ನೇಚರ್ ಇಸ್ ಗಾಡ್…” “ಪ್ರಕೃತಿಯೇ ದೈವ..”  ಮನುಷ್ಯ ಮೂಲತಃ ಪ್ರಕೃತಿ ಜೀವಿ.  ಆದರೆ ಅವನ ಅತಿಯಾದ ಆಸೆಗಳಿಂದಾಗಿ ಪ್ರಕೃತಿಯನ್ನು ಕಬಳಿಸುತ್ತಿದ್ದಾನೆ. ಸೃಷ್ಟಿಯೊಳಗಿನ ಸೊಬಗು ಅದೆಂತಹದು ಎಂದರೆ ಎಂತಹ ವ್ಯಕ್ತಿಯನ್ನು ಚೈತನ್ಯಶೀಲದಾಯಕನನ್ನಾಗಿ ಮಾಡುತ್ತದೆ.  ನಾವು ಆರಾಧಿಸುವ ಮೊಟ್ಟಮೊದಲ ದೇವರೆಂದರೆ ಪ್ರಕೃತಿಯಾಗಿರಬೇಕು..! ಆದರೆ ನಮ್ಮ ನಮ್ಮ ದೇವರುಗಳನ್ನು ನಾವು ಆರಾಧಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು.  ಇಂದು ಅದಾಗುತ್ತಿಲ್ಲ.  ಬಹುತೇಕವಾಗಿ ಎಲ್ಲಾ ಧಾರ್ಮಿಕ ಸಂಸ್ಥೆಗಳ ಸುತ್ತಮುತ್ತಲೂ ವಿಶೇಷವಾಗಿ ಎಲ್ಲಾ ಪ್ರಸಿದ್ಧ  ಧಾರ್ಮಿಕ ಆಚರಣೆಗಳನ್ನು ನೋಡಿದಾಗ ಅಲ್ಲಿ ಜಲಮಾಲಿನ್ಯ, ಪರಿಸರ ಮಾಲಿನ್ಯ, ವಾಯುಮಾಲಿನ್ಯವಾಗಲು ಅನೇಕ ಒತ್ತಡಗಳಿಂದಾಗಿ ಜರುಗುತ್ತವೆ.
 ಹಾಗಾದರೆ ಪ್ರಕೃತಿಯನ್ನು ಕೆಡಿಸುವುದು ದೈವತ್ವವೇ..? ದೇವರು ನಿಸರ್ಗದ ಮೇಲೆ ದಬ್ಬಾಳಿಕೆ ಮಾಡಲು ಹೇಳುತ್ತದೆಯೇ..? ದೇವರನ್ನು ನಾವೆಲ್ಲರೂ ಆರಾಧಿಸೋಣ.

ಆದರೆ ಕೆಲವು ನಿಯಮಗಳನ್ನು ನಾವು ಪಾಲಿಸಲೇಬೇಕಾಗುತ್ತದೆ. “ಶುಚಿತ್ವವೇ ದೈವವೆಂದು..” ಗಾಂಧೀಜಿಯವರು ಹೇಳಿದ ಮಾತು ನಾವು ಮರೆತುಬಿಟ್ಟಿದ್ದೇವೆ. ಪ್ರಕೃತಿಯಲ್ಲಿ ಶುಚಿತ್ವವನ್ನು ಕಾಪಾಡಬೇಕಾದ ನಾವು ಇಂದು ಅನಾಚಾರಕ್ಕೆ ಒಳಪಡಿಸಿದ್ದೇವೆ. ಬಹುತೇಕವಾಗಿ, ಧಾರ್ಮಿಕ ಕೇಂದ್ರಗಳ ಸುತ್ತಮುತ್ತಲಿರುವ ಗುಡ್ಡ ಬೆಟ್ಟಗಳ ಪ್ರದೇಶದಲ್ಲಿ ಹಾಗೂ  ನದಿಯ ದಡದಲ್ಲಿಯೇ ಬ್ಯಾಟಿ ಮಾಡುತ್ತೇವೆ. ಹಾಗೆಯೇ ಮನುಷ್ಯನ ಮಲಮೂತ್ರ ವಿಸರ್ಜನೆ ಕೂಡ ನದಿಯ ಅಕ್ಕಪಕ್ಕದಲ್ಲಿಯೇ ಮಾಡುತ್ತಾರೆ.  ಇವೆಲ್ಲವನ್ನೂ ನೋಡಿದಾಗ ಪ್ರಕೃತಿಯನ್ನು ನಾವು ಎಷ್ಟೊಂದು ಕಲುಷಿತಗೊಳಿಸುತಿದ್ದೇವೆ ಎನ್ನುವುದು ಮನದಟ್ಟಾಗುತ್ತದೆ. ಬಹುತೇಕ ಇಂದಿನ ನಾವುಗಳು  ನಸುಕಿನಲ್ಲಿಯೇ ಬಹುಬೇಗನೆ ಎದ್ದು ಸೂರ್ಯೋದಯವನ್ನು ನೋಡುವುದಿಲ್ಲ..!  ಆದರೆ ಹಿಂದೆ ನಮ್ಮ ಹಿರಿಯರು ಮತ್ತು ವಿಶೇಷವಾಗಿ ರೈತಾಪಿ ಜನಾಂಗದವರು ನಸುಕಿನಲ್ಲಿಯೇ ಎದ್ದು, ಹೊಲಗದ್ದೆಗಳಿಗೆ ಹೋಗುತ್ತಿದ್ದರು. ಪ್ರಕೃತಿಯನ್ನು ಆರಾಧಿಸುತ್ತಿದ್ದರು. ಸೂರ್ಯ  ಕಿರಣಗಳು ಇಡೀ ಭೂಮಂಡಲಕ್ಕೆ ಹರಡಿದ ರೀತಿ, ಹಕ್ಕಿ ಪಕ್ಷಿಗಳ ಇಂಚರ, ಸಾವಕಾಶವಾಗಿ ಬೀಸುವ  ತಂಪಾದ ಗಾಳಿಯು ಮೈಮನ ಸೋಕಿಸಿದರೆ ಏನೋ ಅಹ್ಲಾದಕರ..!!


 ವೈಜ್ಞಾನಿಕವಾಗಿ, ನಾವು ಪ್ರಕೃತಿಯನ್ನು ಬೆಳಗಿನ ಅವಧಿಯಲ್ಲಿ ಅನುಭವಿಸಬೇಕು. ಹಾರಾಡುವ ಚಿಟ್ಟೆಗಳು, ಅರಳುವ ಹೂಗಳು, ಪ್ರಕೃತಿಯ ವಿಶೇಷತೆಯನ್ನು ಹೆಚ್ಚಿಸುತ್ತವೆ. ಆದರೆ ನಾವು ಪ್ರಕೃತಿಯನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿದೆ. ಕಲ್ಲು ಮಣ್ಣುಗಳ ತುಳಿಯುತ್ತಾ, ಗುಡ್ಡ ಬೆಟ್ಟಗಳನ್ನು ಹತ್ತಿ ಇಳಿಯುತ್ತಾ,  ನದಿ ತೊರೆಗಳಲ್ಲಿ ಈಜುತ್ತಾ, ಮೈಮನವನ್ನು ಬಂಡೆಗಲ್ಲಿಗೆ ಹಾಸಿದಾಗ ಉಂಟಾಗುವ ಸಂತೋಷ ಅದು ಎಷ್ಟು ಕೊಟ್ಟರೂ ಬಾರದು…!!  ಆಧುನಿಕ ಯುಗದ ಇವತ್ತಿನ ರೆಸಾರ್ಟ್ ಸಂಸ್ಕೃತಿಯಲ್ಲಿ ಕಲುಷಿತ ನೀರನ್ನು ಈಜುಕೊಳಕ್ಕೆ ಬಿಟ್ಟು, ಅದರಲ್ಲಿಯೇ ತೇಲಾಡುತ್ತಾ, ಕೃತಕ ತೃಪ್ತಿಯನ್ನು ಪಡುತ್ತಿದ್ದೇವೆ ಇಂದಿನ ನಾವುಗಳು.

ಅಂದು ನಮ್ಮವರು ಊರಿನ ಸುತ್ತಮುತ್ತಲಿರುವ ಬಾವಿಗಳಲ್ಲಿ, ಹಳ್ಳಗಳಲ್ಲಿ, ನದಿಗಳಲ್ಲಿ, ತೊರೆಗಳಲ್ಲಿ   ಈಜುತ್ತಾ ಅನುಭವಿಸುತ್ತಿದ್ದ ಆನಂದವೆಲ್ಲಿ…?  ಇಂತಹ ಪ್ರಕೃತಿದತ್ತ ನೀರಿನ ತೊರೆಗಳನ್ನು ನಾವು ಧಾರ್ಮಿಕ ಕಾರ್ಯಗಳಲ್ಲಿ, ಫ್ಯಾಕ್ಟರಿಗಳಲ್ಲಿ ಯಥೇಚ್ಛವಾಗಿ ಬಳಸುತ್ತಿದ್ದ ರಾಸಾಯನಿಕ ವಸ್ತುಗಳಿಂದಾಗಿ, ಅದರ  ಮೂಲಕ ಅವುಗಳನ್ನು ಕೆಡಿಸಿತ್ತಿದ್ದೇವೆ. ಸೃಷ್ಟಿಯೊಳಗಿನ ಸೊಬಗು ನೋಡುವ ನಮ್ಮ ದೃಷ್ಟಿ ಬದಲಾಗಬೇಕು. ಇಲ್ಲವಾದರೆ ‘ಸೃಷ್ಟಿಯ ಸೊಬಗು’ ನಾಶವಾಗಿ ವಿನಾಶದತ್ತ ಸಾಗುತ್ತದೆ.

ಅಂದು ಆದಿ ಮಾನವನು ಪ್ರಕೃತಿಯಲ್ಲಿ ತನ್ನ ಬದುಕನ್ನು ಕಳೆಯುತ್ತಿದ್ದನು.  ಆಹಾರಕ್ಕಾಗಿ ಗಡ್ಡೆ ಗೆಣಸುಗಳನ್ನು ತಿನ್ನುವುದು, ಹಸಿಮಾಂಸ ಭಕ್ಷಣೆ ಮಾಡುವುದು ಈ ಮೊದಲೇ ನಮಗೆ ಗೊತ್ತಿದೆ. ಆಗ ನದಿಗಳು ಮನುಷ್ಯನ ಜೀವನಾಡಿಯಾಗಿದ್ದವು. ಆದರೆ ಇಂದು ಕಾಂಕ್ರೀಟ್ ಕಾಡುಗಳಲ್ಲಿ ಮನುಷ್ಯ ವಾಸ ಮಾಡುತ್ತ, ಕಾಡುಗಳನ್ನು ಕಡಿಯುತ್ತಾ, ಭೂಮಿಯನ್ನು ಬಂಜುರ ಮಾಡಿ, ಮಹಡಿಯ ಮೇಲೆ ಮಹಡಿ ಕಟ್ಟಿ, ತನ್ನ ಐಶಾರಾಮಿ ಬದುಕಿಗೆ ತನ್ನನ್ನು ತೆರೆದುಕೊಳ್ಳುತ್ತಲೇ ಹಲವಾರು ರೋಗಗಳಿಗೆ ಗುರಿಯಾಗುತ್ತಿದ್ದಾನೆ.
 ನಿಜವಾಗಿಯೂ ಆರೋಗ್ಯಕರವಾದ ಬದುಕು ಎಂದರೆ ಪ್ರಕೃತಿದತ್ತವಾಗಿ ಬದುಕುವುದೇ ಆಗಿದೆ..! ಹಾಗಾಗಿ, ನಮ್ಮ ಸಾಧು ಸಂತರು ಪ್ರಕೃತಿಯಲ್ಲಿ ತಮ್ಮ ಬದುಕನ್ನು ಕಳೆಯುತ್ತಿದ್ದರು. ಇಂದು ನಗರೀಕರಣ, ಯಾಂತ್ರಿಕರಣ ಮತ್ತು ಜಾಗತೀಕರಣಗಳಿಂದಾಗಿ ಮನುಷ್ಯ ಸ್ಪರ್ಧಾಮನೋಭಾವದಿಂದಾಗಿಯೇ ಅನೇಕ ಒತ್ತಡಗಳು, ಆರೋಗ್ಯಕರ ಸಮಸ್ಯೆಗಳು ಉಂಟಾಗುವ ಸಂದರ್ಭವನ್ನು ನಾವು ನೋಡುತ್ತಿದ್ದೇವೆ.

 ಹಾಗಂತ ನಾವು ಈಗಿರುವ ಬದುಕನ್ನು ಬಿಟ್ಟು ಸಾವಿರಾರು ವರ್ಷಗಳ ಹಿಂದೆ ಹೋಗಬೇಕೆಂದು ನಾನು ಹೇಳುತ್ತಿಲ್ಲ.  ಶುಚಿತ್ವ ಶಿಸ್ತು, ಸಂಯಮ, ತಾಳ್ಮೆ ಇವೆಲ್ಲವನ್ನೂ ರೂಢಿಸಿಕೊಂಡು ಒತ್ತಡದ ಬದುಕಿನಿಂದ ಎಷ್ಟು ಸಾಧ್ಯವೋ ಅಷ್ಟು ಮುಕ್ತವಾಗಿ ನಮ್ಮನ್ನು ನಾವು ತೆರೆದುಕೊಳ್ಳಬೇಕಾಗಿದೆ. ಹಾಗಾಗಿ, ನಗರದ ಬದುಕಿನ ಜಂಜಾಟದಿಂದ ಕನಿಷ್ಠ ತಿಂಗಳಿಗೆ ಒಂದು ಸಲವಾದರೂ ಪ್ರಕೃತಿಯ ಕಡೆಗೆ ನಾವು ಹೆಜ್ಜೆ ಹಾಕಬೇಕಾಗಿದೆ.  ನಮ್ಮ ಮಕ್ಕಳಿಗೆ ಬೆಳಗಿನ ಅವಧಿಯಲ್ಲಿ ಸೂರ್ಯನ ತೋರಿಸಬೇಕಾಗಿದೆ. ಸೂರ್ಯೋದಯದ ಅಂದ ಚಂದ ಪ್ರಕೃತಿಯ ಸೊಬಗು ಇವೆಲ್ಲವನ್ನು ತೋರಿಸಿದಾಗ, ಮಕ್ಕಳು ಕೂಡ ಹೊಸತನಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ.   ಪ್ರಕೃತಿಯ ಸೊಬಗು ಪ್ರಕೃತಿಯೇ ನೀಡಿರಬಹುದು ಅದನ್ನು ನಾವು ಅನುಭವಿಸದೆ ಹೋದರೆ..? ದೊಡ್ಡದಾಗಿ ನಷ್ಟವಾಗುವದು ನಮಗೆ.

ಹಾಗಾಗಿ,
ನಾವು ಪ್ರಕೃತಿಯನ್ನು ಪ್ರೀತಿಸೋಣ. ಪ್ರಕೃತಿಯ ಸೊಬಗನ್ನು ಆರಾಧಿಸಲು ನಮ್ಮದೆಯಾದ ಧನಾತ್ಮಕ ದೃಷ್ಟಿ ಬೇಕು. ಹೊಸತನಕ್ಕಾಗಿ ತೆರೆದುಕೊಳ್ಳುವು ಕಾತುರವಿದ್ದರೆ ಮಾತ್ರ ನಾವು ಪ್ರಕೃತಿಯ ಮಡಿಲಲ್ಲಿ ಹೊಸತನ ಕಾಣಲು ಸಾಧ್ಯ. ನಮ್ಮ ಬದುಕಿನಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು ಯಾವ ರೀತಿಯಲ್ಲಿಯೇ ಮಾಡಲಿ. ನಿಸರ್ಗದ ಮೇಲೆ ದೌರ್ಜನ್ಯ, ದಬ್ಬಾಳಿಕೆಯ ಮಾಡದಿರೋಣ. ಪ್ರಕೃತಿಯ ಸೊಬಗಿಗೆ ಸೋತು ಬಿಡೋಣ.


Leave a Reply

Back To Top