ಲಹರಿ

ಒಂದು ಪತ್ರ

Stone Artwork

ಜಯಶ್ರೀ ಜೆ.ಅಬ್ಬಿಗೇರಿ

ಕಾಲೇಜಿನಂಗಳದಿ ಕಾಲಿಟ್ಟ ದಿನದಂದೇ ನೀ ಕಣ್ಣಿಗೆ ಬಿದ್ದೆ. ಸುರಿವ ಸೋನೆ ಮಳೆಗೆ ಹಾಡೊಂದ ಗುಣುಗುಣಿಸುತ ಕಣ್ಮುಂದೆ ನಿಂದೆ. ತುಸುವೇ ತುಸು ದೂರದ ರಸ್ತೆಯಂಚಿನಲ್ಲಿ ನಿಂತು ಹರಿವ ಸಿಹಿ ಝರಿಯಂತೆ ನನ್ನೆಡೆ ಕಣ್ಣೋಟ ಹರಿಸಿದೆ. ಬೀಸುವ ತಂಗಾಳಿಯ ಜತೆ ನಿನ್ನ ಮೈಯ ಸುಗಂಧ ತೇಲಿ ಬಂದು ನನ್ನ ಮೈಯ ಸವರಿದಂತೆನಿಸಿ ನಿಂತಲ್ಲೇ ಒಮ್ಮೆ ನಡುಗಿದೆ.ಒಮ್ಮಿಂದೊಮ್ಮೆಲೇ ಬೀಸಿದ ಜೋರಾದ ಗಾಳಿಗೆ ಬಲು ದೂರದ ತನಕ ಹಾರಿದ ನಿನ್ನೆದೆಯ ಅಂದದ ಆಕಾರ ಮುಚ್ಚಿದ್ದ ದುಪ್ಪಟ್ಟಾ ತಂದು ಕೈಗಿತ್ತೆ.ಕೋಮಲವಾದ ನಿನ್ನ ಬೆರಳುಗಳಿಗೆ ಬೆರಳು ಸೋಕಿ ಪುಳಕಗೊಂಡೆ. ಆ ಹೊಸ ಸ್ಪರ್ಷ ಪ್ರೇಮ ಲೋಕವೊಂದನ್ನು ತೆರೆದಂತಿತ್ತು. ಬಾನಂಗಳದಿ ನೇಸರ ಕಂಗೊಳಿಸುತ್ತ ಇಳಿಯುತ್ತಿದ್ದ. ಸದ್ದಿಲ್ಲದೇ ನೀ ನನ್ನೆದೆಗೆ ಇಳಿಯುತ್ತಿದ್ದೆ. ನೋಟದಲ್ಲಿ ನೋಟ ಬೆರೆಸಿ ಸ್ವಲ್ಪ ದೂರ ನನ್ನೊಡನೆ ನಡೆದು ಬಂದೆ ನೀನು, ನನ್ನೊಡನೆ ಒಂದಾಗಿ ಹೋದಂತೆ ಅನಿಸಿತು. ಇಬ್ಬರೂ ಜೊತೆಗೂಡಿ ರಸ್ತೆ ಬದಿಯಲಿರುವ ಜರ್ಝರಿತವಾದ ಬಂಡೆಗಲ್ಲಿನ ಮೇಲೆ ಕೂತು ಸೂರ್ಯಾಸ್ತ ಸವಿದೆವು.ಕ್ರಮೇಣ ಮಳೆ ನಿಂತಿತು. ಕತ್ತಲೆಯಾಯಿತು.ಮರದಡಿ ನಿಂತವರೆಲ್ಲ ಮನೆಗೆ ಮರಳಿದರು. ಯಾರೋ ನೀನು ಯಾರೋ ನಾನು ಆದರೂ ಕಣ್ಣಲ್ಲೇ ಮಾತನಾಡಿ ಮನದಲ್ಲೇ ಒಂದಾಗಿದ್ದೆವು. ನೋಡು ನೋಡುವಷ್ಟರಲ್ಲಿ ನನ್ನ ಹೃದಯ ಇದ್ದ ಜಾಗದಲ್ಲಿರಲಿಲ್ಲ. ಮರುದಿನ ನಿನ್ನ ವಿಳಾಸ ಹುಡುಕುತ ಗಲ್ಲಿ ಗಲ್ಲಿಗಳನು ದಾಟಿ ನೀನಿದ್ದ ಗಲ್ಲಿ ಹುಡುಕಿದ್ದಾಯಿತು. ದಿನೇ ದಿನೇ ನಿನ್ನ ಮನೆ ಹತ್ತಿರ ಬಂದು ನಿನ್ನ ಮನಸ್ಸಿಗೆ ಹತ್ತಿರವಾದದ್ದೂ ಆಯಿತು. ಪದೇ ಪದೇ ಭೇಟಿಯಾದ್ದರಿಂದ ಸ್ನೇಹ ಪ್ರೀತಿಗೆ ತಿರುಗಿದ್ದೂ ಆಯಿತು.
ನಿನ್ನೆ ಮೊನ್ನೆಯವರೆಗೂ ಯಾರೂ ಹೀಗೆ ನನ್ನ ಕಾಡಿರಲಿಲ್ಲ. ಕೂತಲ್ಲೂ ನಿಂತಲ್ಲೂ ನಿನ್ನದೇ ಗುಂಗು.ಒಲವಿನ ರಂಗು ಏನೇನೋ ಆಗ್ತಿದೆ.ನನ್ನ ಸ್ಥಿತಿ ಸವಿ ಬೆಲ್ಲ ತಿಂದ ಮೂಗನ ಸ್ಥಿತಿಯಂತಾಗಿತ್ತು. ಹೇಳಲೂ ಆಗ್ತಿಲ್ಲ ಬಿಡಲೂ ಆಗ್ತಿಲ್ಲ. ಹಿಂದೆಂದೂ ಹೀಗೇನೂ ಆಗಿರಲಿಲ್ಲ. ಮನಸಾರೆ ನಿನಗೆ ಮನಸೋಲುವ ಮನಸಾಗಿತ್ತು. ಅಚ್ಚರಿಯೆನಿಸಿದರೂ ನಿಜ ಕಣೆ. ನೀ ಬರೋ ದಾರಿಯ ಕಾಯುತ ಕುಳಿತು ಕೊಳ್ಳುವುದರಲ್ಲಿಯೂ ಅದೇನೋ ಆನಂದವಿತ್ತು. ನಿನ್ನ ನನ್ನ ಹೆಸರನು ಕೂಡಿಸಿ ಕೂಡಿಸಿ ಬರೆಯುವುದರಲ್ಲಿಯೂ, ಮೆಲ್ಲಗೆ ನಿನ್ನ ಹೆಸರು ಕರೆಯುವುದರಲ್ಲಿಯೂ ಹೇಳ ತೀರದ ಸಂತಸವಿತ್ತು.ಕಣ್ಮುಚ್ಚಿದರೂ ನೀನೇ ತೆರೆದರೂ ನೀನೇ. ನೋಡುವ ಎಲ್ಲ ಹುಡುಗಿಯರಲ್ಲೂ ನಿನ್ನನ್ನೇ ಕಾಣತೊಡಗಿದೆ. ರಾತ್ರಿ ಕನಸುಗಳ ಮಳಿಗೆಯಲ್ಲಿ ಭರಾಟೆಯೂ ನಿನ್ನದೇ.ನೀ ಸನಿಹವಿದ್ದರೆ ಸಾಕು ಹಸಿವಿಲ್ಲ. ನೀರು ನಿದಿರೆ ಬೇಕಿಲ್ಲ. ಇದೆಲ್ಲವೂ ನನಗೆ ಹೊಸತು ಹೊಸತು ಅನುಭವ. ಎಂತೆಂಥ ಚೆಲುವು ಕಣ್ಮುಂದೆ ಸುಳಿದರೂ ಒಲವು ಚಿಗುರಿಕೊಂಡಿರಲಿಲ್ಲ. ನಿನ್ನ ಮೊದಲ ಸಲ ಕಂಡಾಗಲೇ ಮನಸ್ಸು,ಕಣ್ಣು ರೆಪ್ಪೆಯಲ್ಲಿ ಭದ್ರವಾಗಿ ಮುಚ್ಚಿಡಲು ತುಸು ನಾಚುತ್ತಲೇ ಹೇಳಿತ್ತು. ಅಂದಿನಿಂದ ಮನದ ಹಾಡಿಗೆಲ್ಲ ನಿನ್ನುಸಿರೇ ರಾಗವಾಗಿತ್ತು.ರಾಣಿಯಾದೆ ನೀ ನನ್ನೆದೆಗೆ. ನನ್ನೆದೆಗೆ ನಿನ್ನೆದೆ ತಾಕುವ ಸಮಯ ಅದಾವಾಗ ಕೂಡಿ ಬರುವುದೋ ಎಂದು ಮನಸ್ಸು ಲೆಕ್ಕ ಹಾಕುವಾಗ ದೇಹವೆಲ್ಲ ಸಣ್ಣಗೆ ಕಂಪಿಸಿದ ಅನುಭವ
ಹರೆಯದ ಎದೆಯ ಇಣುಕಿ ಹೊರೆಯ ಇಳಿಸುವ ಕಲೆ ನೀನು ಅದ್ಯಾವ ಪಾಠಶಾಲೆಯಿಂದ ಕಲಿತಿಯೋ ಗೊತ್ತಿಲ್ಲ. ಕಾರ್ಮೋಡ ಹೊತ್ತ ಮುಗಿಲಿಗಿಂತ ಮಿಗಿಲು ನಿನ್ನ ಅಮಲು. ಒಂದೇ ಒಂದು ನಿಮಿಷ ನೀ ದೂರವಾದರೂ ತಡೆದುಕೊಳ್ಳುತ್ತಿರಲಿಲ್ಲ ಹೃದಯ. ದೂರವಿರುವ ನಿನ್ನ ಹೃದಯಕ್ಕೆ ದೂರವಾಣಿಯಿಂದ ದೂರನ್ನು ಸಲ್ಲಿಸುತ್ತಿತ್ತು.ಆಗ ನೀನು ತಡ ಮಾಡದೇ ಕಣ್ಣೆದುರಲ್ಲಿ ಹಾಜರಿ ಹಾಕುತ್ತಿದ್ದೆ ಕಳ್ಳ ನೋಟದಲ್ಲಿ. ಮನೆಯಂಗಳದಲ್ಲಿ ರಂಗೋಲಿ ಬಿಡಿಸುವಾಗ ನನ್ನತ್ತ ಒಲವ ಮಿಡಿವ ನಿನ್ನ ಬಟ್ಟಲುಗಣ್ಣು ಕಂಡು ಮೈ ಮರೆತು ನಿಂತು ಬಿಡುತ್ತಿದ್ದೆ. ನಿನ್ನ ಬೆನ್ನ ಹಿಂದೆ ನಿಂತು, ತುಂಬಾ ಮುದ್ದು ಉಕ್ಕಿ ಬಂದು ತೋಳಲ್ಲಿ ಬಳಸಿ ಕೆಂಪು ಕೆನ್ನೆ ಹಿಂಡಿ ಮತ್ತುಷ್ಟು ಕೆಂಪು ಮಾಡಲು ಕಾದು ನಿಂತು ಬಿಡುತ್ತಿದ್ದೆ. ಕದ್ದು ನೋಡುವ ಕಣ್ಣಿಗೆ ಜೇನ ಹನಿ ಸವರುವ ಆಸೆ ಹೊತ್ತು ಸುಮಾರು ಹೊತ್ತು ಕಾಯುತ್ತಿದ್ದೆ. ನಿನ್ನಿಂದ ನೀನೇ ನನ್ನ ಕಾಪಾಡ ಬೇಕು ಇಲ್ಲದಿರೆ ನನಗೆ ಉಳಿಗಾಲವಿಲ್ಲ ಎಂದು ಮನಸ್ಸಲ್ಲೇ ನಿನ್ನ ಬೇಡುತ್ತಿದ್ದೆ. ಹಗಲುಗನಸಿನಲ್ಲಿ ನಾ ಮುಳುಗಿರುವಾಗ ಚೆಂದದೊಂದು ಮುಗುಳುನಗೆ ಚೆಲ್ಲಿ ನೀ ಮಾಯವಾಗಿರುತ್ತಿದ್ದೆ. ಇದು ಪ್ರತಿ ಅರುಣೋದಯದ ಪ್ರೀತಿ. ಕತ್ತಲ ರಾತ್ರಿಯ ಮರೆಸುವ ಚಂದಿರನಂತೆ ನನ್ನೆಲ್ಲ ನೋವ ಮರೆಸಿ ಬದುಕು ಚೆಂದಗಾಣಿಸಿದ ಅಧಿದೇವತೆ.ನಿನಗೆ ನನ್ನದೇನು ಕಾಣಿಕೆ? ಎಂದೆಲ್ಲ ಯೋಚಿಸಿದಾಗೆಲ್ಲ ನಿನ್ನ ಮರೆತ ಮರುಕ್ಷಣವೇ ನಾನಿಲ್ಲ ಎಂದು ಉಸುರುತ್ತಿತ್ತು ಮನವೆಲ್ಲ.
ಈಗೀಗ ಹೊಸದೊಂದು ಜನುಮ ಪಡೆದಂಥ ಖುಷಿ ಈ ಪ್ರಾಣ ನಿನ್ನ ಹೆಸರಲ್ಲೇ ಇದೆ. ಈ ದೇಹವೂ ನಿನ್ನದೇ ಕೈ ವಶ. ಪ್ರಾಣ ಹೋದರೂನೂ ನಾ ನಿನ್ನವನು ನೀ ನನ್ನವಳು ಎಂಬುವದಂತೂ ನೂರಕ್ಕೆ ನೂರು ನಿಜ. ನೀನೇ ಬೇಕೆನ್ನುವ ಪ್ರಾಯದ ಒಳಗಾಯ ಮಾಯ ಮಾಡುವ ಮುದ್ದಿನ ಮದ್ದು ನಿನ್ನ ಅಧರದ ಅಂಚಿನಲ್ಲಿ ಬಿಟ್ಟರೆ ಬೇರೆಲ್ಲೂ ಇಲ್ಲ. ನಿನ್ನ ಸಹವಾಸದಲ್ಲಿರುವಾಗ ಸಾವು ಬಂದರೂನೂ ನಿಮಿಷ ಕಾಯದೇ ಹರುಷದಿಂದಲೇ ಅಪ್ಪಿಕೊಂಡು ಬಿಡುವೆ. ಆದರೆ ಕೇಳದಿರು ಇಸಿದುಕೊಂಡ ಹೃದಯವನ್ನು. ಒಲವಲಿ ಒಮ್ಮೆ ಕಸಿ ಮಾಡಿದ ಹೃದಯವನು ಮರಳಿಸು ಅಂದರೆ ಜೀವ ಹಿಂಡಿದಂತಾಗುತ್ತೆ. ಜಾತಿಯ ಹೆಸರಲಿ ನಾವಿಬ್ಬರೂ ಬೇರೆಯಾಗಿ ಬಾಳದೇ ದಾರಿಯಿಲ್ಲ ಅಂದ ನಿನ್ನಣ್ಣ. ಬೀಸುವ ಗಾಳಿಗೆ, ದಾಹ ನೀಗುವ ಗಂಗೆಗೆ, ಬೆಳಕನೀವ ನೇಸರನಿಗೆ ಜಾತಿಯ ಹಂಗಿಲ್ಲ. ಒಲವ ಹಂಚಿಕೊಳ್ಳುವ ಒಲವಿನ ಹೂಗಳಿಗೆ ಅಡ್ಡಲಾಗಿ ಜಾತಿಯ ಮುಳ್ಳುಗಳೇಕೆ? ಮೇಲು ಕೀಳಿಲ್ಲ ಒಲವಿಗೆ. ವಿಶ್ವವೇ ಮಂದಿರ ಒಲವಿನೊಲವಿಗೆ.ಜಾತಿಯ ಬಿಸಾಕಿ ಬಂದು ಬಿಡು ನನ್ನೆಡೆಗೆ. ಐದಂಕಿಯ ಸಂಬಳದಲಿ ಅರಗಿಣಿಯಂತೆ ಸಾಕಿ ಸಲುಹುವೆ.ಕೂಡಿ ಬಾಳೋಣ ನನ್ನವ್ವ ಅಪ್ಪನೊಂದಿಗೆ.
ಸರ ಸರ ಸರಸಕೆ ಸಲ್ಲಾಪಕೆ ಬರುವೆ ನಿನ್ನ ಹತ್ತಿರವೆ. ಅವಸರವೇ ಅಪಘಾತಕ್ಕೆ ಕಾರಣವೆನ್ನುತ ನೀ ದೂರ ತಳ್ಳುವೆ.ತಡ ಮಾಡದೇ ಹ್ಞೂಂ ಅನ್ನು ಜೊತೆಗಾತಿಯಾಗಲು. ಸಂದೇಹ ಬೇಡ ಇನ್ನು ಬದುಕೆಲ್ಲ ರಾಣಿಯಂತೆ ಹಾಯಾಗಿ ಬಾಳುವೆ ಸೊಗಸಾಗಿ.ನನ್ನ ಜೊತೆಯಾಗಿ. ಒಳಗೊಳಗೆ ಮನವು ಕಾಡುತಿದೆ. ಮನ ಬಿಚ್ಚಿ ಹೇಳಿ ಬಿಡು ಒಮ್ಮೆ ಮನದಾಸೆಯ ಮನವು ಕೇಳುತಿದೆ. ನಿನ್ನ ತನುವ ಬೇಡುತಿದೆ.ಗಂಟೆಯ ಲೆಕ್ಕವಿಲ್ಲದೆ ಗಂಟೆಗಟ್ಟಲೇ ನಿನ್ನದೇ ಮಾತು ಕತೆ ಗೆಳೆಯರ ಮುಂದೆ. ಇಳಿ ಬಿಟ್ಟ ನಿನ್ನ ನಾಗರ ಹಾವಿನ ಜಡೆಗೆ ತಣ್ಣನೆ ಬೆಳದಿಂಗಳಲಿ ಹೂ ಮುಡಿಸುವಾಸೆ. ತೋರ ಬೆರಳ ತುದಿ ಸಾಕು ನಂಗೆ ನಿನ್ನೊಲವಿನ ಗುಂಗು ಹಿಡಿಸೋಕೆ. ಚಳಿ ತಡೆಯಲಾಗುತ್ತಿಲ್ಲ ಚೆಲುವೆ. ಹೊದ್ದ ಹೊದಿಕೆ ಸರಿಸಿ ನುಗ್ಗಿ ಬಿಡು ಒಳಗೆ. ಹೊದಿಕೆ ಹೊಂದಿಸಿಕೊಳ್ಳುತ್ತೆ ನಿನ್ನ ನನ್ನೊಳಗೆ. ಸತಾಯಿಸದೇ ಬಂದು ಬಿಡು ಬೇಗ.ಕಾಯುತಿರುವೆ ನಿನಗಾಗಿ ಜರ್ಝರಿತ ಬಂಡೆಗಲ್ಲಿನ ಮೇಲೆ ಕೂತು ಅರಿಷಿಣ ಕೊಂಬಿನ ದಾರ ಹಿಡಿದು. ಹೆದರದಿರು ಗೆಳತಿ ಬಿಡದಂತೆ ನಾ ಹಿಡಿವೆ ನಿನ್ನ ಕೈಯನು! ಚೆಲುವೆ ಚೆಲ್ಲುವೆ ಹಿಡಿ ಒಲವನು!!
ಇತಿ
ನಿನ್ನೊಲವಿನ ಚೆಲುವ

2 thoughts on “ಲಹರಿ

Leave a Reply

Back To Top