ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಳೆ ಹುಯ್ಯಲಿ

pink umbrella

ಜಾರಿದವು ಮುತ್ತಿನ ಹನಿಗಳು ಅಂಜಿಕೆಯಿಲ್ಲದೆ
ನಭದ ಗೇರೆಗಳ ದಾಟಿ ಅನಂತದೆಡೆಗೆ
ಅವಕೊಂದೆ ಚಿಂತೆ ಹನಿದ ಹನಿಗಳೆಲ್ಲ
ಹಸಿರಾಗಲು ಕಾತರಿಸಿದ ಭವದ ಒಡಲ ಸೇರಿ
ಹಿಗ್ಗಿ ನುಲಿಯಲು,ಬೆಸೆಯಲು ಆತುರ
ಯಾವ ಹನಿ ಮುತ್ತಾಗುವುದೋ
ಯಾವ ಹನಿ ನತ್ತಾಗುವುದೋ
ಇಳೆಯ ಮೈಸಿರಿಗೆ ಒನಪಾಗುವುದೋ
ಸಿಡಿಲು ಗುಡುಗಿನ ಆರ್ಭಟಕೆ
ಬೆಚ್ಚಿ ಬಿದ್ದು ಸದ್ದಿಲ್ಲದೆ ಸರಿದೂಗಿಸಲು
ಉಬ್ಬು ತಗ್ಗುಗಳೆಲ್ಲ ಕೊಂಚ ಸಾವರಿಸಿದಂತೆ
ಮಳೆಯ ತುಂತುರು ಹನಿಗಳಿಗಾಗಿ
ಮೆಲ್ಲುಸಿರಿನ ಪ್ರೇಮಕ್ಕೆ ಹಂಬಲಿಸಿದಂತೆ
ಬೆಂದು ಬಸವಳಿದ ಮನಕಿಂದು ಆನಂದ
ಮೈಮನಕೆಲ್ಲ ಸುಗ್ಗಿಯ ಹಬ್ಬದೂಟದಂತೆ
ಕಾರ್ ಮೋಡಗಳು ಬಿಗಿದಪ್ಪಿ ಬೆವರ ಹರಿಸಿ
ಉನ್ಮದಾದ ಬಿಸಿಗಾಳಿ ಧರೆಯ ನಡುಗಿಸಿದಾಗೆಲ್ಲ
ಎಂಥ..! ಸುಮಧುರ ಮಳೆಗಾಳಿ ಹೊಳಪು
ಕಾಗದದ ದೋಣಿ ತೇಲಿ ಬಿಟ್ಟ ನೆನಪು
ಆಣಿ ಕಲ್ಲು ಗಂಟಲಲಿ ಬಿಕ್ಕಿದಂತೆ ಹನಿಗಳು
ಮಣ್ಣಿನೊಳು ಮೇಳೈಸಿ ಗಂಧ ಪಸರಿಸಿದಂತೆ
ಮಣ್ಣಿನ ಮಗನ ಮೊಗದಲ್ಲಿಂದು ಹೊಂಗನಸು
ಉತ್ತಿದಾ ಸತ್ವ ಬೀಜಕ್ಕೊಂದು ಚಿಗುರು
ತುತ್ತು ಕೂಳಿಗಾಗಿ ಹೋರಾಡುವ ಬದುಕಿಗೆ
ಮಳೆಯೊಂದು ಅಮೃತ ಸುರಿಸಿದಂತೆ…
ಹೊತ್ತೊಯ್ಯುವ ಮೋಡಗಳ ಚಿತ್ತದಲಿ
ಬಿತ್ತುವ ಮನಕಿಂದು ಅಗಣಿತ ತಾರೆಗಳು
ಹೊಯ್ಯೋ ಹೊಯ್ಯೋ ಮಳೆರಾಯ
ಇಳೆಯ ತಾಪದಲಿ ಚಿಗುರಲಿ ಹೊಸ ಕಾಯ…

***********

ಶಿವಲೀಲಾ ಹುಣಸಗಿ

About The Author

7 thoughts on “”

  1. ಎಷ್ಟು ಅದ್ಭುತವಾದ ಸಾಲುಗಳು!
    ಸುಗ್ಗಿಯನ್ನು ಮತ್ತೊಮ್ಮೆ ಅನುಭವಿಸಿದಂತೆ ಆಯ್ತು.
    ಅಭಿನಂದನೆಗಳು ಮ್ಯಾಡಂ.

  2. ಮತ್ತೆಮತ್ತೆ ಮೂಡಿ ಬರಲಿ ಇಂತಹುದೇ ಕವಿತೆಗಳು

  3. Nagaraj Harapanahalli

    ಒಂದಿಷ್ಟು ‌ಮುಗ್ಧತೆ, ಒಂದಿಷ್ಟು ಕಸರತ್ತು,ಒಂಚೂರು‌ ಮಣ್ಣಗಂಧ ಬೆರೆತ ಕವಿತೆ

  4. ಬಾಲಚಂದ್ರ.ಹೆಗಡೆ

    ಇಳೆಗೆ ವರುಣನಾಗಮನವನ್ನು ಸಹೋದರಿ,ಮನೋಜ್ಞವಾಗಿ ಚಿತ್ರಿಸಿದ್ದಿರಿ.ಅಭಿನಂದನೆಗಳು.

Leave a Reply

You cannot copy content of this page

Scroll to Top