ ವಾತಾವರಣ ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ವಹಿಸಿದ ಪಾತ್ರ ಮುಖ್ಯ ಎಂಬುದನ್ನು ನೆನಪಿನಲ್ಲಿಟ್ಟು ಒಂದೊಂದಾಗಿ ವಿಷದೀಕರಿಸಿ ಬರೆಯಿರಿ.
ಸರಳ, ಶುದ್ಧ ಮತ್ತು ಗೌರವಯುತವಾದ ಭಾವನೆಗಳನ್ನು ಲೇಖನದ ಮೂಲಕ ಮೂಡಿಸಲು ಪ್ರಯತ್ನಿಸಿದಾಗ ಅತ್ಯುತ್ತಮ ಲೇಖನವಾಗಿ ಅದು ಹೊರಹೊಮ್ಮುತ್ತದೆ.
ಬರೆಯಲು ಪ್ರಯತ್ನಿಸಿ…. ಯಶಸ್ವಿಯಾಗಿ
ವೀಣಾ ಹೇಮಂತ್ ಗೌಡ ಪಾಟೀಲ್
![](https://sangaati.in/wp-content/uploads/2024/09/veenahemanth-2-768x1024.jpg)